ನವದೆಹಲಿ: ಪಂಜಾಬ್ ಕಾಂಗ್ರೆಸ್ನಲ್ಲಿ ಸಂಘಟನಾ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಊಹಾಪೋಹಗಳ ನಡುವೆಯೇ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಅವರು ನಾಯಕರಿಗೆ ಕರೆ ನೀಡಿದ್ದಾರೆ. ಪಂಜಾಬ್
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸೇರಿದಂತೆ ಹಲವು ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್ ಗಾಂಧಿ ಪ್ರತಿಯೊಬ್ಬ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚುನಾವಣೆ ಪೂರ್ವ ಕಾರ್ಯತಂತ್ರ ಹಾಗೂ ಪಕ್ಷದ ಮುಂದಿನ ದಿಕ್ಕಿನ ಕುರಿತು ಅಭಿಪ್ರಾಯ ಸಂಗ್ರಹಿಸಿದರು ಎಂದು ವರದಿಯಾಗಿದೆ.
ಸಭೆಯಲ್ಲಿ ಪಂಜಾಬ್ ಕಾಂಗ್ರೆಸ್ನ ನಾಯಕತ್ವ ಪ್ರಶ್ನೆ, ಸಂಘಟನೆಯ ಬಲವರ್ಧನೆ ಹಾಗೂ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಕುರಿತು ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಗೆ ಉತ್ತಮ ಅವಕಾಶವಿದೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ನಾಯಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಮತ್ತು ಪಂಜಾಬ್ನ ಹಿತಾಸಕ್ತಿಗಳನ್ನು ರಕ್ಷಿಸುವುದು ಪ್ರಮುಖ ಆದ್ಯತೆಯಾಗಬೇಕು ಎಂದು ಅವರು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಇದನ್ನೂ ಓದಿ : ಕೋಟ್ಯಾಂತರ ರೂಪಾಯಿ ವೆಚ್ಚದ ಸ್ಮಾರ್ಟ್ ಸಿಟಿ ಮಿನಿ ಸ್ಟೇಡಿಯಂ ಶೋಚನೀಯ ಸ್ಥಿತಿ: ಕ್ರೀಡಾಪಟುಗಳ ಆಕ್ರೋಶ
ಇತ್ತೀಚೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವೀಕ್ಷಕರು ಪಂಜಾಬ್ನ ರಾಜಕೀಯ ಪರಿಸ್ಥಿತಿ ಮತ್ತು ಸಂಘಟನಾ ಸ್ಥಿತಿಗತಿ ಕುರಿತು ವರದಿಯನ್ನು ಪಕ್ಷದ ಹೈಕಮಾಂಡ್ಗೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ನಡೆದ ಈ ಸಭೆ ಮಹತ್ವ ಪಡೆದಿದ್ದು, ರಾಜ್ಯ ಘಟಕದಲ್ಲಿ ಕೆಲವು ಸಂಘಟನಾ ಬದಲಾವಣೆಗಳು ಸಂಭವಿಸಬಹುದು ಎಂಬ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.
2027ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ಕಾಂಗ್ರೆಸ್ನಲ್ಲಿ ಐಕ್ಯತೆ ಮತ್ತು ಸಂಘಟನಾ ಬಲವರ್ಧನೆಗೆ ಪಕ್ಷದ ಕೇಂದ್ರ ನಾಯಕತ್ವ ಹೆಚ್ಚಿನ ಒತ್ತು ನೀಡುತ್ತಿರುವುದು ಈ ಸಭೆಯಿಂದ ಸ್ಪಷ್ಟವಾಗಿದೆ. ಪಂಜಾಬ್
ಇದನ್ನೂ ನೋಡಿ : ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ | ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಘೋಷಣೆ ಎಷ್ಟು? ಸಾಧನೆ ಎಷ್ಟು? Janashakthi Media
