ಹೊಸಪೇಟೆ: ಹೊಸಪೇಟೆಯ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಜೆಕ್ಟ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸದ ಕಾರಣ ಕಾಲೇಜಿನ ಎಲ್ಲಾ 103 ವಿದ್ಯಾರ್ಥಿಗಳು ಅಂತಿಮ ಬಿ.ಎ ಪರೀಕ್ಷೆಯಲ್ಲಿ ಫೇಲ್ ಆಗಿರುವಂತೆ ಫಲಿತಾಂಶ ಪ್ರಕಟವಾಗಿತ್ತು. ಈ ಕುರಿತು ಶುಕ್ರವಾರ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಫಲವಾಗಿ ಹೊಸ ಫಲಿತಾಂಶ ಶೀಘ್ರ ಪ್ರಕಟವಾಗಲಿದ್ದು, ಕಾಲೇಜಿನ ತಪ್ಪಿನಿಂದಲೇ ಇದೆಲ್ಲ ಆಗಿರುವುದು ದೃಢಪಟ್ಟಿದೆ. ಪರೀಕ್ಷೆ
ʼನಿಗದಿತ ಸಮಯದೊಳಗೆ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಪೋರ್ಟಲ್‌ನಲ್ಲಿ ಅಂಕ ನಮೂದಿಸುವುದು ಕಾಲೇಜಿನ ಪ್ರಾಂಶುಪಾಲರ ಹೊಣೆಯಾಗಿತ್ತು. ಅದನ್ನು ಮಾಡಿಲ್ಲ. ಹಲವು ದಿನಗಳ ಬಳಿಕ ನ.16ರಂದು ಈ ನಿಟ್ಟಿನಲ್ಲಿ ದೂರು ಸಲ್ಲಿಸಿದ್ದಾರೆ. ಬಳಿಕವೂ ತಪ್ಪು ಸರಿಪಡಿಸುವ ಕೆಲಸ ಆಗಿಲ್ಲ, ಒತ್ತಡ ಹೇರಿಲ್ಲ. ಇದೀಗ ಸ್ವತಃ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರೇ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದೇ ಎಲ್ಲವನ್ನೂ ಸರಿಪಡಿಸಲು ವ್ಯವಸ್ಥೆ ಮಾಡಿ, ನಾಳೆಯೊಳಗೆ ಹೊಸ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೆಕಾರ್ ತಿಳಿಸಿದರು.
ಪ್ರತಿಭಟನೆಯ ಬಿಸಿ ಶುಕ್ರವಾರ ಬೆಳಿಗ್ಗೆ ಹತ್ತಾರು ವಿದ್ಯಾರ್ಥಿಗಳು ಕಾಲೇಜಿನ ದ್ವಾರ ಬಂದ್ ಮಾಡಿ ಕಾಲೇಜಿನವರ ತಪ್ಪಿನಿಂದಲೇ ತಮ್ಮ ಫಲಿತಾಂಶ ಫೇಲ್ ಎಂದು ಬಂದಿದೆ ಎಂದು ದೂರಿದರು. ಬಳಿಕ ಪ್ರಾಂಶುಪಾಲರ ಕಚೇರಿಗೆ ತೆರಳಿ ಮಾಧ್ಯಮದವರ ಮುಂದೆಯೇ ತಮ್ಮ ಅಳಲು ತೋಡಿಕೊಂಡರು. ಆಗಲೂ ಪ್ರಾಂಶುಪಾಲ ಪ್ರೊ.ನಾರಾಯಣ ಹೆತ್ತೂರು ಅವರು ತಮ್ಮ ತಪ್ಪು ಏನೂ ಇಲ್ಲ, ಎಚ್‌ಒಡಿ ಲಾಗಿನ್‌ನಲ್ಲಿ ಫಲಿತಾಂಶ ಹಾಕಲಾಗಿದೆ, ಆದರೆ ಯುಯುಸಿಎಂಎಸ್‌ನಲ್ಲಿ ಅಪ್ಲೋಟ್ ಆಗಿಲ್ಲ ಎಂದರು.
ಇದನ್ನೂ ಓದಿ : ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ!
‘ಈ ಕಾಲೇಜು ಮಾತ್ರವಲ್ಲ, ಹೂವಿನಹಡಗಲಿ, ಕೂಡ್ಲಿಗಿಯ ಕಾಲೇಜುಗಳಲ್ಲಿ ಸಹ ಇದೇ ಸಮಸ್ಯೆ ಇದೆ, ರಾಜ್ಯದ ಇತರ ಕಾಲೇಜುಗಳಲ್ಲಿ ಸಹ ಇದೇ ಸಮಸ್ಯೆ ಇದೆ’ ಎಂದೂ ಹೇಳಿದರು. ‘ಹೊಸಪೇಟೆಯ ವಿಎನ್‌ಸಿಯಲ್ಲಿ ಸಹ ಇದೇ ಸಮಸ್ಯೆ ಇತ್ತು, ಅವರು ಅದನ್ನು ತಕ್ಷಣ ಪರಿಹರಿಸಿಕೊಂಡಿದ್ದಾರೆ. ಬೇರೆ ಕಾಲೇಜಿನವರು ಸಹ ಸರಿಪಡಿಸಿಕೊಂಡಿದ್ದಾರೆ, ನಿಗದಿತ ಸಮಯದೊಳಗೆ ಫಲಿತಾಂಶವನ್ನು ಅಪ್ಲೋಟ್ ಮಾಡಬೇಕಿರುವುದು ಕಾಲೇಜಿನ ಪ್ರಾಂಶುಪಾಲರ ಹೊಣೆ. ಅವರು ಬೇರೆಯವರ ಮೇಲೆ ದೂರು ಹೇಳುವಂತಿಲ್ಲ, ಬೇರೆ ಎಲ್ಲೂ ಇಲ್ಲದ ಸಮಸ್ಯೆ ಈ ಕಾಲೇಜಿನಲ್ಲೇ ಏಕೆ ಇದೆ ಎಂಬುದರಿಂದಲೇ ತಪ್ಪು ಯಾರದು ಎಂಬುದು ಗೊತ್ತಾಗುತ್ತದೆ’ ಎಂದು ಕುಲಸಚಿವರು ಮಾಧ್ಯಮಗಳಿಗೆ ಹೇಳಿದರು.
‘ಈಗ 103 ಮಂದಿ ಬಿ.ಎ ವಿದ್ಯಾರ್ಥಿಗಳ ಫಲಿತಾಂಶ ಮಾತ್ರವಲ್ಲ ಕಾಲೇಜಿನ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನೂ ಮತ್ತೊಮ್ಮೆ ಪ್ರಕಟಿಸುವ ಅನಿವಾರ್ಯತೆ ಇದೆ. ಯುಯುಸಿಎಂಎಸ್ ನಲ್ಲಿ ಕೇವಲ ಒಂದು ವಿಭಾಗದ ವಿದ್ಯಾರ್ಥಿಗಳ ಫಲಿತಾಂಶವನ್ನಷ್ಟೇ ಪ್ರಕಟಿಸುವಂತಿಲ್ಲ. ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ 1500 ವಿದ್ಯಾರ್ಥಿಗಳು ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿದ್ದರೆ ಅವರ ಎಲ್ಲರ ಫಲಿತಾಂಶವೂ ಶೀಘ್ರ ಪರಿಷ್ಕರಣೆಗೊಂಡು ಪ್ರಕಟವಾಗಲಿದೆ’ ಎಂದು ಕುಲಸಚಿವರು ತಿಳಿಸಿದರು.
ಇದನ್ನೂ ನೋಡಿ : ಆರ್.ಬಿ. ಮೋರೆ | ಈ ಪುಸ್ತಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರಿಂದ ಸರಳವಾಗಿ ಅನುವಾದಿಸಿದೆ – ಅಬ್ದುಲ್ ರೆಹಮಾನ ಪಾಷಾ