ತಮಿಳುನಾಡು : ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ

ಚೆನ್ನೈ : ತಮಿಳುನಾಡಿನ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಸಿ. ಜೋಸೆಫ್ ವಿಜಯ ಅವರು ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್‌ಲೆಕರ್ ಅವರು ವಿಜಯ ಅವರಿಗೆ ಪ್ರಮಾಣವಚನ ಬೋಧಿಸಿದರು. ತಮಿಳುನಾಡು

2026ರ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಳಿಕ ಕಾಂಗ್ರೆಸ್‌, ಎಡಪಕ್ಷಗಳು, ವಿಸಿಕೆ ಹಾಗೂ ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ವಿಜಯ ಅವರು ಬಹುಮತದ ಸಂಖ್ಯಾಬಲವನ್ನು ಸಾಧಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಒಟ್ಟು 120 ಶಾಸಕರ ಬೆಂಬಲ ದೊರೆತ ಬಳಿಕ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಿದ್ದರು.

ವಿಜಯ ಅವರ ಪ್ರಮಾಣವಚನ ಸಮಾರಂಭಕ್ಕೆ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಮಿತ್ರಪಕ್ಷಗಳ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ವೇಳೆ ಟಿವಿಕೆ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ದಶಕಗಳ ಪ್ರಾಬಲ್ಯಕ್ಕೆ ತೆರೆ ಎಳೆಯುವ ಮೂಲಕ ವಿಜಯ ಅವರ ನೇತೃತ್ವದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ತಮಿಳುನಾಡು

ಇದನ್ನೂ ಓದಿ : ತಮಿಳುನಾಡು ರಾಜಕೀಯ ಬೆಳವಣಿಗೆ | ಟಿವಿಕೆ ಸರ್ಕಾರ ರಚನೆಗೆ ಇನ್ನೂ ಎರಡು ಸ್ಥಾನಗಳ ಕೊರತೆ

ಯಾರ‍್ಯಾರಿಗೆ ಯಾವ ಖಾತೆ?

ಹೊಸ ಸರ್ಕಾರದಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಗೃಹ, ಪೊಲೀಸ್ ಮತ್ತು ಸಾರ್ವಜನಿಕ ಆಡಳಿತ ಸೇರಿದಂತೆ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ನಿರ್ವಹಿಸುವ ನಿರೀಕ್ಷೆಯಿದ್ದರೆ, ಎನ್. ಆನಂದ್ ಅವರಿಗೆ ಪುರಸಭೆ ಆಡಳಿತ ಖಾತೆ ನೀಡುವ ಸಾಧ್ಯತೆಯಿದೆ. ಇಂಧನ ಖಾತೆ ಜವಾಬ್ದಾರಿಯನ್ನು ಸಿಟಿಆರ್ ನಿರ್ಮಲ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಆಧವ್ ಅರ್ಜುನ ಅವರಿಗೆ ಕ್ರೀಡಾ ಅಭಿವೃದ್ಧಿ ಖಾತೆಯನ್ನು ವಹಿಸಲಾಗುವುದು. ರಾಜ್ ಮೋಹನ್ ಅವರು ಆದಿ ದ್ರಾವಿಡರ್ ಕಲ್ಯಾಣ ಖಾತೆ ಸಚಿವರಾಗುವ ಸಾಧ್ಯತೆ ಇದೆ. ಹೊಸ ಸಚಿವ ಸಂಪುಟದಲ್ಲಿ ವಿ.ಎನ್.ಎಸ್. ಮುಸ್ತಫಾ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನಿರ್ವಹಿಸುವ ನಿರೀಕ್ಷೆಯಿದೆ. ಪಿ.ವೆಂಕಟರಮಣನ್ ಅವರಿಗೆ ಶಾಲಾ ಶಿಕ್ಷಣ ಖಾತೆ, ಅರುಣ್ ರಾಜ್ ಅವರಿಗೆ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಖಾತೆಯನ್ನು ವಹಿಸುವ ಸಾಧ್ಯತೆಯಿದೆ. ತಮಿಳುನಾಡು

ವಿಡಿಯೋ ನೋಡಿ : 

Donate Janashakthi Media

Leave a Reply

Your email address will not be published. Required fields are marked *