-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಸಮಕಾಲೀನ ಉದಾರವಾದವು ನವ ಉದಾರವಾದಿ ಆರ್ಥಿಕ ವ್ಯವಸ್ಥೆಗೆ ಬದ್ಧವಾಗಿರುವುದರಿಂದಾಗಿ, ಜನರ ಸಂಕಷ್ಟಗಳನ್ನು ನಿವಾರಿಸಲು ಅದು ಏನನ್ನೂ ಮಾಡದು ಮತ್ತು ನಿಜಕ್ಕೂ ಅದು ಏನನ್ನೂ ಮಾಡಲಾರದು. ಹಾಗಾಗಿ, ಜನರು ನವ-ಉದಾರವಾದವನ್ನು ತೊರೆದು ಬಲ ಪಂಥದತ್ತ ಅಥವಾ ಎಡ ಪಕ್ಷಗಳತ್ತ ಅಥವಾ ಬೇರೊಂದು ರೀತಿಯ ರಾಜಕೀಯ ಪಕ್ಷದತ್ತ ಹೊರಳುತ್ತಿದ್ದಾರೆ. ಫ್ರಾನ್ಸಿನಲ್ಲಿ, ಶ್ರೀಂಕಾದಲ್ಲಿ ಎಡಶಕ್ತಿಗಳ ಮತ್ತು ಈಗ ಯುಎಸ್ನಲ್ಲಿ ಟ್ರಂಪ್ ವಿಜಯ ಇದನ್ನೇ ತೋರಿಸಿದೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಟ್ರಂಪ್
ಆದರೆ ಬಲಪಂಥೀಯರೂ ಕೂಡ ಜನರ ಸಂಕಷ್ಟವನ್ನು ನಿವಾರಿಸಲು, ಯುದ್ಧಗಳನ್ನು ನಿಲ್ಲಿಸಲು ಏನನ್ನೂ ಮಾಡಲಾರರು: ಚುನಾವಣೆಗಳ ಮೊದಲು ತಮ್ಮ ವಾಕ್ಚಾತುರ್ಯದ ಮೂಲಕ ತಮ್ಮ ನೀತಿಗಳು ನವ ಉದಾರವಾದಿ ನೀತಿಗಿಂತ ಭಿನ್ನ ಎಂದು ತೋರಿಸಿಕೊಳ್ಳುತ್ತಾರೆ; ಆದರೆ, ಚುನಾವಣೆಗಳ ನಂತರ ಅದೇ ನವ ಉದಾರವಾದಿ ನೀತಿಗಳನ್ನು ಅವರು ಸದ್ದಿಲ್ಲದೇ ಅಳವಡಿಸಿಕೊಳ್ಳುತ್ತಾರೆ. ಎಡ ಪಂಥ ಮಾತ್ರವೇ ನವ- ಉದಾರವಾದವನ್ನು ಕೊನೆಗೊಳಿಸುವ ಮೂಲಕ ಪ್ರಸಕ್ತ ಬಿಕ್ಕಟ್ಟನ್ನು ಮತ್ತು ಯುದ್ಧಗಳನ್ನು ಕೊನೆಗೊಳಿಸಬಲ್ಲದು. ಅದು ಮೇಲುಗೈ ಪಡೆಯಲು ಅಂತರರಾಷ್ಟ್ರೀಯ ಸನ್ನಿವೇಶವು ಅನುಕೂಲಕರವಾಗಿದೆ. ಟ್ರಂಪ್
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗಳಿಸಿದ ವಿಜಯವು ವಿಶ್ವಾದ್ಯಂತ ಈಗ ಗಮನಿಸಬಹುದಾದ ಒಂದು ನಮೂನೆಗೆ ಅನುಗುಣವಾಗಿದೆ. ಈ ನಮೂನೆಯೆಂದರೆ, ನಡುಪಂಥೀಯ ಉದಾರವಾದವು ಒಂದು ರಾಜಕೀಯ ಸಿದ್ಧಾಂತವಾಗಿ ಕುಸಿಯುತ್ತಿದೆ ಮತ್ತು ಜನ- ಬೆಂಬಲವು ಎಡಪಂಥೀಯರಿಗೆ ಅಥವಾ ಎಡ ಪಕ್ಷಗಳು ಇಲ್ಲದಿರುವ ಅಥವಾ ದುರ್ಬಲವಾಗಿರುವ ಪರಿಸ್ಥಿತಿಗಳಲ್ಲಿ ತೀವ್ರ ಬಲಪಂಥೀಯ ನವ- ಫ್ಯಾಸಿಸ್ಟರಿಗೆ ಹೆಚ್ಚುತ್ತಿದೆ ಎಂಬುದು. ಇದು ಒಂದು ವಿದ್ಯಮಾನವಾಗಿ ಫ್ರಾನ್ಸಿನಲ್ಲಿ ಗೋಚರಿಸಿತು. ಟ್ರಂಪ್
ಇದನ್ನೂ ಓದಿ: ಎನ್.ಇ.ಪಿ ಪದವಿ ವಿದ್ಯಾರ್ಥಿಗಳ 2021 ರಿಂದ ಇಲ್ಲಿಯವರೆಗೆ ಅಂಕಪಟ್ಟಿ ನೀಡದಿರುವುದು ಖಂಡಿಸಿ ಎಸ್ಎಫ್ಐ ಪ್ರತಿಭಟನೆಗೆ ಕರೆ
ಅಲ್ಲಿ ಮ್ಯಕರೊನ್ರ ನಡು-ಉದಾರವಾದಿ ಪಕ್ಷವು ಒಂದು ಬಹು ದೊಡ್ಡ ಸೋಲನ್ನು ಅನುಭವಿಸಿತು ಮತ್ತು ನವ-ಫ್ಯಾಸಿಸಂ ಒಂದು ಬಲಶಾಲಿ ರಾಜಕೀಯ ಶಕ್ತಿಯಾಗಿ ನಿಜಕ್ಕೂ ಹೊರಹೊಮ್ಮುವ ಸಾಧ್ಯತೆಯನ್ನು ಅವಸರದಲ್ಲಿ ರಚನೆಯಾದ ಎಡ ಶಕ್ತಿಗಳ ಒಂದು ಮೈತ್ರಿ ಕೂಟವು ತಪ್ಪಿಸಿತು. ಇದೇ ರೀತಿಯ ವಿದ್ಯಮಾನವು ನಮ್ಮದೇ ನೆರೆಯ ದೇಶ ಶ್ರೀಲಂಕಾದಲ್ಲಿಯೂ ಸಹ ಬಹಳ ಸ್ಪಷ್ಟವಾಗಿಯೇ ಗೋಚರಿಸಿದೆ. ಶ್ರೀಲಂಕಾದ ನಡು-ಉದಾರವಾದಿ ಪಕ್ಷದ ಮತ್ತು ಅಧಿಕಾರದಲ್ಲಿದ್ದ ಅಧ್ಯಕ್ಷರನ್ನು ಚುನಾವಣೆಯಲ್ಲಿ ಅಲ್ಲಿನ ಪ್ರಮುಖ ಎಡ ಪಕ್ಷದ ಅಭ್ಯರ್ಥಿಯು ಯಾವ ಮುನ್ಸೂಚನೆಯೂ ಇಲ್ಲದೆ ಮತ್ತು ಗಣನೀಯ ಪ್ರಮಾಣದ ಮತಗಳ ಅಂತರದಿಂದ ಸೋಲಿಸಿದರು. ನಡು-ಉದಾರ ಪಂಥದ ಈ ಸರ್ವತ್ರ ಕುಸಿತವು ಉದಾರವಾದದ ಬಿಕ್ಕಟ್ಟಿನ ಸೂಚಕವಾಗಿದೆ ಮತ್ತು ಇದು ಇಂದಿನ ಕಾಲದ ಅತ್ಯಂತ ಗಮನಾರ್ಹವಾದ ಒಂದು ವಿದ್ಯಮಾನವಾಗಿದೆ. ರಾಜಕೀಯ ಉದಾರವಾದವು ಇಂದು ಆರ್ಥಿಕ ನವ-ಉದಾರವಾದದೊಂದಿಗೆ ಗಂಟುಹಾಕಿಕೊಂಡಿದೆ. ಹಾಗಾಗಿ, ಅದರ ಇಂದಿನ ಬಿಕ್ಕಟ್ಟಿನ ಬೇರುಗಳು ಸ್ವತಃ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಆರ್ಥಿಕ ನವ-ಉದಾರವಾದದಲ್ಲಿ ನೆಲೆಸಿವೆ. ಟ್ರಂಪ್
ಉದಾರವಾದಿ ರಾಜಕೀಯ ಕ್ರಿಯೆಗೆ ಒಂದು ಆಧಾರವನ್ನು ಒದಗಿಸಿದ ಶಾಸ್ತ್ರೀಯ ಉದಾರವಾದದ ರಾಜಕೀಯ ತತ್ತ್ವಶಾಸ್ತ್ರವನ್ನು ಬೂರ್ಜ್ವಾ ಆರ್ಥಿಕ ಚಿಂತನೆಯು ಪೋಷಿಸಿಕೊಂಡು ಬಂದಿರುವ ಒಂದು ಸುದೀರ್ಘ ಪರಂಪರೆಯೇ ಇದೆ. ಇದು ಶಾಸ್ತ್ರೀಯ ರಾಜಕೀಯ ಅರ್ಥಶಾಸ್ತ್ರ ಮತ್ತು ನವ-ಶಾಸ್ತ್ರೀಯ ಅರ್ಥಶಾಸ್ತ್ರ ಇವೆರಡನ್ನೂ ಆವರಿಸಿದೆ. ಈ ಎರಡೂ ಚಿಂತನಾ ಎಳೆಗಳು, ಅವುಗಳ ನಡುವಿನ ಗಮನಾರ್ಹ ವ್ಯತ್ಯಾಸಗಳ ಹೊರತಾಗಿಯೂ, ಹೊಂದಿದ್ದ ಒಂದು ನಂಬಿಕೆ ಎಂದರೆ, ಮುಕ್ತ ಮಾರುಕಟ್ಟೆಯು ಸದ್ಗುಣ ಸಂಪನ್ನವಾಗಿದೆ, ಅದರ ಮೇಲೆ ಪ್ರಭುತ್ವದ ಹಸ್ತಕ್ಷೇಪದ ಸಂಕೋಲೆಯನ್ನು ಆದ್ಯತೆಯ ಮೇಲೆ ತೆಗೆದುಹಾಕಬೇಕು ಎಂಬುದು.
ಅರ್ಥಹೀನ ತರ್ಕಸರಣಿಈ ಇಡೀ ತರ್ಕಸರಣಿಯು ಅರ್ಥಹೀನವಾಗಿದೆ ಎಂಬುದನ್ನು ಮೊದಲನೆಯ ಮಹಾ ಯುದ್ಧವು (ಅದರ ಆರ್ಥಿಕ ಬೇರುಗಳು ಮಾರುಕಟ್ಟೆಯ ಸದ್ಗುಣಗಳಿಗೆ ಸಂಬಂಧಿಸಿದ ಎಲ್ಲ ದಾವೆಗಳನ್ನು ಹುಸಿಗೊಳಿಸಿದವು) ಬಯಲುಮಾಡಿತು ಮತ್ತು ಆರ್ಥಿಕ ಮಹಾ ಕುಸಿತವು ಅದನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಬಯಲುಮಾಡಿತು. ಸರ್ಕಾರದ ತಟಸ್ಥ ಧೋರಣೆಯ (laissez faire) ಬಂಡವಾಳಶಾಹಿಯು, ಅದರ “ಸಡಗರದ ಸಣ್ಣ ಅವಧಿ”ಯನ್ನು ಬಿಟ್ಟರೆ, ಉಳಿದಂತೆ ಎಲ್ಲ ಸಮಯಗಳಲ್ಲಿ ಬಹು ಸಂಖ್ಯೆಯಲ್ಲಿ ಕಾರ್ಮಿಕರನ್ನು ವ್ಯವಸ್ಥಿತವಾಗಿ ನಿರುದ್ಯೋಗಿಗಳಾಗಿ ಇರಿಸಿದೆ ಎಂಬುದನ್ನು ಮತ್ತು ಮುಕ್ತ ಮಾರುಕಟ್ಟೆಯು, ಅದನ್ನು ಚಿತ್ರಿಸಿದ ರೀತಿಯ ಒಂದು ಆದರ್ಶ ಸಂಸ್ಥೆಯಾಗಿರದೆ, ಎಷ್ಟೊಂದು ದೋಷಪೂರಿತವಾಗಿದೆ ಎಂದರೆ ಅದು ಸಮಾಜವಾದಿ ಅಲೆಗಳ ಉಬ್ಬರವು ಬಂಡವಾಳಶಾಹಿಯನ್ನು ಕಿತ್ತೆಸೆಯುವ ಅಪಾಯಕ್ಕೆ ತೆರೆದಿಟ್ಟಿತು ಎಂಬುದನ್ನು ಕೀನ್ಸ್ ತೋರಿಸಿಕೊಟ್ಟರು.
ಬಂಡವಾಳಶಾಹಿ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಸಮಾಜವಾದವು ಅದನ್ನು ಸೋಲಿಸುವ ಬೆದರಿಕೆಯಿಂದ ಭಯಭೀತರಾಗಿದ್ದ ಮತ್ತು ಒಬ್ಬ ಉದಾರವಾದಿಯಾಗಿದ್ದ ಕೀನ್ಸ್, ಉದಾರವಾದದ ಒಂದು ಹೊಸ ಆವೃತ್ತಿಯ ಪ್ರಸ್ತಾಪವನ್ನು ಮಂಡಿಸಿದರು (ಅದನ್ನು ಅವರು ‘ಹೊಸ ಉದಾರವಾದ ಎಂದು ಕರೆದರು). ಪ್ರಭುತ್ವದ ಹಸ್ತಕ್ಷೇಪ ತಪ್ಪಿಸುವುದೇ ಶಾಸ್ತ್ರೀಯ ಉದಾರವಾದದ ಒಂದು ಹೆಗ್ಗುರುತಾಗಿದ್ದರೆ, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ ಮತ್ತು ಒಟ್ಟಾರೆ ಬೇಡಿಕೆಯನ್ನು ವರ್ಧಿಸುವ ಸಲುವಾಗಿ ಪ್ರಭುತ್ವದ ಹಸ್ತಕ್ಷೇಪವು ಸದಾ ಇರಬೇಕು ಎಂಬದೇ ಈ ಹೊಸ ಆವೃತ್ತಿಯ ಒಂದು ವಿಶಿಷ್ಟ ಲಕ್ಷಣವಾಗಿತ್ತು.
ಕೀನ್ಸ್ ವಾದವನ್ನು ಹಣಕಾಸು ಬಂಡವಾಳ ಒಪ್ಪಿಕೊಳ್ಳಲಿಲ್ಲ. ಈ ನಿರಾಕರಣೆಯಿಂದ ತಬ್ಬಿಬ್ಬಾದ ಕೀನ್ಸ್, ತಮ್ಮ ಸಿದ್ಧಾಂತವನ್ನು ಸರಿಯಾಗಿ ಗ್ರಹಿಸದಿರುವುದೇ ಅದಕ್ಕೆ ಕಾರಣವೆಂದರು. ಆದರೆ, ಈ ನಿರಾಕರಣೆಯ ನಿಜ ಕಾರಣ ಬಹಳ ಆಳವಾಗಿತ್ತು. ಪ್ರಭುತ್ವದ ಒಂದು ವ್ಯವಸ್ಥಿತವಾದ ಹಸ್ತಕ್ಷೇಪವು ತಮ್ಮ ಸಾಮಾಜಿಕ ಪಾತ್ರವನ್ನು ನಗಣ್ಯಗೊಳಿಸುತ್ತದೆ ಎಂಬ ಭಯವನ್ನು ಬಂಡವಾಳಶಾಹಿಗಳು ಹೊಂದಿದ್ದರು. ಅದರಲ್ಲೂ ವಿಶೇಷವಾಗಿ, ಹಣಕಾಸು ವಲಯದಲ್ಲಿ ವ್ಯವಹಾರ ನಡೆಸುತ್ತಿದ್ದ ಬಂಡವಾಳಗಾರರು (ಇವರನ್ನು ಕಾರ್ಯರಹಿತ ಹೂಡಿಕೆದಾರರು ಎಂದು ಕೀನ್ಸ್ ಕರೆದಿದ್ದರು) ಹೆಚ್ಚು ಭಯಭೀತರಾಗಿದ್ದರು. ಅವರ ಈ ಭಯ ನಿರಂತರವಾದುದು ಮತ್ತು ಅದು ಇಂದಿಗೂ ಉಳಿದಿರುವುದು ಹೌದು. ಮಹಾ ಯುದ್ಧವು ಹಣಕಾಸು ಬಂಡವಾಳವನ್ನು ದುರ್ಬಲಗೊಳಿಸಿತು ಮತ್ತು ಸಾಮಾಜಿಕ ಪ್ರಜಾಪ್ರಭುತ್ವವು ಪ್ರವರ್ಧಮಾನಕ್ಕೆ ಬರಲು ಕಾರಣವಾಯಿತು. ತದನಂತರವೇ, ಕೀನ್ಸ್ ಸಿದ್ಧಾಂತವನ್ನು ಪ್ರಭುತ್ವದ ನೀತಿಯಾಗಿ ಅಂಗೀಕರಿಸಲಾಯಿತು.
ಪರಿತ್ಯಜಿಸಲ್ಪಟ್ಟ ಕೀನ್ಸ್ ರ “ಹೊಸ ಉದಾರವಾದ”
ಯುದ್ಧಾನಂತರದ ಅವಧಿಯಲ್ಲಿ ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ ಉಂಟಾದ ಆರ್ಥಿಕ ಉತ್ಕರ್ಷವು ಹಣಕಾಸು ಬಂಡವಾಳದ ಬಲವನ್ನು ವರ್ಧಿಸಿತು ಮತ್ತು ಅದರ ಗಾತ್ರವು ಹೆಚ್ಚಿದಂತೆಲ್ಲಾ ಅದು ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯಗೊಳ್ಳುತ್ತಾ ಹೋಯಿತು. ಅದೇ ಸಮಯದಲ್ಲಿ, ಯುದ್ಧಾನಂತರದ ಬಂಡವಾಳಶಾಹಿಯು, ಪ್ರಭುತ್ವದ ಹಸ್ತಕ್ಷೇಪದ ಮಾರ್ಗವಾಗಿ ನೆರವು ಪಡೆಯುತ್ತಿದ್ದರೂ ಸಹ, ಬೇರೊಂದು ರೀತಿಯ ಬಿಕ್ಕಟ್ಟಿಗೆ ಸಿಲುಕಿಕೊಂಡಿತು. ಈ ಬಿಕ್ಕಟ್ಟು ಒಟ್ಟಾರೆ ಬೇಡಿಕೆಯ ಅಸಮರ್ಪತೆಯ ಕಾರಣದಿಂದ ಉಂಟಾದುದಲ್ಲ. 1960ರ ದಶಕದ ಕೊನೆಯಲ್ಲಿ ಮತ್ತು 1970ರ ದಶಕದ ಆರಂಭದಲ್ಲಿ ಸಂಭವಿಸಿದ ಹಣದುಬ್ಬರದ ಏರಿಕೆಯ ಕಾರಣದಿಂದಾಗಿ ಈ ಬಿಕ್ಕಟ್ಟು ಉಂಟಾಗಿತ್ತು. ಈ ಬಿಕ್ಕಟ್ಟು, ಯುದ್ಧಾನಂತರದ ಬಂಡವಾಳಶಾಹಿಯನ್ನು ನಿರೂಪಿಸುವ ಅವಳಿ ವಿದ್ಯಮಾನಗಳಲ್ಲಿ ಬೇರೂರಿದೆ: ಉದ್ಯೋಗಗಳ ಉನ್ನತ ಮಟ್ಟವು ಕಾರ್ಮಿಕರ ಮೀಸಲು ಪಡೆಯ ಗಾತ್ರವನ್ನು ಕುಗ್ಗಿಸಿತು ಮತ್ತು ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮೀಸಲು ಪಡೆಯ ಗಾತ್ರವು ಬೀರುತ್ತಿದ್ದ ಸ್ಥಿರಗೊಳಿಸುವ ಪ್ರಭಾವ ಇಲ್ಲವಾಯಿತು.
ಇದನ್ನೂ ನೋಡಿ: ಒಂದು ದೇಶ, ಒಂದು ಚುನಾವಣೆ | ಒಂದು… ಒಂದು.. ಎನ್ನುವುದರ ಹಿಂದೆ ದೇಶಕ್ಕೆ ಕಾದಿದೆ ಅಪಾಯ – ಡಾ.ಸಿದ್ದನಗೌಡ ಪಾಟೀಲ್
ಹಾಗೂ, ನಿರ್ವಸಾಹತೀಕರಣವು ಮೂರನೇ ಜಗತ್ತಿನ ಬೇಡಿಕೆಯನ್ನು ಅಲ್ಲಿ ದೊರಕುವ ಮೂಲ ಸರಕು ಬೆಲೆಗಳನ್ನು ಕೆಳ ಮಟ್ಟದಲ್ಲಿಡುವ ಮೂಲಕ ಸಂಕುಚಿತಗೊಳಿಸುವ ಕಾರ್ಯವಿಧಾನವನ್ನು ಕಳಚಿಹಾಕಿತು. ಈ ಬಿಕ್ಕಟ್ಟು, ನೂತನ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಕೀನ್ಸ್ ಪ್ರತಿಪಾದಿಸಿದ ಬೇಡಿಕೆ ನಿರ್ವಹಣೆಯ ವ್ಯವಸ್ಥೆಯನ್ನು ಅಪಖ್ಯಾತಿಗೆ ಈಡುಮಾಡಲು ಅವಕಾಶವನ್ನು ಕಲ್ಪಿಸಿ ಕೊಟ್ಟಿತು ಹಾಗೂ ಎಲ್ಲೆಡೆಯೂ ನವ ಉದಾರವಾದಿ ಆರ್ಥಿಕ ಆಳ್ವಿಕೆಯನ್ನು ಉತ್ತೇಜಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿತು. ಇದಕ್ಕೆ ಮುಕ್ತ ಮಾರುಕಟ್ಟೆಯ ‘ಸದ್ಗುಣ’ಗಳನ್ನು ಮರು-ಪ್ರಸರಿಸುವ ಬೂರ್ಜ್ವಾ ಅರ್ಥಶಾಸ್ತ್ರದ ನೆರವು
ಮತ್ತು ಪ್ರಚೋದನೆಯೂ ಇತ್ತು. ಈ ಹೊಸ ಪರಿಸ್ಥಿತಿಯಲ್ಲಿ, ಹೂಡಿಕೆದಾರರ ವಿಶ್ವಾಸ (ಅಂದರೆ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಅಪೇಕ್ಷೆಗಳಿಗೆ ತಲೆಬಾಗುವ ಮೂಲಕ ಬಂಡವಾಳದ ಹೊರ-ಹರಿವನ್ನು ತಡೆಯುವುದು) ಉಳಿಸಿಕೊಳ್ಳುವುದೇ ಪ್ರಭುತ್ವ ನೀತಿಯ ಒಂದು ಮುಖ್ಯ ಕಾಳಜಿಯಾದ ಕಾರಣದಿಂದ, ಕೀನ್ಸ್ ಅವರ ಹೊಸ ಉದಾರವಾದವನ್ನು ಪರಿತ್ಯಜಿಸಲಾಯಿತು. ಜೊತೆಗೆ, ನಡು- ಉದಾರವಾದ, ಸಾಮಾಜಿಕ ಪ್ರಜಾಪ್ರಭುತ್ವದ ಒಂದು ಬಹು ದೊಡ್ಡ ವಿಭಾಗ ಮತ್ತು ಎಡಪಂಥೀಯರ ಕೆಲವು ನಿರ್ದಿಷ್ಟ ವಿಭಾಗಗಳೂ ಸಹ ನವ ಉದಾರವಾದಕ್ಕೆ ಬೆಂಬಲವಾಗಿ ನಿಂತವು.
ಈ ನವ ಉದಾರವಾದವು ಅದು ಬಿಕ್ಕಟ್ಟಿಗೆ ಸಿಲುಕುವ ಮುನ್ನವೇ ಮುಂದುವರೆದ ಬಂಡವಾಳಶಾಹಿ ದೇಶಗಳ ಕಾರ್ಮಿಕ ವರ್ಗಕ್ಕೆ ಅಪಾರವಾದ ಸಂಕಟವನ್ನು ತಂದಿತ್ತು ಮತ್ತು ಮೂರನೇ ಜಗತ್ತಿನಲ್ಲಿ ದುಡಿಯುವ ಜನರಿಗೆ ಇನ್ನೂ ಹೆಚ್ಚಿನ ಸಂಕಟವನ್ನು ತಂದಿತು. ಅದು ಬಿಕ್ಕಟ್ಟಿಗೆ ಸಿಲುಕಿಕೊಂಡ ನಂತರ, ಜನರ ಸಂಕಷ್ಟಗಳು ಇನ್ನೂ ಹೆಚ್ಚುತ್ತಾ ಹೋದವು. ನಿಯಂತ್ರಣ ನೀತಿಗಳ ಅವಧಿಗೆ ಹೋಲಿಸಿದರೆ ನವ ಉದಾರವಾದಿ ಯುಗದಲ್ಲಿ ವಿಶ್ವ ಅರ್ಥವ್ಯವಸ್ಥೆಯ ಬೆಳವಣಿಗೆಯ ದರವು ಗಣನೀಯವಾಗಿ ನಿಧಾನಗೊಂಡಿದೆ. 2008ರ ನಂತರ ಯುಎಸ್ನಲ್ಲಿ ಆಸ್ತಿ ಬೆಲೆ ಗುಳ್ಳೆಗಳ ಕೊನೆಯ ಗುಳ್ಳೆಯು ಸ್ಫೋಟಗೊಂಡಾಗ ಬೆಳವಣಿಗೆಯ ದರ ಮತ್ತಷ್ಟು ನಿಧಾನಗೊಂಡಿತು. ನವ ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ವರಮಾನಗಳ ಅಸಮಾನತೆಗಳು ಬೆಳೆಯುತ್ತಾ ಹೋದವು. ಈ ಅಸಮಾನತೆಗಳ ಬೃಹತ್ ಹೆಚ್ಚಳದ ಕಾರಣದಿಂದಾಗಿ ಒಟ್ಟಾರೆ ಬೇಡಿಕೆಯು ಅಸಮರ್ಪಕವಾಗುವಂತಾಯಿತು. ಇದು ಅನಿವಾರ್ಯವಾಗಿ ಅತಿ-ಉತ್ಪಾದನೆಯ ಒಂದು ಪ್ರವೃತ್ತಿಯನ್ನು ಉಂಟುಮಾಡುತ್ತದೆ.
ಆಸ್ತಿ ಬೆಲೆ ಗುಳ್ಳೆಗಳ ಮೂಲಕ ಅಂದರೆ ಸಂಪತ್ತಿನ ಪರಿಣಾಮದ ಮೂಲಕ ವಿಶ್ವದ ಒಟ್ಟು ಬೇಡಿಕೆಯ ಮಟ್ಟವನ್ನು ಕಾಪಾಡಿಕೊಳ್ಳಲಾಯಿತು. ಹಾಗಾಗಿ ಬಿಕ್ಕಟ್ಟು ಪ್ರಕಟಗೊಳ್ಳುವುದು ತಡವಾಯಿತು. ಗುಳ್ಳೆಗಳು ಸ್ಫೋಟಗೊಂಡ ನಂತರ, ಈ ಬಿಕ್ಕಟ್ಟು ಸ್ವತಃ ಪ್ರಕಟಗೊಂಡಿತು. ನವ ಉದಾರವಾದದ ಎಲ್ಲೆಗಳೊಳಗೆ ಈ ಬಿಕ್ಕಟ್ಟಿನಿಂದ ಹೊರಬರುವುದು ಸಾಧ್ಯವಿಲ್ಲ. ಏಕೆಂದರೆ, ಕೀನ್ಸ್ ಪ್ರತಿಪಾದನೆಯ ಬೇಡಿಕೆ ನಿರ್ವಹಣೆಯನ್ನು ನವ ಉದಾರವಾದವು ತಿರಸ್ಕರಿಸುತ್ತದೆ. ಈ ಪರಿಸ್ಥಿತಿಯಲ್ಲಿ, ಬಿಕ್ಕಟ್ಟಿನ ತೀವ್ರತೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದಾದ ಹೊಸ ಗುಳ್ಳೆಗಳನ್ನು ಎಬ್ಬಿಸುವ ಸಾಧ್ಯತೆಯನ್ನು ತಳ್ಳಿಹಾಕಬೇಕಾಗುತ್ತದೆ, ಏಕೆಂದರೆ, ಗುಳ್ಳೆಗಳ ಸಂಬಂಧವಾಗಿ ಹಿಂದೆ ಪಡೆದ ಅನುಭವವು ಜನರನ್ನು ಹೆಚ್ಚು ಜಾಗರೂಕರನ್ನಾಗಿಸಿದೆ. ಮಾತ್ರವಲ್ಲ, ಹೊಸ ಗುಳ್ಳೆಯನ್ನು ಎಬ್ಬಿಸುವ ಗುರಿ ಹೊಂದಿರುವ ಹಣಕಾಸು ನೀತಿಯು, ಬೇಡಿಕೆ ಸ್ಥಗಿತಗೊಂಡಿರುವ ಸನ್ನಿವೇಶದಲ್ಲೂ, ಲಾಭದ ಅಂತರವನ್ನು (profit-mark-ups) ಹೆಚ್ಚಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುವಂತಾಯಿತು ಮತ್ತು ಅದರ ಪರಿಣಾಮವಾಗಿ ಹಣದುಬ್ಬರ ಉಲ್ಬಣಗೊಳ್ಳುವಂತಾಯಿತು. ಈ ಪರಿಸ್ಥಿತಿಯು ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿತು.
ಮರಳಿ ಸ್ಥಗಿತತೆ ಮತ್ತು ಬಿಕ್ಕಟ್ಟಿಗೆ
ಸಮಕಾಲೀನ ಉದಾರವಾದವು, ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರವಾದಿ ವ್ಯವಸ್ಥೆಗೆ ಬದ್ಧವಾಗಿರುವುದರಿಂದಾಗಿ, ಜನರ ಸಂಕಷ್ಟಗಳನ್ನು ನಿವಾರಿಸಲು ಅದು ಏನನ್ನೂ ಮಾಡದು ಮತ್ತು ಅದು ಏನನ್ನೂ ನಿಜಕ್ಕೂ ಮಾಡಲಾರದು. ಹಾಗಾಗಿ, ಜನರು ನವ ಉದಾರವಾದವನ್ನು ತೊರೆದು ಬಲ ಪಂಥದತ್ತ ಅಥವಾ ಎಡ ಪಕ್ಷಗಳತ್ತ ಅಥವಾ ಬೇರೊಂದು ರೀತಿಯ ರಾಜಕೀಯ ಪಕ್ಷದತ್ತ ಹೊರಳುತ್ತಿದ್ದಾರೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಬಲಪಂಥೀಯರೂ ಕೂಡ ಜನರ ಸಂಕಷ್ಟವನ್ನು ನಿವಾರಿಸಲು ಏನನ್ನೂ ಮಾಡಲಾರರು: ಚುನಾವಣೆಗಳ ಮೊದಲು ತಮ್ಮ ವಾಕ್ಚಾತುರ್ಯದ ಮೂಲಕ ತಮ್ಮ ನೀತಿಗಳು ನವ ಉದಾರವಾದಿ ನೀತಿಗಿಂತ ಭಿನ್ನ ಎಂದು ತೋರಿಸಿಕೊಳ್ಳುತ್ತಾರೆ; ಆದರೆ, ಚುನಾವಣೆಗಳ ನಂತರ ಅದೇ ನವ ಉದಾರವಾದಿ ನೀತಿಗಳನ್ನು ಅವರು ಸದ್ದಿಲ್ಲದೇ ಅಳವಡಿಸಿಕೊಳ್ಳುತ್ತಾರೆ.
ಇಟಲಿಯಲ್ಲಿ ಮೆಲೋನಿ ಮಾಡಿದ್ದುದು ಇದನ್ನೇ. ಫ್ರಾನ್ಸಿನಲ್ಲಿ ಮರೀನ್ ಲೆ ಪೆನ್ ಅವರ ಪ್ರಧಾನ ಮಂತ್ರಿ ಅಭ್ಯರ್ಥಿ ಜೋರ್ಡಾನ್ ಬಾರ್ಡೆಲಾ ಅವರು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಸಂಬMಧವಾಗಿ ತಮ್ಮ ಪಕ್ಷವು ಹಿಂದೆ ಹೊಂದಿದ್ದ ವಿರೋಧ-ನೀತಿಯನ್ನು ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಕೈಬಿಟ್ಟು ಬೇರೊಂದು ರಾಗ ಹಾಡಲಾರಂಭಿಸಿದರು. ಆದರೆ, ಬಲಪಂಥೀಯರು ಸಾಮಾನ್ಯವಾಗಿ ಕೆಲವು ಧಾರ್ಮಿಕ ಅಥವಾ ಜನಾಂಗೀಯ ಅಥವಾ ವಲಸಿಗ ಅಲ್ಪಸಂಖ್ಯಾತ ಗುಂಪುಗಳನ್ನು ಅನ್ಯರೆಂದು ಗುರುತಿಸಿ ಅವರ ವಿರುದ್ಧದ ನಡೆಸುವ ಸತತ ವಾಗ್ದಾಳಿಯ ಮೂಲಕ ತಾವು ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಕ್ರಿಯಾಶೀಲರಾಗಿ ತೊಡಗಿರುವ ಸೋಗು ಹಾಕುತ್ತಾರೆ. ಆದರೆ, ನಡು- ಉದಾರವಾದವು ಬಿಕ್ಕಟ್ಟು ನಿಜಕ್ಕೂ ಇದೆ ಎಂಬ ವಾಸ್ತವಾಂಶವನ್ನೇ ಒಪ್ಪಿಕೊಳ್ಳುವುದಿಲ್ಲ. ಈ ಪರಿಸ್ಥಿತಿಯಲ್ಲಿ ಏಕಸ್ವಾಮ್ಯ ಬಂಡವಾಳವು ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಬಲಪಂಥೀಯರನ್ನು ಅಥವಾ ನವ-ಫ್ಯಾಸಿಸ್ಟ್ರನ್ನು ಬೆಂಬಲಿಸುತ್ತದೆ. ಇದು ನಡುಪಂಥೀಯ ಉದಾರವಾದವು ದುರ್ಬಲಗೊಳ್ಳಲು ಮತ್ತು ಅದು ಬಿಕ್ಕಟ್ಟಿಗೆ ಒಳಗಾಗಲು ಮತ್ತೊಂದು ಕಾರಣವಾಗಿದೆ.
ಟ್ರಂಪ್, ಚೀನಾದ ಆಮದುಗಳ ವಿರುದ್ಧ ಮಾತ್ರವಲ್ಲದೇ ಯುರೋಪಿಯನ್ ಒಕ್ಕೂಟದ ಆಮದುಗಳ ವಿರುದ್ಧವೂ ಅಮೆರಿಕದ ಅರ್ಥವ್ಯವಸ್ಥೆಯನ್ನು ರಕ್ಷಿಸುವ ಒಂದು ಆರ್ಥಿಕ ಕಾರ್ಯಸೂಚಿಯನ್ನು ಹೊಂದಿದ್ದಾರೆ ಎಂದು ಹೇಳಬಹುದೇ ವಿನಃ, ಮೆಲೋನಿಯ ರೀತಿಯಲ್ಲಿ ಅದೇ ಹಳೆಯ ನವ ಉದಾರವಾದಿ ಕಥಾ-ಹಂದರಕ್ಕೆ ಟ್ರಂಪ್ ಅಂಟಿಕೊಂಡಿದ್ದಾರೆ ಎಂದು ಆರೋಪಿಸಲಾಗದು. ಇಲ್ಲಿ ಹಲವಾರು ಅಂಶಗಳನ್ನು ಗಮನಿಸಬೇಕಾಗುತ್ತದೆ: ಮೊದಲನೆಯದು, ಉದಾರ ವ್ಯಾಪಾರ ವ್ಯವಸ್ಥೆಯಿಂದ ದೂರಸರಿದು ರಕ್ಷಣಾತ್ಮಕ ವ್ಯಾಪಾರದತ್ತ ಚಲಿಸಿದರೂ ಸಹ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಗಡಿಯಾಚೆಗಿನ ಮುಕ್ತ ಹರಿವಿನ ಮೇಲೆ ನಿರ್ಬಂಧಗಳನ್ನು ಹೇರುವ ಅಂಶವನ್ನು ಟ್ರಂಪ್ ಪ್ರಸ್ತಾಪಿಸಲಿಲ್ಲ. ಅಂದರೆ, ಅವರು ತಮ್ಮ ಬಡಾಯಿ ಕೊಚ್ಚಿಕೊಳ್ಳುವ ಚುನಾವಣಾ ಪೂರ್ವದ ಭಾಷಣ-ಘೋಷಣೆಗಳಲ್ಲೂ ಸಹ ನವ ಉದಾರೀ ಏರ್ಪಾಟಿನ ತಿರುಳನ್ನು ಅಪ್ಪಿ-ತಪ್ಪಿಯೂ ಪ್ರಶ್ನಿಸಲಿಲ್ಲ. ಎರಡನೆಯದು, ರಕ್ಷಣಾತ್ಮಕ ವ್ಯಾಪಾರ ನೀತಿಯು ಟ್ರಂಪ್ ಅವರದೇ ಮೂಲ ಕಲ್ಪನೆಯಲ್ಲ.
ಅದು ಒಬಾಮಾ ಆಳ್ವಿಕೆಯಡಿಯಲ್ಲೇ ಆರಂಭವಾಯಿತು. ಜೊತೆಗೆ, ರಕ್ಷಣಾತ್ಮಕ ವ್ಯಾಪಾರ ನೀತಿ ಮಾತ್ರವೇ ಅಮೆರಿಕದ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲಾರದು; ಹೆಚ್ಚೆಂದರೆ ಅದು ಪೈಪೋಟಿಯ ಮೇಲೆ ರಫ್ತು ಮಾಡುವ ದೇಶಗಳಿಗೆ ನಷ್ಟವನ್ನುಂಟುಮಾಡುವ ರೀತಿಯ ಆಮದುಗಳ ಮೂಲಕ ಆಂತರಿಕ ಉತ್ಪಾದನೆಯನ್ನು ಉತ್ತೇಜಿಸಬಹುದೇ ವಿನಃ, ಆಂತರಿಕ ಮಾರುಕಟ್ಟೆಯ ಗಾತ್ರವನ್ನು ವಿಸ್ತರಿಸಲಾರದು. ಅದಕ್ಕಾಗಿ, ವಿತ್ತೀಯ ಕೊರತೆಯ ಮೂಲಕವಾಗಲಿ ಅಥವಾ ಶ್ರೀಮಂತರ ಮೇಲೆ ಹೇರುವ ತೆರಿಗೆಗಳ ಮೂಲಕವಾಗಲಿ ಒದಗಿಸಿಕೊಂಡ ಹಣದಿಂದ ಮಾತ್ರ ಕೈಗೊಳ್ಳುವ ಪ್ರಭುತ್ವದ ವೆಚ್ಚಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗುತ್ತದೆ. ಕಾರ್ಪೊರೇಟ್ ತೆರಿಗೆ ಕಡಿತದ ಬಗ್ಗೆ ಟ್ರಂಪ್ ಅವರಿಗೆ ಇರುವ ಒಲವು ಅವರ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲೇ ಬಯಲಾಯಿತು. ಟ್ರಂಪ್, ಪ್ರಭುತ್ವದ ವೆಚ್ಚಗಳನ್ನು ಹೆಚ್ಚಿಸಲಾರರು. ಹಾಗಾಗಿ ಹೆಚ್ಚಿನ ರಕ್ಷಣೆಯಿಂದ ತಾತ್ಕಾಲಿಕವಾಗಿ ಉಂಟಾಗುವ ಗದ್ದಲದ ನಂತರ ಯುಎಸ್
ಅರ್ಥವ್ಯವಸ್ಥೆಯು ಸ್ಥಗಿತತೆಗೆ ಮತ್ತು ಬಿಕ್ಕಟ್ಟಿಗೆ ಮರಳುತ್ತದೆ.
ಜಾಗತಿಕವಾಗಿ-ಗಮನಿಸಿದ ನಡುಪಂಥೀಯ ಉದಾರವಾದದ ಕುಸಿತದ ವಿದ್ಯಮಾನದ ಅನುಗುಣವಾಗಿ ಟ್ರಂಪ್ ಅವರ ವಿಜಯವು ನಿರೀಕ್ಷಿತವೇ. ಅವರ ಆರ್ಥಿಕ ಕಾರ್ಯಸೂಚಿಯು ನವ ಉದಾರವಾದದ ಮೂಲ ತತ್ವಗಳಿಗೆ ಬದ್ಧವಾಗಿದೆ ಎಂಬುದನ್ನು ಜನರು ಗಮನಿಸಿಲ್ಲ ಎಂಬುದು ಕಂಡುಬರುತ್ತದೆ. ರಕ್ಷಣಾತ್ಮಕ ವ್ಯಾಪಾರ ಎಂಬುದು ಮಾತ್ರವೇ ಒಂದು ವ್ಯತ್ಯಾಸ. ಆದರೆ ಇದು ಕೂಡ ಹೆಚ್ಚೆಂದರೆ ತಾತ್ಕಾಲಿಕವಾಗಿ ಉದ್ಯೋಗಗಳನ್ನು ಹೆಚ್ಚಿಸಬಹುದು, ಆದರೆ ಅದೇ ವೇಳೆಗೆ ಅಗ್ಗದ ಆಮದುಗಳು ಇಲ್ಲದಿರುವುದರಿಂದಾಗಿ ಹಣದುಬ್ಬರದ ಪರಿಸ್ಥಿತಿ ಹದಗೆಡುತ್ತದೆ.
ಎಡ ಪಂಥವು ಮೇಲುಗೈ ಪಡೆಯಲು ಅಂತರರಾಷ್ಟ್ರೀಯ ಸನ್ನಿವೇಶವು ಅನುಕೂಲಕರವಾಗಿದೆ. ಎಡ ಪಂಥ ಮಾತ್ರವೇ ನವ ಉದಾರವಾದವನ್ನು ಕೊನೆಗೊಳಿಸುವ ಮೂಲಕ ಪ್ರಸಕ್ತ ಬಿಕ್ಕಟ್ಟನ್ನು ಕೊನೆಗೊಳಿಸಬಲ್ಲದು. ಮತ್ತು, ಎಡ ಪಂಥ ಮಾತ್ರವೇ ಪ್ರಸ್ತುತ ನಡೆಯುತ್ತಿರುವ ಯುದ್ಧಗಳಿಗೆ (ಈ ಯುದ್ಧಗಳಿಗೆ ನಡುಪಂಥೀಯ ಉದಾರವಾದವೇ ಹೊಣೆ ಹೊರಲೇಬೇಕಾಗುತ್ತದೆಯಾದರೂ ಈ ವಿಷಯವನ್ನು ನಂತರ ಚರ್ಚಿಸಬಹುದು) ಅಂತ್ಯವನ್ನು ತರಬಲ್ಲದು. ಈ ಕಾರ್ಯಸಾಧನೆಗಾಗಿ ಎಡ ಪಕ್ಷಗಳು ಸಿದ್ಧವಾಗಬೇಕಿದೆ.
ಇದನ್ನೂ ಓದಿ: ಮಕ್ಕಳಿಗೆ ಕೃಷಿ ಪಾಠ: ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು | 60 ಚೀಲ ಫಸಲಿಗೆ ಶ್ಲಾಘನೆ