ಹಾಸನ: ಅಮಿತ್ ಶಾ ವಜಾಕ್ಕೆ ಆಗ್ರಹಿಸಿ ಹೆದ್ದಾರಿ ತಡೆ

ಹಾಸನ:ಡಾ. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜನಪರ ಚಳವಳಿಗಳ ಒಕ್ಕೂಟದ ಸದಸ್ಯರು ಬುಧವಾರ ಭುವನಹಳ್ಳಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಹೆದ್ದಾರಿ ತಡೆದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಶಾ ಅವರ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಅವರು ಹಿಂದೆಯೂ ಈಗಲೂ ಮುಂದೆಯೂ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಇಂತಹ ಮನುವಾದಿ ಮನಸ್ಥಿತಿಯ ಅಮಿತ್ ಶಾ ಭಾರತದ ಗೃಹ ಸಚಿವರಾಗಿ ಮುಂದುವರಿದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು‌ ಅವರ ಆಶಯಗಳಿಗೆ ವಿರುದ್ಧವಾಗುತ್ತದೆ. ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ದಲಿತ ಮುಖಂಡ ಸೋಮಶೇಖರ್ ಮಾತನಾಡಿ, ಭಾರತದ ಸಂವಿಧಾನದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ರಾಜ್ಯ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿಯೇ ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೆಬ್ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅಮಿತ್ ಶಾ ಅವರು ಆಡಿರುವ ಅಪಮಾನಕರ ಮಾತುಗಳು ಕೇವಲ ಆಕಸ್ಮಿಕವೇನೂ ಅಲ್ಲ. ಸಂವಿಧಾನದ ಕುರಿತ ಚರ್ಚೆಯ ಸಂದರ್ಭದಲ್ಲಿಯೇ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಅವರ ನೈಜ ಉದ್ದೇಶವಾಗಿತ್ತು ಎಂದರು.

ಇದನ್ನೂ ಓದಿ: ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಮಾಡಿದ ಮಂಡ್ಯ ಬಂದ್‌ ಯಶಸ್ವಿ

ಅಮಿತ್ ಶಾ ಪ್ರತಿನಿಧಿಸುವ ಆರ್‌ಎಸ್‌ಎಸ್, ಜನಸಂಘ ಮತ್ತು ಬಿಜೆಪಿ ಭಾರತ ದೇಶವನ್ನು ಸಾರ್ವಭೌಮ ಸಮಾಜವಾದಿ ಮತಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರೂಪಿಸುವ ಭಾರತದ ಸಂವಿಧಾನ ಮತ್ತು ಅದರ ರಚನೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಡಾ. ಬಿ.ಆರ್.‌ ಅಂಬೇಡ್ಕರ್ ಅವರ ವಿರುದ್ಧ ಆರಂಭದಿಂದಲೂ ತೀವ್ರ ಅಸಮಾಧಾನ ಮತ್ತು‌ ಅತೃಪ್ತಿಯನ್ನು ಹೊರಹಾಕಿರುವುದು ಇಡೀ ದೇಶಕ್ಕೇ ಗೊತ್ತಿರುವ ಇತಿಹಾಸವಾಗಿದೆ ಎಂದರು.

ಅಂಬೇಡ್ಕರ್ ಅವರ ಜಾತಿ ಹಿನ್ನೆಲೆಯನ್ನು ಎತ್ತಿ ತೋರಿಸುತ್ತಾ ಅಂಬೇಡ್ಕರ್ ಅವರು ಸಂವಿಧಾನ ಬರೆಯಲೇ ಇಲ್ಲ ಎನ್ನುವ ಸುಳ್ಳುಗಳನ್ನು ಪ್ರಚಾರ ಮಾಡುವುದರ ಜೊತೆಗೆ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನವನ್ನು ತಾನು ಒಪ್ಪುವುದೂ ಇಲ್ಲ ಎನ್ನುವುದನ್ನು ಆರ್‌ಎಸ್‌ಎಸ್ ಆಗ‌ ಬಹಿರಂಗವಾಗಿಯೇ ಹೇಳಿತ್ತು. ಅಂತಹ ಸಂಘಪರಿವಾರ ಮತ್ತು ಬಿಜೆಪಿಯ ಅಮಿತ್ ಶಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ಅಪಮಾನಕರವಾದ ಮಾತುಗಳು ಅವರ ಮನುವಾದಿ ಪರಂಪರೆಯ ಮುಂದುವರಿಕೆಯ ಭಾಗವಾಗಿಯೇ ಬಂದಿವೆ. ಇದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಭಾರತದ ಸಂವಿಧಾನಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ.

ಪ್ರತಿಭಟನೆಯಲ್ಲಿ ವಿಜಯ್ ಕುಮಾರ್, ಪೃಥ್ವಿ, ಅರವಿಂದ್, ಬಾಬು, ನವೀನ್ ಕುಮಾರ್, ಸಮೀರ್ ಅಹಮದ್, ಕೃಷ್ಣದಾಸ್, ವಿಠಲ್, ಸುರೇಶ್, ರಾಜೇಶ್, ಎಚ್.ಕೆ. ಸಂದೇಶ್, ಅಶೋಕ್, ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು

ಇದನ್ನೂ ನೋಡಿ 

Donate Janashakthi Media

Leave a Reply

Your email address will not be published. Required fields are marked *