ಮಧ್ಯಮ ವರ್ಗದ ಭ್ರಮೆ ಭಂಗ: ‘ಕ್ರಾಂತಿಕಾರಿತನ’ದ ಮುಖವಾಡ ಕಳಚಿದ ರಾಜಕೀಯ

ಮಿಡ್ಲ್ ಕ್ಲಾಸ್ ಜನಗಳಿಗೆ, ರಾಜಕೀಯವಾಗಿ ಅಮಾಯಕರಾದವರಿಗೆ ಕ್ರಾಂತಿಕಾರಿ ತರಹ ಕಾಣುತ್ತಿದ್ದ ರಾಘವ್ ಚಡ್ಡ ಹಾಗು ಆತನ ಆಪ್ ಸಹದ್ಯೋಗಿಗಳು ಬಿಜೆಪಿ ಸೇರಿರುವುದು ಅವರ ಪಾಲಿಗೆ ಶಾಕಿಂಗ್ ಸುದ್ದಿ.‌ ಭಾರತದ ರಾಜಕಾರಣದ ಒಳ ಹೊರಗಿನ ಅರಿವಿರುವವರಿಗೆ, ಅದರಲ್ಲೂ ಕಳೆದ ಒಂದು ದಶಕದಲ್ಲಿ ಭಾರತದ ರಾಜಕಾರಣ ಹೊರಳಿರುವ ದಿಕ್ಕು ಬಲ್ಲವರಿಗೆ ಇದೇನು ತೀರಾ ಅಚ್ಚರಿಯ ಸಂಗತಿ ಏನಲ್ಲ. ಮಧ್ಯಮ

– ಮುನೀರ್ ಕಾಟಿಪಳ್ಳ

ಹಾಗೆ ನೋಡಿದರೆ ಆಮ್ ಆದ್ಮಿ ಪಕ್ಷಕ್ಕೆ ಬಂಡವಾಳಶಾಹಿ ಕಾಂಗ್ರೆಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಿಗೆ ಇರುವಷ್ಟೂ ಸೈದ್ದಾಂತಿಕ ಚೌಕಟ್ಟು ಇರಲಿಲ್ಲ. ಲೋಕ್ ಪಾಲ್ ಚಳವಳಿಯಲ್ಲಿ ಹುಟ್ಟಿ, ಸರಕಾರದ ಅಧಿಕಾರಿಗಳು, ರಾಜಕಾರಣಿಗಳ ಆರ್ಥಿಕ ಭ್ರಷ್ಟಾಚಾರದ ವಿರುದ್ದದ ಹೋರಾಟವನ್ನೆ ಕಾರ್ಯಕ್ರಮವಾಗಿಸಿ ಮುನ್ನಡೆದ ಪಕ್ಷ ಅದು. ಭ್ರಷ್ಟಾಚಾರದ ವಿರುದ್ಧ ಮಾತಾಡಿದವರಿಗೆಲ್ಲಾ ಆ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿತು. ಮಧ್ಯಮ, ಮೇಲ್ಮದ್ಯಮ ವರ್ಗದವರನ್ನೆ ನೆಚ್ಚಿಕೊಂಡ ಪಕ್ಷ ಆದ ಕಾರಣ ಆ ವಲಯದಿಂದ ಬಂದವರು, ಟಸ್ಕು, ಪುಸ್ಕು ಇಂಗ್ಲಿಷು, ಸಪಾಯಿ ನಾಲಿಗೆ ಹೊಂದಿದರರೆಲ್ಲಾ ನಾಯಕರಾಗಿ ಅವಕಾಶ ಪಡೆದರು. ಅದರಲ್ಲಿ ಈ ರಾಘವ ಚಡ್ಡಾ ಗ್ಯಾಂಗ್ ಕೂಡ ಸೇರಿದೆ.

ಇದನ್ನೂ ಓದಿ: “ಭಾರತ ಮುಸ್ಲಿಂ ರಾಷ್ಟ್ರವಾಗವುದೇ?” ಪುಸ್ತಕ ಪರಿಚಯ; ಸಂವಾದ ಕಾರ್ಯಕ್ರಮ

ಈ ರೀತಿ ಮುಸ್ಸಂಜೆ ಹೊತ್ತಿಗೆ ಪಕ್ಷ ಸೇರಿ, ಬೆಳಗಾಗುವಷ್ಟೊತ್ತಿಗೆ ಜನಪ್ರತಿನಿಧಿಗಳಾಗಿ ಠಾಕು ಟೀಕಾಗಿ ಸದನಗಳಿಗೆ ತಲುಪಿದವರ ಒಳಗಡೆ ವ್ಯಕ್ತಿಗತ ಮಹತ್ವಾಕಾಂಕ್ಷೆ, ಅವಕಾಶವಾದ, ಸಂಪತ್ತಿನ ಹಪಾಹಪಿ ಹೊರತಾಗಿ ಇ‌ನ್ನೇನೂ ಇರುವುದಿಲ್ಲ. ಜೈಲು, ಕೇಸು, ಲಾಠಿ ಏಟು ಬಿಡಿ, ತಮ್ಮ ಸೂಟು ಬೂಟುಗಳಿಗೆ ಸಣ್ಣ ಕಲೆ ಆಗುವುದನ್ನೂ ಅವರಿಂದ ಭರಿಸಲಾಗುವುದಿಲ್ಲ. ಅಂತಹ ಕೆಟಗರಿಯ ಚಡ್ಡಾ, ಮಿತ್ತಲ್ ಗಳು, ಈ ಹಿಂದಿನ ಕಿರಣ್ ಬೇಡಿಗಳಿಂದ ಬಿಜೆಪಿಗೆ ಪಕ್ಷಾಂತರಗೊಳ್ಳುವುದು ಹೊರತು ಇನ್ನೇನು ತಾನೆ ಸಾಧ್ಯ ?

ಭಾರತದ ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ ಸೈದ್ದಾಂತಿಕ ಗಟ್ಟಿತನ ಇರುವ, ಇಲ್ಲಿನ ಜನಸಾಮಾನ್ಯರ, ಬಡವರ, ಶ್ರಮಿಕರ ಬದುಕಿನ ಕಷ್ಟಗಳ ಅನುಭವ, ಅರಿವು ಇರುವ,ಅವರ ನಡುವೆ ಹೋರಾಟದ ಮೂಲಕ ಮೂಡಿ ಬರುವ, ವ್ಯಕ್ತಿಗತ ಮಹಾತ್ವಾಕಾಂಕ್ಷೆ ಹೊಂದಿರದ, ಶಾಸನ ಸಭೆಯನ್ನು ತಲುಪುವುದೆ ರಾಜಕಾರಣದ ಏಕೈಕ ಗುರಿ ಎಂಬ ತಪ್ಪು ಕಲ್ಪನೆ ಇಲ್ಲದ ನಾಯಕರು ಇಂದಿನ ಅಗತ್ಯ. ಆತ ಉದ್ಯಮಿಯಂತೂ ಆಗಿರಲೇಬಾರದು. ರಾಜಕೀಯವೆ ಆತನ ವೃತ್ತಿ ಆಗಿರಬೇಕು.

ಹಾಗಲ್ಲ ಅಂತಾದರೆ ಚಡ್ಡಾ, ಮಿತ್ತಲ್ ಅಂತವರು ಪದೇ ಪದೆ ಕಾಣಿಸಿಕೊಳ್ಳುತ್ತಲೆ ಇರುತ್ತಾರೆ, ಮಧ್ಯಮ, ಮೇಲ್ಮಧ್ಯಮ, ಅಮಾಯಕ ಜನಗಳಿಗೆ ನಿರಾಸೆ ಮೂಡಿಸುತ್ತಲೆ ಇರುತ್ತಾರೆ. ಇಂತಹ ಭ್ರಮ ನಿರಸನಗಳಲ್ಲೆ ಕಾಲ ಸರಿದು ಹೋಗುತ್ತಲೆ ಇರುತ್ತದೆ.

ಇದನ್ನೂ ನೋಡಿ: ವಿಶ್ವ ಪುಸ್ತಕ ದಿನ: ಶಿಕ್ಷಣದ ಕೇಂದ್ರೀಕರಣದ ವಿರುದ್ಧ ಚಿಂತನೆಯ ಧ್ವನಿ Janashakthi Media

Donate Janashakthi Media

Leave a Reply

Your email address will not be published. Required fields are marked *