ನವದೆಹಲಿ: ಆಫ್ರಿಕಾ ಖಂಡದ ಕೆಲವು ಭಾಗಗಳಲ್ಲಿ ಈಬೋಲಾ ಸೋಂಕು ಹರಡುವ ಹಿನ್ನೆಲೆ, ಕೇಂದ್ರ ಆರೋಗ್ಯ ಸಚಿವಾಲಯ ನಾಗರಿಕರಿಗೆ ಡಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅನಾವಶ್ಯಕ ಪ್ರಯಾಣವನ್ನು ತಪ್ಪಿಸುವಂತೆ ಮೇ 24ರಂದು ಸಲಹೆ ನೀಡಿದೆ.
ಈ ಸೋಂಕು ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮೇ 17ರಂದು ಅಂತರಾಷ್ಟ್ರೀಯ ಆರೋಗ್ಯ ನಿಯಮಾವಳಿ (IHR), 2005 ಅಡಿಯಲ್ಲಿ ‘ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ (PHEIC) ಎಂದು ಘೋಷಿಸಿದೆ.
ಇದೇ ವೇಳೆ, ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (Africa CDC) ಕೂಡ ಕಾಂಗೋ ಮತ್ತು ಉಗಾಂಡಾದಲ್ಲಿ ಉಂಟಾಗಿರುವ ಈಬೋಲಾ ಹರಡುವಿಕೆಯನ್ನು ಖಂಡ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ವರ್ಗೀಕರಿಸಿದೆ.
ಇದನ್ನೂ ಓದಿ: ವಿಬಿ ಗ್ರಾಮ್ಜಿ ಯೋಜನೆಗೆ ಕರಡು ನಿಯಮ ಪ್ರಕಟ: ಜುಲೈ 1ರಿಂದ ಜಾರಿಗೆ ಸಿದ್ಧತೆ
ಮೇ 22ರಂದು WHO ತುರ್ತು ಸಮಿತಿ ಪ್ರವೇಶ ದ್ವಾರಗಳಲ್ಲಿ ಕಠಿಣ ನಿಗಾವಹಿಸುವಂತೆ ಸೂಚಿಸಿದೆ. ವಿಶೇಷವಾಗಿ, ಬುಂಡಿಬುಗಿಯೋ ವೈರಸ್ ಪತ್ತೆಯಾದ ಪ್ರದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಅನಿರ್ದಿಷ್ಟ ಜ್ವರ ಲಕ್ಷಣಗಳನ್ನು ಗುರುತಿಸಿ, ತಕ್ಷಣ ಪರಿಶೀಲನೆ ಮತ್ತು ನಿರ್ವಹಣೆ ನಡೆಸುವಂತೆ ಸೂಚಿಸಲಾಗಿದೆ.
ಕಾಂಗೋ ಮತ್ತು ಉಗಾಂಡಾ ಪಕ್ಕದ ರಾಷ್ಟ್ರಗಳಾದ ದಕ್ಷಿಣ ಸುಡಾನ್ ಸೇರಿದಂತೆ ಕೆಲವು ದೇಶಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿದೆ ಎಂದು ತಿಳಿಸಲಾಗಿದೆ.
ಈ ದೇಶಗಳಲ್ಲಿ ಇರುವ ಅಥವಾ ಪ್ರಯಾಣಿಸುವ ಭಾರತೀಯರು ಸ್ಥಳೀಯ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಸೋಂಕಿನ ಲಕ್ಷಣಗಳಿರುವವರ ಸಂಪರ್ಕವನ್ನು ತಪ್ಪಿಸಬೇಕು ಮತ್ತು ಜ್ವರ ಅಥವಾ ಸಂಬಂಧಿತ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ಸಲಹೆ ನೀಡಲಾಗಿದೆ.
ಬುಂಡಿಬುಗಿಯೋ ಪ್ರಭೇದದಿಂದ ಉಂಟಾಗುವ ಈಬೋಲಾ ವೈರಲ್ ರೋಗವು ಗಂಭೀರ ರಕ್ತಸ್ರಾವ ಜ್ವರವಾಗಿದ್ದು, ಸಾವಿನ ಪ್ರಮಾಣ ಹೆಚ್ಚು ಇರುವುದಾಗಿ ತಿಳಿದುಬಂದಿದೆ. ಈ ಪ್ರಭೇದಕ್ಕೆ ಇನ್ನೂ ಯಾವುದೇ ಮಾನ್ಯತೆ ಪಡೆದ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, ಕಾಂಗೋ ದೇಶದ ಮೂರು ಪ್ರಾಂತ್ಯಗಳಲ್ಲಿ 867 ಅನುಮಾನಿತ ಪ್ರಕರಣಗಳಲ್ಲಿ 204 ಸಾವುಗಳು ದಾಖಲಾಗಿವೆ. ಆದರೆ WHO ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 750 ಅನುಮಾನಿತ ಪ್ರಕರಣಗಳಲ್ಲಿ 177 ಸಾವುಗಳು ವರದಿಯಾಗಿವೆ.
ಭಾರತದಲ್ಲಿ ಈವರೆಗೆ ಬುಂಡಿಬುಗಿಯೋ ಪ್ರಭೇದದ ಈಬೋಲಾ ಪ್ರಕರಣಗಳು ವರದಿಯಾಗಿಲ್ಲ. ಪರಿಸ್ಥಿತಿಯನ್ನು WHO ಮಾರ್ಗಸೂಚಿಗಳ ಪ್ರಕಾರ ಸರ್ಕಾರ ನಿಗಾವಹಿಸುತ್ತಿದೆ ಎಂದು ತಿಳಿಸಲಾಗಿದೆ.
ಇದನ್ನೂ ನೋಡಿ: ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media
