ಬೆಂಗಳೂರು| ಧಗಧಗನೆ ಉರಿದ ಎಲೆಕ್ಟ್ರಿಕ್‌ ಶೋ ರೂಮ್‌, ಯುವತಿ ಸಜೀವ ದಹನ

ಬೆಂಗಳೂರು : ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿ ಮಂಗಳವಾರ ಅಗ್ನಿ ಅವಗಢ ಸಂಭವಿಸಿದ್ದು, ಎಲೆಕ್ಟ್ರಿಕ್‌ ಶೋ ರೂಮ್‌ ಧಗಧಗನೆ ಉರಿದಿದೆ. ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ. ಎಲೆಕ್ಟ್ರಿಕ್ ಬೈಕ್ ಶೂ ರೂಂ ನಲ್ಲಿ ಅಗ್ನಿ ಅವಘಡ ನಡೆದಿದ್ದು, 20 ವರ್ಷದ ಪ್ರಿಯಾ ಎನ್ನುವ ಸಿಬ್ಬಂದಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾಳೆ.

ಮಂಗಳವಾರ ಸಂಜೆ 5.30ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಶೋರೂಂ ಆವರಿಸಿ, ಧಗಧಗನೇ ಹೊತ್ತಿ ಉರಿಯಿತು. ಭೀಕರ ಬೆಂಕಿಗೆ ಸ್ಕೂಟರ್‌ಗಳು, ಪೀಠೋಪಕರಣ ಹಾಗೂ ದಾಖಲೆಗಳು ಸಂಪೂರ್ಣ ಭಸ್ಮವಾಗಿವೆ. ಯುವತಿ ಸಜೀವದಹನವಾದರೆ, ಆರು ಮಂದಿ ಹೊರಕ್ಕೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅನಾಹುತ ಸಂಭವಿಸಿದ ಸಮಯದಲ್ಲಿ ಗ್ರಾಹಕರು ಇರಲಿಲ್ಲ.

20 ವರ್ಷದ ಪ್ರಿಯಾ ಶೋ ರೂಮ್‌ನಲ್ಲಿ ಬೈಕ್‌ ಸೇಲ್ಸ್ ಗರ್ಲ್‌ ಹಾಗೂ ರಿಸಪ್ಶನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಪ್ರಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನು ಒಂದು ಮಗು ಒಳಗೆ ಸಿಲುಕಿದೆ ಎನ್ನುವ ಅನುಮಾನವಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮೃತ ಯುವತಿಯ ಕುಟುಂಬಸ್ಥರು ಕಣ್ಣೀರು ಹಾಕಿದರು. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೋರೂಂ ಮಾಲೀಕ ಪುನೀತ್‌ ಗೌಡ ತಲೆಮರೆಸಿಕೊಂಡಿದ್ದಾರೆ.

ಬೆಂಕಿ ಅನಾಹುತದಲ್ಲಿ ಮೃತಪಟ್ಟ ಪ್ರಿಯಾ ಅವರ ಜನ್ಮದಿನಾಚರಣೆ ಇಂದು (ಬುಧವಾರ) ಇತ್ತು. ಇದಕ್ಕಾಗಿ ಮನೆಯಲ್ಲಿ ಸಿದ್ಧತೆಗಳು ನಡೆದಿದ್ದವು.’ಜನ್ಮ ದಿನಕ್ಕೆಂದು ಸೋಮವಾರ ಹೊಸ ಬಟ್ಟೆ ತೆಗೆಸಿಕೊಂಡಿದ್ದಳು. ಈಗ ಅವಳೇ ಇಲ್ಲ. ನನಗೆ ಏನೂ ತೋಚುತ್ತಿಲ್ಲ’ ಎಂದು ಪ್ರಿಯಾ ಅವರ ತಂದೆ ಆರ್ಮುಗಮ್‌ ಕಣ್ಣೀರು ಹಾಕಿದರು.

‘ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಸುಮಾರಿಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದಳು. ಪ್ರತಿನಿತ್ಯ ರಾತ್ರಿ 8 ಗಂಟೆಗೆ ಸುಮಾರಿಗೆ ಮನೆಗೆ ಬರುತ್ತಿದ್ದಳು. ಶೋರೂಂನಲ್ಲಿ ಯಾವುದೇ ಸುರಕ್ಷತಾ ಕ್ರಮ ಇರಲಿಲ್ಲ. ಇದೇ ಕಾರಣಕ್ಕೆ ಅನಾಹುತ ಸಂಭವಿಸಿದೆ’ ಎಂದು ಆರೋಪಿಸಿದರು.

ಶೋರೂಂನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ. ಶೋರೂಂ ಒಳಗಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಯಿತೇ ಅಥವಾ ಶೋರೂಂನ ವಿದ್ಯುತ್‌ ಮಾರ್ಗದಲ್ಲಿ ಶಾರ್ಟ್‌ ಸರ್ಕಿಟ್‌ ಉಂಟಾಯಿತೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಶೋ ರೂಂನಲ್ಲಿ ಸುಮಾರು 25ಕ್ಕೂ ಅಧಿಕ ಎಲೆಕ್ಟ್ರಿಕ್‌ ಬೈಕ್‌ಗಳು ಇದ್ದವು. ಬೆಂಕಿ ಅವಘಡದಲ್ಲಿ ಎಲ್ಲಾ ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೈಕ್‌ಗಳ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ ಶೋ ರೂಂನಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಯಿತು. ಹೀಗಾಗಿ, ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

Donate Janashakthi Media

Leave a Reply

Your email address will not be published. Required fields are marked *