ಬೆಂಗಳೂರು: ನಗರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹110ರ ಗಡಿಗೆ ತಲುಪಿರುವುದು ಆ್ಯಪ್ ಆಧಾರಿತ ಡೆಲಿವರಿ ಕಾರ್ಮಿಕರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂಧನ ವೆಚ್ಚ ಏರಿಕೆಯಿಂದ ದಿನಪೂರ್ತಿ ದುಡಿದರೂ ಕೈಗೆ ಉಳಿಯುವ ಹಣ ₹500ಕ್ಕೂ ಕಡಿಮೆಯಾಗುತ್ತಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ. ಲೀಟರ್
ಆಹಾರ ಹಾಗೂ ಇ-ಕಾಮರ್ಸ್ ಡೆಲಿವರಿ ಮಾಡುವ ಕಾರ್ಮಿಕರು ಪ್ರತಿದಿನ 150ರಿಂದ 200 ಕಿ.ಮೀ.ವರೆಗೆ ಸಂಚರಿಸಬೇಕಾಗುತ್ತದೆ. ಆದರೆ ಪೆಟ್ರೋಲ್ ದರ ಏರಿಕೆಗೆ ಅನುಗುಣವಾಗಿ ಕಂಪನಿಗಳು ಪಾವತಿ ಹೆಚ್ಚಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದರಿಂದ ದಿನದ ಆದಾಯದ ಬಹುಪಾಲು ಇಂಧನ ವೆಚ್ಚಕ್ಕೇ ಹೋಗುತ್ತಿದೆ ಎನ್ನಲಾಗಿದೆ.
ಡೆಲಿವರಿ ಆ್ಯಪ್ ಕಂಪನಿಗಳಿಂದ ಸಿಗುವ ಇನ್ಸೆಂಟಿವ್ ಹಾಗೂ ಪ್ರೋತ್ಸಾಹಧನ ಕೂಡ ಇತ್ತೀಚೆಗೆ ಕಡಿಮೆಯಾಗಿದೆ ಎಂದು ಕಾರ್ಮಿಕರು ಹೇಳಿದ್ದಾರೆ. ಮೊದಲು ದಿನಕ್ಕೆ ₹1,000ಕ್ಕೂ ಹೆಚ್ಚು ಉಳಿಯುತ್ತಿದ್ದರೆ, ಈಗ ಪೆಟ್ರೋಲ್, ವಾಹನ ನಿರ್ವಹಣೆ ಮತ್ತು EMI ವೆಚ್ಚಗಳನ್ನು ತೆಗೆದ ಬಳಿಕ ₹400-₹500 ಮಾತ್ರ ಉಳಿಯುತ್ತಿದೆ ಎಂದು ಹಲವರು ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಕರೆ ಹಿನ್ನೆಲೆ: ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ ಚರ್ಚೆಗೆ ವೇಗ
ಇಂಧನ ದರ ಏರಿಕೆಯಿಂದ ಆನ್‌ಲೈನ್ ಆಹಾರ ಆರ್ಡರ್‌ಗಳ ಸಂಖ್ಯೆಯೂ ಕುಸಿದಿದೆ ಎನ್ನಲಾಗಿದೆ. ಹೋಟೆಲ್‌ಗಳಲ್ಲಿ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ನೇರವಾಗಿ ಊಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಡೆಲಿವರಿ ಕಾರ್ಮಿಕರಿಗೆ ಸಿಗುವ ಆರ್ಡರ್‌ಗಳ ಸಂಖ್ಯೆ ಇಳಿಕೆಯಾಗಿದ್ದು, ಆದಾಯ ಮತ್ತಷ್ಟು ಕುಸಿದಿದೆ.
ಗಿಗ್ ವರ್ಕರ್ ಸಂಘಟನೆಗಳು ಸರ್ಕಾರ ಹಾಗೂ ಆ್ಯಪ್ ಕಂಪನಿಗಳು ಮಧ್ಯಪ್ರವೇಶಿಸಿ ಕನಿಷ್ಠ ಭತ್ಯೆ, ಇಂಧನ ಭತ್ಯೆ ಹಾಗೂ ಪಾವತಿ ದರ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿವೆ. ಇಲ್ಲದಿದ್ದರೆ ಸಾವಿರಾರು ಡೆಲಿವರಿ ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿವೆ.
ಇದನ್ನೂ ನೋಡಿ : ಹಾಸ್ಟೆಲ್ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media
