ಕೇರಳ: ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ರಸ್ತೆ ಪಕ್ಕ ಮಲಗಿದ್ದ ಅಲೆಮಾರಿಗಳ ಮೇಲೆ ಅತೀ ವೇಗವಾಗಿ ಬಂದ ಲಾರಿಯೊಂದು ಹರಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ತ್ರಿಶೂರು ಜಿಲ್ಲೆಯ ನಟ್ವೀಕ್ ಎಂಬಲ್ಲಿ ನಡೆದಿದೆ.
ಈ ದುರ್ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಸ್ಥಳೀಯರಾದ ಕಾಳಿಯಪ್ಪನ್(50), ನಾಗಮ್ಮ (39), ಬಂಗಾಜಿ(20), ಜೀವನ್(4) ಮತ್ತು ವಿಶ್ವ (1) ಮೃತರು ಎಂದು ಗುರುತಿಸಲಾಗಿದೆ. ಕಣ್ಣೂರು ಮೂಲದ ಲಾರಿ ಚಾಲಕ ಅಲೆಕ್ಸ್ (35) ಮತ್ತು ಕ್ಲೀನರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮರದ ತುಂಡುಗಳನ್ನು ಲಾರಿ ಸಾಗಿಸುತ್ತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಹಿಷ್ಕಾರ ಪದ್ಧತಿ ಇನ್ನೂ ಜೀವಂತ : ಈ ಕುಟುಂಬಗೊಂದಿಗೆ ಮಾತನಾಡಿದರೆ, ಮನೆಗೆ ಹೋದರೆ 5,000 ದಂಡ
ಕಣ್ಣೂರಿನಿಂದ ಕೊಚ್ಚಿಗೆ ಲಾರಿ ತೆರಳುತ್ತಿದ್ದು, ರಸ್ತೆಯ ಬದಿಯಲ್ಲಿ ಮಲಗಿದ್ದವರ ಮೇಲೆ ಹರಿದಿದೆ. ಇನ್ನು ಚಾಲಕ ಮತ್ತು ಕ್ಲೀನರ್ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವಾಹನ ಸಂಚರಿಸಲು ಅವಲಕಾಶವೇ ಇಲ್ಲ. ಅಲ್ಲದೇ, ಬ್ಯಾರಿಕೇಡ್‌ಗಳನ್ನು ಕೂಡ ಹಾಕಲಾಗಿದೆ. ಹೀಗಾಗಿ, ಸುರಕ್ಷತೆಯ ಖಾತರಿಪಡಿಸಿಕೊಂಡು ಅಲೆಮಾರಿ ಜನ ಮಲಗಿದ್ದಾರೆ. ಆದರೂ, ಅಪಘಾತ ಸಂಭವಿಸಿದೆ.
ಚಾಲಕ ಮತ್ತು ಕ್ಲೀನರ್ ಪಾನಮತ್ತರಾಗಿದ್ದರಿಂದ ರಸ್ತೆ ಬಿಟ್ಟು ಬ್ಯಾರಿಕೇಡ್‌ಗಳ ಕಡೆ ವೇಗವಾಗಿ ನುಗ್ಗಿಸಿದ್ದಾರೆ. ಇದರಿಂದಾಗಿ ಈ ದುರಂತ ಘಟನೆ ನಡೆದಿದೆ. ಇಬ್ಬರನ್ನು ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿ ತನಿಖೆ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ನೋಡಿ: ನೇರಪ್ರಸಾರ | ಸಂವಿಧಾನ ದಿನದ ಕಾರ್ಯಕ್ರಮ