ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಪರಿಸ್ಥಿತಿ ಸುಧಾರಿಸಲು ಕೃತಕ ಮಳೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಪತ್ರ ಬರೆದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತವನ್ನು ಹೊಗೆಯ ಪದರಗಳು ಆವರಿಸಿವೆ. ಹೊಗೆಯನ್ನು ಹೋಗಲಾಡಿಸಲು ಕೃತಕ ಮಳೆಯೊಂದೇ ಪರಿಹಾರವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಇದು ಅವರ ನೈತಿಕ ಜವಾಬ್ದಾರಿಯಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರವು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ : ಮಣಿಪುರದಲ್ಲಿ ಜನಾಂಗೀಯ ಸಂಘರ್ಷ: ಎಸ್ಎಸ್ಪಿ ಸೇವೆಯಿಂದ ಅಮಾನತು
ಇದೇ ವೇಳೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಬಗ್ಗೆ ನಾನು 4 ಪತ್ರಗಳನ್ನು ಕಳುಹಿಸಿದ್ದರೂ ಕೃತಕ ಮಳೆ ಕುರಿತು ಒಂದೇ ಒಂದು ಸಭೆಯನ್ನು ಕರೆದಿಲ್ಲ ಎಂದು ಭೂಪೇಂದ್ರ ಯಾದವ್ ವಿರುದ್ಧ ಕಿಡಿಕಾರಿದರು.
ಕೃತಕ ಮಳೆ ಕುರಿತು ಸಭೆ ಕರೆಯುವಂತೆ ಪ್ರಧಾನಿ ಮೋದಿ ಅವರು ತಮ್ಮ ಪರಿಸರ ಸಚಿವರನ್ನು ಕೇಳಬೇಕು. ಕೃತಕ ಮಳೆಗೆ ಪರಿಹಾರ ಅಥವಾ ಸ್ಪಷ್ಟ ಮಾರ್ಗವನ್ನು ನೀಡಿ. ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ, ಅವರ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ನೋಡಿ : ಮೋದಿಯವರ ನೀತಿ : ಹಣಕಾಸು ಕಾಯ್ದೆಗಳ ದುರ್ಬಳಕೆ, ಸ್ವತಂತ್ರ ಮಾಧ್ಯಮಗಳ ಮೇಲೆ ದಬ್ಬಾಳಿಕೆ- WAN -IFRA, IAPA ವರದಿ