ಹಾವೇರಿ: ‘ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಘಟಿಕೋತ್ಸವ ಸಮಾವೇಶ ನಡೆಸಬೇಕು’ ಎಂದು ಒತ್ತಾಯಿಸಿ ಹೋರಾಟ ಆರಂಭಿಸಿರುವ ‘ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿ’ ಪದಾಧಿಕಾರಿಗಳು, ‘ಬೇಡಿಕೆ ಈಡೇರದಿದ್ದರೆ, ಘಟಿಕೋತ್ಸವ ಸಮಾವೇಶ ನಡೆಯುವ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಲಾಗುವುದು’ ಎಂದು ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಏಪ್ರಿಲ್ 4ರಂದು ‘ಪ್ರತಿರೋಧ ಸಭೆ’ ನಡೆಸಿದ ಅವರು ಎಚ್ಚರಿಕೆ ನೀಡಿದ್ದಾರೆ.
‘ನಮ್ಮ ಜಿಲ್ಲೆಯ ಹೆಮ್ಮೆ ಹಾವೇರಿ ವಿಶ್ವವಿದ್ಯಾಲಯ. ಇದರ ಮೊದಲ ಘಟಿಕೋತ್ಸವ ಸಮಾರಂಭವನ್ನು ಖಾಸಗಿ ಕಾಲೇಜಿನಲ್ಲಿ ಆಯೋಜಿಸುವುದು ಸರಿಯಲ್ಲ. ವಿ.ವಿ ಆವರಣದಲ್ಲಿಯೇ ಘಟಿಕೋತ್ಸವ ಮಾಡಬೇಕೆಂದು ಹಲವು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ವಿ.ವಿ ಆಡಳಿತ ಮಂಡಳಿ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಹೀಗಾಗಿ, ಘಟಿಕೋತ್ಸವ ದಿನವೇ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಪದಾಧಿಕಾರಿಗಳು ಹೇಳಿದರು.
ಇದನ್ನೂ ಓದಿ: ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು – ಭಾಗ 1
‘ಅನುದಾನದ ಕೊರತೆ, ಸಭಾಂಗಣ ಇಲ್ಲದಿರುವುದು ಹಾಗೂ ವಿದ್ಯುತ್ ಕಂಬ- ತಂತಿ ಇರುವುದರಿಂದ ವಿ.ವಿ ಆವರಣದಲ್ಲಿ ಘಟಿಕೋತ್ಸವ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಕುಲಪತಿ ಹೇಳಿದ್ದಾರೆ. ಆದರೆ, ಆವರಣದಲ್ಲಿಯೇ ಘಟಿಕೋತ್ಸವ ಮಾಡಲು ಸಾಕಷ್ಟು ಅವಕಾಶಗಳಿವೆ. ಕುಲಪತಿಯವರು ಕುಂಟು ನೆಪ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.
‘ವಿ.ವಿ ಆವರಣದಲ್ಲಿ ಘಟಿಕೋತ್ಸವ ನಡೆಸುವ ಬಗ್ಗೆ ಸಿಂಡಿಕೇಟ್ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇತರರ ಅಭಿಪ್ರಾಯ ಪಡೆದಿಲ್ಲ. ಕುಲಪತಿಯವರು ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ವಿ.ವಿಗೆ ಅನ್ಯಾಯವಾಗಲಿದೆ. ಘಟಿಕೋತ್ಸವ ಆಯೋಜನೆ ಮಾಡಿದ್ದರೆ, ವಿ.ವಿಗೆ ಸುಸಜ್ಜಿತ ರಸ್ತೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿತ್ತು’ ಎಂದು ಹೇಳಿದರು.
‘ಹಾವೇರಿ ವಿ.ವಿ ಆವರಣದಲ್ಲಿಯೇ ಮೊದಲ ಘಟಿಕೋತ್ಸವ ನಡೆಯಬೇಕು. ಈ ಬೇಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ವಿ.ವಿ ಅಭಿವೃದ್ಧಿಗಾಗಿ ಅಗತ್ಯವಿರುವ ಅನುದಾನ, ನೇಮಕಾತಿ, ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ವಿದ್ಯಾರ್ಥಿಗಳಿಗೆ ಲಭ್ಯವಾಗದ ಅವಕಾಶ: ‘ಖಾಸಗಿ ಕಾಲೇಜಿನ ಸಭಾಂಗಣದಲ್ಲಿ ಲಭ್ಯವಿರುವ ಸೀಟುಗಳಿಗೆ ತಕ್ಕಂತೆ, ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿ.ವಿ ವಿದ್ಯಾರ್ಥಿಗಳನ್ನು ಸಮಾರಂಭದಿಂದ ಹೊರಗೆ ಇರಿಸಲಾಗಿದೆ. ಅವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ’ ಎಂದು ಪದಾಧಿಕಾರಿಗಳು ದೂರಿದರು.
‘ಮೊದಲ ಘಟಿಕೋತ್ಸವ ಆಗಿರುವುದರಿಂದ, ಅದನ್ನು ನೋಡುವ ಆಸೆ ವಿದ್ಯಾರ್ಥಿಗಳಿಗಿದೆ. ಹೀಗಾಗಿ, ಎಲ್ಲರಿಗೂ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಬಸವರಾಜ ಪೂಜಾರ, ಪರಿಮಳಾ ಜೈನ್, ಎಂ. ಆಂಜನೇಯ, ಬಸವರಾಜ್ ಎಸ್., ಶಿವಬಸಪ್ಪ ಗೋವಿ, ಉಡಚಪ್ಪ ಮಾಳಗಿ, ತಿಪ್ಪೇಸ್ವಾಮಿ ಹೊಸಮನಿ, ಮಕಬುಲ್ ಎಂ.ಕೆ., ಅರುಣ ನಾಗಾವತ್, ಖಲಂದರ್ ಅಲ್ಲಿಗೌಡ್ರ, ಚೈತ್ರಾ ಕೊರವರ, ಎಸ್.ಎ. ಪಾಣಿಗಟ್ಟಿ, ಶಶಿಕಲಾ ಅಕ್ಕಿ, ಪುಟ್ಟಪ್ಪ ಹರವಿ, ಎಸ್.ಎಸ್. ಹಿರೇಮಠ, ರಾಜು ಉಪ್ಪಾರ, ಸುಮಾ ಪುರದ, ಶಾರದಾ ಹಿರೇಮಠ, ಗೌರಮ್ಮ ಕುಲಕರ್ಣಿ ಇದ್ದರು.
ಇದನ್ನೂ ನೋಡಿ: ಫ್ಯಾಕ್ಟ್ ಚೆಕ್ | ಮೋದಿ–ಸೋನಿಯಾ ಆಸ್ಪತ್ರೆ ಭೇಟಿ: ವೈರಲ್ ಫೋಟೋ ನಿಜವೇ ಅಥವಾ ನಕಲಿಯೇ? Janashakthi Media
