ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ: ಎಎಪಿಗೆ ಭರ್ಜರಿ ಗೆಲುವು, ಕಾಂಗ್ರೆಸ್‌ಗೆ ಎರಡನೇ ಸ್ಥಾನ

ಚಂಡೀಗಢ: ಒಂದು ಕಾಲದಲ್ಲಿ ಪಂಜಾಬ್ ರಾಜಕೀಯವನ್ನು ಆಳಿದ್ದ ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ದೂರದ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪಂಜಾಬ್

ರಾಜ್ಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟು 1,977 ವಾರ್ಡ್‌ಗಳಲ್ಲಿ ಎಎಪಿ 958 ವಾರ್ಡ್‌ಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದೆ. ಕಾಂಗ್ರೆಸ್ ಕೇವಲ 397 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದು, ಪ್ರಮುಖ ಪ್ರತಿಪಕ್ಷವಾಗಿದ್ದರೂ ಆಡಳಿತ ಪಕ್ಷಕ್ಕೆ ಪ್ರಬಲ ಸವಾಲು ಒಡ್ಡುವಲ್ಲಿ ವಿಫಲವಾಗಿದೆ.

ಶಿರೋಮಣಿ ಅಕಾಲಿದಳ 191 ವಾರ್ಡ್‌ಗಳಲ್ಲಿ, ಬಿಜೆಪಿ 172 ವಾರ್ಡ್‌ಗಳಲ್ಲಿ ಜಯಗಳಿಸಿದ್ದರೆ, 251 ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೇವಲ 7 ವಾರ್ಡ್‌ಗಳಿಗೆ ಸೀಮಿತವಾಗಿದೆ.

ಕಪೂರ್ತಲಾದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ್ದು, 31 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಆದರೆ ರಾಜ್ಯದ ಬಹುತೇಕ ನಗರ ಪ್ರದೇಶಗಳಲ್ಲಿ ಪಕ್ಷ ತನ್ನ ಸಂಘಟನಾ ಶಕ್ತಿಯನ್ನು ಮತಗಳಾಗಿ ಪರಿವರ್ತಿಸಿಕೊಳ್ಳಲು ವಿಫಲವಾಗಿದೆ. ವಿಶೇಷವಾಗಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರ ಪ್ರಭಾವ ಕ್ಷೇತ್ರವೆಂದು ಪರಿಗಣಿಸಲಾದ ಗಿದ್ದರ್‌ಬಾಹಾ ನಗರಸಭೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದರೆ, ಎಎಪಿ 17 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪಂಜಾಬ್

ಇದನ್ನೂ ಓದಿ : ತಾಪಮಾನಕ್ಕಿಂತ ಭಯಾನಕ ‘ಆರ್ದ್ರ ಶಾಖೆ’: ಕರಾವಳಿ ಜಿಲ್ಲೆಗಳಿಗೆ ತಜ್ಞರ ಎಚ್ಚರಿಕೆ

ಫಲಿತಾಂಶದ ಬಳಿಕ ಪ್ರತಿಕ್ರಿಯಿಸಿದ ರಾಜಾ ವಾರಿಂಗ್, ಕಾಂಗ್ರೆಸ್ ಅಭ್ಯರ್ಥಿಗಳ ಸುಮಾರು 750 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದು, ಇದರಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಆಡಳಿತ ಪಕ್ಷವು ಸರ್ಕಾರಿ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಇನ್ನೊಂದೆಡೆ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ಫಲಿತಾಂಶವನ್ನು ತಮ್ಮ ಸರ್ಕಾರದ ಕಾರ್ಯವೈಖರಿಗೆ ಜನರು ನೀಡಿದ ಬೆಂಬಲ ಎಂದು ಬಣ್ಣಿಸಿದ್ದಾರೆ. ದ್ವೇಷದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದು ಮಾನ್ ಹೇಳಿದ್ದಾರೆ.

2027ರ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ಪಂಜಾಬ್ ರಾಜಕೀಯದ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತಿದ್ದು, ಎಎಪಿಯ ಪ್ರಾಬಲ್ಯ ಮತ್ತಷ್ಟು ಗಟ್ಟಿಯಾಗಿರುವುದನ್ನು ಫಲಿತಾಂಶಗಳು ಸೂಚಿಸಿವೆ. ಇದೇ ವೇಳೆ ಕಾಂಗ್ರೆಸ್‌ನ ಪುನರುತ್ಥಾನ ಇನ್ನೂ ದೂರದ ಕನಸಾಗಿಯೇ ಉಳಿದಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಇದನ್ನೂ ನೋಡಿ : ಪಿಣರಾಯಿ ವಿಜಯನ್‌ ಮೇಲಿನ ಇ.ಡಿ. ದಾಳಿ: ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ Janashakthi Media

Donate Janashakthi Media

Leave a Reply

Your email address will not be published. Required fields are marked *