ನಗರ-ಬಂಡವಾಳ ಮತ್ತು ನಾಗರಿಕ ಜಗತ್ತು

ನಗರೀಕರಣ – ನಗರವಿಸ್ತರಣೆ – ನಗರಾಭಿವೃದ್ಧಿ ಬಂಡವಾಳಿಗರ ಭ್ರಷ್ಟಕೂಪದ ಕಲ್ಪನೆಗಳು
ಭಾರತದ ಆಳುವ ವರ್ಗಗಳಲ್ಲಿ ಪಕ್ಷಾತೀತವಾಗಿ ನೋಡಿದಾಗಲೂ ಒಂದು ಸಮಾನ ಎಳೆ ಕಾಣುತ್ತದೆ. ನಿಸರ್ಗದ ಹಸಿರು, ಪ್ರಕೃತಿಯೊಡಲ ಸಂಪನ್ಮೂಲಗಳು ಬರಿದಾಗುತ್ತಿರುವಾಗ ಕುಂಭಕರ್ಣನನ್ನು ಆವಾಹಿಸಿಕೊಂಡು ನಿದ್ರಾವಸ್ಥೆಗೆ ಜಾರುತ್ತಾರೆ. ಮಹಿಳೆಯರ ಮೇಲೆ, ಅಲ್ಪಸಂಖ್ಯಾತರ – ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವಾಗ ಧೃತರಾಷ್ಟ್ರನನ್ನು ಮೈಗಿಳಿಸಿಕೊಂಡಿರುತ್ತಾರೆ. ಚುನಾವಣೆಯ ವೇಳೆ ಜನರ ಬಳಿ ಮತಭಿಕ್ಷೆ ಬೇಡುವಾಗ ದಾನಶೂರ ಕರ್ಣನ ಅವತಾರದಲ್ಲಿ ಕಾಣುತ್ತಾರೆ. ಈ ಸಮಾನ ಲಕ್ಷಣಗಳ ನಡುವೆ ಎದ್ದು ಕಾಣುವ ಮತ್ತೊಂದು ಸಮಾನ ಎಳೆ ಎಂದರೆ, ಅಧಿಕಾರದಲ್ಲಿರುವಾಗ ನಡೆದುಕೊಳ್ಳುವ ರೀತಿಗೂ, ವಿರೋಧ ಪಕ್ಷಗಳಾಗಿದ್ದಾಗ ಆಡುವ ಮಾತುಗಳಿಗೂ ಅಜಗಜಾಂತರ ಅಂತರ ಇರುತ್ತದೆ.  ಇದು ಭಾರತದ ವಿಶಿಷ್ಟ ಲಕ್ಷಣವೇನೂ ಅಲ್ಲ ಆದರೆ ಭಾರತದ ರಾಜಕೀಯ ನಾಯಕರು ಇದರಲ್ಲಿ ನಿಷ್ಣಾತರು. ಬಂಡವಾಳ

– ನಾ ದಿವಾಕರ 

ನಗರೀಕರಣ ಮಾನವ ಸಮಾಜದ ಅಭ್ಯುದಯ ಮತ್ತು ಅಭಿವೃದ್ಧಿಯ ಮಾರ್ಗದಲ್ಲಿ ಗುರುತಿಸಬಹುದಾದ ಸಹಜ ಪ್ರಕ್ರಿಯೆ. ಚರಿತ್ರೆಯ ಯಾವುದೇ ಕಾಲಘಟ್ಟದಲ್ಲೂ ಇದನ್ನು ತಪ್ಪಿಸಲಾಗಿಲ್ಲ. ಉತ್ಪಾದನೆಯ ಮೂಲಗಳ ರೂಪಾಂತರದ ನಡುವೆ ಉತ್ಪಾದನಾ ಸಂಬಂಧಗಳು (Production Relations) ಬದಲಾಗುತ್ತಿರುವಂತೆಲ್ಲಾ ಶ್ರಮದ (labour) ಆದ್ಯತೆಗಳೂ ಬದಲಾಗುತ್ತಾ ಹೋಗುತ್ತವೆ. ಜೀವನೋಪಾಯಕ್ಕಾಗಿ ತಮ್ಮ ಶ್ರಮವನ್ನೂ ಹೊಸ ವೃತ್ತಿ, ಕಸುಬುಗಳನ್ನೂ ಬದಲಾಯಿಸುತ್ತಾ ಬದುಕು ಕಟ್ಟಿಕೊಳ್ಳುವ ಶ್ರಮಿಕರಿಗೆ ಬದಲಾದ ಉತ್ಪಾದನಾ ನೆಲೆಗಳು (Production bases) ಹೊಸ ಸವಾಲುಗಳನ್ನು ಒಡ್ಡುತ್ತಲೇ ಇರುತ್ತವೆ. ನಗರೀಕರಣ ಎಂಬ ಒಂದು ಭೌತಿಕ ಪ್ರಕ್ರಿಯೆ ದುಡಿಯುವ ವರ್ಗಗಳನ್ನು (Working Classes) ಹೊಸ ವಾತಾವರಣಗಳಿಗೆ ಹೊಂದಿಕೊಳ್ಳುವುದನ್ನು ಬಹುಮಟ್ಟಿಗೆ ಕಡ್ಡಾಯಗೊಳಿಸುತ್ತದೆ. ಬಂಡವಾಳ

ಆರ್ಥಿಕ ಅಭಿವೃದ್ಧಿ ಮತ್ತು ನಗರೀಕರಣ

ಆರ್ಥಿಕ ಅಭಿವೃದ್ಧಿಯ ಮಾದರಿಗಳು, ಮಾರ್ಗಗಳು ಬದಲಾಗುತ್ತಿರುವಂತೆಲ್ಲಾ ಎಲ್ಲಸಮಾಜಗಳಲ್ಲೂ ಜನರ ಜೀವನಶೈಲಿ ಮತ್ತು ಆಯ್ಕೆ-ಆದ್ಯತೆಗಳು ಮನ್ವಂತರಕ್ಕೆ ಒಳಗಾಗುತ್ತಿರುತ್ತವೆ. ಕೈಗಾರಿಕಾ ಕ್ರಾಂತಿಯ ಪ್ರಭಾವದಿಂದ ಸೃಷ್ಟಿಯಾದ ಆಧುನಿಕತೆಯ ಕಲ್ಪನೆ ವಿಶ್ವದ ಎಲ್ಲ ದೇಶಗಳಲ್ಲೂ ಈ ಮನ್ವಂತರ ಸಂಭವಿಸಿರುವುದನ್ನು ಚರಿತ್ರೆಯಲ್ಲಿ ಗುರುತಿಸಬಹುದು. ಭಾರತವೂ ಇದಕ್ಕೆ ಹೊರತಲ್ಲ. ಸ್ವಾತಂತ್ರ್ಯಪೂರ್ವದ ಬಾಂಬೆ, ಕಲ್ಕತ್ತಾ, ಚೆನ್ನೈ, ಹೈದರಾಬಾದ್‌ ಇವೆಲ್ಲವೂ ಆಧುನಿಕ ಸಮಾಜಗಳ ಕೇಂದ್ರ ಬಿಂದುಗಳಾಗಿದ್ದವು. ದೇಶದ ಆರ್ಥಿಕಾಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸುವಾಗ, ಭೌತಿಕವಾಗಿ ಮುಂದುವರೆದ ಈ ನಗರಗಳೇ ಆದರಣೀಯ ಮಾರ್ಗದರ್ಶಕವಾಗಿದ್ದವು. ಬಾಂಬೆ ನಗರವನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಗುರುತಿಸುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಭಾರತದ ಸಮುದ್ರ ತಟದಲ್ಲಿರುವ ಎಲ್ಲ ಪ್ರದೇಶಗಳೂ ಸಹ ವಾಣಿಜ್ಯೀಕರಣ, ಕೈಗಾರಿಕೀಕರಣದ ಮೂಲಕ ಬೃಹತ್‌ ನಗರಗಳಾಗಿ ಬೆಳೆದಿವೆ. ಇವುಗಳಿಂದಾಚೆ ಬೆಂಗಳೂರು, ಹೈದರಾಬಾದ್‌ ಮುಂತಾದ ನಗರಗಳು ಕೈಗಾರಿಕೀಕರಣ ಮತ್ತು ವ್ಯಾಪಾರೀಕರಣದ ಹಾದಿಯಲ್ಲಿ ಬೆಳೆದಿವೆ. ಈ ನಗರಗಳನ್ನು ಬೃಹನ್‌ ನಗರಗಳಾಗಿ (Greater Cities) ಪರಿವರ್ತಿಸುವ ಪರಂಪರೆಗೆ ನಾಂದಿ ಹಾಡಿದ್ದು ಬಾಂಬೆ (ಇಂದಿನ ಮುಂಬೈ) . ಮುಂಬೈನ ನಗರೀಕರಣ ಮತ್ತು ನಗರ ವಿಸ್ತರಣೆಗೆ ಕಡಲ ತೀರ ಒಂದು ಅಡ್ಡಿಯಾಗಿದ್ದರಿಂದ ಸಮೀಪದಲ್ಲಿದ್ದ ಅರಣ್ಯ ಸಂಪತ್ತು, ಬೆಟ್ಟಗುಡ್ಡಗಳ ಹಸಿರು ವನಗಳು ಬಲಿಯಾಗಿದ್ದವು. ಆಂತರಿಕವಾಗಿ ಬಲಿಯಾಗಿದ್ದು ಕೈಗಾರಿಕೆಗಳು, ಜವಳಿ ಮತ್ತಿತರ ಉತ್ಪಾದನಾ ವಲಯದ ಕಾರ್ಖಾನೆಗಳು ಹಾಗೂ ದುಡಿಯುವ ವರ್ಗಗಳು. ಬಂಡವಾಳ

ಇದನ್ನೂ ಓದಿ: SIR ವಿರುದ್ಧ ರಾಜ್ಯವ್ಯಾಪಿ ಪ್ರತಿರೋಧ: ಕಾರ್ಮಿಕರ ಮೇಲೆ ದಾಖಲೆ ಒತ್ತಡ ಅನ್ಯಾಯ – ಎಸ್. ವರಲಕ್ಷ್ಮಿ

ಒಂದು ಕಾಲದಲ್ಲಿ ಕಾರ್ಮಿಕ ಮುಷ್ಕರದ ಕೇಂದ್ರ ಬಿಂದು ಆಗಿದ್ದ ಮುಂಬೈ 1960-70ರ ದಶಕದಿಂದಲೇ ಕಾರ್ಖಾನೆಗಳ ಶ್ರಮಿಕರನ್ನು Proletiarise ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ತಮ್ಮ ಉತ್ಪಾದನಾ ಸಾಧನಗಳನ್ನು ಕಳೆದುಕೊಂಡು, ಸ್ವತಂತ್ರ ದುಡಿಮೆಯಿಂದ ಉದ್ಯೋಗದಾತರನ್ನು ಅವಲಂಬಿಸುವ ಶ್ರಮಜೀವಿಗಳಾಗಿ ಪರಿವರ್ತನೆಗೊಳಗಾದರು. ಈ ಪ್ರಕ್ರಿಯೆಯನ್ನು Proletarianisation ಎಂದೂ ಕರೆಯಲಾಗುತ್ತದೆ. ಶಕ್ತಿ ಇದ್ದವರು ತಮ್ಮ ದುಡಿಮೆಗೆ ಅವಕಾಶಗಳನ್ನು ಗಳಿಸಿದರೆ, ಬಹುಪಾಲು ಕಾರ್ಮಿಕರು ನಿರ್ಗತಿಕ ಸ್ಥಿತಿ ತಲುಪಿ ಮುಂಬೈನ ಸ್ಲಂಗಳಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುವಂತಾಯಿತು. ಇನ್ನುಳಿದವರು ವಿದರ್ಭ, ಪೂನಾ, ನಾಗಪುರ, ಅಹಮದಾಬಾದ್‌ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ವಲಸೆ ಕಾರ್ಮಿಕರಾಗಿ ಹೋಗಬೇಕಾಯಿತು. ಅಲ್ಲೇ ಉಳಿದವರು ಸಣ್ಣ ಓಣಿಗಳಿಂದ, ಚಾಲ್‌ಗಳಿಂದ ಸ್ಲಂಗಳಿಗೆ ರವಾನೆಯಾಗಬೇಕಾಯಿತು. ಬಂಡವಾಳ

ಬೆಳವಣಿಗೆಯ ಫಲಾನುಭವಿಗಳು

ಈ ಇಡೀ ಪ್ರಕ್ರಿಯೆಯ ಫಲಾನುಭವಿಗಳು ಈಗ ರಿಯಲ್‌ ಎಸ್ಟೇಟ್‌ ಎಂದು ಗುರುತಿಸಲಾಗುವ ಭೂಮಾಫಿಯಾಗಳು. ಕೆರೆ, ಕುಂಟೆ, ಬೆಟ್ಟ ಗುಡ್ಡಗಳನ್ನೆಲ್ಲಾ ಆಕ್ರಮಿಸಿಕೊಂಡು ಬೆಳೆದ ಮುಂಬೈ ಭೂವಿಸ್ತರಣೆಗೆ ಸೀಮಿತ ಅವಕಾಶ ಇದ್ದುದರಿಂದ ಊರ್ಧ್ವಮುಖಿ ಬೆಳವಣಿಗೆಗೆ (Vertical Development) ತೆರೆದುಕೊಂಡಿತ್ತು. ಇಂದು ಸಣ್ಣ ನಗರಗಳಲ್ಲೂ ಜನಪ್ರಿಯವಾಗಿರುವ ಅಪಾರ್ಟ್‌ಮೆಂಟ್‌ ಸಂಸ್ಕೃತಿಯ ಉಗಮವಾದದ್ದು ಈ ವಾತಾವರಣದಲ್ಲಿ. 1960-70ರ ಮುಂಬೈ ನಗರವನ್ನು ವರ್ಣಿಸುವಾಗ, ಒಂದು ಬದಿಯಲ್ಲಿ ಗಗನಚುಂಬಿ ಕಟ್ಟಡಗಳ ಹಿತವಲಯ ಮತ್ತೊಂದೆಡೆ ದುಡಿಮೆಯ ವಲಯದಿಂದ ಅನಿಶ್ಚಿತ ಬದುಕಿನ ದವಡೆಗೆ ಒಮ್ಮೆಲೆ ಜಾರಿಬಿದ್ದ ಸ್ಲಂ ನಿವಾಸಿಗಳು ಮಾತ್ರ ಕಾಣುತ್ತಾರೆ. ಇವರ ನಡುವೆ ಭವಿಷ್ಯವನ್ನು ಅರಸಿ ದಾಂಗುಡಿ ಇಟ್ಟ ಸುಶಿಕ್ಷಿತ ಅಥವಾ ಅಕ್ಷರಬಲ್ಲ ಕೆಳಮಧ್ಯಮ ವರ್ಗಗಳು ಕಾಣುತ್ತಾರೆ. ಬಂಡವಾಳ

ಈ ವರ್ಗದ ನಾಳೆಯ ಆಕಾಂಕ್ಷಿಗಳ ಬದುಕು ಬವಣೆಯನ್ನು ಹಿಂದಿ ಚಿತ್ರರಂಗದ ಹಲವು ನಿರ್ದೇಶಕರು ಪರಿಣಾಮಕಾರಿಯಾಗಿ ಪರದೆಯ ಮೇಲೆ ಬಿಂಬಿಸಿದ್ದಾರೆ. ತಂಗಲು ಒಂದಿಷ್ಟು ಜಾಗ, ಹೊಟ್ಟೆಗಾಗಿ ಕನಿಷ್ಠ ನೌಕರಿ ಮತ್ತು ಖಾಸಗಿತನವನ್ನು ಕಾಪಾಡಿಕೊಳ್ಳಲು ನಾಲ್ಕು ಗೋಡೆಗಳು ಈ ಹಂಬಲಗಳ ನಡುವೆ ಬದುಕು ಸವೆಸುವ ಮುಂಬೈ ನಗರಿಯ ಚಿತ್ರಣವನ್ನು ಬಸು ಚಟರ್ಜಿ ತಮ್ಮ 1972ರ ‘ಪಿಯಾ ಕಾ ಘರ್‌’ ಚಿತ್ರದಲ್ಲಿ, ಹಾಸ್ಯಲೇಪನದೊಂದಿಗೆ ಜನರ ಮುಂದಿಟ್ಟಿದ್ದಾರೆ. ಈ ಹಂತವನ್ನು ದಾಟಿದ ಮುಂಬೈ ತದನಂತರ ತಲುಪಿದ್ದು ರಿಯಲ್‌ ಎಸ್ಟೇಟ್‌ ಮಾಫಿಯಾಗಳ ಸಾಮ್ರಾಜ್ಯವನ್ನು. ಕಾರ್ಖಾನೆಗಳ ಜಮೀನುಗಳನ್ನು ಸುಲಭ ಬೆಲೆಯಲ್ಲಿ ಪಡೆಯಲೆಂದೇ ಕಾರ್ಮಿಕರನ್ನು ಉಚ್ಛಾಟಿಸಿದ ಬಂಡವಾಳಶಾಹಿಗಳು ತದನಂತರ ರಾಜಕೀಯ ಬೆಂಬಲದೊಂದಿಗೆ ತಮ್ಮದೇ ಆದ ಭೂಮಾಫಿಯಾಗಳನ್ನು ಹುಟ್ಟುಹಾಕಿದ್ದು ಮುಂಬೈನ ಕರಾಳ ಇತಿಹಾಸದ ಒಂದು ಪರ್ವ. ಬಂಡವಾಳ

ಹಾಗಾಗಿಯೇ 1970ರ ದಶಕದ ಹಿಂದಿ ಸಿನಿಮಾಗಳು ಕೌಟುಂಬಿಕ ಕತೆಗಳಿಂದ ದೂರ ಸರಿದು Angry Young man ಕತೆಗಳೆಡೆಗೆ ವಾಲಿದ್ದವು. ಜಂಝೀರ್‌, ದೀವಾರ್‌ ಅಗ್ನಿಪಥ್‌, ಕ್ರಾಂತಿವೀರ್ ಇತ್ಯಾದಿ ಸಿನಿಮಾಗಳನ್ನು ಸ್ಮರಿಸಬಹುದು. ಈ ಕಥಾವಸ್ತುಗಳನ್ನೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಭಟ್ಟಿ ಇಳಿಸಲಾಯಿತು. (ಕಾಕತಾಳೀಯವಾಗಿ, ಸೂಪರ್‌ಮ್ಯಾನ್‌-ಹೀರೋ ಏಕಾಂಗಿಯಾಗಿ ಇಡೀ ವ್ಯವಸ್ಥೆಯ ವಿರುದ್ಧ ಸಿಡಿದೇಳುವ/ಹೋರಾಡುವ ಕತೆಗಳು ಹೆಚ್ಚಾಗಿದ್ದು, ನಾಯಕಿ ಪ್ರಧಾನ ಅಥವಾ ಸ್ತ್ರೀ ಪ್ರಧಾನ ಚಿತ್ರಗಳು ಕಡಿಮೆಯಾಗತೊಡಗಿದ್ದು, ಹೀರೋಯಿನ್‌ಗಳು ಆಲಂಕಾರಿಕವಾಗಿ ಬಹುಮಟ್ಟಿಗೆ ಮನರಂಜನೆಗೆ ಸೀಮಿತವಾಗುವ/ಕೆಲವೊಮ್ಮೆ ಅಪ್ರಸ್ತುತವಾಗುವ ಕಮರ್ಷಿಯಲ್ ಚಲನಚಿತ್ರ ಪರಂಪರೆ ಸೃಷ್ಟಿಯಾಗಿದ್ದೂ ಈ ಹಂತದಲ್ಲೇ). ಬಂಡವಾಳ

ಬೃಹತ್‌ ನಗರದ ಸಂಕುಚಿತ ಕಲ್ಪನೆ

ಈ ಸಿನಿಮಾ ಲೋಕದಿಂದಾಚೆ ನೋಡಿದಾಗ, ಈ ಹಂತದಲ್ಲಿ  ಮೊಳಕೆಯೊಡೆದ ಬೃಹನ್‌ ಮುಂಬೈ ಎಂಬ ನಗರ ವಿಸ್ತರಣೆಯ ಕಲ್ಪನೆ ಭಾರತದ ಎಲ್ಲ ನಗರಗಳಲ್ಲೂ ಪ್ರತಿಧ್ವನಿಸಿದ್ದನ್ನು 1990ರ ದಶಕದ ನಂತರದಲ್ಲಿ ಗುರುತಿಸಬಹುದು. ಇದೇ ವೇಳೆಗೆ ಜಾಗತೀಕರಣ, ವಿದೇಶಿ ಬಂಡವಾಳದ ಹರಿವು ಹಾಗೂ ಭಾರತದ ಸರ್ಕಾರಗಳ ಹೊಸ ಆರ್ಥಿಕ ನೀತಿಗಳು ಈ ಬೃಹತ್‌ ನಗರಗಳ ನಿರ್ಮಾಣಕ್ಕೆ ಪೂರಕವಾಗಿದ್ದವು. ಈ ಹಂತದಿಂದಲೇ ನಗರೀಕರಣ ಮತ್ತು ನಗರವಿಸ್ತರಣೆ ಈ ಎರಡೂ ಕಲ್ಪನೆಗಳು ಚುನಾಯಿತ ರಾಜಕಾರಣದ (Elected Polity) ಪ್ರಬಲ ಅಸ್ತ್ರಗಳಾದವು. ಇಲ್ಲಿ ನಗರಾಭಿವೃದ್ಧಿ (Urban Development) ಎಂಬ ಕಲ್ಪನೆಯೇ ರೂಪಾಂತರ ಹೊಂದಿತ್ತು. ನಗರಗಳನ್ನು ಜನತೆಯ ಆಶ್ರಯ ತಾಣ ಎಂದು ನೋಡುವ ಬದಲು ಅನುಕೂಲಸ್ಥ ಮೇಲ್ಪದರದ ಜನತೆಗೆ (Elite Population) ಪೂರಕವಾದ ಮೂಲ ಅತ್ಯಾಧುನಿಕ ಮೂಲಸೌಕರ್ಯಗಳ (Infrastructure) ಕೇಂದ್ರವಾಗಿ ಪರಿಗಣಿಸಲಾಯಿತು. ಬಂಡವಾಳ

ಈ ಬೆಳವಣಿಗೆಗಳ ಪರಿಣಾಮವಾಗಿ, ನಗರೀಕರಣದ (Urbanisation) ಕಲ್ಪನೆಯನ್ನು ಅಮೂಲಾಗ್ರವಾಗಿ ಮಾರ್ಪಡಿಸಿ, ನಗರಗಳ ಸೌಂದರ್ಯೀಕರಣ (Beautification), ಬಡಾವಣೆಗಳ (Layouts) ಉತ್ತೇಜನ  ಮತ್ತು ಅನ್ಯ ನಗರಗಳನ್ನು ಸುಲಭವಾಗಿ ಸಂಪರ್ಕಿಸುವಂತಹ ಬಾಹ್ಯ ವರ್ತುಲ ರಸ್ತೆಗಳ (Peripherial Ring Road) ನಿರ್ಮಾಣವನ್ನೇ ಕೇಂದ್ರೀಕರಿಸಲಾಯಿತು. ಕರ್ನಾಟಕವನ್ನೂ ಸೇರಿದಂತೆ, 1998ರ ನಂತರ ಅಧಿಕಾರಕ್ಕೆ ಬಂದ ಯಾವ ರಾಜ್ಯ ಸರ್ಕಾರಗಳೂ ಈ ನಗರ ನೀತಿಯನ್ನು (Urban Policy) ಭಿನ್ನವಾಗಿ ನೋಡಿಲ್ಲ. ಮಾರುಕಟ್ಟೆ ಆರ್ಥಿಕ ನೀತಿಯನ್ನು ತಾತ್ವಿಕವಾಗಿ, ಅಚರಣಾತ್ಮಕವಾಗಿ ಒಪ್ಪಿಕೊಂಡಿರುವ ಎಲ್ಲ ರಾಜಕೀಯ ಪಕ್ಷಗಳೂ ನಗರೀಕರಣವನ್ನು ರಾಜ್ಯಗಳ ಅಭಿವೃದ್ಧಿಯ ಸಂಕೇತವಾಗಿ ನೋಡಲಾರಂಭಿಸಿದವು. ಹಾಗೆಯೇ ನಗರಾಭಿವೃದ್ಧಿಗಿಂತಲೂ ಮುಖ್ಯವಾಗಿ ನಗರ ವಿಸ್ತರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾರಂಭಿಸಿದವು. ಇಲ್ಲಿ ಮಾಹಿತಿ ತಂತ್ರಜ್ಞಾನ (IT-BT) ಮಾರುಕಟ್ಟೆಯ ಒಂದು ಆಯಾಮವಾಗಿ ಪರಿಣಮಿಸಿತು. ಬಂಡವಾಳ

ಈ ಮಾರುಕಟ್ಟೆ ನೀತಿಯ ಫಲಶ್ರುತಿಯಾಗಿ ʻನಗರಾಭಿವೃದ್ಧಿʼ (City Development) ಯ ಕಲ್ಪನೆ ರೂಪಾಂತರ ಹೊಂದಿತ್ತು. ಶಾಶ್ವತವಾಗಿ ನಗರ ಜೀವನವನ್ನೇ ಆಯ್ಕೆ ಮಾಡಿಕೊಂಡು ಸ್ಥಿರಾಸ್ಥಿಗಳನ್ನು ಸಂಪಾದಿಸುವ ಮೂಲಕ ನಗರೀಕರಣದ ಒಂದು ಭಾಗವಾಗಲು ಬಯಸಿದ  ಆರ್ಥಿಕವಾಗಿ ಮೇಲ್‌ವರ್ಗಗಳು ಅಭಿವೃದ್ಧಿಯ ಪ್ರಥಮ ಫಲಾನುಭವಿಗಳಾದವು. ನಗರ ನಿರ್ಮಾಣದಲ್ಲಿ ತಮ್ಮ ಶ್ರಮವನ್ನು ಮಾರಿಕೊಂಡು, ಅಭಿವೃದ್ಧಿಗೆ ತಳಮಟ್ಟದಿಂದಲೇ ಉತ್ಪಾದಕೀಯ ದುಡಿಮೆಯಲ್ಲಿ, ಕಟ್ಟುವ ಕ್ರಿಯೆಯಲ್ಲಿ ತೊಡಗಿದ ಶ್ರಮಿಕ ವರ್ಗಗಳು ಎರಡನೆ ಆದ್ಯತೆಯಾದವು. ಹಿತವಲಯದ ಸಮಾಜಕ್ಕೆ (Comfort zone society) ತಕ್ಕಂತೆ ನೈರ್ಮಲ್ಯವನ್ನು (Hygiene) ಕಾಪಾಡಲು ಹಗಳಿರುಳೂ ಶ್ರಮಿಸುವ ಪೌರ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು ಕೊನೆಯ ಆದ್ಯತೆಯಾಗಿ ಪರಿಗಣಿಸಲ್ಪಟ್ಟರು. ನಗರಾಭಿವೃದ್ಧಿಯ ಯೋಜನೆಗಳಲ್ಲಿ ಈ ವರ್ಗಗಳು ಭಾಗಿದಾರರಾಗಲೇ (Stakeholders) ಇಲ್ಲ. ಆಗುವುದೂ ಇಲ್ಲ.

ಆಧುನಿಕತೆಯ ಅನಾಗರಿಕ ಕಲ್ಪನೆ

ಈ ನಗರ ನಿರ್ಮಾಣದ ಹಂತದಲ್ಲಿ ಹಿತವಲಯದ ಅನುಕೂಲತೆಗಳಿಗಾಗಿ ನವಿರಾದ ರಸ್ತೆ, ಮೇಲ್ಸೇತುವೆ, ಸುರಂಗ ಮಾರ್ಗ, ಈಗಿನ ಮೆಟ್ರೋ, ಸುಂದರ ಉದ್ಯಾನಗಳು ಮತ್ತು ಮನರಂಜನಾ ಕೇಂದ್ರಗಳನ್ನು ನಿರ್ಮಿಸಲು ಹೊರ ರಾಜ್ಯಗಳಿಂದ, ಹೊರ ಜಿಲ್ಲೆಗಳಿಂದ ವಲಸಿಗರಾಗಿ ಬಂದು ಬೆವರು ಸುರಿಸಿದ ಶ್ರಮಜೀವಿ ವರ್ಗಗಳು ಆದ್ಯತೆಯಾಗಲೇ ಇಲ್ಲ. ಇದು ಸ್ಪಷ್ಟವಾಗಿ ಗೋಚರಿಸಿದ್ದು ಕೋವಿದ್‌ 19ರ ಸಂಕಟಗಳ ನಡುವೆ. ನಗರ ನಿರ್ಮಾಣ ಅಥವಾ ಕಟ್ಟುವ ಕ್ರಿಯೆಯಲ್ಲಿ, ನಗರ ಸ್ವಚ್ಛತೆ ಅಥವಾ ನೈರ್ಮಲ್ಯದ ಕ್ರಿಯೆಯಲ್ಲಿ ತಮ್ಮ ಬದುಕನ್ನೇ ಸವೆಸಿದ ಲಕ್ಷಾಂತರ ಕಾರ್ಮಿಕರು, ಕೋವಿದ್‌ ಸಂಕಷ್ಟದ ನಡುವೆ ಕೇಳುವವರಿಲ್ಲದ ಅಬ್ಬೇಪಾರಿಗಳಂತೆ ತಮ್ಮ ತವರೂರುಗಳಿಗೆ ತೆರಳಿದ ದೃಶ್ಯವನ್ನು ಅಳಿಸಲು ಸಾಧ್ಯವೇ ಇಲ್ಲ.  ಇದು ಕಮರ್ಷಿಯಲ್‌ ಸಿನಿಮಾ ಅಥವಾ ನಾಟಕ ವಸ್ತು ಸಹ ಆಗದಿರುವುದು ವಿಪರ್ಯಾಸ.

ಈ ಆಧುನಿಕ ನಗರಾಭಿವೃದ್ಧಿ ಮಾದರಿಯಲ್ಲೇ ಅತಿ ಹೆಚ್ಚು ಗಗನಚುಂಬಿ ವಸತಿ ಸಮುಚ್ಛಯಗಳು (Multi Storied Residential Apartments) ಹುಟ್ಟಿಕೊಂಡವು, ಇದಕ್ಕೆ ಸಮಾನಾಂತರವಾಗಿ ಅತಿ ಹೆಚ್ಚು ಕೊಳೆಗೇರಿಗಳೂ (Slum Areas) ಮೇಲೆದ್ದವು. “ಪ್ರತಿಯೊಂದು ಗಗನಚುಂಬಿ ಕಟ್ಟಡದ ಹಿಂಬದಿಯಲ್ಲಿ ಒಂದು ಕೊಳೆಗೇರಿ ಇರುತ್ತದೆ” ಎಂದು ನಗರೀಕರಣದ ಸಂಕಥನಗಳಲ್ಲಿ ಹೇಳಲಾಗುತ್ತದೆ. ಪ್ರತಿಯೊಂದು ಮುಗಿಲೆತ್ತರದ ಕಟ್ಟಡದ ಹಿಂದೆ ಒಂದು ತಗಡಿನ ಸೂರು ಇರುತ್ತದೆ ಎಂದು ಮೈತ್ರೇಯ ಭೌಮಿಕ್‌ ಎಂಬ ಲೇಖಕರು ಹೇಳುತ್ತಾರೆ. ಇದನ್ನು ಅಕ್ಷರಶಃ ಸಾಕಾರಗೊಳಿಸಿರುವುದನ್ನು ಬೆಂಗಳೂರಿನಲ್ಲಿ ಕಾಣಬಹುದು. ಈ ವಿಕಾರ ಅಭಿವೃದ್ಧಿ ಮಾದರಿಗೆ ಬೆಂಗಳೂರು ಮುಕ್ತವಾಗಿ ತೆರೆದುಕೊಂಡಿದ್ದು 21ನೆ ಶತಮಾನದ ಆರಂಭದ ದಿನಗಳಲ್ಲಿ, ವಿಶೇಷವಾಗಿ 2006-08ರ ನಂತರದಲ್ಲಿ. ಬಂಡವಾಳ

ʻಗ್ರೇಟರ್‌ ಬೆಂಗಳೂರುʼ ಎಂಬ ಬಂಡವಾಳಿಗರ-ರಿಯಲ್‌ ಎಸ್ಟೇಟ್‌ ವಾರಸುದಾರರ ಸುಂದರ ಕನಸು ರೂಪುಗೊಂಡಿದ್ದೂ ಇದೇ ಸಮಯದಲ್ಲಿ. ಇದನ್ನೇ ಕನ್ನಡೀಕರಿಸಿ ಬೃಹತ್‌ ಬೆಂಗಳೂರು, ಬೃಹತ್‌ ಮೈಸೂರು ಇತ್ಯಾದಿ ಕಲ್ಪನೆಗಳು ಅನಾವರಣವಾಗತೊಡಗಿದವು. ನಗರ ವಿಸ್ತರಣೆಯನ್ನು ಆಕರ್ಷಕ ಪದಗಳಲ್ಲಿ ಬಿಂಬಿಸುವ ಈ ಕಲ್ಪನೆ ಈಗ ಮೈಸೂರಿಗೂ ಹಬ್ಬಿದ್ದು ಶೀಘ್ರದಲ್ಲೇ ಮೈಸೂರಿನ ಸುತ್ತಲಿರುವ 17 ಗ್ರಾಮಗಳನ್ನು ನುಂಗಿ ಬೃಹತ್‌ ಆಗುವ ಯೋಜನೆ ಜಾರಿಯಾಗಲಿದೆ. ಕೆಂಗೇರಿ, ಯಲಹಂಕ ಮೊದಲಾದ ಉಪನಗರಗಳನ್ನು (Satellite towns) ನುಂಗಿ ಬೆಳೆದಿರುವ ಬೆಂಗಳೂರು ಈಗ ʼ ಗ್ರೇಟರ್‌ ʼ ಆಗಲು ಹೊರಟಿದ್ದು, ಕೈಗಾರಿಕಾ ವಲಯವಾಗಿದ್ದ ಬಿಡದಿಯನ್ನೂ ಬಿಡದೆ ನುಂಗಿಹಾಕಲಿದೆ. ಕರ್ನಾಟಕದ ಮಟ್ಟಿಗೆ ಈ ಅಭಿವೃದ್ಧಿ ಮಾದರಿಗೆ ತಾತ್ವಿಕ ರಾಜಕೀಯ ವಿರೋಧ ಕಾಣುವುದು ಎಡಪಕ್ಷಗಳಿಂದ ಮಾತ್ರ.

ಗ್ರೇಟರ್‌ ಬೆಂಗಳೂರು-ಮಾರುಕಟ್ಟೆಯ ಕೂಸು

ಪರ ವಿರೋಧಗಳ ನಡುವೆ ಗಮನಿಸಬೇಕಾದ ಅಂಶ ಎಂದರೆ, ಗ್ರೇಟರ್‌ ಬೆಂಗಳೂರು ಯೋಜನೆ ಉಗಮಿಸಿದ್ದು ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾದ ನಂತರ ಅಲ್ಲ. 2006ರಲ್ಲಿ ಜೆಡಿಎಸ್‍-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹುಟ್ಟಿದ ರಿಯಲ್‌ ಎಸ್ಟೇಟ್-ಕಾರ್ಪೋರೇಟ್‌ ಕೂಸು ಈ ‘ಗ್ರೇಟರ್‌ ಬೆಂಗಳೂರು’ ಎಂಬ ಯೋಜನೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಕರ್ನಾಟಕವನ್ನು ಮೂರೂ ಪ್ರಧಾನ ಪಕ್ಷಗಳು (ಕಾಂಗ್ರೆಸ್-ಜೆಡಿಎಸ್-ಬಿಜೆಪಿ) ಆಳುವ ಪಕ್ಷಗಳಾಗಿ ಪ್ರತಿನಿಧಿಸಿವೆ. ಏಳು ಮುಖ್ಯಮಂತ್ರಿಗಳು ಆಳ್ವಿಕೆಯನ್ನು ನಿರ್ವಹಿಸಿದ್ದಾರೆ. ಡಿ. ಕೆ. ಶಿವಕುಮಾರ್‌ ಎಂಟನೆಯವರು. ಈ ಯಾವುದೇ ಆಳ್ವಿಕೆಗಳ ಅವಧಿಯಲ್ಲೂ  ʼಗ್ರೇಟರ್‌ ಬೆಂಗಳೂರು ʼ ಯೋಜನೆಯನ್ನು ಕೈಬಿಡುವ ಪ್ರಸ್ತಾವನೆಯನ್ನೂ ಕಾಣಲಾಗುವುದಿಲ್ಲ (ಸಬ್ ಕಾ ಮಾಲಿಕ್‌ ಏಕ್‌ ಹೈ).

ಇಲ್ಲಿ ಕಾಡುವ/ಕಾಡಬೇಕಾದ ಪ್ರಶ್ನೆ ಎಂದರೆ ಬೆಂಗಳೂರು ಯಾರಿಗಾಗಿ ʼ ಗ್ರೇಟರ್‌ ʼ ಆಗಬೇಕು ? ಅನ್ನ ಬೆಳೆಯುವ ರೈತರ ಫಲವತ್ತಾದ ಕೃಷಿ ಭೂಮಿಯನ್ನು, ನೈಸರ್ಗಿಕ ಸಮತೋಲನವನ್ನು ಕಾಪಾಡುವ ವೃಕ್ಷ ಸಂಪತ್ತು, ಅರಣ್ಯ ಸಂಪತ್ತನ್ನು ನಾಶಪಡಿಸಿ, ಕಾಂಕ್ರೀಟ್‌ ಕಾಡುಗಳನ್ನು ನಿರ್ಮಿಸುವುದನ್ನು ನಗರೀಕರಣ ಅಥವಾ ನಗರ ವಿಸ್ತರಣೆ ಎನ್ನುವುದಾದರೆ, ನಾವು ನಾಗರಿಕತೆಯ (Civilisation) ಲಕ್ಷಣಗಳನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ. ಬೆಂಗಳೂರಿನಲ್ಲಿ ಕೇಳಿಬರುವ ಬಿಜೆಪಿ ನಾಯಕರ ವಿರೋಧಿ ಧ್ವನಿಯ ಅಬ್ಬರ ಮುಂಬೈ, ಅಹಮದ್‌ನಗರ, ಲಕ್ನೋ, ಆಗ್ರಾ, ನವದೆಹಲಿ ಇಲ್ಲೆಲ್ಲಾ ಕಾಣಲು ಸಾಧ್ಯವೇ ಇಲ್ಲ. ಏಕೆಂದರೆ ಆ ನಗರಗಳ ವಿಸ್ತರಣೆಯ ಫಲಾನುಭವಿಗಳು ಇವರ ಬಂಧುಗಳೇ ಆಗಿರುತ್ತಾರೆ.

ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media

ಮಾರುಕಟ್ಟೆ ಆರ್ಥಿಕತೆಯ ಅಭಿವೃದ್ಧಿ ಮಾದರಿಯಲ್ಲಿ ಕಾಣಬಹುದಾದ ಸಮಾನ ಲಕ್ಷಣ ಎಂದರೆ ರಾಜಕೀಯ ಪಕ್ಷಗಳ ಪರ ವಿರೋಧಗಳ ಅಭಿಪ್ರಾಯ ಕಾರ್ಪೊರೇಟ್‌ ಆವರಣದ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತದೆ. ಜನಸಾಮಾನ್ಯರ ಕಣ್ಣಿಗೆ ಕಾಣುವ ವಿರೋಧ/ಪ್ರತಿಭಟನೆಗಳು ರಾಜಕೀಯ ಲಾಭದ ಕಸರತ್ತುಗಳು ಮಾತ್ರ. ಈ ಎರಡೂ ಅಭಿವ್ಯಕ್ತಿಗಳನ್ನು ನಿಯಂತ್ರಿಸಿ, ನಿರ್ದೇಶಿಸುವ ಶಕ್ತಿ ಮಾರುಕಟ್ಟೆಗೆ ಇರುತ್ತದೆ. ಹಾಗಾಗಿಯೇ ಸ್ವಲ್ಪಮಟ್ಟಿಗಾದರೂ ಸಮಾಜವಾದ ಎಂಬ ನೆಪದಲ್ಲಿ ತಳಸಮಾಜಕ್ಕೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯನವರ ಸ್ಥಾನದಲ್ಲಿ, ಕಾರ್ಪೋರೇಟ್‌ ಮಾರುಕಟ್ಟೆಯ ಬಂಡವಾಳಿಗರ ಪರ ಇರುವ ಡಿ.ಕೆ. ಶಿವಕುಮಾರ್‌ ಪದಗ್ರಹಣ ಮಾಡಿದ್ದಾರೆ. ಕೂಡಲೇ ʼಬಿಡದಿʼ ಪ್ರತಿಧ್ವನಿಸುತ್ತಿದೆ. ಈ ನಡುವೆ ಉದ್ಭವಿಸುವುದು ರೈತಾಪಿಯ ಪ್ರಶ್ನೆ. ನೈಸ್‌ ರಸ್ತೆಯ ಜನಕರ , ದಶಪಥ ಎಕ್ಸ್‌ಪ್ರೆಸ್‌ವೇ ಪ್ರಾಯೋಜಕರ ರಾಜಕೀಯ ವಿರೋಧದ ದನಿ ಬೂಟಾಟಿಕೆಯ ಮತ್ತೊಂದು ಆಯಾಮವಷ್ಟೆ.

ಈ ಚಾರಿತ್ರಿಕ ಹಿನ್ನೆಲೆ, ಸಮಕಾಲೀನ ವಾಸ್ತವ ಮತ್ತು ವರ್ತಮಾನದ ಆದ್ಯತೆಗಳ ನಡುವೆ ʻಗ್ರೇಟರ್‌ ಬೆಂಗಳೂರುʼ ಅಥವಾ ಗ್ರೇಟರ್‌ ಮೈಸೂರು ಯೋಜನೆಗಳನ್ನು ಒರೆಹಚ್ಚಿ ನೋಡಬೇಕಿದೆ. ಈ ಯೋಜನೆಗಳಲ್ಲಿ ರಾಜಕೀಯ ಪಕ್ಷ,  ಚಿಹ್ನೆ, ಬಾವುಟ ಮತ್ತು ಬಣ್ಣ ಅಪ್ರಸ್ತುತ. ಗಂಗಾ-ಕಾವೇರಿಯನ್ನು ಒಂದು ಮಾಡುವಂತಹ ವಿನಾಶಕಾರಿ ಆಲೋಚನೆಗಳ ನಡುವೆ, ಗ್ರೇಟರ್‌ ಅಂಡಮಾನ್‌ ಪ್ರಾಯೋಜಕರ ನಡುವೆ, ಗ್ರೇಟರ್‌ ಬೆಂಗಳೂರು ಒಂದು ಸಣ್ಣ ಮೆಟ್ಟಿಲು ಮಾತ್ರ. ಈ ಅಭಿವೃದ್ಧಿ ಮಾದರಿಗೆ ಬಲಿಯಾಗುತ್ತಿರುವುದು ಹಸಿರು, ಕೃಷಿ ಮತ್ತು ಇದನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ಜನರ ಉಸಿರು. ಉಸಿರುಗಟ್ಟುತ್ತಿರುವ ಈ ಜನಸಮುದಾಯಗಳ ನಡುವೆ ನಿಂತು, ಗ್ರೇಟರ್‌ ಬೆಂಗಳೂರು ಯೋಜನೆಯನ್ನು ನೋಡಬೇಕಿದೆ.

ಮುಂದುವರೆಯಲಿದೆ…

(ಮುಂದಿನ ಭಾಗದಲ್ಲಿ ಗ್ರೇಟರ್‌ ಬೆಂಗಳೂರು – ಬೇಕು-ಬೇಡಗಳ ನಡುವಿನ ದುರ್ಗಮ ಪಯಣ)

Donate Janashakthi Media

Leave a Reply

Your email address will not be published. Required fields are marked *