ಬೆಂಗಳೂರು: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು 2026-27ನೇ ಸಾಲಿನ ಬಜೆಟ್ ಅಧಿವೇಶದನದ ಬ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪರ ದನಿ ಎತ್ತಿದರು. ವೇತನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ, 1) ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೆಲಸದ ಸರಾಸರಿ ಗಂಟೆಗಳೆಷ್ಟು? ಪ್ರಸ್ತುತ ಸೇವೆಯಲ್ಲಿರುವ ಕಾರ್ಯಕರ್ತೆಯರ ಸಂಖ್ಯೆಯೆಷ್ಟು? 2) ಈ ಕಾರ್ಯಕರ್ತೆಯರಿಗೆ ಸರ್ಕಾರ ಪ್ರತಿ ತಿಂಗಳಿಗೆ ನೀಡುವ ವೇತನ ಎಷ್ಟು? 3) ಇವರುಗಳ ವೇತನವನ್ನು ಕೊನೆಯ ಬಾರಿಗೆ ಹೆಚ್ಚಿಸಿದ ದಿನಾಂಕ ಯಾವುದು? 4) ಇವರುಗಳು ಸಮಾಜಕ್ಕೆ ನೀಡುತ್ತಿರುವ ಅಮೂಲ್ಯ ಸೇವೆಯನ್ನು ಗಮನದಲ್ಲಿಟ್ಟುಕೊಂಡು 2026-27ನೇ ಹಣಕಾಸು ವರ್ಷದಲ್ಲಿ ಅವರ ವೇತನವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಎಂದು ಪ್ರಶ್ನಿಸಿದರು. ವೇತನ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಅತಿ ಹೆಚ್ಚು ಜವಾಬ್ದಾರಿಗಳಿವೆ. ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರು, ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಾರೆ. ಮನೆಮನೆಗಳಿಗೆ ಯೋಜನೆಗಳನ್ನು ತಲುಪಿಸಲು ಕೆಲಸ ಮಾಡುತ್ತಾರೆ. 6 ತಿಂಗಳಿಂದ 6 ವಯಸ್ಸಿನ ಪೋಷಣ ಆಹಾರಗಳನ್ನು ಯಾವ ರೀತಿ ಕೊಡಬೇಕು ಎಂಬುದರ ಕುರಿತು ಜನರಿಗೆ ಮಾಹಿತಿ ಕೊಡುತ್ತಾರೆ. ಗರ್ಭಿಣಿಯರು ಮತ್ತು ತಾಯಂದಿರಿಗೆ ಆರೋಗ್ಯ ಮತ್ತು ಪೋಷಣೆ ಸಲಹೆ ಕೊಡುತ್ತಾರೆ. ಇಂತಹ ಹಲವಾರು ಕಾರ್ಯಗಳನ್ನು ಕಾರ್ಯಕರ್ತೆಯರು ಮಾಡುತ್ತಾರೆ ಎಂದರು. ವೇತನ
ಇದನ್ನೂ ಓದಿ: ಕನ್ನಡಕ್ಕೆ ಅವಕಾಶವಿಲ್ಲ: ರೈಲ್ವೆ ಪರೀಕ್ಷೆ ರದ್ದು, ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
ಸಮಸ್ಯೆಗಳೇನೆಂದರೆ, ಅವರಿಗೆ ಸಂಬಳ ಕಡಿಮೆ. ಸಮಯಕ್ಕೆ ಸರಿಯಾಗಿ ಸಂಬಳ ಆಗುವುದಿಲ್ಲ. ಇದು ಮುಖ್ಯ ಸಮಸ್ಯೆಯಾಗಿದೆ. ಮತ್ತು ಅವರಿಗೆ ಯಾವುದೇ ತರದ ಸರ್ಕಾರಿ ಉದ್ಯೋಗ ಮಾನ್ಯತೆ ಇಲ್ಲ. ಆದರೂ ಇವುಗಳ ನಡುವೆ ಅವರು ಯಾವುದೇ ಸರ್ಕಾರಿ ಸೇವೆಗಳಿದ್ದರೂ ಅವುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಮಾಡಬೇಕು. ಕೆಲವೆಡೆ ಆಹಾರವನ್ನು ತಲುಪಿಸುವುದು ತುಂಬಾ ವಿಳಂಬವಾಗುತ್ತಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಸದನದ ಗಮನ ಸೆಳೆದರು.
ಆಶಾ ಕಾರ್ಯಕರ್ತೆಯರು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ ಮತ್ತು ಸರ್ಕಾರದ ಸೇವೆಗಳಾದ ಐಸಿಡಿಎಸ್, ಎನ್ ಎಚ್ ಎಮ್, ಎ ಎನ್ ಸಿ, ಪಿ ಎಚ್ ಸಿ ಸೇವೆಗಳ ಜೊತೆಗೆ ಲಸಿಕೆಗಳನ್ನು ಹಾಕುವ ಕೆಲಸವನ್ನು ಕೂಡ ಅವರು ಮಾಡುತ್ತಾರೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಸಹಾಯಕರಾಗಿ ಕೆಲಸ ಮಾಡುತ್ತಾರೆ ಎಂದು ಸಚಿವರ ಗಮನ ಸೆಳೆದರು. ವೇತನ
ಹೀಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಕಡೆಯ ಹಳ್ಳಿಯ ಕೊನೆಯ ವ್ಯಕ್ತಿಗೆ ತಳಮಟ್ಟದಲ್ಲಿ ಬಹುಮುಖ್ಯ ಸೇವೆಗಳನ್ನು ಒದಗಿಸುತ್ತಾರೆ. ಇವರಿಗೆ ಸಂಬಳ ಹೆಚ್ಚಳ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ವೇತನ
ದರ್ಶನ್ ಪುಟ್ಟಣ್ಣಯ್ಯನವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಾಡುವ ಕೆಲಸದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಿ ಯೋಜನೆಗಳನ್ನು ಜನರಿಗೆ ಕೊಂಡೊಯ್ಯುವ ಕೊಂಡಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರದ ಯಾವುದೇ ಯೋಜನೆಗಳು, ಏನೇ ಕೆಲಸ ಇದ್ದರು ಬಹಳಷ್ಟು ಉತ್ತಮ ರೀತಿಯಲ್ಲಿ ಹಳ್ಳಿಮಟ್ಟದಲ್ಲಿ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತಂದುಕೊಡುವವರು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎಂದರು.
ದರ್ಶನ್ ಪುಟ್ಟಣ್ಣಯ್ಯನವರು ಹೇಳಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಬೇಕು. ನಾನು ಬಹಳ ಹೆಮ್ಮೆಯಿಂದ ಹೇಳಲು ಬಯಸುವುದೇನೆಂದರೆ, ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ಅತ್ಯಧಿಕ ಗೌರವ ಧನವನ್ನು ಕೊಡುತ್ತಿದೆ. ಹರಿಯಾಣ, ತೆಲಂಗಾಣ, ಕೇರಳ ನಂತರ ನಮ್ಮ ರಾಜ್ಯವಿದೆ. ಕೇಂದ್ರ ಸರ್ಕಾರ ಕೇವಲ 2,700 ರೂ. ಮಾತ್ರ ಪಾವತಿಸುತ್ತದೆ. ಆದರೂ ಗೌರವಧನ ಪಾವತಿಯಲ್ಲಿ ಇಡೀ ದೇಶದಲ್ಲೇ ನಮ್ಮ ರಾಜ್ಯ 4ನೇ ಸ್ಥಾನದಲ್ಲಿದೆ ಎಂದರು.
ಅದರ ಜೊತೆಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಆರೋಗ್ಯ ಮತ್ತು ಸೇವಾ ಭದ್ರತೆ ಬಗ್ಗೆ ದರ್ಶನ್ ಪುಟ್ಟಣ್ಣಯ್ಯ ಕೇಳಿದರು. ಅದರ ಕುರಿತು ನಿರ್ದಿಷ್ಟವಾಗಿ ಕೇಳಿದರೆ ನಾನು ಉತ್ತರಿಸುತ್ತೇನೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಪುಟ್ಟಣ್ಣಯ್ಯ, ಸೇವಾ ಭದ್ರತೆ ಬಗ್ಗೆ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ. ಉದ್ಯೋಗ ಭದ್ರತೆ ಯಾವುದೂ ಇಲ್ಲ. ಅವರಿಗೆ ಯಾವ ರೀತಿಯಲ್ಲಾದರೂ ಸರ್ಕಾರದ ಕಡೆಯಿಂದ ಭದ್ರತೆ ಕೊಡಿ. ಅವರಿಗೆ ಕೊಡುತ್ತಿರುವ ಗೌರವ ಧನ ದೇಶದಲ್ಲೇ ಹೆಚ್ಚಿರಬಹುದು. ಆದರೂ ಅವರಿಗೆ ಕನಿಷ್ಠ ವೇತನವೂ ಅವರಿಗೆ ಸಿಗುತ್ತಿಲ್ಲ. ಇದರಿಂದ ತುಂಬಾ ಕಷ್ಟ ಆಗುತ್ತದೆ. ಮನೆಮನೆಗೆ ಹೋಗಿ ಅವರು, ಸಮೀಕ್ಷೆ ಮಾಡಿ ಕೆಲಸ ಮಾಡುತ್ತಿರುವುದರಿಂದ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಅವರಿಗೆ ಸೇವಾ ಭದ್ರತೆಯನ್ನು ಯಾವ ರೀತಿ ಕೊಡುತ್ತೀರಿ ಎಂದು ತಿಳಿಸಿ ಎಂದು ಕೋರಿದರು.
ಈ ವೇಳೆ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಔರಾದ್ ಶಾಸಕ ಪ್ರಭು ಚೌಹಾಣ್, ನಮಗೂ ಎಲ್ಲರೂ ಮನವಿ ಪತ್ರವನ್ನು ಕೊಟ್ಟಿದ್ದಾರೆ. ದರ್ಶನ್ ಪುಟ್ಟಣ್ಣಯ್ಯನವರು ಬಹಳ ಮುಖ್ಯವಾದ ವಿಷಯವನ್ನು ಸದನದಲ್ಲಿ ಮಂಡಿಸಿದ್ದಾರೆ. ತಾವು ಅತಿ ಹೆಚ್ಚು ಗೌರವ ಧನ ಕೊಡುತ್ತಿರುವುದಾಗಿ ಹೇಳಿದ್ದೀರಿ. ಆದರೆ ಅವರು ಎಲ್ಲ ಶಾಸಕರ ಮನೆಗಳಿಗೆ ಹೋಗಿ ಮನವಿ ಕೊಟ್ಟಿದ್ದಾರೆ. ಅದಕ್ಕಾಗಿ ಗೌರವ ಧನವನ್ನು ಹೆಚ್ಚಿಸಬೇಕು. ಜೊತೆಗೆ ದರ್ಶನ್ ಪುಟ್ಟಣ್ಣಯ್ಯನವರು ಬಹಳ ವಿವರವಾಗಿ ಹೇಳಿದ್ದಾರೆ. ಆ ಮನವಿಯನ್ನು ಪರಿಗಣಿಸಬೇಕು. ಅವರು ಎಲ್ಲ ಕಡೆ ಕೆಲಸ ಮಾಡುತ್ತಾರೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಅವರ ವೇತನವನ್ನು ಹೆಚ್ಚಿಸಿ ಎಂದು ಒತ್ತಾಯಿಸಿದರು.
ಈ ವೇಳೆ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಬಸವ ಕಲ್ಯಾಣ ಶಾಸಕ ಶರಣು ಸಲಗರ, ಅಂಗನವಾಡಿ ಕಾರ್ಯಕರ್ತೆಯರ ಪೈಕಿ ಕೆಲವರು 85, 95 % ಅಂಕಗಳನ್ನು ಗಳಿಸಿದವರು ಶಿಕ್ಷಕಿಯರಾಗಿದ್ದಾರೆ. ಅವರು ಬಹಳ ಪ್ರತಿಭಾವಂತರಿದ್ದಾರೆ. ಅವರ ಪ್ರತಿಭೆ 15 ಮಕ್ಕಳಲ್ಲಿ ಉಪಯೋಗವಾಗುವುದಕ್ಕಿಂತ ಕೆ ಪಿ ಎಸ್ ಶಾಲೆಗಳಲ್ಲಿ ಅವರ ಅಗತ್ಯವಿದೆ. ಇಲ್ಲಿ ಇಂಗ್ಲಿಷ್ ಕಲಿಸುವವರು ಬೇಕಾಗಿದ್ದಾರೆ. ಗಣಿತ, ವಿಜ್ಞಾನ, ಇಂಗ್ಲಿಷ್ ಅನ್ನು ನಿರರ್ಗಳವಾಗಿ ಅವರು ಬೋಧಿಸಬಲ್ಲರು. 4 ವರ್ಷ ಅವರು ಅಲ್ಲೇ ಉಳಿದರೆ ಅವರು ಕಲಿತದ್ದೂ ಮರೆತುಹೋಗುತ್ತದೆ. ಆದ್ದರಿಂದ ಅವರಿಗೆ ಕೆ ಪಿ ಎಸ್ ಶಾಲೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಚರ್ಚೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಿಗೆ ಮನವಿ ಕೊಟ್ಟಿರುವಂತೆ ಆಶಾ, ಅಂಗನವಾಡಿ ಕಾರ್ಯರ್ತೆಯರು ನಮಗೂ ಮನವಿ ಕೊಟ್ಟಿದ್ದಾರೆ. ಅವರು ಬಹಳಷ್ಟು ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಗೌರವಧನವನ್ನು ಹೆಚ್ಚಳ ಮಾಡಬೇಕು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಕೂಡ ನೆರವು ನೀಡಬೇಕಾಗುತ್ತದೆ. ಕೇವಲ ರಾಜ್ಯ ಸರ್ಕಾರದ ಕಡೆಗೆ ಬೆರಳು ತೋರಿಸಿದರೆ ಏನೂ ಆಗದು. ತಮಗೆ ಹೇಳುತ್ತಿರುವಂತೆ 9,800 ರೂ.ಗಳನ್ನು ಕೊಡುವ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಕೇಂದ್ರದಿಂದ ಕೊಡುತ್ತಿರುವುದು ಕೇವಲ 2,700 ರೂ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಡೆಯುವ ಕಾರ್ಯಕ್ರಮಗಳು ಮುಖ್ಯ ಎಂದರು.
ನಂತರ ಶರಣು ಸಲಗರ ಅವರ ಮನವಿ ಕುರಿತು ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ದ್ವೀತೀಯ ಪಿಯುಸಿ ಓದಿದವರು ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಈಗ ನಾವು ಎಲ್ ಕೆ ಜಿ ಮತ್ತು ಯು ಕೆ ಜಿಯನ್ನು ಆರಂಭಿಸಿದ್ದೇವೆ. ಈಗಾಗಲೇ ಸುಮಾರು 5,000 ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಿದ್ದೇವೆ. 5,000 ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲು ತಯಾರಿ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣ ಅಂಗನವಾಡಿಯಲ್ಲೂ ಬೇಕು. ಯಾಕೆಂದರೆ ಅಂಗನವಾಡಿಗೆ ಬರುವವರು ಯಾರು? ಅಂಗನವಾಡಿಯಲ್ಲಿ ನಾವಿಲ್ಲೇ ಕೆಲಸ ಮಾಡುತ್ತೇವೆ ಎಂದು ಅರ್ಜಿ ಹಾಕಿ ಆನ್ ಲೈನ್ ಮೆರಿಟ್ ಮೂಲಕ ಅವರು ಆಯ್ಕೆಯಾಗಿದ್ದಾರೆ. ಇದರಿಂದ ಅದು ಅವರಿಗೆ ಬಿಟ್ಟ ವಿಷಯ. ನೀವು ಅಲ್ಲಿ ಹೋಗಿ ಇಲ್ಲಿ ಹೋಗಿ ಕೆಲಸ ಮಾಡಿ ಎಂದು ಹೇಳಲಿಕ್ಕೆ ಆಗುವುದಿಲ್ಲ. ಬಿ.ಎ., ಎಂ.ಎ., ಆಗಿರುವ ಸುಮಾರು 17,000 ಪದವೀಧರರು ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮಗೂ ಗುಣಮಟ್ಟವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಈ ವೇಳೆ ಚರ್ಚೆಯಲ್ಲಿ ಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅಂಗನವಾಡಿಯಲ್ಲಿ 12,000 ರೂ. ಪ್ರತಿ ತಿಂಗಳು ಗೌರವ ಧನ ನೀಡಲಾಗುತ್ತಿದೆ. ಇದರಲ್ಲಿ ರಾಜ್ಯದ ಪಾಲು 9,300 ರೂ. ಕೇಂದ್ರ ಸರ್ಕಾರದ ಪಾಲು 2,700 ರೂ. ಆಶಾ ಕಾರ್ಯಕರ್ತೆಯರಿಗೆ 8,000 ರೂ. ಪ್ರತಿ ತಿಂಗಳು ಗೌರವ ಧನ, ಇದರಲ್ಲಿ 6,000 ರೂ. ರಾಜ್ಯದ ಪಾಲು, ಕೇಂದ್ರದ ಪಾಲು 2,000 ರೂ. ಅದೇ ರೀತಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತರಿಗೆ 4,000 ರೂ. ಗೌರವಧನ ಕೊಡಲಾಗುತ್ತಿದೆ ಎಂದರು.
ಹೀಗೆ ಎಷ್ಟು ಎಂದು ನಾವೇ (ರಾಜ್ಯ ಸರ್ಕಾರ) ಖರ್ಚು ಮಾಡುವುದು? ಎಲ್ಲದಕ್ಕೂ ನಾವೇ ಖರ್ಚು ಮಾಡುತ್ತಿದ್ದೇವೆ. ಹೆಸರು ಮಾತ್ರ ಕೇಂದ್ರ ಸರ್ಕಾರದ್ದು, ಮೋದಿಯವರ ಫೋಟೋ ಹಾಕಿಕೊಂಡು ಎಲ್ಲ ಕಡೆ ಮಾಡುತ್ತಿದ್ದಾರೆ. ಜೆಜೆಎಂಗೂ (ರಾಷ್ಟ್ರೀಯ ಜಲ ಜೀವನ ಮಿಷನ್) ನಾವೇ ಕೊಡುತ್ತಿರುವುದು. 15ನೇ ಹಣಕಾಸು ವರದಿ ಪ್ರಕಾರವೂ ನಾವೇ ಕೊಡುತ್ತಿದ್ದೇವೆ, ಇದರಲ್ಲೂ ನಾವೇ ಹೆಚ್ಚಿನ ಪಾಲು ಕೊಡುತ್ತಿದ್ದೇವೆ. ನಾವು ಕೊಡೋಣ. ಆದರೆ ಕನಿಷ್ಠ ಶೇ 50 – 50 ಹಂಚಿಕೆ ಶೇ 60 – 40 ಹಂಚಿಕೆ ಏನಾದರೂ ಇದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ. ನಮ್ಮ ರಾಜ್ಯ ಸರ್ಕಾರಕ್ಕೂ ಅನುಕೂಲ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಅನುಕೂಲವಾಗುತ್ತದೆ. ಕೇವಲ ಫೋಟೋ ಹಾಕಿಕೊಳ್ಳಬಾರದು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಭು ಚೌಹಾಣ್ ನಿಮ್ಮ ಫೋಟೋವನ್ನೂ ಹಾಕಿಕೊಳ್ಳಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನಮ್ಮ ಫೋಟೋನೂ ಹಾಕಿಕೊಳ್ಳುತ್ತೇವೆ ಎಂದಿದ್ದಕ್ಕೆ, ಅವಕಾಶ ಕೊಟ್ಟಿಲ್ಲ. ಅದಕ್ಕೆ ಪತ್ರ ಬರೆದ ದಾಖಲೆಯೂ ಇದೆ ಎಂದರು. ಇಲ್ಲಿಗೆ ಸಭಾಧಕ್ಷ ಯು ಟಿ ಖಾದರ್ ಚರ್ಚೆ ನಿಲ್ಲಿಸಿದರು.
ಇದನ್ನೂ ನೋಡಿ: “ಯುದ್ಧದಿಂದ ಅಡುಗೆಮನೆಗೆ: ಹೊರೆ ಯಾರಿಗೆ?” Janashakthi Media
