ವಿಜಯಪುರ : ಸದ್ಯ ರಾಜ್ಯದಲ್ಲಿ ಭುಗಿಲೆದ್ದಿರುವ ವಕ್ಫ್ ವಿವಾದಕ್ಕೆ ಬಿಜೆಪಿಯೇ ಕಾರಣ.ಹಾಗಂತ ನಾನು ವಕ್ಫ್ ಪರವಾಗಿ ಇಲ್ಲ. ಅದರಲ್ಲೂ ಕೂಡ ಸಾಕಷ್ಟು ತಪ್ಪುಗಳಾಗಿವೆ. ಅಂತ ತಪ್ಪುಗಳನ್ನು ಖಂಡಿಸುತ್ತೇನೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಅವಾಂತರಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆ ಮಾಡ್ತೇವೆ ಎಂದಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್ ಪರವಾಗಿ ಪ್ರಶ್ನೆಗಳನ್ನ ಪಾರ್ಲಿಮೆಂಟ್ ನಲ್ಲಿ ಕೇಳಿದ್ದಾರೆ. ವಿಜಯಪುರದಲ್ಲಿ ಬಂದು ರಸ್ತೆ ಮೇಲೆ ಹೋರಾಟ ಮಾಡಿದ್ದಾರೆ ಎಂದು ಕರಂದ್ಲಾಜೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
1974 ರ ವಕ್ಫ್ ಗೆಜೆಟ್ ನೋಟಿಪಿಕೇಶನ್ ರದ್ದು ಮಾಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, 10 ವರ್ಷ ಬಿಜೆಪಿ ಸರ್ಕಾರ ಮಲಗಿತ್ತಾ?. ಇಷ್ಟು ವರ್ಷ ಏನ್ ಮಾಡ್ತಿದ್ರು, ಈಗ ನೆನೆಪಾಯ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ಒಂದು ಇಂಚು ಹಿಂದೂ, ಜೈನ, ಕ್ರೈಸ್ತ, ಮುಸ್ಲಿಂ, ಸಿಖ್, ಶಾಲೆ-ಕಾಲೇಜು ಜಮೀನು ವಕ್ಫ್‌ಗೆ ಬಿಟ್ಟುಕೊಡೊ ಮಾತಿಲ್ಲ. ರೈತರನ್ನ ಬಿಜೆಪಿಯವರು ಕನ್ಪ್ಯೂಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.