ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಮಾಡಿರುವ ವಿವಾದಾತ್ಮಕ ಭಾಷಣದ ವಿವರಗಳು

ಅಲಾಹಾಬಾದ್: ಭಾನುವಾರದಂದು ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ  ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ವಿವಾದಾತ್ಮಕ ಭಾಷಣ ಮಾಡಿದ್ದರು.

ತಮ್ಮ ಭಾಷಣದ ವೇಳೆ ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ; ‘ಕ‌ಮುಲ್ಲಾಗಳು’ ದೇಶವಿರೋಧಿಗಳು ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಅವರು ಹೀಗೆ ವಿವಾದದ ಕೇಂದ್ರ ಬಿಂದುವಾಗಿರುವುದು ಇದೇ ಮೊದಲಲ್ಲ.

ನ್ಯಾಯಾಲಯದ ಹೊರಗೆ ನೀಡುವ ವಿವಾದಾತ್ಮಕ ಹೇಳಿಕೆಗಳಲ್ಲದೆ ತಮ್ಮ ಕೆಲ ತೀರ್ಪುಗಳಲ್ಲಿಯೂ ಅವರು ತಮ್ಮ ಬಲಪಂಥೀಯ ಅಭಿಪ್ರಾಯಗಳನ್ನು ಮಂಡಿಸಿದ ಉದಾಹರಣೆಗಳಿವೆ.

ಇದನ್ನೂ ಓದಿ: ಬಹುಸಂಖ್ಯಾಕವಾದೀ ಭಾಷಣ : ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬೇಕು-ಮುಖ್ಯ ನ್ಯಾಯಮೂರ್ತಿಗಳಿಗೆ ಬೃಂದಾ ಕಾರಟ್ ಪತ್ರ

ಅಕ್ಟೋಬರ್ 2021 ರಲ್ಲಿ ಅವರು ಶ್ರೀರಾಮ, ಶ್ರೀಕೃಷ್ಣ, ರಾಮಾಯಣ, ಭಗವದ್ಗೀತೆ ಹಾಗೂ ಅವುಗಳನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರು ದೇಶದ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು ಸಂಸತ್ತು ಕಾನೂನು ಜಾರಿಗೆ ತಂದು ಅವರಿಗೆ ರಾಷ್ಟ್ರೀಯ ಗೌರವ ಸಲ್ಲಿಸಬೇಕು ಎಂದಿದ್ದರು.

ಪ್ರಕರಣದಲ್ಲಿ ಜಾಮೀನು ನೀಡುವಾಗ ರಾಮ ಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ್ದ ಅವರು ಈ ತೀರ್ಪು ರಾಮನನ್ನು ನಂಬುವವರ ಪರವಾಗಿದೆ ಎಂದಿದ್ದರು.

ಗೋ ಸಂರಕ್ಷಣೆಯ ಕೆಲಸ ಕೇವಲ ಧಾರ್ಮಿಕ ವಲಯಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಗೋವು ದೇಶದ ಸಂಸ್ಕೃತಿಯಾಗಿದೆ. ಸಂಸ್ಕೃತಿಯನ್ನು ಉಳಿಸುವ ಕೆಲಸವು ಧರ್ಮಾತೀತವಾಗಿ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಗೋವನ್ನು ಪೂಜಿಸಿದರೆ ಮಾತ್ರ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದಿದ್ದರು.

ಅದೇ ಆದೇಶದಲ್ಲಿ ಅವರು ಹಸು ಆಮ್ಲಜನಕವನ್ನೇ ಸೇವಿಸಿ ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ನಂಬುತ್ತಾರೆ ಎಂದಿದ್ದರು.
ಜುಲೈ 2021 ರಲ್ಲಿ, ಮಹಿಳೆಯನ್ನು ಕಾನೂನುಬಾಹಿರವಾಗಿ ಇಸ್ಲಾಂಗೆ ಪರಿವರ್ತಿಸಿದ ಆರೋಪ ಹೊತ್ತಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸುವಾಗ, ನ್ಯಾಯಮೂರ್ತಿ ಯಾದವ್ ಅವರು ದೇಶದಲ್ಲಿ ಧಾರ್ಮಿಕ ಮತಾಂಧತೆ, ದುರಾಸೆ ಅಥವಾ ಭಯಕ್ಕೆ ಅವಕಾಶವಿಲ್ಲ. ಬಹುಸಂಖ್ಯಾತ ಸಮುದಾಯದ ವ್ಯಕ್ತಿ ಅವಮಾನಿತನಾಗಿ ಮತಾಂತರಗೊಂಡರೆ ಆಗ ದೇಶ ದುರ್ಬಲವಾಗುತ್ತದೆ, ವಿಧ್ವಂಸಕ ಶಕ್ತಿಗಳಿಗೆ ಅನುಕೂಲಕರವಾಗುತ್ತದೆ ಎಂದಿದ್ದರು.

ನ್ಯಾಯಮೂರ್ತಿಗಳು ಭಾನುವಾರ ವಿಎಚ್‌ಪಿ ಕಾನೂನು ಘಟಕದ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿವೆ. ನ್ಯಾಯಾಂಗ ನಿಷ್ಪಕ್ಷಪಾತತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನ್ಯಾಯಮೂರ್ತಿಗಳು ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ಹಲವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಹಿರಿಯ ವಕೀಲೆ ರೆಬೆಕಾ ಜಾನ್ ಅವರು “ನ್ಯಾಯಮೂರ್ತಿಗಳು ತಾವು ಸ್ವೀಕರಿಸಿದ ಪ್ರಮಾಣವಚನಕ್ಕೆ ವ್ಯತಿರಿಕ್ತವಾಗಿ ಭಾಷಣ ಮಾಡುತ್ತಿರುವುದು ಕೆಲ ಕಾಲದಿಂದ ನಡೆಯುತ್ತಿದೆ… ನನ್ನ ವಕೀಲಿ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಅಧಿವಕ್ತ ಪರಿಷತ್‌ನಂತಹ (ಆರ್‌ಎಸ್‌ಎಸ್‌ನ ಕಾನೂನು ವಿಭಾಗ) ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಇಂದು ಅವು ಆಯೋಜಿಸುವ ಕಾರ್ಯಕ್ರಮಗಳಿಗೆ ನ್ಯಾಯಮೂರ್ತಿಗಳನ್ನು ಆಹ್ವಾನಿಸುತ್ತಿದ್ದು ಅವರು ಉದ್ದೇಶಪೂರ್ವಕವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ದ್ವೇಷ ಭಾಷಣದಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅವರು ತಾವು ಮಾಡಿದ್ದ ಪ್ರತಿಜ್ಞೆಯ ಪ್ರತಿಯೊಂದು ಸಾಲನ್ನೂ ಉಲ್ಲಂಘಿಸಿದ್ದಾರೆ. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಆದ್ಯತೆಯ ಮೇರೆಗೆ ಅವರ ಹೆಸರನ್ನು ಶಿಫಾರಸು ಮಾಡಿದ್ದು ಹೇಗೆ ಹಾಗೂ ಅವರ ಹೇಳಿಕೆಗಳನ್ನು ಎದುರಿಸಲು ಅದು ಹೇಗೆ ಯೋಜಿಸುತ್ತಿದೆ ಎಂಬ ಸ್ಪಷ್ಟ ಪ್ರಶ್ನೆಯನ್ನು ಇದು ಎತ್ತಿದೆ. ಅವರ ಭಾಷಣ ಸಂವಿಧಾನದ ಮೇಲಿನ ಆಕ್ರಮಣವಾಗಿದ್ದು ದೋಷಾರೋಪ ಮಾಡುವಂತಹ ಅಪರಾಧವಾಗಿದೆ’ ಎಂದಿದ್ದಾರೆ.

“ಆದರೆ, ಏನೂ ಆಗುವುದಿಲ್ಲ. ಹೀಗಾಗಿಯೇ ಇದು ಅತೀವ ವಿಚಲಿತಗೊಳಿಸುವಂಥದ್ದಾಗಿದೆ. ತುಂಬಾ ಗೊಂದಲಗೊಳಿಸುತ್ತದೆ. ಸಾಂವಿಧಾನಿಕ ಜಾತ್ಯತೀತ ಗಣರಾಜ್ಯವು ಅಸ್ತಿತ್ವದಲ್ಲಿಲ್ಲ. ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿಲ್ಲ..” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟಿನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್‍ ರವರ ಒಂದು ಸಾರ್ವಜನಿಕ ಭಾಷಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಮಾಜಿ ಸಂಸದೆ ಮತ್ತು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ವಿಶ್ವ ಹಿಂದೂ ಪರಿಷದ್‍(ವಿಹೆಚ್‍ಪಿ)ನ ಸಮಾರಂಭದಲ್ಲಿ ಮಾತಾಡುತ್ತ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್‍ ರವರ ಟಿಪ್ಪಣಿಗಳು ಹೇಗೆ ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಸಾಂವಿಧಾನಿಕ ಮೌಲ್ಯಗಳ ತತ್ವಗಳನ್ನು ದುರ್ಬಲಗೊಳಿಸುವ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಈ ಪತ್ರದಲ್ಲಿ ಎತ್ತಿ ತೋರಿಸಿರುವ ಬೃಂದಾ ಕಾರಟ್‍, ಇಂತಹ ಒಬ್ಬ ಸದಸ್ಯರು ಪೀಠಕ್ಕೆ, ನ್ಯಾಯಾಲಯಕ್ಕೆ, ಒಟ್ಟಾರೆಯಾಗಿ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುತ್ತಾರೆ, ಒಂದು ನ್ಯಾಯಾಲಯದಲ್ಲಿ ಅಂತಹ ವ್ಯಕ್ತಿಗಳಿಗೆ ಯಾವುದೇ ಸ್ಥಾನವಿಲ್ಲ ಮತ್ತು ಇರಬಾರದು, ಈ ನಿಟ್ಟಿನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯದ ಕ್ರಮಕ್ಕೆ ದೇಶ ಆಭಾರಿಯಾಗಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಸಂವಿಧಾನ ಬದಲಿಸಿ, ನಮಗೆ ಬೇಕಾದ ಸಂವಿಧಾನ ಕೊಡಿ ಎಂದ ಪೇಜಾವರ ಮಠದ ಸ್ವಾಮಿ ವಿರುದ್ದ ಪ್ರಕರಣ ದಾಖಲಿಸಬೇಕಲ್ಲವೇ?

Donate Janashakthi Media

Leave a Reply

Your email address will not be published. Required fields are marked *