38 ತಿಂಗಳ ವೇತನ ಬಾಕಿ ನೀಡದಿದ್ದರೆ ಮುಷ್ಕರ, ‘ಬೆಳಗಾವಿ ಚಲೋ’ಗೆ ನಿರ್ಧರ

ಸಾರಿಗೆ ನೌಕರರ ಸಂಘಟನೆಯಿಂದ 26,000 ಬಸ್‌ ಸ್ಥಗಿತದ ಎಚ್ಚರಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ 38 ತಿಂಗಳ ಹಿಂಬಾಕಿ ಮೊತ್ತ ಬಿಡುಗಡೆ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.9ರಂದು ‘ಬೆಳಗಾವಿ ಚಲೋ ʼನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಸಾರಿಗೆ ನೌಕರರು, ‘ಸರ್ಕಾರದಿಂದ ನಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯದಿರುವುದರಿಂದ ನ.22ರಿಂದ ಜಂಟಿ ಕ್ರಿಯಾ ಸಮಿತಿಯ ಸಭೆ ನಡೆಸಿ, ಬೆಳಗಾವಿ ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಡಿ.31ರಿಂದ ಸಾರಿಗೆ ನೌಕರರ ಮುಷ್ಕರ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ಇದನ್ನೂ ಓದಿ : ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ: ಚಿಂತಕರು, ಶಿಕ್ಷಣ ತಜ್ಙರು ಒತ್ತಾಯ

‘ನಾಲ್ಕೂ ನಿಗಮಗಳಲ್ಲಿ ಕೆಲಸ ಮಾಡುವ ನೌಕರರ ಭವಿಷ್ಯ ನಿಧಿ, ನಿವೃತ್ತ ನೌಕರರ ಉಪಧನ, ತುಟ್ಟಿ ಭತ್ಯೆ, ಇಂಧನ, ಅಪಘಾತ ಪರಿಹಾರ ಸೇರಿದಂತೆ ಒಟ್ಟು 75,492.24 ಕೋಟಿಯನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ’ ಎಂದು ದೂರಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಬಿ. ಜಯದೇವರಾಜೇ ಅರಸು, ‘ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಸೇರಿ ಎಲ್ಲ ನೌಕರರ ಬಾಟ, ತಿಂಗಳ ಹಾಗೂ ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೂಲಿಗೆ ಭತ್ಯೆ, ಜರ್ಸಿ, ರೈನ್‌ಕೋಟ್‌ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ವೈದ್ಯಕೀಯ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾರಿಗೆ ನೌಕರರ ಮುಖಂಡರಾದ ಎಚ್‌.ವಿ ಅನಂತಸುಬ್ಬರಾವ್‌,  ಎಚ್‌.ಡಿ.ರೇವಪ್ಪ,  ಬಿ. ಜಯದೇವರಾಜೇಅರಸ್‌, ವೆಂಕಟರಮಣಪ್ಪ, ಅದರಗುಂಜಿ, ಜಗದೀಶ್‌ ಎಚ್‌.ಆರ್‌, ಸೇರಿದಂತೆ ಅನೇಕರಿದ್ದರು.

ಇದನ್ನೂ ನೋಡಿ : ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ

Donate Janashakthi Media

Leave a Reply

Your email address will not be published. Required fields are marked *