ಆಗ್ರಾ: ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಮೋಹನ್‌ಪುರ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಮಣ್ಣು ಕುಸಿದು ಮೂವರು ಮಹಿಳೆಯರು ಮತ್ತು 10 ವರ್ಷದ ಬಾಲಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ರಾಂಪುರ ಮತ್ತು ಕಾಟೌರ್ ಗ್ರಾಮದ ನಡುವೆ ಸೇತುವೆ ನಿರ್ಮಾಣಕ್ಕಾಗಿ ತೋಡಿದ ಹಳ್ಳದಿಂದ ಮಣ್ಣು ತೆಗೆದುಕೊಂಡು ಬರಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಭಾರ್ತಿ ಅವರು ನಾಲ್ವರ ಸಾವನ್ನು ಖಚಿತಪಡಿಸಿದ್ದಾರೆ.
ಒಂಬತ್ತು ಮಂದಿ ತಮ್ಮ ಮನೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಮಣ್ಣು ಅಗೆಯಲು ಹೋಗಿದ್ದು, 10 ಅಡಿ ಆಳದ ಕಂದಕದಲ್ಲಿದ್ದಾಗ ಮಣ್ಣು ಕುಸಿದು ಬಿದ್ದಿದೆ. ಆ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಈ ಹಳ್ಳ ತೋಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮೃತರನ್ನು ರಾಮ್ ಬೇಟಿ (29), ಪ್ರೇಮಾದೇವಿ (36), ಸರಸ್ವತಿ (27) ಮತ್ತು ಪಿಂಕಿ (10) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ರಾಂಪುರ ಗ್ರಾಮದವರು ಎಂದು ಮೋಹನಪುರ ಪೊಲೀಸ್ ಹೊರಠಾಣೆ ಪ್ರಭಾರಿ ನರೇಶ್ ಅವರು ತಿಳಿಸಿದ್ದಾರೆ. ಗಾಯಗೊಂಡ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಶ್ವರಿ (40), ಕೃಷ್ಣ (45), ಹೇಮಲತಾ (40), ಪ್ರೇಮ್ ಸಿಂಗ್ (32) ಮತ್ತು ಅರ್ಜುನ್(8) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ.