‘ಅಚ್ಛೇ ದಿನ್’ ಎಂಬ ಗೋಡೋ: ಕಾಯುವಿಕೆಯಲ್ಲಿ ಬಂಧಿತ ಸಮಾಜದ ಕಹಿ ಸತ್ಯ

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ನಾನು ಶಿರಸಿಯಲ್ಲಿ ನಾಟಕಕಾರ ರಾಮಾನಂದ ಐನಕೈ ಅವರು ಆಯೋಜಿಸಿದ್ದ ‘ವೇಟಿಂಗ್ ಫಾರ್ ಗೋಡೋ’ ನಾಟಕವನ್ನು ನೋಡಿದ್ದೆ. ಆಗಿನ್ನೂ ನಾನು ಡಿಗ್ರಿ ಓದುತ್ತಿದ್ದ ಹುಡುಗ. ಆ ನಾಟಕದ ಕಥಾವಸ್ತು ಮತ್ತು ಕೊನೆಯವರೆಗೂ ಬಾರದ ಯಾವುದೋ ಒಂದು ಶಕ್ತಿಗಾಗಿ ಕಾಯುತ್ತಾ ನಿಲ್ಲುವ ಆ ಪಾತ್ರಗಳ ಒಳಗಿನ ತೀವ್ರತೆ ನನ್ನನ್ನು ಬಹಳ ಕಾಡಿತ್ತು. ಎಂದಿಗೂ ಸಿಗದ ಅಥವಾ ಒಂದು ವೇಳೆ ಸಿಕ್ಕಿದರೂ ಅದನ್ನು ಅನುಭವಿಸಲು ತಾವು ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲದ ಆ ನಿರಂತರ ಕಾಯುವಿಕೆಯ ಅಸಂಗತತೆ ಮನಸ್ಸಿಗೆ ಜೋರಾಗಿಯೇ ತಟ್ಟಿತ್ತು.

– ಕಿರಣ್ ಹೆಗಡೆ

ಇಂದು ನಮ್ಮ ಸುತ್ತಮುತ್ತಲಿನ ರಾಜಕಾರಣ, ಸಮಾಜವನ್ನು ನೋಡಿದಾಗ ನಾವೆಲ್ಲರೂ ಅದೇ ನಾಟಕದ ಪಾತ್ರಗಳಾಗಿ ಬದಲಾಗಿದ್ದೇವೇನೋ ಅನಿಸುತ್ತದೆ. ನಾವಿಂದು ಏನೇ ಮಾಡಿದರೂ, ಎಷ್ಟೇ ಕಷ್ಟಪಟ್ಟರೂ ಅದು ಮುಂದಿನ ಪೀಳಿಗೆಗಾಗಿ ಎಂಬ ಮಾತು ಎಲ್ಲೆಡೆ ಕೇಳಿಬರುತ್ತದೆ. ಹಾಗಾದರೆ ಇಂದಿನ ವರ್ತಮಾನದ ತಲೆಮಾರಿನ ಅಸ್ತಿತ್ವದ ಮೌಲ್ಯವೇನು? ನಮ್ಮ ಇಂದಿನ ಬದುಕಿಗೆ ಬೆಲೆಯೇ ಇಲ್ಲವೇ? ಇದೇ ಆಧಾರದ ಮೇಲೆ ಈ ‘ಗೋಡೋ ಕಾಂಪ್ಲೆಕ್ಸ್’ ನನ್ನನ್ನು ಬಹಳ ದಿನಗಳಿಂದ ಒಳಗೊಳಗೇ ಕಾಡುತ್ತಿದೆ. ನನ್ನ ಬೌದ್ಧಿಕ ಮಟ್ಟಕ್ಕೆ ತಿಳಿದ ಹಾಗೆ, ನನ್ನ ಯೋಚನೆಗಳನ್ನು ಇಲ್ಲಿ ಒಂದು ರೂಪಕದಷ್ಟೇ ಸರಳವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ.

ಸ್ಯಾಮ್ಯುಯೆಲ್ ಬೆಕೆಟ್ ಅವರ ನಾಟಕದಲ್ಲಿನ ವ್ಲಾಡಿಮಿರ್ ಮತ್ತು ಎಸ್ಟ್ರಾನ್ ಎಂಬ ಪಾತ್ರಗಳು ‘ಗೋಡೋ’ ಎಂಬ ಅದೃಶ್ಯ ಶಕ್ತಿಯ ಭರವಸೆಯ ಮೇಲೆ ತಮ್ಮ ಇಡೀ ಜೀವನವನ್ನು ಕಳೆಯುತ್ತವೆ. ಅವನು ಯಾರು, ಹೇಗೆ ಕಾಣುತ್ತಾನೆ, ಬಂದು ಏನು ಮಾಡುತ್ತಾನೆ ಎಂಬ ಕನಿಷ್ಠ ತರ್ಕವೂ ಅವರಿಗಿರುವುದಿಲ್ಲ; ಆದರೆ ಅವನು ಬಂದರೆ ತಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಕುರುಡು ನಂಬಿಕೆ ಅವರದಾಗಿರುತ್ತದೆ. ಭಾರತೀಯ ರಾಜಕಾರಣವು ಇಂದು ಪ್ರಜೆಗಳನ್ನು ಇದೇ ನಿರಂತರ ಕಾಯುವಿಕೆಯ ಭ್ರಮೆಯಲ್ಲಿ ಬಂಧಿಸಿಡುವ, ವರ್ತಮಾನದ (ಅಗೋಚರ) ಶೋಷಣೆಯನ್ನೇ ದೇಶಭಕ್ತಿಯ ಯಜ್ಞವೆಂದು ನಂಬಿಸುವ ಒಂದು ಬೃಹತ್ ಸಾಮೂಹಿಕ ‘ಗೋಡೋ ಕಾಂಪ್ಲೆಕ್ಸ್’ ಆಗಿ ರೂಪಾಂತರಗೊಂಡಿದೆ.

ಇದನ್ನೂ ಓದಿ: ‘ಸಚಿವರಿಗೆ ಸಂಬಳ ಹೆಚ್ಚಳ, ಕಾರ್ಮಿಕರಿಗೆ ನ್ಯಾಯ ಇಲ್ಲ’: ಸಿಐಟಿಯು ಆಕ್ರೋಶ

ಇದು ಕೇವಲ ರಾಜಕೀಯ ಸುಳ್ಳಲ್ಲ; ಬದಲಿಗೆ, ನಾಗರಿಕನನ್ನು ತನ್ನದೇ ಸ್ವಂತ ವಿನಾಶವನ್ನು ತಾನೇ ಸಂಭ್ರಮಿಸುವಂತೆ ಮಾಡುವ ತೀವ್ರ ಮಾನಸಿಕ ಸುಳಿಯಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯ ಕಾಲಘಟ್ಟ ಮತ್ತು ನರೇಂದ್ರ ಮೋದಿಯವರ ಪ್ರಸ್ತುತ ಆಡಳಿತಾವಧಿಯನ್ನು ಈ ‘ಗೋಡೋ ಕಾಂಪ್ಲೆಕ್ಸ್’ ಹಿನ್ನೆಲೆಯಲ್ಲಿ ಮುಖಾಮುಖಿಯಾಗಿಸಿ ನೋಡಿದಾಗ ಆಘಾತಕಾರಿ ಸಾಂಸ್ಕೃತಿಕ ಸತ್ಯಗಳು ಹೊರಬರುತ್ತವೆ. ಇವೆರಡೂ ಆಡಳಿತಗಳು ಪ್ರಜೆಗಳಿಗೆ ವಿಭಿನ್ನ ಸ್ವರೂಪದ ‘ಗೋಡೋ’ಗಳನ್ನು ಮಾರಾಟ ಮಾಡಿದವು. ಆದರೆ, ಇವೆರಡರಲ್ಲಿ ಯಾವುದು ಸಮಾಜಕ್ಕೆ ಹೆಚ್ಚು ಅಪಾಯಕಾರಿ ಎಂದು ವಿಶ್ಲೇಷಿಸಿದಾಗ, ಇಂದಿನ ಸುಪ್ತ ಜಡತ್ವವು ಇತಿಹಾಸದ ಮುಕ್ತ ಸರ್ವಾಧಿಕಾರಕ್ಕಿಂತ ಹೆಚ್ಚು ವಿನಾಶಕಾರಿ ಎಂಬ ಕಟು ವಾಸ್ತವ ಎದುರಾಗುತ್ತದೆ.

ಮೋದಿ ಯುಗದ ಅತ್ಯಂತ ಪ್ರಭಾವಶಾಲಿ ಮತ್ತು ಅತಿ ದೊಡ್ಡ ಸಾಮಾಜಿಕ ಕನಸಾದ “ಅಚ್ಛೇ ದಿನ್ ಆನೇ ವಾಲೇ ಹೈ” ಎನ್ನುವ ಘೋಷಣೆಯೇ ಈ ಕಾಲದ ಪರಮೋಚ್ಚ ‘ಗೋಡೋ’. 2014ರ ಹೊಸ್ತಿಲಲ್ಲಿ ಭಾರತೀಯ ಸಮಾಜವು ತೀವ್ರ ಆರ್ಥಿಕ ಜಡತ್ವ, ಭ್ರಷ್ಟಾಚಾರದ ಹಗರಣಗಳು ಮತ್ತು ನೀತಿ ನಿರೂಪಣೆಯ ಪಾರ್ಶ್ವವಾಯುವಿನಿಂದ ಬೇಸತ್ತು ಹೋಗಿದ್ದಾಗ???, ಈ ಘೋಷಣೆಯು ಕತ್ತಲ ಕೋಣೆಯಲ್ಲಿ ಮೂಡಿದ ಒಂದು ಬೆಳಕಿನ ಕಿರಣದಂತೆ ಭಾಸವಾಗಿತ್ತು.

ಬೆಕೆಟ್‌ನ ನಾಟಕದಲ್ಲಿ ವ್ಲಾಡಿಮಿರ್ ಮತ್ತು ಎಸ್ಟ್ರಾನ್ ತಮಗೆ ಎದುರಾಗುವ ಹಸಿವು, ಚಳಿ ಮತ್ತು ಹತಾಶೆಯನ್ನು ಮರೆಯಲು “ನಾಳೆ ಗೋಡೋ ಬರುತ್ತಾನೆ, ಬಂದಾಗ ಎಲ್ಲವೂ ಸರಿಹೋಗುತ್ತದೆ” ಎಂದು ಪರಸ್ಪರ ಸಾಂತ್ವನ ಹೇಳಿಕೊಳ್ಳುವ ಹಾಗೆ, ಭಾರತೀಯರು ಕೂಡ ತಮ್ಮ ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳಿಗೆ ‘ಅಚ್ಛೇ ದಿನ್’ ಎಂಬ ಭವಿಷ್ಯದ ಮಾತ್ರೆ ನುಂಗಿ ನಿರಾಳರಾದರು. ಇದು ಕೇವಲ ಒಂದು ರಾಜಕೀಯ ಘೋಷಣೆಯಾಗಿ ಉಳಿಯಲಿಲ್ಲ; ಬದಲಿಗೆ, ಮಧ್ಯಮ ವರ್ಗ ಮತ್ತು ಬಡವರ ಅಂತರಾಳದಲ್ಲಿ ಹುದುಗಿದ್ದ ಆಶೋತ್ತರಗಳನ್ನು ಅಡವಿಟ್ಟುಕೊಳ್ಳುವ ಸಾಂಸ್ಕೃತಿಕ ಅಫೀಮಾಗಿ ರೂಪಾಂತರಗೊಂಡಿತು. ಪ್ರತಿಯೊಬ್ಬ ನಾಗರಿಕನೂ ತನ್ನ ವೈಯಕ್ತಿಕ ಬದುಕಿನ ಸುಧಾರಣೆಯನ್ನು ಈ ಅದೃಶ್ಯ ಗೋಡೋದ ಆಗಮನದೊಂದಿಗೆ ತಳುಕು ಹಾಕಿಕೊಂಡ.

ಆದರೆ ಈ ‘ಅಚ್ಛೇ ದಿನ್’ ಗೋಡೋದ ಅಸಂಗತತೆಯು ದಿನ ಕಳೆದಂತೆ ಬಿಚ್ಚಿಕೊಳ್ಳುತ್ತಾ ಹೋದ ಬಗೆ ಅತ್ಯಂತ ಚತುರತೆಯಿಂದ ಕಂಡು ಬರತೊಡಗಿತು. ಆರಂಭದಲ್ಲಿ ಕಪ್ಪುಹಣದ ವಾಪಸಾತಿ, ಉದ್ಯೋಗ ಸೃಷ್ಟಿ, ಬೆಲೆ ಏರಿಕೆಯಿಂದ ಮುಕ್ತಿ ಎಂಬ ಕಣ್ಣಿಗೆ ಕಾಣುವ ಆರ್ಥಿಕ ಭರವಸೆಗಳನ್ನು ನೀಡಲಾಯಿತು. ಆದರೆ ವರ್ಷಗಳು ಉರುಳಿದಾಗ, ನೋಟು ಅಮಾನ್ಯೀಕರಣದಂತಹ ಕಠಿಣ ನಿರ್ಧಾರಗಳಿಂದ ಆರ್ಥಿಕತೆಯ ಬೆನ್ನೆಲುಬೇ ಮುರಿದಾಗಲೂ, ವ್ಯವಸ್ಥೆಯು ಕಾಯುವಿಕೆಯ ತರ್ಕವನ್ನೇ ಬದಲಾಯಿಸಿತು. ಆಗಿನ ಬಿಜೆಪಿ ಅಧ್ಯಕ್ಷರೇ (ಭೋಪಾಲ್‌ನಲ್ಲಿ ನಡೆದ ಸಭೆಯ ಬಳಿಕ ಅಮಿತ್ ಶಾ ಅವರ ಹೇಳಿಕೆ) ಒಂದು ಸಂದರ್ಶನದಲ್ಲಿ “ಅಚ್ಛೇ ದಿನ್ ಬರಬೇಕಾದರೆ ಕನಿಷ್ಠ 25 ವರ್ಷಗಳು ಬೇಕು” ಎಂದು ಅಧಿಕೃತವಾಗಿ ಹೇಳಿಕೆ ನೀಡಿದಾಗ ಈ ಗೋಡೋ ಕಾಂಪ್ಲೆಕ್ಸ್‌ನ ಅಸಲಿ ಮುಖ ಅನಾವರಣಗೊಂಡಿತು.

ಕಾಯುವಿಕೆಯ ಗಡುವನ್ನು ರಾತ್ರೋರಾತ್ರಿ 2022 ರಿಂದ 2047ರ ‘ವಿಕಸಿತ ಭಾರತ’ದತ್ತ ದಾಟಿಸಲಾಯಿತು. ಇದು ನಿಖರವಾಗಿ ಬೆಕೆಟ್‌ನ ನಾಟಕದಲ್ಲಿ ಬರುವ ಆ ಸಣ್ಣ ಹುಡುಗನ ಪಾತ್ರವನ್ನು ನೆನಪಿಸುತ್ತದೆ; ಆ ಹುಡುಗ ಪ್ರತಿ ದಿನದ ಕೊನೆಯಲ್ಲಿ ಬಂದು “ಗೋಡೋ ಇಂದು ಬರುವುದಿಲ್ಲ, ಆದರೆ ನಾಳೆ ಖಂಡಿತ ಬರುತ್ತಾನೆ” ಎಂದು ಹೇಳಿ ಕಾಯುವಿಕೆಯನ್ನು ಶಾಶ್ವತಗೊಳಿಸುತ್ತಾನೆ. ಇಲ್ಲಿ ಸರ್ಕಾರದ ಪ್ರಚಾರ ಯಂತ್ರವೇ ಆ ಹುಡುಗನ ಪಾತ್ರ ವಹಿಸಿ ವರ್ತಮಾನದ ವೈಫಲ್ಯಗಳನ್ನು ಭವಿಷ್ಯದ ಭವ್ಯತೆಯ ಹೆಸರಿನಲ್ಲಿ ಮುಚ್ಚಿಡುತ್ತಿದೆ.

ಇದನ್ನು ಅರ್ಥಮಾಡಿಕೊಳ್ಳಲು ದೆಹಲಿಯ ರಾಜಕೀಯ ವಿಶ್ಲೇಷಣೆ ಬೇಕಿಲ್ಲ, ನಮ್ಮ ದಿನನಿತ್ಯದ ಬದುಕಿನ ಅಸಂಗತತೆಗಳೇ ಸಾಕು. ಒಬ್ಬ ಪದವೀಧರ ಯುವಕ ಉದ್ಯೋಗವಿಲ್ಲದೆ, ಅನಿವಾರ್ಯವಾಗಿ ಸ್ವಿಗ್ಗಿ ಅಥವಾ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ ತಿಂಗಳಿಗೆ ಹತ್ತು ಸಾವಿರಕ್ಕೆ ಹಗಲಿರುಳು ದುಡಿಯುತ್ತಿದ್ದಾನೆ. ಅವನ ಬೈಕಿನ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಇಷ್ಟಿದ್ದರೂ ಅವನು ವಾಟ್ಸಾಪ್ ಗ್ರೂಪುಗಳಲ್ಲಿ “ಮೋದಿಜಿಯವರು 2047ರೊಳಗೆ ಭಾರತವನ್ನು ನಂಬರ್ ಒನ್ ಮಾಡುತ್ತಾರೆ, ಅಲ್ಲಿಯವರೆಗೆ ನಾವು ಕಾಯಬೇಕು, ತ್ಯಾಗ ಮಾಡಬೇಕು” ಎಂದು ಮೆಸೇಜ್ ಹಾಕುತ್ತಾನೆ! ತನ್ನ ಇಂದಿನ ನೋವು ಮರೆತು, ಕಾಲ್ಪನಿಕ ಭವಿಷ್ಯದ ಭೋಜನವನ್ನು ಸಂಭ್ರಮಿಸುವ ಈ ಸ್ಥಿತಿಯೇ ‘ಮೋದಿ ಗೋಡೋ’.

ಇದೇ ಸಾಲಿಗೆ ನಿಲ್ಲುವ ಮತ್ತೊಂದು ದಿನನಿತ್ಯದ ಉದಾಹರಣೆಯೆಂದರೆ ನಮ್ಮೂರಿನ ಒಬ್ಬ ಸಣ್ಣ ಅಡಿಕೆ ಬೆಳೆಯುವ ರೈತ. ಹವಾಮಾನ ವೈಪರೀತ್ಯ, ರೋಗಬಾಧೆ ಮತ್ತು ಬೆಲೆ ಕುಸಿತದಿಂದಾಗಿ ಅವನ ಕೃಷಿ ಸಾಲ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತದೆ. ತನ್ನ ಬೆಳೆಗೆ ಯೋಗ್ಯವಾದ ಬೆಂಬಲ ಬೆಲೆ ಸಿಗದೆ, ಬ್ಯಾಂಕಿನ ನೋಟಿಸ್ ಮನೆಗೆ ಬಂದಾಗಲೂ ಆ ರೈತ ಟಿವಿ ಮುಂದೆ ಕುಳಿತು, “ನಮ್ಮ ದೇಶದ ಪ್ರಧಾನಿ ಅಮೆರಿಕ, ಯುರೋಪ್ ದೇಶಗಳಿಗೆ ಹೋಗಿ ಭಾರತದ ಜೈಕಾರ ಹಾಕುತ್ತಿದ್ದಾರೆ, ಜಗತ್ತೇ ನಮ್ಮನ್ನು ನೋಡಿ ಸಂಭ್ರಮಿಸುತ್ತಿದೆ,” ಎಂದು ಹೆಮ್ಮೆಯಿಂದ ಬೀಗುತ್ತಾನೆ. ತನ್ನ ತೋಟದ ವಾಸ್ತವಿಕ ಬಿಕ್ಕಟ್ಟು ಕಣ್ಣೆದುರಿದ್ದರೂ, ಜಾಗತಿಕ ವೇದಿಕೆಯಲ್ಲಿ ಸೃಷ್ಟಿಯಾಗುತ್ತಿರುವ ಈ ಭ್ರಮೆಯ ‘ಅಚ್ಛೇ ದಿನ್’ ಅವನ ಸ್ವಂತ ಹತಾಶೆಯನ್ನು ಮರೆಸುತ್ತದೆ.

ಹಾಗೆಯೇ ನಮ್ಮ ಸುತ್ತಮುತ್ತಲಿನ ಸಣ್ಣ ಕೈಗಾರಿಕಾ ಉದ್ಯಮಿ ಅಥವಾ ಅಂಗಡಿ ಇಟ್ಟುಕೊಂಡ ವ್ಯಾಪಾರಸ್ಥನನ್ನು ಗಮನಿಸಿ. ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ ಹೊಡೆತಕ್ಕೆ ಸಿಲುಕಿ ಅವನ ವ್ಯಾಪಾರ ಅರ್ಧಕ್ಕರ್ಧ ಕುಸಿದಿರುತ್ತದೆ, ಪ್ರತಿ ತಿಂಗಳು ಜಿಎಸ್‌ಟಿ ರಿಟರ್ನ್ ಫೈಲ್ ಮಾಡಲು ಹೆಣಗಾಡುತ್ತಿರುತ್ತಾನೆ. ಆದರೆ ಅದೇ ವ್ಯಾಪಾರಸ್ಥ ಸಂಜೆ ಹರಟೆಗೆ ಕುಳಿತಾಗ, “ಈಗ ಸ್ವಲ್ಪ ಕಷ್ಟವಾಗಬಹುದು, ಆದರೆ ನೋಡಿ ಮುಂದೊಂದು ದಿನ ಚೀನಾ ದೇಶವೇ ನಮ್ಮ ಕೈಕೆಳಗೆ ಬರುತ್ತದೆ, 5 ಟ್ರಿಲಿಯನ್ ಆರ್ಥಿಕತೆಯಾದಾಗ ಎಲ್ಲವೂ ಸರಿಹೋಗುತ್ತದೆ” ಎಂದು ತನ್ನದೇ ವ್ಯಾಪಾರದ ನಷ್ಟವನ್ನು ಸಮರ್ಥಿಸಿಕೊಳ್ಳುತ್ತಾನೆ. ತನ್ನ ಇಂದಿನ ಜೇಬು ಖಾಲಿಯಾಗುತ್ತಿದ್ದರೂ, ದೇಶದ ಆರ್ಥಿಕತೆಯ ಕಾಲ್ಪನಿಕ ಭವ್ಯತೆಯ ‘ಗೋಡೋ’ಗಾಗಿ ಅವನು ಕಾಯುತ್ತಾ ಕುಳಿತುಕೊಳ್ಳುತ್ತಾನೆ.

ಕನ್ನಡ ನವ್ಯ ಕಾವ್ಯದ ಪ್ರವರ್ತಕರಾದ ಗೋಪಾಲಕೃಷ್ಣ ಅಡಿಗರು ತಮ್ಮ ‘ಪ್ರಾರ್ಥನೆ’ ಕವಿತೆಯಲ್ಲಿ ಹೇಳಿದ “ಬಾವಲಿಗಳಂತೆ ಜೋತುಬಿದ್ದಿದ್ದೇವೆ ನಾವು ನಮ್ಮದೇ ಕಲ್ಪನೆಯ ಮರದ ಕೊಂಬೆಗಳಿಗೆ…” ಎಂಬ ಸಾಲುಗಳು ಇಂದಿನ ಪರಿಸ್ಥಿತಿಗೆ ನಿಖರವಾಗಿ ಅನ್ವಯಿಸುತ್ತವೆ. ಇಂದಿರಾ ಯುಗದಲ್ಲಿ ಸತ್ಯವನ್ನು ಬಂಧಿಸಲಾಗಿತ್ತು, ಆದರೆ ಮೋದಿ ಯುಗದಲ್ಲಿ ಸತ್ಯವನ್ನು ಅನೇಕ ಸುಳ್ಳುಗಳ ಮತ್ತು ಹೆಮ್ಮೆಯ ಉನ್ಮಾದದ ನಡುವೆ ಕಳೆದುಹೋಗುವಂತೆ ಮಾಡಲಾಗುತ್ತಿದೆ. ಇಲ್ಲಿ ಜನರಿಗೆ ತಾವು ಮುಕ್ತವಾಗಿದ್ದೇವೆ ಎಂಬ ಭ್ರಮೆಯಲ್ಲೇ ಸಮ್ಮತಿಯ ಗುಲಾಮಗಿರಿಗೆ ತಳ್ಳುವ ತೀವ್ರತೆಯಿದೆ.

ಈ ಬಗೆಯ ಕುರುಡು ಬೆಂಬಲ ಮತ್ತು ಸಮೂಹ ಸನ್ನಿಯನ್ನು ವಿವರಿಸಲು ನಮ್ಮ ಸಾಂಸ್ಕೃತಿಕ ಲೋಕದಲ್ಲಿ ಅದ್ಭುತ ರೂಪಕಗಳಿವೆ. ಇಂದಿನ ಪ್ರಜೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಅಧಿಕಾರ ನೀಡಿದ ‘ಬಣ್ಣದ ಬುಗುರಿ’ಯನ್ನೇ ನೋಡುತ್ತಾ ನಿಂತಿದ್ದಾನೆ. ಬುಗುರಿ ಸುತ್ತುವ ತನಕ ಜಗತ್ತೆಲ್ಲಾ ರಂಗಾಗಿದೆ ಎಂದು ಸಂಭ್ರಮಿಸುವ ನಾಗರಿಕನಿಗೆ, ತನ್ನ ಕಾಲ ಕೆಳಗಿನ ನೆಲವೇ ಕುಸಿದು ಹೋಗುತ್ತಿರುವುದು ತಿಳಿಯುತ್ತಿಲ್ಲ. ಕಡು ಬೇಸಿಗೆಯ ಬಿಸಿಲಿನಲ್ಲಿ ನೀರು ಸಿಗುತ್ತದೆಂದು ಮರೀಚಿಕೆಯ ಹಿಂದೆ ಓಡಿ ಪ್ರಾಣ ಕಳೆದುಕೊಳ್ಳುವ ಜಿಂಕೆಯಂತೆ ಇಂದಿನ ಸಮಾಜ 2047 ಮರೀಚಿಕೆಯ ಹಿಂದೆ ಓಡುತ್ತಿದೆ. ತನಗೇ ಅರಿವಿಲ್ಲದೆ ತಾನು ಬಲೆಗೆ ಬೀಳುತ್ತಿದ್ದೇನೆ ಎಂದು ತಿಳಿಯದ ಹಕ್ಕಿಯ ಹಾಗೆ, ಪ್ರಜೆ ತನ್ನದೇ ಬದುಕಿನ ಹಕ್ಕುಗಳ ಬೇಲಿಯನ್ನು ತಾನೇ ಕತ್ತರಿಸಿಕೊಳ್ಳುತ್ತಿದ್ದಾನೆ. ಯು. ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಅಗ್ರಹಾರದ ಜನ ಶವಸಂಸ್ಕಾರದ ನಿರ್ಧಾರ ಕೈಗೊಳ್ಳಲಾಗದೆ ಶಾಸ್ತ್ರದ ಪುಟಗಳನ್ನು ತಿರುವುತ್ತಾ ಕಾಲ ಕಳೆದಂತೆ, ಇಂದು ಭಾರತೀಯರು 2047ರ ಪ್ರಣಾಳಿಕೆಗಳ ಪುಟಗಳನ್ನು ನೋಡುತ್ತಾ ವರ್ತಮಾನದ ದುರಂತಗಳ ನಡುವೆ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ.

ಈ ಸಾಮೂಹಿಕ ಕುರುಡುತನದ ಹಿಂದೆ ಬಲವಾದ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ. ಭಾರತೀಯ ಸಮಾಜವು ಅನಾದಿಕಾಲದಿಂದಲೂ ಹಣೆಬರಹ, ಕರ್ಮ ಸಿದ್ಧಾಂತ ಮತ್ತು ಕಷ್ಟಗಳನ್ನು ಸಹಿಸಿಕೊಳ್ಳುವ ‘ತಪಸ್ಸು’ ಎಂಬ ತತ್ವಗಳಲ್ಲಿ ಅತಿಯಾದ ನಿಷ್ಠೆ ಇಟ್ಟುಕೊಂಡಿದೆ. ಈ ಸಾಂಸ್ಕೃತಿಕ ವಿಧೇಯತೆಯನ್ನೇ ರಾಜಕೀಯ ವ್ಯವಸ್ಥೆಯು ಅತ್ಯಂತ ಚತುರತೆಯಿಂದ ತನ್ನ ಅಸ್ತ್ರವನ್ನಾಗಿಸಿಕೊಂಡಿದೆ. ರಾಜಕೀಯಕ್ಕೆ ಧರ್ಮ ಮತ್ತು ನಾಗರಿಕತೆಯ ಹೆಮ್ಮೆಯ ಲೇಪನ ನೀಡಿದಾಗ, ವ್ಯವಸ್ಥೆಯನ್ನು ಪ್ರಶ್ನಿಸುವುದು ‘ಧರ್ಮನಿಂದನೆ’ ಅಥವಾ ‘ದೇಶದ್ರೋಹ’ ಎಂದು ಬಿಂಬಿತವಾಗುತ್ತದೆ. ಇದು ಇಡೀ ಸಮಾಜಕ್ಕೆ ಒಂದು ಬಗೆಯ ಸಾಮಾಜಿಕ ಅರಿವಳಿಕೆ ನೀಡಿದಂತೆ ಕೆಲಸ ಮಾಡುತ್ತದೆ . ಜನರು ಈಗಾಗಲೇ ಒಂದು ಸಿದ್ಧಾಂತಕ್ಕಾಗಿ ಅಥವಾ ನಾಯಕನಿಗಾಗಿ 13 ವರ್ಷಗಳ ಕಾಲ ತಮ್ಮ ಭಾವನೆ, ಶ್ರಮ ಮತ್ತು ಮತವನ್ನು ಹೂಡಿಕೆ ಮಾಡಿದ್ದಾರೆ.

ಆ ವ್ಯವಸ್ಥೆ ವಿಫಲವಾಗುತ್ತಿದೆ ಎಂದು ಒಳಗಣ್ಣಿಗೆ ತಿಳಿದರೂ, ಅದನ್ನು ಒಪ್ಪಿಕೊಂಡರೆ “ನನ್ನ ನಿರ್ಧಾರ ತಪ್ಪು” ಎಂದು ತಾವೇ ಒಪ್ಪಿಕೊಂಡಂತಾಗುತ್ತದೆ ಎಂಬ ಅಹಂಕಾರ ಮತ್ತು ಭಯ ಅವರನ್ನು ಕಾಡುತ್ತದೆ. ಹಾಗಾಗಿ, “ಇನ್ನೂ ಕಾಯೋಣ, ಬಹುಶಃ ಬದಲಾವಣೆ ಬರಬಹುದು” ಎಂದು ತಾವೇ ಕಾಯುವಿಕೆಯನ್ನು ದೀರ್ಘಗೊಳಿಸುತ್ತಾರೆ. ಬೆಕೆಟ್‌ನ ನಾಟಕದಲ್ಲಿ ವ್ಲಾಡಿಮಿರ್ ಮತ್ತು ಎಸ್ಟ್ರಾನ್ “ನಾಳೆ ಅವನು ಖಂಡಿತ ಬರುತ್ತಾನೆ” ಎಂದು ಮರುದಿನವೂ ಅದೇ ಮರದ ಕೆಳಗೆ ನಿಲ್ಲುವ ಸ್ಥಿತಿಯೇ ಇದು. ಇದರ ಜೊತೆಗೆ ಮನುಷ್ಯನಿಗೆ ಹತ್ತಿರದ ವಾಸ್ತವದ ನೋವಿಗಿಂತ ದೂರದ ಭವ್ಯ ಕಥೆಗಳನ್ನು ಮಾರಾಟ ಮಾಡುವುದು ಸುಲಭ ಎಂಬ ‘ಹೈಪರ್‌ಬೋಲಿಕ್ ಡಿಸ್ಕೌಂಟಿಂಗ್’ ಸಿದ್ಧಾಂತವೂ ಇಲ್ಲಿದೆ. ಸಾಮಾನ್ಯ ರೈಲುಗಳ ಜನರಲ್ ಬೋಗಿಯಲ್ಲಿ ಟಿಕೆಟ್ ಸಿಗದೆ ಜನಸಾಮಾನ್ಯರು ಶೌಚಾಲಯದ ಬಳಿ ಕುಳಿತು ಕುರಿಗಳಂತೆ ಪ್ರಯಾಣಿಸುತ್ತಿದ್ದರೂ, ದೇಶಕ್ಕೆ ‘ಬುಲೆಟ್ ಟ್ರೈನ್’ ಬರುತ್ತಿದೆ ಎಂಬ ಹೆಮ್ಮೆಯು ಆ ಕಷ್ಟವನ್ನು ಮರೆಸುತ್ತದೆ. ಅಡುಗೆ ಮನೆಯ ಬಜೆಟ್ ತಲೆಕೆಳಗಾಗಿದ್ದರೂ, ‘ವಿಶ್ವಗುರು’ ಅಥವಾ ‘5 ಟ್ರಿಲಿಯನ್ ಆರ್ಥಿಕತೆ’ಯ ಮುಖವಾಡ ನೋಡಿ ಜನರು ಮಂತ್ರಮುಗ್ಧರಾಗುತ್ತಿದ್ದಾರೆ. ಇದರೊಂದಿಗೆ ‘ಪರ್ಯಾಯವಿಲ್ಲದ ಭೀತಿ’ ಎನ್ನುವ ಶೂನ್ಯತೆಯೂ ಜನರನ್ನು ಕಾಡುತ್ತಾ ಪ್ರಶ್ನಿಸದಂತೆ ಮಾಡಿದೆ.

ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿದಾಗ ಸಮಾಜದಲ್ಲಿ ಕಂಡುಬಂದ ವರ್ತನೆ ಇದಕ್ಕೆ ಅತ್ಯುತ್ತಮ ಸಾಕ್ಷಿ. ತೈಲ ಬೆಲೆ ಏರಿಕೆಯಾದಾಗ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹೊಮ್ಮಬೇಕಿತ್ತು. ಆದರೆ, ಸಮಾಜದ ಒಂದು ವರ್ಗ, ಅದರಲ್ಲೂ ಕೆಲವು ಮಠಾಧೀಶರು, ಧಾರ್ಮಿಕ ಮುಖಂಡರು ಮತ್ತು ಮಾಧ್ಯಮಗಳ ಬಿಂಬಗಳು ಸೈಕಲ್ ಚಲಾಯಿಸುವುದು, ಕಾಲ್ನಡಿಗೆಯಲ್ಲಿ ಸಾಗುವುದನ್ನು ಒಂದು ‘ಆದರ್ಶಪ್ರಾಯ ಜೀವನಶೈಲಿ’ ಎಂಬಂತೆ ಬಿಂಬಿಸಲು ಮಾರುಕಟ್ಟೆಗೆ ಇಳಿದರು. ಇದು ‘ಅಚ್ಛೇ ದಿನ್’ ಅಭಿಯಾನದ ವೈಫಲ್ಯವನ್ನು ಮತ್ತು ಸರ್ಕಾರದ ಆರ್ಥಿಕ ಲೂಟಿಯನ್ನು ಮುಚ್ಚಿಹಾಕುವ ತಂತ್ರದ ಭಾಗವೇ ಆಗಿದೆ.

“ಸೈಕಲ್ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು, ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ, ಇದು ದೇಶಕ್ಕಾಗಿ ನಾವು ಮಾಡುವ ತ್ಯಾಗ” ಎಂಬ ಆಧ್ಯಾತ್ಮಿಕ ಮತ್ತು ಆರೋಗ್ಯದ ಮುಖವಾಡವನ್ನು ಈ ಆರ್ಥಿಕ ಹೊರೆಗೆ ತೊಡಿಸಲಾಯಿತು. ಇದರ ಮೂಲಕ, ತೈಲ ಬೆಲೆಯನ್ನು ನಿಯಂತ್ರಿಸಬೇಕಾದ ಸರ್ಕಾರದ ಸಾಂವಿಧಾನಿಕ ಜಬಾಬ್ದಾರಿಯನ್ನು ರಾತ್ರೋರಾತ್ರಿ ನಾಗರಿಕನ ವೈಯಕ್ತಿಕ ‘ದೇಶಭಕ್ತಿಯ ತಪಸ್ಸು’ ಎಂದು ಬದಲಾಯಿಸಲಾಯಿತು. ಶ್ರೀಮಂತರು ಮತ್ತು ಪ್ರಭಾವಿಗಳು ಮಾಧ್ಯಮಗಳ ಮುಂದೆ ಸೈಕಲ್ ತುಳಿದು ನಾಟಕವಾಡುವಾಗ, ದಿನನಿತ್ಯದ ಬದುಕಿಗಾಗಿ ಸೈಕಲ್ ತುಳಿಯಲೇಬೇಕಾದ ಬಡವನ ನಿಜವಾದ ಹತಾಶೆ ಮತ್ತು ಆರ್ಥಿಕ ಅಸಹಾಯಕತೆ ಸಮಾಜದ ಕಣ್ಣಿಗೆ ಕಾಣದಂತೆ ಮರೆಯಾಗಿಬಿಡುತ್ತದೆ. ಇದು ಪಿ. ಲಂಕೇಶ್ ಅವರು ತಮ್ಮ ‘ಸಂಕ್ರಾಂತಿ’ ನಾಟಕದಲ್ಲಿ ಚಿತ್ರಿಸಿದ ಶೋಷಣೆಯ ಪವಿತ್ರೀಕರಣವನ್ನೇ ನೆನಪಿಸುತ್ತದೆ. ಭವಿಷ್ಯದ ಭರವಸೆಯೆಂಬ ಅಫೀಮನ್ನು ಕುಡಿದು ವರ್ತಮಾನವನ್ನು ಬಲಿಕೊಡುತ್ತಿರುವ ಇಂದಿನ ನಾಗರಿಕನ ಸ್ಥಿತಿಗೆ ನಮ್ಮ ಲೇಖಕರು ದಶಕಗಳ ಹಿಂದೆಯೇ ಕನ್ನಡಿ ಹಿಡಿದಿದ್ದಾರೆ.

ಈ ಇಬ್ಬರು ನಾಯಕರ ‘ಗೋಡೋ ಕಾಂಪ್ಲೆಕ್ಸ್’ ಮತ್ತು ಆಡಳಿತ ಶೈಲಿಯನ್ನು ತುಲನೆ ಮಾಡಿದಾಗ, ನರೇಂದ್ರ ಮೋದಿಯವರ ಪ್ರಸ್ತುತ ಆಡಳಿತಾವಧಿಯೇ ಸಮಾಜದ ಬೌದ್ಧಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವಕ್ಕೆ ಅತ್ಯಂತ ಅಪಾಯಕಾರಿ ಎಂಬುದು ಸ್ಪಷ್ಟವಾಗುತ್ತದೆ. ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯಲ್ಲಿ ನಾಗರಿಕರಿಗೆ ತಾವು ಹಕ್ಕುಗಳನ್ನು ಕಳೆದುಕೊಂಡಿದ್ದೇವೆ ಎಂಬ ಕಹಿ ಸತ್ಯ ತಿಳಿದಿತ್ತು. ಶತ್ರು ಕಣ್ಣಿಗೆ ಕಾಣಿಸುತ್ತಿದ್ದರಿಂದ ಸಮಾಜದ ಪ್ರತಿರೋಧದ ಶಕ್ತಿ ಜಾಗೃತವಾಗಿತ್ತು. ಆದರೆ ಪ್ರಸ್ತುತ ಮೋದಿ ಯುಗದಲ್ಲಿ, ನಾಗರಿಕರು ತಮಗೆ ಇಷ್ಟಬಂದದ್ದನ್ನು ತಿನ್ನುವ, ಮಾತನಾಡುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದರೂ, “ನಾವು ವಿಶ್ವಗುರುವಾಗುತ್ತಿದ್ದೇವೆ” ಎಂಬ ಭ್ರಮೆಯಲ್ಲೇ ತೇಲುತ್ತಿದ್ದಾರೆ. ಕಣ್ಣಿಗೆ ಕಾಣದ ಈ ಸುಪ್ತ ಸರ್ವಾಧಿಕಾರವು ಸಮಾಜದ ಪ್ರತಿಭಟಿಸುವ ಹಕ್ಕನ್ನು ಒಳಗಿನಿಂದಲೇ ಸೌಮ್ಯವಾಗಿ ಕೊಲ್ಲುತ್ತದೆ. ಇಂದಿರಾ ಗಾಂಧಿಯವರು ನ್ಯಾಯಾಂಗ ಮತ್ತು ಮಾಧ್ಯಮಗಳನ್ನು ಕಾನೂನಿನ ಮೂಲಕ ತಾತ್ಕಾಲಿಕವಾಗಿ ಹತ್ತಿಕ್ಕಿದರು.

ಆದರೆ ಇಂದು, ಮಾಧ್ಯಮಗಳು ಮತ್ತು ಸ್ವತಂತ್ರ ಸಂಸ್ಥೆಗಳು ತಾವಾಗಿಯೇ ಅಧಿಕಾರದ ಮುಂದೆ ಮಂಡಿಯೂರಿ ನಿಂತಿವೆ. ಮಾಧ್ಯಮಗಳೇ ಸರ್ಕಾರದ ಭವಿಷ್ಯದ ಕಥೆಗಳ ಪ್ರಚಾರಕರಾಗಿ ಬದಲಾಗಿವೆ. ಸಾಂಸ್ಥಿಕ ಜಡತ್ವವು ಇಂದಿನ ಸಮಾಜದ ಒಳಹೊಕ್ಕಿರುವುದರಿಂದ ಇದನ್ನು ಸರಿಪಡಿಸುವುದು ದಶಕಗಳ ಕಾಲದ ಸವಾಲಾಗಿದೆ. ಇಂದಿರಾ ಗಾಂಧಿಯವರ ಭರವಸೆಗಳು ಕೇವಲ ರಾಜಕೀಯ ಮತ್ತು ಆರ್ಥಿಕವಾಗಿದ್ದವು. ಆದರೆ ಮೋದಿಯವರ ‘ಗೋಡೋ’ ಕಥನಕ್ಕೆ ಧರ್ಮ, ನಾಗರಿಕತೆಯ ಹೆಮ್ಮೆ ಮತ್ತು ಆಧ್ಯಾತ್ಮಿಕತೆಯ ಲೇಪನವಿದೆ. ಯಾವಾಗ ರಾಜಕೀಯವು ಧರ್ಮದ ಮುಖವಾಡ ತೊಡುತ್ತದೆಯೋ, ಆಗ ನಾಯಕನನ್ನು ಪ್ರಶ್ನಿಸುವುದು ದೇಶದ್ರೋಹ ಅಥವಾ ಧರ್ಮನಿಂದನೆ ಎಂದು ಬಿಂಬಿತವಾಗುತ್ತದೆ. ಇದು ಸಮಾಜದ ತರ್ಕಬುದ್ಧಿಯನ್ನೇ ಸಂಪೂರ್ಣವಾಗಿ ನಾಶಮಾಡುತ್ತದೆ.

ಅಂತಿಮವಾಗಿ, ಈ ‘ಗೋಡೋ ಕಾಂಪ್ಲೆಕ್ಸ್’ನಿಂದ ಭಾರತೀಯ ಸಮಾಜವು ಹೊರಬರಬೇಕಾದರೆ, ಜನರು ಭವಿಷ್ಯದ ಕಲ್ಪನೆಗಳ ವ್ಯಸನದಿಂದ ಮುಕ್ತರಾಗಬೇಕು. “ನನ್ನ ಇಂದಿನ ಹಸಿವಿಗೆ ಇಪ್ಪತ್ತು ವರ್ಷಗಳ ನಂತರದ ಊಟ ಪರಿಹಾರವಲ್ಲ” ಎಂಬ ತರ್ಕವನ್ನು ನಾಗರಿಕರು ಕಂಡುಕೊಳ್ಳಬೇಕಿದೆ. ಧರ್ಮದಲ್ಲಿ ನಂಬಿಕೆ ಮುಖ್ಯ, ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮುಖ್ಯ ಎಂಬ ಅರಿವು ಮೂಡದಿದ್ದರೆ, ಸಮಾನತೆಯ ಕನಸು ಕೇವಲ ಅಧಿಕಾರದ ಹಸಿವಿಗೆ ಇಂಧನವಾಗುತ್ತದೆ. ಕಾಯುವಿಕೆಯನ್ನು ನಿಲ್ಲಿಸಿ, ವರ್ತಮಾನದ ಫಲಿತಾಂಶವನ್ನು ಒತ್ತಾಯಿಸುವ ದಿನವೇ ನಿಜವಾದ ಪ್ರಜಾಪ್ರಭುತ್ವದ ಉದಯವಾಗುತ್ತದೆ. ಇಲ್ಲದಿದ್ದರೆ, ಸಮಾಜವು ಬೆಕೆಟ್‌ನ ನಾಟಕದ ಪಾತ್ರಗಳಂತೆ ಆ ಅಸಂಗತ ಮರದ ಕೆಳಗೆ ಕಾಯುತ್ತಲೇ ಇರುತ್ತದೆ— ಪ್ರಶ್ನಿಸುವುದನ್ನು ಬಿಟ್ಟು ಕೇವಲ ನಿರೀಕ್ಷಿಸುವುದೇ ಈ ಯುಗದ ಅತಿ ದೊಡ್ಡ ಸಾಂಸ್ಕೃತಿಕ ದುರಂತ.

ಇದನ್ನೂ ನೋಡಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಕೊಡೋಕಾ?? ಕಿತ್ಕೊಳೋಕಾ??ಉತ್ತರಿಸಲಿ ಮೋದಿ ಸರಕಾರ – ಕೆ.ಎಸ್‌ ವಿಮಲಾ

Donate Janashakthi Media

Leave a Reply

Your email address will not be published. Required fields are marked *