ಬೆಂಗಳೂರು: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಎನ್ಯುಮರೇಶನ್ ಫಾರಂ ಭರ್ತಿ ಮಾಡುವ ಮೂಲಕ ಚಾಲನೆ ನೀಡಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಗಣತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ತಮ್ಮ ಮನೆಯಿಂದಲೇ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ಎನ್ಯುಮರೇಶನ್ ಅರ್ಜಿಯಲ್ಲಿ ಹೆಸರು ಜೊತೆಗೆ ಮೊದಲು ನೀಡಿದ್ದ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಆ ಸಂಖ್ಯೆ ಲಭ್ಯವಿಲ್ಲದಿದ್ದರೆ ಹೊಸ ಮೊಬೈಲ್ ಸಂಖ್ಯೆಯನ್ನು ಅಧಿಕಾರಿಗಳ ಮೂಲಕ ಸೇರಿಸಿಕೊಳ್ಳಬಹುದು. ನೀಡಿದ ಸಂಖ್ಯೆಗೆ ಒಟಿಪಿ ಬರುತ್ತದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಗಿಗ್ ಆರ್ಥಿಕತೆಯ ನಿಯಮಗಳಿಗೆ ಬ್ರೇಕ್? ಗಿಗ್ ಕಾರ್ಮಿಕ ಕಾನೂನಿಗೆ ಹೈಕೋರ್ಟ್ನಲ್ಲಿ ಸವಾಲು
ಮತದಾರರಿಗೆ ತಮ್ಮ ವಿವರಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಬಿಎಲ್ಎ, ಬಿಎಲ್ಒ ಮತ್ತು ಮೇಲ್ವಿಚಾರಕರು ಈಗಾಗಲೇ ಸಮನ್ವಯ ಸಾಧಿಸಿದ್ದಾರೆ. ಕುಟುಂಬದ ಪರವಾಗಿ ಒಬ್ಬರು ಸಹಿ ಮಾಡಿದರೆ ಸಾಕು; ಒಬ್ಬ ಸದಸ್ಯನೇ ಎಲ್ಲರ ಅರ್ಜಿಯನ್ನು ಭರ್ತಿ ಮಾಡಬಹುದು ಎಂದು ಹೇಳಿದರು.
ಫೋಟೋ ಬದಲಾವಣೆ ಅಗತ್ಯವಿದ್ದರೆ ಹೊಸ ಫೋಟೋ ಸಲ್ಲಿಸಬಹುದು. ಹೊಸ ಮತದಾರರು ನಿವಾಸ ದೃಢೀಕರಣ ಪತ್ರ ನೀಡಬೇಕು. ರಾಜ್ಯ ಸರ್ಕಾರ ಅಗತ್ಯ ಪ್ರಮಾಣಪತ್ರಗಳನ್ನು ನೀಡಲು ಸಿದ್ಧವಾಗಿದೆ. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಬೇಕು, ಇಲ್ಲವಾದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೊಂದರೆ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.
ಆನ್ಲೈನ್ ಆಪ್ ಬಳಕೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಆಪ್ ಬಳಕೆ ತಿಳಿದಿರದು. ತಾವೂ ಸಹ ಸಹಾಯ ಪಡೆದು ಅರ್ಜಿ ಭರ್ತಿ ಮಾಡಿದ್ದೇನೆ. ಹೀಗಾಗಿ ಬಿಎಲ್ಓಗಳ ಮೂಲಕ ಆಫ್ಲೈನ್ ವಿಧಾನದಲ್ಲಿಯೂ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ಹೇಳಿದರು.
ಇತರೆ ರಾಜ್ಯಗಳಲ್ಲಿ ಮತದಾನ ಹಕ್ಕಿನ ಆಧಾರದಲ್ಲೇ ಸೌಲಭ್ಯಗಳನ್ನು ನೀಡುವ ಕ್ರಮ ಇದೆ. ಅದೇ ರೀತಿಯ ವ್ಯವಸ್ಥೆ ರಾಜ್ಯದಲ್ಲೂ ಬರಬಹುದೆಂಬ ಸೂಚನೆಯನ್ನು ನೀಡಿದ ಅವರು, ರಾಜ್ಯದ ಜನರಿಗೆ ನೀಡುವ ಗ್ಯಾರಂಟಿಗಳು ಇಲ್ಲಿ ಇರುವ ಮತದಾರರಿಗೆ ಮಾತ್ರ ಅನ್ವಯಿಸಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದರು.
ಇದನ್ನೂ ನೋಡಿ: ವಿದ್ಯುತ್ ಖಾಸಗೀಕರಣ ಆದರೆ ದುಬಾರಿ ಹೊರೆ ಗ್ಯಾರಂಟಿ! | ಟಾಟಾ ಪವರ್ಗೆ ಲೈಸೆನ್ಸ್ ಬೇಡ, ಆಕ್ಷೇಪಣೆ ಸಲ್ಲಿಸಿ
