ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ವರ್ಷಗಳ ಬಳಿಕ ಮೊದಲ ಬಾರಿ ನಡೆದ ವಿಧಾನಸಭೆ ಅಧಿವೇಶನದ ಮೊದಲ ದಿನ ಕೋಲಾಹಲಕ್ಕೆ ಸಾಕ್ಷಿಯಾಯಿತು.
ನೂತನವಾಗಿ ಚುನಾಯಿತಗೊಂಡ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಪ್ರಥಮ ಅಧಿವೇಶನ ಸೋಮವಾರ ಬೆಳಿಗ್ಗೆ ಆರಂಭಗೊಂಡಿತ್ತು. ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದತಿ ವಿರುದ್ಧ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಶಾಸಕ ವಹೀದ್ ಪಾರಾ ನಿರ್ಣಯ ಮಂಡಿಸಿದ ಬಳಿಕ ಈ ಗದ್ದಲ ನಡೆದಿದೆ.
ಪುಲ್ವಾಮಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಹೀದ್ ಪ್ಯಾರಾ ಅವರು ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರಿಗೆ ನಿರ್ಣಯವನ್ನು ಸಲ್ಲಿಸಿದ್ದು, ಐದು ದಿನಗಳ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ತುರ್ತು ಚರ್ಚೆಗೆ ವಿನಂತಿಸಿದ್ದಾರೆ.
ನಿರ್ಣಯವನ್ನು ಸಲ್ಲಿಸಿದ ಬೆನ್ನಲ್ಲಿ ಜಮ್ಮು,ಕಾಶ್ಮೀರ ವಿಧಾನಸಭೆಯ ಎಲ್ಲಾ 28 ಬಿಜೆಪಿ ಶಾಸಕರು ಈ ಕ್ರಮವನ್ನು ವಿರೋಧಿಸಿ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಪ್ರತಿಭಟನಾ ನಿರತ ಸದಸ್ಯರಿಗೆ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ಮನವಿ ಮಾಡಿದರೂ ಅವರು ಧರಣಿ ಮುಂದುವರಿಸಿದ್ದರು.
ಹೊಸ ಸರ್ಕಾರ ಜಮ್ಮು ಕಾಶ್ಮೀರಕ್ಕ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಲೆಪ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ. ರಾಜ್ಯಕ್ಕೆ ಲಭ್ಯವಿರುವ ಸಾಂವಿಧಾನಿಕ ಖಾತರಿಗಳು. ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ಇಟ್ಟಿರುವ ನಂಬಿಕೆಯ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ. ಹೊಸ ಸರ್ಕಾರದ ಮೊದಲ ಅಧೀವೇಶನದಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.