ಚಾಮರಾಜನಗರ: ಮೈಕ್ರೋಫೈನಾನ್ಸ್ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಹಲವೆಡೆ 100 ಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದಿರುವ ಘಟನೆ ನಡೆದಿದೆ.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಬಡ ಜನರ ಜೀವ ಹಿಂಡುತ್ತಿವೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಬೇಸತ್ತು ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಆ ವಿಷಯ ಸುದ್ದಿಯಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಜಿಲ್ಲಾಢಳಿತ ಕಿರುಕುಳಕ್ಕೆ ಒಳಗಾದ ಕುಟುಂಬಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಯ ನೀಡಿದ್ದಾರೆ.
ಯಾರೂ ಊರು ಖಾಲಿ ಮಾಡಬೇಡಿ, ನಾವು ನಿಮ್ಮ ಜೊತೆ ಇದ್ದೇವೆ. ನಿಮಗೆ ಕಿರುಕುಳ ನೀಡಿದಲ್ಲಿ ಡಿಸಿ ಕಚೇರಿ, ಎಸಿ ಕಚೇರಿ, ತಹಸಿಲ್ದಾರ್ ಕಚೇರಿ ಅಥವಾ ಗ್ರಾಪಂ ಕಚೇರಿಗೆ ಮಾಹಿತಿ ನೀಡಿ. ನಿಮಗೆ ಯಾವುದೇ ತೊಂದರೆ ಆಗದಂತೆ ಸಮಸ್ಯೆ ಬಗೆಹರಿಸ್ತೇವೆ ಎಂದು ನೊಂದ ಕುಟುಂಬಗಳಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯವೇ? ಜನಸಾಮಾನ್ಯರಿಗೆ ಹೊರೆಯಾಗದಂತೆ ದರ ನಿಗದಿಮಾಡಲು ಬೇರೆ ಮಾರ್ಗ ಇಲ್ಲವೇ?
ಸಮಗ್ರ ವರದಿ ನೀಡಲು ನಾಲ್ಕು ಅಧಿಕಾರಿಗಳ ತಂಡ ರಚಿಸಲಾಗಿದೆ. ಯಾವ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ, ಅಧಿಕೃತ ಎಷ್ಟು, ಅನಧಿಕೃತ ಎಷ್ಟು? ಗ್ರಾಮ ತೊರೆದಿರುವ ಕುಟುಂಬಗಳೆಷ್ಟು ಎಂದು ವರದಿ ನೀಡಲು ಸೂಚಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಲಾಗುವುದು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು.
ಜನರು ಸಹ ಅಧಿಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ ವ್ಯವರಿಸಬೇಕು. ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿದಾರರ ಬಗ್ಗೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಗ್ ಅವರು ಮನವಿ ಮಾಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ಆ ಸಾಲ ತೀರಿಸಲಾಗದೆ ಎಷ್ಟೋ ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿವೆ. ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಕುಟುಂಬಗಳು ತಲೆಮರೆಸಿಕೊಂಡಿವೆ. ಹಲವೆಡೆ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕುಗೊಂಡಿದೆ. ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ ಗ್ರಾಮದಲ್ಲಿ ಅಳಿದು ಉಳಿದ ಜನರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಜಾಲಕ್ಕೆ ಸಿಲುಕಿ ಕುಟುಂಬಗಳು ಊರನ್ನೆ ತೊರೆದುಹೋಗಿದ್ದಾರೆ. ಗೃಹ ಬಳಕೆಯ ಖರ್ಚು ವೆಚ್ಚಗಳಿಗೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದಾರೆ., ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡಲು ಆರಂಭಿಸಿದ್ದಾರೆ. ಹಾಗಾಗಿ ಜನರು ಅವರಿಂದ ತಪ್ಪಿಸಿಕೊಳ್ಳಲು ಊರಿಗೆ ಊರೇ ಖಾಲಿ ಮಾಡಿದ್ದಾರೆ.
ಇದನ್ನು ನೋಡಿ : ನಿವೃತ್ತ ವಿಮಾ ನೌಕರರ ಪ್ರತಿಭಟನೆ : ಪಿಂಚಣಿ ನೌಕರರ ಬಿಕ್ಷೆಯಲ್ಲ, ಹಕ್ಕು Janashakthi Media