ಬೆಂಗಳೂರು: ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 25 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ 25 ಕಡೆಗಳಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳ ತಂಡ ಏಕ ಕಾಲದಲ್ಲಿ ದಾಳಿ ಮಾಡಿ ಶೋಧ ಕಾರ್ಯ ಕೈಗೊಂಡಿದೆ.
ಬೆಂಗಳೂರಿನ ಬನಶಂಕರಿಯ ಒಂದನೇ ಹಂತದಲ್ಲಿರುವ ನಗರ ಯೋಜನಾ ಇಲಾಖೆಯ ನಿರ್ದೇಶಕರಾದ ತಿಪ್ಪೇಸ್ವಾಮಿ ಅವರ ನಿವಾಸ, ಕನಕಪುರ ರಸ್ತೆಯಲ್ಲಿರುವ ಅಬಕಾರಿ ಇಲಾಖೆಯ ಅಧೀಕ್ಷಕರಾದ ಮೋಹನ್ ಅವರ ನಿವಾಸ, ಮಂಡ್ಯದಲ್ಲಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಹಾಗೂ ಚಿಕ್ಕಬಳ್ಳಾಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರ ಮಂಗಳೂರು ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಇದನ್ನೂ ಓದಿ : ಪಡಿತರ ಕಾರ್ಡ್ ಪರಿಷ್ಕರಣೆ – ಬಡ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು
ಅಕ್ರಮ ಆಸ್ತಿ ಸಂಪಾದನೆ ದೂರಿನನ್ವಯ ಈ ನಾಲ್ವರು ಅಧಿಕಾರಿಗಳ ಮನೆಗಳು, ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಕಾವೇರಿ ನಿಗಮದ ಎಂಡಿ ಮಹೇಶ್ ಅವರ ಮನೆ, ಸಂಬಂಧಿಕರ ಮನೆಗಳ ಮೇಲೆ ಹಾಗೂ ದಳವಾಯಿ ಕೋಡಿಹಳ್ಳಿಯಲ್ಲಿರುವ ಅವರ ಅತ್ತೆ ಮನೆಯ ಮೇಲೂ ದಾಳಿ ನಡೆಸಿ ದಾಖಲೆ ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಸಮೀಪದ ಪಂಪ್ ಹೌಸ್, ಮಹೇಶ್ ಅವರ ಪತ್ನಿ ಹೆಸರಲ್ಲಿರುವ ನಮ್ಮತ ಪೆಟ್ರೋಲ್ ಬಂಕ್ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಚಿಕ್ಕಬಳಾಪುರದ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರ ಕಚೇರಿ, ಮನೆ, ಅಪಾರ್ಟ್ಮೆಂಟ್, ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಎಸ್ಪಿ ಅಂಟೋನಿಜಾನ್ ಅವರ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.
ಎರಡು ತಿಂಗಳ ಹಿಂದೆಯಷ್ಟೇ ಮಂಗಳೂರಿಗೆ ಕೃಷ್ಣವೇಣಿ ಅವರು ವರ್ಗಾವಣೆಯಾಗಿದ್ದಾರೆ. ಮಂಗಳೂರಿನ ವೆಲೆನ್ಸಿಯಾದ ಅವರ ಮನೆ ಹಾಗೂ ಕಚೇರಿ ಮೇಲೆ, ಯಲಹಂಕದಲ್ಲಿರುವ ಅಪಾರ್ಟ್ಮೆಂಟ್, ಮೈಸೂರಿನಲ್ಲಿರುವ ಸಹೋದರನ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ : ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Janashakthi Media