ಲಕ್ನೋ: ಮಥುರಾ ವೃಂದಾವನದ ಬಂಕೆ ಬಿಹಾರಿ ಮಂದಿರದಲ್ಲಿ ಭಕ್ತರು ತೀರ್ಥ ಎಂದು ಭಾವಿಸಿ ಎಸಿಯಿಂದ ತೊಟ್ಟಿಕ್ಕುತ್ತಿದ್ದ ನೀರನ್ನು ಸೇವಿಸಿರುವಂತಹ ಘಟನೆ ನಡೆದಿದೆ. ಇದರ ವಿಡಿಯೋ ಭಾರೀ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ವಿಶ್ವವಿಖ್ಯಾತ ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಆನೆಯ ಶಿಲ್ಪಾಕೃತಿಯಿಂದ ತೊಟ್ಟಿಕ್ಕುತ್ತಿದ್ದ ನೀರನ್ನು ಪವಿತ್ರ ಜಲವೆಂದು ಭಾವಿಸಿ ಭಕ್ತರು ಕುಡಿದಿದ್ದಾರೆ. ದೇವಾಲಯದ ಅಧಿಕಾರಿಗಳು ಅದನ್ನು ಕುಡಿಯದಂತೆ ಎಚ್ಚರಿಕೆ ನೀಡಿದರೂ ಭಕ್ತರು ಮುಗಿಬಿದ್ದು ನೀರನ್ನು ಸಂಗ್ರಹಿಸಿ ಕುಡಿದಿದ್ದಾರೆ. ನವೆಂಬರ್ 3 ರಂದು ಜೀರೋ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇಲ್ಲಿಯವರೆಗೆ 4 ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡ | ಭೀಕರ ಅಪಘಾತ : ಬಸ್ ಕಂದಕಕ್ಕೆ ಬಿದ್ದು 22 ಮಂದಿ ಪ್ರಯಾಣಿಕರು ಸಾವು
Serious education is needed 100%
People are drinking AC water, thinking it is 'Charanamrit' from the feet of God !! pic.twitter.com/bYJTwbvnNK
— ZORO (@BroominsKaBaap) November 3, 2024
ಈ ಬಗ್ಗೆ ದೇವಸ್ಥಾನದ ಸೇವಕ ಆಶಿಶ್ ಗೋಸ್ವಾಮಿ ಅವರು ಮಾಹಿತಿ ನೀಡಿ, ದೇವಾಲಯದ ಹಿಂದೆ ನಿರ್ಮಿಸಲಾದ ಎರಡು ಆನೆಗಳ ಕಲಾಕೃತಿಯಿಂದ ನೀರು ಜಿನುಗುತ್ತಿದೆ. ಜನರು ಅದನ್ನು ಚರಣಾಮೃತವೆಂದು ಪರಿಗಣಿಸಿ ಸ್ವೀಕರಿಸುತ್ತಿದ್ದಾರೆ. ಆದರೆ ಅದು ಚರಣಾಮೃತ ಅಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಅದು ದೇವಸ್ಥಾನದ ಸ್ವಚ್ಛತೆ ಮತ್ತು ಎಸಿಯಿಂದ ಹೊರಬರುವ ನೀರು ಎಂದು ತಿಳಿಸಿದ್ದಾರೆ.
ತೀರ್ಥ ಎಂದು ಭಾವಿಸಿ ಎಸಿಯ ನೀರನ್ನು ಸೇವಿಸಿದ ಭಕ್ತರು ಇದೀಗ ನಿಜಾಂಶ ತಿಳಿದು ಹೌಹಾರಿದ್ದಾರೆ. ಹುಚ್ಚುತನ ಅಂದ್ರೆ ಇದೇ ಇರಬೇಕು ಎಂದು ನೆಟ್ಟಿಗರು ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಮೂಢನಂಬಿಕೆ ಇರುವುದು ಭಾರತದಲ್ಲಿ ಮಾತ್ರ ಅದ್ರಲ್ಲಿ ಕಲಿತವರೇ ಹೆಚ್ಚು ಮೂರ್ಖರು. ಇದರ ಸೇವನೆಯಿಂದ ಆರೋಗ್ಯಕ್ಕೆ ಏನಾದರೂ ಸಮಸ್ಯೆಯಾಗಬಹುದು, ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.