ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ 2

– ವಸಂತರಾಜ ಎನ್.ಕೆ.
ಟ್ರಂಪ್ ಮಾಧ್ಯಮಗಳ ಸಮೀಕ್ಷೆಗಳನ್ನು ಸುಳ್ಳಾಗಿಸಿ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ರಿಪಬ್ಲಿಕನ್ ಪಕ್ಷ ದೀರ್ಘ ಅವಧಿಯ ನಂತರ ಅಧ್ಯಕ್ಷರ, ಮತ್ತು ಕಾಂಗ್ರೆಸ್‌ನ (ಸೆನೆಟ್ ಮತ್ತು )ಎರಡೂ ಸದನಗಳಲ್ಲಿ ಬಹುಮತ ಗೆದ್ದಿದೆ. ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೂ, ಟ್ರಂಪ್ ಬೆಂಬಲಿಸುವ ‘ಮಗ’ (Make America Great Again) ಚಳುವಳಿಯ ವಿಜಯವೂ ಇದಾಗಿದೆ. ಹೀಗೇಕಾಯಿತು ? ಡೆಮೊಕ್ರಾಟಿಇಕ್ ಮತದಾರರರು, ಅಲ್ಪಸಂಖ್ಯಾತರು ಬಲಪಂಥಕ್ಕೆ ತಿರುಗಿದರೆ ? ಜನಾಂಗ-ದ್ವೇಷ, ಸ್ತ್ರೀ ದ್ವೇಷ, ಪ್ರತಿಗಾಮಿ ನಿಲುವುಗಳಿಗೆ ಕುಪ್ರಸಿದ್ಧವಾದ ‘ಮಗ’ಕ್ಕೆ ಜನ ಯಾಕೆ ಮನ್ನಣೆ ಕೊಟ್ಟರು? ಇದನ್ನು ಪರಿಶೀಲಿಸುವ ಎರಡು ಭಾಗಗಳಲ್ಲಿರುವ ಲೇಖನ. ಮೊದಲ ಬಾಗದಲ್ಲಿ ಚುನಾವಣಾ ಫಲಿತಾಂಶದ ವಿವರಗಳು ಇದ್ದರೆ, ಈ ಎರಡನೇ ಭಾಗದಲ್ಲಿ ಟ್ರಂಪ್ ಮತ್ತು ‘ಮಗ’ ಚಳುವಳಿಯ ಗೆಲುವಿನ ಕಾರಣಗಳನ್ನು ವಿಶ್ಲೇಷಿಸಲಾಗಿದೆ. 

ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಅಧ್ಯಕ್ಷ ಬೈಡನ್ ಎರಡನೆಯ ಅವಧಿಗೆ ಮುಂದುವರೆಯಲು ಬಯಸಿದ್ದರಿಂದ ಡೆಮೊಕ್ರಾಟಿಕ್ ಪಕ್ಷದಲ್ಲಿ ಅಭ್ಯರ್ಥಿಯನ್ನು ಚುನಾಯಿಸುವ ಪ್ರಾಥಮಿಕ ಚುನಾವಣೆಯ ಪ್ರಕ್ರಿಯೆ ಆರಂಭವಾಗಲಿಲ್ಲ. ರಿಪಬ್ಲಿಕನ್ ಅಭ್ಯರ್ಥಿಯನ್ನು ಚುನಾಯಿಸುವ ಪ್ರಾಥಮಿಕ ಚುನಾವಣೆಯ ಪ್ರಕ್ರಿಯೆ ನಡೆದು ಟ್ರಂಪ್ ಅಭ್ಯರ್ಥಿಯಾದರು. ಅಲ್ಲೂ ಪ್ರಾಥಮಿಕ ಚುನಾವಣೆಗಳಲ್ಲಿ ಸಂಪ್ರದಾಯದಂತೆ ಇದ್ದ ಸ್ಪರ್ಧಿಗಳ ನಡುವಿನ ಟಿವಿ ಚರ್ಚೆಗಳನ್ನು ಬಹಿಷ್ಕರಿಸುತ್ತಾ, ತಮ್ಮ ಪ್ರತಿಸ್ಪರ್ಧಿಗಳನ್ನು ಹೀಯಾಳಿಸುತ್ತಾ ಸದಾ ಸುದ್ದಿಯಲ್ಲಿದ್ದರು. ಆದರೆ ಬೈಡನ್ ಅವರ ಇಳಿವಯಸ್ಸು, ದೈಹಿಕ/ಮಾನಸಿಕ ಆರೋಗ್ಯ ಸ್ಥಿತಿ ಸುದ್ದಿಯಾಗುತ್ತಾ ವಿರೋಧಿ ಅಪಪ್ರಚಾರಕ್ಕೆ ಆಹಾರವಾದಾಗ ಡೆಮೊಕ್ರಾಟಿಕ್ ಪಕ್ಷ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಪಕ್ಷದ ಪ್ರಾಥಮಿಕ ಚುನಾವಣೆಗಳು ಅಥವಾ ಪಕ್ಷದ ಯಾವುದೇ ಆಯ್ಕೆ ಪ್ರಕ್ರಿಯೆ ಅನುಸರಿಸದೆ  ಕಮಲಾ ಅವರ ಆಯ್ಕೆ ನಡೆಯಿತು. ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ತಯಾರಿರಲಿಲ್ಲ. ಅವರ ಮೇಲೆ ಒತ್ತಡ ತಂದು ಹಿಂದೆ ಸರಿಸಲಾಯಿತು ಎಂಬ ಪುಕಾರು ಸಹ ಹರಡಿತು. ಇದು ಸಾಲದೆಂಬಂತೆ ಟ್ರಂಪ್ ಮೇಲೆ ಎರಡು ವಿಫಲ ಕೊಲೆ ಪ್ರಯತ್ನಗಳು ನಡೆದವು. ಇದು ಟ್ರಂಪ್ ಜನಪತ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತು. ಹೀಗೆ ಡೆಮೊಕ್ರಾಟಿಕ್ ಸ್ಪರ್ಧೆ ಮೊದಲಿಂದಲೂ ತೊಡಕುಗಳೊಂದಿಗೆ, ವಿವಾದಗಳೊಂದಿಗೆ ಆರಂಭವಾಯಿತು.

‘ಮಗ’  (Make America Great Again) ಚಳುವಳಿಯ ಪ್ರಭಾವ 

ಟ್ರಂಪ್ ಆಗಲೇ ಬೈಡನ್ ವಿರುದ್ಧ ತೀವ್ರ ಪ್ರಚಾರ ಆರಂಭಿಸಿದ್ದರು. 2016, 2020 ರಂತೆ ಈ ಬಾರಿ ಸಹ ಅವರ ಅಧಿಕೃತ ಘೋಷಣೆ “Make America Great Again” (MAGA, ‘ಮಗ’ – ಅಮೆರಿಕವನ್ನು ಮತ್ತೆ ಮಹಾನ್ ಆಗಿಸೋಣ). ‘ಮಗ’ ಹಿಂದಿನಂತೆ ಬರಿಯ ಘೋಷಣೆ ಆಗಿರದೆ ಈಗ ಒಂದು ಬಲಪಂಥೀಯ ಚಳುವಳಿಯಾಗಿತ್ತು, ಅಷ್ಟೇನೂ ಸುಸಂಘಟಿತವಲ್ಲದಿದ್ದರೂ ಹೆಚ್ಚು ಕಡಿಮೆ ಸಂಘಟನೆಯ ಸ್ವರೂಪ ಪಡೆದಿತ್ತು. ಟ್ರಂಪ್ 2020ರ ಚುನಾವಣೆಯಲ್ಲಿ ಸೋತಾಗ ಚುನಾವಣಾ ಫಲಿತಾಂಶದ ವಿರುದ್ಧ ಮಾತ್ರವಲ್ಲ, ಚುನಾಯಿತ ಅಧ್ಯಕ್ಷ ಬೈಡನ್ ಅವರನ್ನು ಅಧ್ಯಕ್ಷರಾಗಿ  ಘೋಷಿಸುವ ಅಧಿಕೃತ ಕಾಂಗ್ರೆಸ್ ಅಧಿವೇಶನದ ಮೇಲೆ ‘ಮಗ’ ಗುಂಪುಗಳು ಹಿಂಸಾಚಾರದ ದಾಳಿ ಮಾಡಿದ್ದವು. ಟ್ರಂಪ್ ಅಧಿಕಾರದಲ್ಲಿದ್ದಾಗಲೇ ಎರಡು ಬಾರಿ ಕಾಂಗ್ರೆಸ್ ನಲ್ಲಿ ಮಂಡಿತವಾದ ‘ದೋಷಾರೋಪಣೆ’ (ಇಂಫೀಚ್ ಮೆಂಟ್) ನಿರ್ಣಯದ ಪರವಾಗಿ ಕೆಲವು ರಿಪಬ್ಲಿಕನ್ ಸದಸ್ಯರು ಮತ ಚಲಾಯಿಸುವ ಸಾಧ್ಯತೆ ಕಂಡು ಬಂದಾಗ, ಅವರು ಪ್ರತ್ಯೇಕ ‘ಮಗ’ ಪಕ್ಷ ಕಟ್ಟುವ ಬೆದರಿಕೆ ಸಹ ಹಾಕಿದ್ದರು. ಈ ಬಾರಿಯ ಟ್ರಂಪ್ ಅವರ ಪ್ರಚಾರವನ್ನು ಅಧಿಕೃತ ರಿಪಬ್ಲಿಕನ್ ಪಕ್ಷಕ್ಕಿಂತ ಹೆಚ್ಚಾಗಿ ‘ಮಗ’ಗುಂಪುಗಳು ನಡೆಸಿದ್ದವು.

“Make America Great Again”ಮೊದಲ ಬಾರಿಗೆ 1980ರ ಅಧ್ಯಕ್ಷೀಯ ಚುನಾವಣೆಯ ತಮ್ಮ ಘೋಷವಾಕ್ಯವಾಗಿ ರೊನಾಲ್ಡ್ ರೇಗನ್ ಬಳಸಿದ್ದರು. ಆಗಿನಿಂದಲೇ ಅದು ಒಂದು ಬಲಪಂಥೀಯ ಘೋಷಣೆಯಾಗಿ ಬಿಟ್ಟಿತ್ತು. ‘ಅಮೆರಿಕ ಫಸ್ಟ್’ ಇದರ ಇನ್ನೊಂದು ರೂಪ. ‘ಅಮೆರಿಕವನ್ನು ಮತ್ತೆ ಮಹಾನ್ ಆಗಿಸೋಣ’ ಎಂಬ ಘೋಷಣೆಯ ಹಿಂದೆ ‘ಈಗ ಅಮೆರಿಕ ಮಹಾನ್ ಆಗಿ ಉಳಿದಿಲ್ಲ’ ಅದಕ್ಕೆ ಕಾರಣ – ಈ ಬಡ ದೇಶಗಳಿಂದ ಬರುವ ವಲಸೆಗಾರರು, ಮುಸ್ಲಿಮರು, ಕರಿಯರು, ಲ್ಯಾಟಿನೊ ಇತ್ಯಾದಿ ಅಲ್ಪಸಂಖ್ಯಾತರು;ಚೀನಾ, ಅಮೆರಿಕ-ವಿರೋಧಿ ಭಯೋತ್ಪಾದಕರು, ಅಮೆರಿಕದ ವ್ಯವಸ್ಥೆ ನಿಯಂತ್ರಿಸುತ್ತಿರುವ ‘ಉದಾರವಾದಿ’ ‘ಪ್ರತಿಷ್ಟಿತರು’, ಅವರನ್ನು  ಬೆಂಬಲಿಸುವ ಬುದ್ಧಿಜೀವಿಗಳು, ವೃತ್ತಿಪರರು, ‘ಉದಾರವಾದಿ’ ಮಾಧ್ಯಮಗಳು – ಎಂಬ ಭಾವನೆಯಿದೆ. ಇವರನ್ನೆಲ್ಲ ಮಟ್ಟ ಹಾಕಿದರೆ ‘ಅಮೆರಿಕವನ್ನು ಮತ್ತೆ ಮಹಾನ್’ ಆಗಿಸಬಹುದು ಎಂಬ ಅಬ್ಬರದ ಪ್ರಚಾರವನ್ನು ‘ಮಗ’ ಚಳುವಳಿ ಮಾಡುತ್ತಿದೆ. ಇದು ಒಂದು ಕಡೆ ವಲಸೆಗಾರರು, ಕರಿಯರು, ಮುಸ್ಲಿಮರು ಇತ್ಯಾದಿ ಅಲ್ಪಸಂಖ್ಯಾತರ ಮೇಲೆ ಬಿಳಿಯ ಮಧ್ಯಮ-ಕೆಳಮಧ್ಯಮ ವರ್ಗದವರನ್ನು ಎತ್ತಿ ಕಟ್ಟುವ ಘೋಷಣೆ. ಇನ್ನೊಂದು ಕಡೆ ಅಮೆರಿಕದ ‘ವ್ಯವಸ್ಥೆ ನಡೆಸುತ್ತಿರುವ ಹಣಕಾಸು ಸಂಸ್ಥೆಗಳು, ಮಿಲಿಟರಿ-ಕೈಗಾರಿಕಾ ಸಂಕೀರ್ಣ, ಅತಿ ಶ್ರೀಮಂತರು ನಿಮ್ಮನ್ನು ಲೂಟಿ ಮಾಡುತ್ತಿದ್ದಾರೆ. ನಮ್ಮ ಕೈಗಾರಿಕೆಗಳನ್ನು, ನಿಮ್ಮ ಉದ್ಯೋಗಗಳನ್ನು ನಾಶ ಮಾಡಿ ವಿದೇಶಕ್ಕೆ ಕಳಿಸಿದ್ದಾರೆ. ಮಿಲಿಟರಿ-ಕೈಗಾರಿಕಾ ಸಂಕೀರ್ಣದ ಸೂಪರ್ ಲಾಭಕ್ಕಾಗಿ ಜಗತ್ತಿನಲ್ಲಿ ಯುದ್ಧ ಹೂಡುತ್ತಿದ್ದಾರೆ. ಯುದ್ಧಕೋರ ಭ್ರಷ್ಟ ವಿದೇಶ ನಾಯಕರಿಗೆ ಬಿಲಿಯಗಟ್ಟಲೆ ಡಾಲರುಗಳ ಹಣ  ಪೋಲು ಮಾಡುತ್ತಿದ್ದಾರೆ. ಟ್ರಂಪ್ (ಸ್ವತಃ ಒಬ್ಬ ಅತಿ ಶ್ರೀಮಂತ ನಾಗಿದ್ದು ಪ್ರತಿಷ್ಟಿತರ ಗುಂಪಿಗೆ ಸೇರಿದ್ದರೂ, ಎಲಾನ್ ಮಸ್ಕ್ ಮತ್ತು ಇತರ ಹಲವು ಬಿಲಿಯಾಧೀಶರು ಅವರ ಬೆಂಬಲಕ್ಕೆ ನಿಂತಿದ್ದರು) ಆತ ಈ ‘ವ್ಯವಸ್ಥೆ’ಯ ಹೊರಗಿನವನು. ಆತ ಮಾತ್ರ ಈ, ‘ವ್ಯವಸ್ಥೆ’ಯ ವಿರುದ್ಧ ಹೋರಾಡಬಲ್ಲ. – ಈ ಪ್ರಚಾರವನ್ನು ‘ಮಗ’ ಗುಂಪುಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಮೊದಲನೆಯದು ಹಸಿ ಸುಳ್ಳು, ಪೂರ್ವಾಗ್ರಹ, ಅನ್ಯರ ಬಗ್ಗೆ ಗುಮಾನಿ./ದ್ವೇಷದ ನಕಾರಾತ್ಮಕ ಭಾವನೆಗಳ ಮೇಲೆ ಆಧಾರಿತವಾಗಿದೆ. ಆದರೆ ಜನರ ಸಂಕಷ್ಟಗಳಿಗೆ ಕಾರಣವಾದ ವ್ಯವಸ್ಥೆ ಬಗ್ಗೆ ಹೇಳುತ್ತಿರುವ ಎರಡನೆಯ ಭಾಗ (ಟ್ರಂಪ್ ಈ ‘ವ್ಯವಸ್ಥೆ’ಯಹೊರಗಿನವನುಮತ್ತು ಅದರ ವಿರುದ್ಧ ಹೋರಾಡುತ್ತಾನೆ ಎಂಭುದನ್ನು ಬಿಟ್ಟರೆ)  ಅಕ್ಷರಶಃ ನಿಜ. ಹಾಗಾಗಿ ‘ಮಗ’ ಪ್ರಚಾರಕ್ಕೆ ಹಿಂದೆಂದಿಗಿಂತಲೂ ಸ್ಪಂದನೆ ಸಿಕ್ಕಿದೆ.

ಇದನ್ನೂ ಓದಿಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ – 01

ಕಳೆದ 4 ವರ್ಷಗಳಲ್ಲಿ ಕೊವಿದ್ ಕುಸಿತಕ್ಕೆ ನೆರವಿನ ಹೆಸರಿನಲ್ಲಿ ಒಂದು ಕಡೆ ಕಾರ್ಪೊರೆಟ್ ಗೆ ಭಾರೀ ಹಣ ಹರಿದರೆ, ಇನ್ನೊಂದು ಕಡೆ ಜೀವನಾವಶ್ಯಕ ವಸ್ತುಗಳು, ಮನೆ, ವಿದ್ಯುತ್-ನೀರು, ಶಿಕ್ಷಣ, ಆರೋಗ್ಯ ಇತ್ಯಾದಿ ಸೇವೆಗಳು ಅತಿ ದುಬಾರಿಯಾಗಿವೆ. ತೆರಿಗೆಗಳು ವಿಪರೀತ ಹೆಚ್ಚಾಗಿದ್ದು ಜನರನ್ನು ಕಾರ್ಪೊರೆಟ್ ಗಳು ಲೂಟಿ ಹೊಡೆಯುತ್ತಿವೆ. ಜೀವನ ವೆಚ್ಚದ ಬಿಕ್ಕಟ್ಟು ತೀವ್ರವಾಗುತ್ತಿದೆ. ಮತ್ತೊಂದು ಕಡೆ ಬೈಡನ್ ಸರಕಾರ ಸೃಷ್ಟಿಸಿದ ಉಕ್ರೇನ್ ಯುದ್ಧಕ್ಕೆ ನೂರಾರು ಬಿಲಿಯನ್ ಡಾಲರು ಹಣ, ಮಿಲಿಟರಿ ಉಪಕರಣ ಹರಿದು ಹೋಗುತ್ತಿದೆ. ಪಶ್ಚಿಮ ಏಶ್ಯಾದಲ್ಲೂ ಪ್ಯಾಲೆಸ್ಟೆನ್ನರ ಜನಾಂಗ ವಧೆಯಲ್ಲಿ ತೊಡಗಿರುವ ಯುದ್ಧಕೋರ ಇಸ್ರೇಲನ್ನು ತಡೆಯುವುದಿರಲಿ, ಅದಕ್ಕೆ ಕುಮ್ಮಕ್ಕು ಕೊಡಲಾಗುತ್ತಿದೆ. ಇವೆರಡೂ ಯುದ್ಧಗಳು ಗೆಲ್ಲಲಾಗದವು, ಈ ಯುದ್ಧಗಳಲ್ಲಿ ಯು.ಎಸ್ ಗೆ ಸೋಲು ಹೆಚ್ಚು ಕಡಿಮೆ ಖಚಿತವಾಗುತ್ತಿದ್ದು, ಜಗತ್ತಿನಲ್ಲಿ ‘ಅಮೆರಿಕದ ಮರ್ಯಾದೆ ಹೋಗುತ್ತದೆ’ ಮಾತ್ರವಲ್ಲ, ಅಣು ಯುದ್ಧದ ಆತಂಕ ಸಹ ಕಾಡುತ್ತಿದೆ. ದೇಶದೊಳಗಿನ ನೂರೆಂಟು ಸಮಸ್ಯೆಗಳನ್ನು ಬಿಟ್ಟು ಅಮೆರಿಕದ ಹಿತಾಸಕ್ತಿಗೆ ‘ಏನೂ ಪ್ರಯೋಜನವಿಲ್ಲದ’ ಯುದ್ಧದಲ್ಲಿ ಏಕೋಮನಸ್ಸಿನಿಂದ ತೊಡಗಿರುವ ಬೈಡನ್ ಸರಕಾರದ ಬಗ್ಗೆ ಜನತೆಗೆ ತೀವ್ರ ಆಕ್ರೋಶವಿತ್ತು.ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ವೃತ್ತಿಪರ ಪ್ರತಿಷ್ಟಿತ ರಾಜಕಾರಣಿಗಳ ಬಗ್ಗೆ ತೀವ್ರ ಅಪನಂಭಿಕೆ ಇತ್ತು.

ಟ್ರಂಪ್ ಮತ್ತು ಅವರ ‘ಮಗ’ ಪ್ರಚಾರಕರು ಜನತೆಯನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ತಮ್ಮದೇ ಆದ (ಬಹುಶಃ ಜಾರಿ ಮಾಡಲಾಗದ, ಜಾರಿ ಮಾಡಲು ಪ್ರಯತ್ನಿಸಲು ಹೋಗದ) ನಿರ್ದಿಷ್ಟ ಕ್ರಮಗಳನ್ನು ವಿಶ್ವಾಸ ಬರುವಂತೆ ಘೋಷಿಸುತ್ತಾರೆ.  ದೇಶೀಯ ತೈಲ ಉತ್ಪಾದನೆ ಹೆಚ್ಚಿಸುವುದರ ಮೂಲಕ ಮತ್ತು ಇತರ ಕಟ್ಟುನಿಟ್ಟಿನ ಕ್ರಮಗಳ ಮೂಲಕ ತೈಲ ಸೇರಿದಂತೆ ಎಲ್ಲ ಬೆಲೆಗಳನ್ನು ಇಳಿಸುತ್ತೇನೆ. ವಿದೇಶೀ (ಪ್ರಮುಖವಾಗಿ ಚೀನಿ) ಉತ್ಪನ್ನಗಳ ಮೇಲೆ ಶೇ.20-60 ಆಮದು ಸುಂಕ ಹೇರಿ, ಸರಕು ಉತ್ಪಾದನೆಗೆ ರಿಯಾಯಿತಿ ಕೊಟ್ಟು, ಉದ್ಯೋಗ ರಫ್ತು ಮಾಡುವ ಕಂಪನಿಗಳನ್ನು ದಂಡಿಸಿ ರಫ್ತಾದ ಎಲ್ಲ ಉದ್ಯೋಗಗಳನ್ನು ವಾಪಸು ತರುತ್ತೇನೆ. ನಿಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವ ಬಡ ದೇಶಗಳಿಂದ ಬಂದಿರುವ 1 ಕೋಟಿ ವಲಸೆ ಕಾರ್ಮಿಕರನ್ನು ಮಿಲಿಟರಿ-ಪೋಲಿಸ್ ಬಳಸಿ ದೇಶದಿಂದ ಒದ್ದೋಡಿಸಿ ಸಹ ಉದ್ಯೋಗಗಳು ಹೆಚ್ಚಾಗುತ್ತವೆ.  ಉದ್ಯಮಿಗಳಿಗೆ  ತೆರಿಗೆ ವಿನಾಯಿತಿ ಹೆಚ್ಚಿಸಿದರೆ, ಅವರು ಹೆಚ್ಚಿನ ಹೂಡಿಕೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ. ನಮ್ಮ ರಫ್ತಿನ ಮೇಲೆ ಸುಂಕ ಹಾಕಿದರೆ, ತಮ್ಮ ವಿದೇಶೀ ವ್ಯಾಪಾರದಲ್ಲಿ ಡಾಲರ್ ಬಳಸದಿದ್ದರೆ (ಬ್ರಿಕ್ಸ್ ದೇಶಗಳಿಂದ ನಿರ್ಡಾಲರೀಕರಣದ ಬೆದರಿಕೆಯ ಹಿನ್ನೆಲೆಯಲ್ಲಿ) ಅಂತಹ ದೇಶಗಳು ಮುಳುಗಿ ಹೋಗುವ ಆರ್ಥಿಕ ದಿಗ್ಬಂಧನ ಹಾಕುತ್ತೇನೆ ಎಂದೆಲ್ಲ ಆಶ್ವಾಸನೆ ಕೊಡುತ್ತಾರೆ.  (ಇವು ಮೋದಿಯ “ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ, ಪ್ರತಿ ವರ್ಷ 2 ಕೋಟಿ  ಉದ್ಯೋಗ”ದ ಘೋಷಣೆಗಳಂತೆ.) 2016ರಲ್ಲೂ ಹೆಚ್ಚು ಕಡಿಮೆ ಇವೇ ಘೋಷಣೆಗಳನ್ನು ಕೊಡಲಾಗಿತ್ತು. 2016-20 ಅವಧಿಯಲ್ಲಿ ಯಾಕೆ  ಇವನ್ನು ಜಾರಿಗೊಳಿಸಲಿಲ್ಲ? ಅಂತ ಮತದಾರರೂ ಕೇಳುವುದಿಲ್ಲ, ಡೆಮೊಕ್ರಾಟ್ ಪ್ರಚಾರಕರೂ ಕೇಳುವುದಿಲ್ಲ. ಹಾಗಾಗಿ ಇಂದಿನ ದುರ್ಭರ ಆರ್ಥಿಕ ಪರಿಸ್ಥಿತಿಯಲ್ಲಿ  ಇವು ಮತ್ತೆ ಆಪ್ಯಾಮಾನವಾಗಿ ಕಾಣಿಸುತ್ತವೆ.  ಉಕ್ರೇನ್ ಯುದ್ಧವನ್ನು 24 ಗಂಟೆಗಳಲ್ಲಿ ನಿಲ್ಲಿಸುತ್ತೇನೆ. ನಾನು ಅಧ್ಯಕ್ಷನಾಗಿದ್ದರೆ ಪುಟಿನ್ ಉಕ್ರೇನಿನ ದಾಳಿ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ಇಸ್ರೇಲ್ಯುದ್ಧ ಸಹ ನಿಲ್ಲಿಸುತ್ತೇನೆ ಎನ್ನುತ್ತಾರೆ ಟ್ರಂಪ್. ಅವರ ಅಧಿಕಾರಾವಧಿಯಲ್ಲಿ ಯಾವುದೇ ಹೊಸ ಯುದ್ಧ ಆರಂಭಿಸದ್ದು ಈ ಹೇಳಿಕೆಯ ಬಗ್ಗೆ ಜನರಲ್ಲಿ ವಿಶ್ವಾಸ ಹುಟ್ಟಿಸಿದೆ.

ಟ್ರಂಪ್ ಅವರ ಈ ಪ್ರಚಾರ ಪ್ರಹಾರವನ್ನು ಡೆಮೊಕ್ರಾಟಿಕ್ ಪಕ್ಷ ಮತ್ತು ಕಮಲಾ ಪ್ರಚಾರ ಯಂತ್ರ ಸಮರ್ಥವಾಗಿ ಎದುರಿಸಲಿಲ್ಲ. ಜನರ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರ ಸೂಚಿಸುವ, ಸೂಪರ್ ಶ್ರೀಮಂತರಿಗೆ ಭಾರೀ ತೆರಿಗೆ ವಿನಾಯಿತಿ ಕೊಟ್ಟ ಜನತೆಯ ಜೀವನ ವೆಚ್ಚದ ಬಗ್ಗೆ ಏನೂ ಮಾಡದ, ಕೊವಿದ್ ಕಾಲದಲ್ಲಿ ಭಾರೀ ಸಾವು-ನೋವುಗಳನ್ನು ತಡೆಯಲು ಸಾಧ್ಯವಾಗದ ಟ್ರಂಪ್ 2016-20ರ ಆಡಳಿತದ ವೈಫಲ್ಯವನ್ನು ಬಯಲು ಮಾಡುವ ಬದಲು, ಜೀವನ ವೆಚ್ಚದ ಸಮಸ್ಯೆಗಳೇ ಇಲ್ಲ ಎಂಬ ನಿರಾಕರಣೆಯ ಹಾದಿಯನ್ನು ಕಮಲಾ ಪ್ರಚಾರ ಹಿಡಿಯಿತು.  ಶೇರು ಮಾರುಕಟ್ಟೆ ಸುಗ್ಗಿಯಲ್ಲಿದೆ, ನಿರುದ್ಯೋಗ ದರ ರೆಕಾರ್ಡ್ ಇಳಿಕೆ ಕಂಡಿದೆ ಎಂಬ ನಿಲುವು ಜನರ ಸ್ವಂತ ಅನುಭವಗಳಿಗೆ ತಾಳೆಯಾಗದೆ ಕಮಲಾ ಕುರಿತು ಯಾವುದೇ ವಿಶ್ವಾಸ ಮೂಡಲಿಲ್ಲ. ಆರ್ಥಿಕ ವಿಷಯಗಳನ್ನು ಬಿಟ್ಟು ಬರಿಯ ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು ಅವರ ಪ್ರಚಾರ ಒತ್ತು ಕೊಟ್ಟಿತು. ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಮಹಿಳೆಯರ ಗರ್ಭಪಾತದ ಹಕ್ಕಿನ ಫೆಡರಲ್ ಕಾನೂನು ವಜಾ ಆಗಿದ್ದನ್ನು, ಮತ್ತೆ ಸ್ಥಾಪಿಸುವುದನ್ನು ಕಮಲಾ ಪ್ರಚಾರ ಮುಖ್ಯ ಪ್ರಚಾರ ವಿಷಯ ಮಾಡಿತ್ತು. ಟ್ರಂಪ್ ಅವರ ಜನಾಂಗೀಯ, ಧಾರ್ಮಿಕ ಅಲ್ಪಸಂಖ್ಯಾತರನ್ನು ಹೀಯಾಳಿಸುವ ಧೋರಣೆಯ ವಿರುದ್ಧ ಅವರನ್ನು ಅಣಿ ನೆರೆಸಲು ಯತ್ನಿಸಿತು. ಸಂಘಟಿತ ಕಾರ್ಮಿಕರು, ಮಧ್ಯಮ ವರ್ಗದ ದೊಡ್ಡ ವಿಭಾಗಗಳಲ್ಲದೆ ಡೆಮೊಕ್ರಾಟಿಕ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರಲ್ಲದೆ ಮಹಿಳೆಯರು, ಕರಿಯರು, ಲ್ಯಾಟಿನೊಗಳು, ಮುಸ್ಲಿಮರು, ವಲಸಿಗರು ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕೈಹಿಡಿಯುತ್ತಾರೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಅದು ಕೈಗೂಡಲಿಲ್ಲ.

ಇಸ್ರೇಲಿನ ಜನಾಂಗ ವಧೆಯನ್ನು ಖಂಡಿಸದ ಕಮಲಾ ಗೆ ಬುದ್ಧಿ  ಕಲಿಸಲು ಮುಸ್ಲಿಮರು, ಪ್ರಗತಿಪರರು, ಯುವಜನರು ಮತ ಹಾಕಲಿಲ್ಲ ಅಥವಾ ಸ್ವತಂತ್ರ ಅಭ್ಯರ್ಥಿಗಳಿಗೆ ಹಾಕಿದರು. ಉದಾಹರಣೆಗೆ ಕಳೆದ ಬಾರಿ ಮಿಶಿಗನ್ ರಾಜ್ಯದಲ್ಲಿ ಕಮಲಾ ಸೋತಿದ್ದರೂ, ಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಪ್ಯಾಲೆಸ್ಟೈನ್ ಮಹಿಳೆ ರಶೀದಾ ಶೇ.70 ಮತ ಪಡೆದು ಗೆಲ್ಲುತ್ತಾರೆ. 10 ರಾಜ್ಯಗಳಲ್ಲಿ ಮಹಿಳೆಯರ ಗರ್ಭಪಾತ ಹಕ್ಕು ಕಾನೂನು ಇರಬೇಕೆ ಎಂಬುದು ಈ ಚುನಾವಣೆಯಲ್ಲಿ ಜನಮತಸಂಗ್ರಹದಲ್ಲಿ 9 ರಾಜ್ಯಗಳಲ್ಲಿ ಇರಬೇಕು ಎಂದು ಮತ ನೀಡಿದ್ದಾರೆ. ಇವುಗಳಲ್ಲಿ ಹಲವಲ್ಲಿ ಟ್ರಂಪ್ ಭಾರೀ ಬಹುಮತದಿಂದ ಗೆದ್ದಿದ್ದಾರೆ. ಟ್ರಂಪ್ ಮತ್ತು ‘ಮಗ’  ಗರ್ಭಪಾತ ಹಕ್ಕು ಕಾನೂನು ಇರಬಾರದು ಎಂದು ಅಭಿಪ್ರಾಯ ಪಡುತ್ತಾರೆ. ಇದರರ್ಥ ಟ್ರಂಪ್ ಮತ ನೀಡಿದ್ದಾರೆ ಎಂದ ಮಾತ್ರಕ್ಕೆ ಅವರ (ಜನಾಂಗ ದ್ವೇಷಿ, ಮಹಿಳಾ-ದ್ವೇಷಿ ಅಥವಾ ಯಾವುದೇ) ಎಲ್ಲ ಅಭಿಪ್ರಾಯಗಳನ್ನು ಒಪ್ಪುತ್ತಾರೆ ಎಂದಲ್ಲ, ಅವರು ಜೀವನ ವೆಚ್ಚ, ಆರ್ಥಿಕ ವಿಷಯಗಳ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಕಮಲಾ ಅದರ ಬಗ್ಗೆ ಮಾತಾಡಿಲ್ಲ ಎಂಬುದೇ ಈ ಫಲಿತಾಂಶಕ್ಕೆ ಮುಖ್ಯ ಕಾರಣ. ಆದರೆ ಕಮಲಾ ಕರಿಯ-ಏಶ್ಯನ್ ಮಹಿಳೆ ಆಗಿರುವುದು ಅವರ ಸೋಲಿನಲ್ಲಿ ಯಾವುದೇ ಪಾತ್ರ ವಹಿಸಿಲ್ಲವೆಂದು ಹೇಳುವಂತಿಲ್ಲ.

ಜನರ ಜೀವನ ವೆಚ್ಚ, ಆರ್ಥಿಕ ಪರಿಸ್ಥಿತಿ ಗಳ ಜತೆಗೆ  ಜನರ ಅವೈಜ್ಞಾನಿಕ, ಅತಾರ್ಕಿಕ, ಜನಾಂಗೀಯ, ಧಾರ್ಮಿಕ, ಪುರುಷಾಹಂಕಾರದ ಭಾವನೆಗಳನ್ನು ಬಳಸುವ ಸಂಕಥನಗಳನ್ನು ಟ್ರಂಪ್ ಪ್ರಚಾರ ಬಳಸಿತು. ವಲಸೆ ಕಾರ್ಮಿಕರ ಪೆಡಂಭೂತವನ್ನು ಟ್ರಂಪ್ ಪ್ರಚಾರ ಪರಿಣಾಮಕಾರಿಯಾಗಿ ಬಳಸಿತು.ಆದರೆ ಇದು ತಮ್ಮ ಮತಗಳನ್ನು ಕಾಪಾಡಿಕೊಳ್ಳಲು ಕಾರಣವಾಯಿತೇ ವಿನಹ, ಇದರರ್ಥ ಡೆಮೊಕ್ರಾಟಿಕ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರು ಮತ್ತು ಅಣಿ ನೆರೆಸಬೇಕೆಂದಿದ್ದ ವಿಭಾಗಗಳು ಟ್ರಂಪ್ ಪ್ರಚಾರಕ್ಕೆ ಮರುಳಾದವು ಎಂದಲ್ಲ. ಡೆಮೊಕ್ರಾಟಿಕ್ ಪಕ್ಷ ಮತಗಳು ಟ್ರಂಪ್ ಗೆ ಹೋಗಲಿಲ್ಲ. ಬದಲಾಗಿ ದೊಡ್ಡ ಪ್ರಮಾಣದಲ್ಲಿ ಟ್ರಂಪ್ ಗೆ ಮತ ಹಾಕುವ ಮನಸ್ಸಿಲ್ಲದ ಡೆಮೊಕ್ರಾಟಿಕ್ ಪಕ್ಷದ ಬೆಂಬಲಿಗ ಮತ್ತು ಸ್ವತಂತ್ರ ಜನವಿಭಾಗಗಳು ಮತದಾನಕ್ಕೆ ಬರಲೇ ಇಲ್ಲ ಎಂದು ಮತದಾನದವಿಶ್ಲೇಷಣೆತೋರಿಸಿದೆ.

2020ರಲ್ಲಿ 15.8 ಕೋಟಿ ಜನ ಮತದಾನ ಮಾಡಿದ್ದರೆ, ಈ ಬಾರಿ ಅದು 14.5 ಕೋಟಿಗೆ ಇಳಿಯಿತು. ಮತದಾನಕ್ಕೆ ಅರ್ಹರಾಗಿದ್ದವರಲ್ಲಿ 2020ರಲ್ಲಿ 65.9% ಮತದಾನ ಮಾಡಿದರೆ, ಈ ಬಾರಿ ಅದು ಶೇ. 58.2 ಕ್ಕೆ ಇಳಿಯಿತು. 2020ರಲ್ಲಿ 1.2 ಕೋಟಿ ಅರ್ಹ ಮತದಾರರು ರಿಜಿಸ್ಟರ್ ಮಾಡಿರಲಿಲ್ಲ. ಈ ಬಾರಿ ಅದು 1.9 ಕೋಟಿಗೆ ಏರಿತು. ಟ್ರಂಪ್ ಈ ಬಾರಿ ಸಹ ಸರಿಸುಮಾರು 2020ರಷ್ಟೇ ಮತ ಗಳಿಸಿದ್ದಾರೆ. ಆದರೆ ಕಮಲಾ ಬೈಡನ್ 2020ರಲ್ಲಿ ಗಳಿಸಿದ್ದಕ್ಕಿಂತ (8.12  ಕೋಟಿ) 1. ಕೋಟಿ ಕಡಿಮೆ ಮತ ಗಳಿಸಿದ್ದಾರೆ.  ಮತದಾನದಲ್ಲಿ ಆದ 1.3 ಕೋಟಿ ಕಡಿತದಲ್ಲಿ 1.1 ಕೋಟಿ ಸಿಂಹಪಾಲು ಕಮಲಾ ಅವರದ್ದಾಗಿತ್ತು.

ವಿವಿಧ ಜನವಿಭಾಗಗಳ ಮತಗಳಲ್ಲಿ ಇಬ್ಬರ ಪಾಲು ವಿಶ್ಲೇಷಿಸಿದರೆ ಈ ಅಂಶಗಳು ಬೆಳಕಿಗೆ ಬಂದಿವೆ:

* ಕಾರ್ಮಿಕರ ಮತಗಳು ಟ್ರಂಪ್ ಗೆ ಹೋಗಲಿಲ್ಲ. ಆದರೆ ಕಡಿಮೆ ಆದಾಯದ, ಕಡಿಮೆ ಶೈಕ್ಷಣಿಕ ಅರ್ಹತೆ ಇರುವ, ನಿರುದ್ಯೋಗಿ ಕಾರ್ಮಿಕರು ಮತ ಹಾಕಲಿಲ್ಲ.

* ಮಹಿಳೆಯರಲ್ಲಿ ಮದುವೆಯಾಗದ ಯುವತಿಯರಲ್ಲಿ ಟ್ರಂಪ್ ಮತ ಕಳೆದುಕೊಂಡರೆ, ಮದುವೆಯಾದ ವಯಸ್ಕ ಮಹಿಳೆಯರಲ್ಲಿ ಟ್ರಂಪ್ ಮತ ಗಳಿಕೆ ಹೆಚ್ಚಾಯಿತು. ಅಂದರೆ ಮದುವೆಯಾಗದ ಯುವತಿಯರಿಗೆ ಗರ್ಭಪಾತ ಕಾನೂನಿನ ವಿಷಯ ಮುಖ್ಯವಾದರೆ, ವಯಸ್ಕ ಮಹಿಳೆಯರಿಗೆ ಆರ್ಥಿಕ ವಿಷಯ ಮುಖ್ಯವಾಯಿತು.

* ಯುವಜನರಲ್ಲಿ ಮತದಾನದ ಪ್ರಮಾಣವೇ ಬಹಳ ಕಡಿಮೆಯಾಯಿತು. ಹೊಸ ಮತದಾರರು ಬಹುಶಃ ಪ್ರತಿಭಟನೆಯಾಗಿ ಮತದಾನಕ್ಕೆ ರಿಜಿಸ್ಟರ್ ಮಾಡಲೇ ಇಲ್ಲ.

* ಕರಿಯರು, ಲ್ಯಾಟಿನೊಗಳಲ್ಲಿ ಸಹ ಕಡಿಮೆ ಶೈಕ್ಷಣಿಕ ಅರ್ಹತೆ ಇರುವವರಲ್ಲಿ ಟ್ರಂಪ್ ಮತಗಳಿಕೆ ಹೆಚ್ಚಾಯಿತು, ಕಮಲಾ ಮತಗಳಿಕೆ ಕಡಿಮೆಯಾಯಿತು.

* ಕಡಿಮೆ ಆದಾಯದ, ಕಡಿಮೆ ಶೈಕ್ಷಣಿಕ ಅರ್ಹತೆ ಇರುವ ಬಿಳಿಯರಲ್ಲಿ ಕಮಲಾ ಮತಗಳಿಕೆ ಕಡಿಮೆಯಾಯಿತು.

ಇದರ ಒಟ್ಟು ಸಾರಾಂಶವೆಂದರೆ, ಜನಾಂಗೀಯ-ಧಾರ್ಮಿಕ ಅಲ್ಪಸಂಖ್ಯಾತರಲ್ಲಿ (ಕರಿಯರು, ಲ್ಯಾಟಿನೊ, ಮುಸ್ಲಿಮರು, ಏಶ್ಯನ್ನರು), ಮಹಿಳೆಯರಲ್ಲಿ , ಯುವಜನರಲ್ಲಿ, ನಗರವಾಸಿಗಳಲ್ಲಿ, ಪದವೀಧರರಲ್ಲಿ ಬೈಡನ್ ಗಳಿಸಿದ್ದ ಬಹುಮತದಲ್ಲಿ ಕಮಲಾ ಗೆ ಸಾಕಷ್ಟು ಕುಸಿತ ಕಂಡಿತು,ಹೆಚ್ಚಾಗಿ ಮತದಾನದಲ್ಲಿ ಭಾಗವಹಿಸದ್ದರಿಂದ. ಅದೇ ಸಮಯದಲ್ಲಿ ಬಿಳಿಯರಲ್ಲಿ (ಮಹಿಳೆಯರನ್ನೂ ಸೇರಿಸಿ), ಪದವಿಧರರಲ್ಲದವರಲ್ಲಿ ಟ್ರಂಪ್ ಬಹುಮತ ಹೆಚ್ಚಿತು. ಇದರಿಂದಾಗಿ ಮತದಾರರು ಬಲಪಂಥದತ್ತ ಅಥವಾ ಫ್ಯಾಸಿಸಂ ನತ್ತ ವಾಲಿಲ್ಲ. ಆರ್ಥಿಕ, ಜೀವನೋಪಾಯದ ಪ್ರಶ್ನೆಗಳನ್ನು ಎತ್ತದ ಪರಿಹರಿಸದ ಪಕ್ಷದ, ಸರಕಾರಕ್ಕೆ ಶಿಕ್ಷೆ ನೀಡಿದ್ದಾರೆ ಎನ್ನಬಹುದು

**************

 

 

Donate Janashakthi Media

Leave a Reply

Your email address will not be published. Required fields are marked *