ರಾಯಚೂರು : “ನಮ್ಮ ಹೋರಾಟ ಬಿಜೆಪಿ ವಿರುದ್ದವಲ್ಲ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಆಧಿಕಾರಕ್ಕೆ ತರುವ ಉದ್ದೇಶವಿದೆ. ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ನಿರೀಕ್ಷೆಯಿದೆ” ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಈ ಕುರಿತು ಸೋಮವಾರ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ಬಿ ವೈ ವಿಜಯೇಂದ್ರ ಇರುವವರೆಗೂ ನಾನು ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ವಿಜಯೇಂದ್ರ ಅಧ್ಯಕ್ಷ ಎಂದು ಒಪ್ಪಿಲ್ಲ, ಒಪ್ಪುವುದಿಲ್ಲ. ಅವರ ಸ್ಥಾನಮಾನದ ಕೆಲಸಕ್ಕೆ ನಾನು ವಿರೋಧ ಮಾಡಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವರಿಷ್ಠರು ತೀರ್ಮಾನಿಸುತ್ತಾರೆ. ಬಹಿರಂಗವಾಗಿ ನಾನು ಕೆಲವೊಂದು ವಿಷಯಗಳನ್ನ ಹೇಳಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆದಿವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು ನೇಮಕಗೊಂಡ ನಂತರ ಕಮಲ ಪಾಳಯದಲ್ಲಿ ವಿಜಯೇಂದ್ರ ಅವರ ವಿರೋಧಿ ಬಣ ಬಲಿಷ್ಠವಾಗಿದ್ದು, ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈಗಾಗಲೇ ಹಲವು ಗೌಪ್ಯ ಸಭೆಗಳನ್ನು ಮಾಡಿ ತಮ್ಮ ಬೇಡಿಕೆಯನ್ನು ಹೈಕಮಾಂಡ್ ನಾಯಕರಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.