ಸುರತ್ಕಲ್: ನಂತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದು ಹೋಗುವ ಐದು ರಾಷ್ಟ್ರೀಯ ಹೆದ್ದಾರಿಗಳು ಗಂಭೀರ ಸಮಸ್ಯೆಗಳಿಂದ ಬಳಲುತ್ತಿವೆ. ಹಲವು ವರ್ಷಗಳಿಂದ ಜನರು ಧ್ವನಿ ಎತ್ತುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಈ ಕುರಿತು ಅಕ್ಷಮ್ಯ ನಿರ್ಲಕ್ಷ್ಯ ತೋರುತ್ತಿದೆ. ಉಡುಪಿ ಜಿಲ್ಲಾಧಿಕಾರಿಗಳು ಅಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಕುರಿತು ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಿದ್ದು, ದ.ಕ. ಜಿಲ್ಲಾಧಿಕಾರಿಗಳೂ ಅದೇ ಮಾದರಿಯಲ್ಲಿ ಸಭೆಯನ್ನು ಕರೆಯಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ದ.ಕ. ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದೆ ಎಂದು ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮಳೆಗಾಲ ಮುಗಿದು ಮೂರು ತಿಂಗಳು ಕಳೆದರೂ ಹೆದ್ದಾರಿ ಗುಂಡಿಗಳನ್ನು ಮುಚ್ಚುವುದು, ಕಾಮಗಾರಿಯ ಕಾರಣಕ್ಕೆ ಪರ್ಯಾಯವಾಗಿ ಒದಗಿಸಿರುವ ಸರ್ವೀಸ್ ರಸ್ತೆಗಳ ಡಾಮರೀಕರಣ ಇನ್ನೂ ನಡೆದಿಲ್ಲ. ನಂತೂರು ಮೇಲ್ಸೇತುವೆ ಕಾಮಗಾರಿ ಮತ್ತೆ ಸ್ಥಗಿತಗೊಂಡಿದೆ, ಕೂಳೂರು ಹೊಸ ಸೇತುವೆ ಕಾಮಗಾರಿ ನಾಲ್ಕು ವರ್ಷಗಳಾದರೂ ಇನ್ನೂ ಕುಂಟುತ್ತಿದೆ. ಪೂಂಜಾಲಕಟ್ಟೆ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಶೋಚನೀಯ ಸ್ಥಿತಿಯಲ್ಲಿದೆ.
ಬಿ ಸಿ ರೋಡ್, ಗುಂಡ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂದರ್ಭ ವಾಹನ ಸವಾರರಿಗೆ, ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ಹಿಂಸೆಯನ್ನು ಕೇಳುವವರಿಲ್ಲ ಎಂಬ ಸ್ಥಿತಿ ಇದೆ. ತಲಪಾಡಿಯಿಂದ ಕಾಸರಗೋಡು ಹೆದ್ದಾರಿ ನಿರ್ಮಾಣ ಕಾಮಗಾರಿ ಅಚ್ಚುಕಟ್ಟಾಗಿ ನಡೆಯುತ್ತಿದ್ದರೆ, ಅದರ ಪಕ್ಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹೆದ್ದಾರಿ ಕಾಮಗಾರಿಗಳ ಅಧ್ವಾನದಿಂದ ಜನತೆ ಪೂರ್ತಿ ಬೇಸತ್ತು ಹೋಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರಾವಳಿ ಜಿಲ್ಲೆಗಳಲ್ಲಿ ಹೆದ್ದಾರಿ ಕಾಮಗಾರಿಯ ಸಂದರ್ಭ ತೀರಾ ಅಮಾನವೀಯವಾಗಿ, ಸಲ್ಲದ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದೆ. ಮಳೆಗಾಲ ಕಳೆದು ಮೂರು ತಿಂಗಳಾದರು ಕಾಮಗಾರಿಗಳು ವೇಗಪಡೆದಿಲ್ಲ, ವ್ಯವಸ್ಥಿತಗೊಂಡಿಲ್ಲ. ಇನ್ನೊಂದು ಮಳೆಗಾಲದ ಮುಂಚಿತವಾಗಿ ಕೂಳೂರು ಸೇತುವೆ, ನಂತೂರು ಸರ್ವೀಸ್ ರಸ್ತೆ, ಕಲ್ಕಡ್ಕ ಮೇಲ್ಸೇತುವೆ ಕಾಮಗಾರಿ, ಬೆಳ್ತಂಗಡಿ, ಉಜಿರೆ ಭಾಗದ ಹೆದ್ದಾರಿ ಕೆಲಸಗಳು ಪೂರ್ಣಗೊಳ್ಳದಿದ್ದಲ್ಲಿ ಹೆದ್ದಾರಿ ಸಂಚಾರ ಸಮಸ್ಯೆ ತೀರಾ ಬಿಗಡಾಯಿಸಲಿದೆ.
ಈ ಹಿನ್ನಲೆಯಲ್ಲಿ ದ.ಕ. ಜಿಲ್ಲಾಧಿಕಾರಿಗಳು ಮೌನ ವಹಿಸಬಾರದು, ತಮ್ಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ತಕ್ಷಣವೇ ಹೆದ್ದಾರಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆ ಕರೆದು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಹೆದ್ದಾರಿ ಪ್ರಾಧಿಕಾರದ ಜೊತೆಗೆ ಜಿಲ್ಲಾಡಳಿತ ವೈಫಲ್ಯಗಳನ್ನೂ ವಿರೋಧಿಸಿ ಜಿಲ್ಲೆಯಾದ್ಯಂತ ಹೋರಾಟಗಳನ್ನು ಸಂಘಟಿಸುವುದಾಗಿ ಸಮಿತಿ ಎಚ್ಚರಿಸಿದೆ ಎಂದು ತಿಳಿಸಿದರು.
ಇದನ್ನೂ ನೋಡಿ : ಬೆಳಗಾವಿ | ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಿ – ಕಬ್ಬು ಬೆಳೆಗಾರರ ಧರಣಿ Janashakthi Media