ಹಾಸನ: ಸರ್ಕಾರಗಳು ರೂಪಿಸುತ್ತಿರುವ ಅಭಿವೃದ್ಧಿ ಯೋಜನೆ ಮತ್ತು ಬಂಡವಾಳ ವಿನಿಯೋಜನೆಯಲ್ಲಿ ಜನರು ಇಲ್ಲದಂತಾಗಿದೆ. ಇದರಿಂದ ಬಹತೇಕ ಜನರು ಅಭಿವೃದ್ಧಿಯ ಫಲಾನುಭವಿಗಳಾಗದೆ ಹೊರಗುಳಿಯುತ್ತಿದ್ದಾರೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಡಾ. ಎಂ.ಚಂದ್ರಪೂಜಾರಿ ಪ್ರತಿಪಾದಿಸಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ, ಭಾರತ ವಿದ್ಯಾರ್ಥಿ ಫೆಡರೇಷನ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ದಲಿತ ಹಕ್ಕಗಳ ಸಮಿತಿ ಮತ್ತು ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಭಾರತದಂತಹ ದೊಡ್ಡ ಜನಸಂಖ್ಯೆ, ವೈವಿಧ್ಯತೆ, ಸಾಂಸ್ಕೃತಿಕ ಭಿನ್ನತೆ ಇರುವ ದೇಶದಲ್ಲಿ ಈಗ ಒಂದು ಭಾಷೆ, ಒಂದು ಚುನಾವಣೆ ಮತ್ತು ಒಂದು ತೆರಿಗೆ ಮತ್ತು ಒಂದು ಅಭಿವೃದ್ಧಿ ಮಾದರಿ ಜಾರಿಯಲ್ಲಿದೆ. ಇದು ಇದು ಅಪಾಯಕಾರಿ ಮಾದರಿಯಾಗಿದೆ. ಏಕೆಂದರೆ ಹಾಸನವನ್ನೇ ಉದಾಹರಣೆಯನ್ನೇ ತೆಗೆದುಕೊಂಡರೆ ಮಲೆನಾಡು, ಅರೆಮಲೆನಾಡು ಮತ್ತು ಬಯಲು ಸೀಮೆ ಪ್ರದೇಶವಿದೆ. ಎಲ್ಲಾ ಭಾಗಕ್ಕೂ ಒಂದೇ ಮಾದರಿ ಅಭಿವೃದ್ಧಿ ಜಾರಿ ಮಾಡಿದರೆ ಉಂಟಾಗುವ ಅಸಮಾನತೆಯನ್ನು ಯೋಚಿಸಬೇಕಾಗುತ್ತಿದೆ. ಇದೇ ರಾಜ್ಯ ಮತ್ತು ದೇಶಕ್ಕೂ ಅನ್ವಯವಾಗುತ್ತದೆ. ಇಂತಹ ಏಕೀಕೃತ ಅಭಿವೃದ್ಧಿ ಮಾದರಿಗಳು ಸಾರ್ವಜನಿಕ ಸಂಪನ್ಮೂಲಗಳನ್ನು ದರೋಡೆ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸುವ ಅಥವಾ ಸಂಪತ್ತನ್ನು ಒಂದು ಕಡೆಯಲ್ಲಿ ಕ್ರೂಢೀಕರಿಸುವ ಉದ್ದೇಶವನ್ನು ಹೊಂದಿರುತ್ತದೆಯೇ ಹೊರತು ಜನರನ್ನು ಒಳಗೊಳ್ಳುವುದಿಲ್ಲ. ಇದು ಗಣತಂತ್ರ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಉಂಟಾಗುತ್ತದೆ. ಇದು ಈಗಾಗಲೇ ಭಾರತದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ ಎಂದು ಚಂದ್ರಪೂಜಾರಿ ಆತಂಕ ವ್ಯಕ್ತಪಡಿಸಿದರು.
ಇದನ್ನು ಓದಿ : “ಇಂದು ಭಾರತದ ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” ವಿಚಾರ ಸಂಕಿರಣ ಕಾರ್ಯಕ್ರಮ
ಭಾರತದಲ್ಲಿ ತಲಾ ಆದಾಯ ಹೆಚ್ಚುತ್ತಿರುವಂತೆಯೇ ೮೦ ಕೋಟಿ ಜನರಿಗೆ ತಲಾ ೫ ಕೆಜಿಯಂತೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಇದು ಯೋಜನೆಗಳನ್ನು ರೂಪಿಸುವಾಗ ಪೂರ್ವತಯಾರಿ ಮಾಡಿಕೊಳ್ಳದಿರುವುದು ಇಂತಹ ವೈರುಧ್ಯಗಳ ಸೃಷ್ಟಿಗೆ ಕಾರಣವಾಗುತ್ತದೆ. ತಲಾ ಆದಾಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಉದ್ಯೋಗ ನಷ್ಟ, ಬಡತನ ಹೆಚ್ಚಳ, ಹಸಿವಿನ ಸೂಚ್ಯಂಕದಲ್ಲಿ ಏರುಗತಿ ಮುಂತಾದ ಅಂಶಗಳು ಅಭಿವೃದ್ಧಿಯ ವ್ಯಾಖ್ಯೆಯಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತಿದೆ. ಭಾರತದಲ್ಲಿ ಅಭಿವೃದ್ಧಿ ಪರಿಧಿಯೊಳಗೆ ಜನರು ಮುಕ್ತವಾಗಿ ಪಾಲ್ಗೊಳ್ಳಲಾಗುತ್ತಿಲ್ಲ. ಇದಕ್ಕೆ ಜಾತಿ ಮತ್ತು ಲಿಂಗ ತಾರತಮ್ಯವೂ ಒಂದು ಕಾರಣ.
ಜಾತಿಯ ಕಾರಣಕ್ಕೆ ಒಂದು ಬೃಹತ್ ದುಡಿಯುವ ಸಮುದಾಯ ಅಭಿವೃದ್ಧಿಯ ವ್ಯಾಖ್ಯೆಯೊಳಗೆ ಪ್ರವೇಶದಿಂದ ವಂಚಿತವಾಗುತ್ತಿದೆ. ಹಾಗೆಯೇ ಮಹಿಳೆಯರೂ ಕೂಡ ಪುರುಷ ಪ್ರಧಾನ ಸಮಾಜದ ನಿಬಂಧನೆಗಳ ಕಾರಣಕ್ಕೆ ಅಭಿವೃದ್ಧಿಯ ಫಲಾನುಭವಿಗಳಾಗುತ್ತಿಲ್ಲ. ಇದರ ಜೊತೆಗೆ ಇನ್ನೂ ಒಂದು ಆತಂಕದ ವಿಷಯವೆಂದರೆ ಕೋಮುವಾದದ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯ ಕೂಡ ಸಾಮಾಜಿಕ ಅಭದ್ರತೆ ಎದುರಿಸುತ್ತಿದ್ದು, ಅಭಿವೃದ್ಧಿಯ ಪಾಲುದಾರರಾಗಲು ಕೋಮುವಾದ ಅಡ್ಡಿಯುಂಟು ಮಾಡುತ್ತಿದೆ. ಹೀಗಾಗಿ ಅಭಿವೃದ್ಧಿಯು ವಿವಿದ ಕಾರಣಗಳಿಂದಾಗಿ ಜನರಿಂದ ಹೊರತಾಗಿ ಜಾರಿಯಾಗುತ್ತಿದೆ. ಹೀಗಾಗಿ ಅಭಿವೃದ್ಧಿಯು ಜನರಿಗಾಗಿ ಜಾರಿಯಾಗದೆ ಕೇವಲ ಕೆಲವರಿಗೆ ಸಂಪತ್ತನ್ನು ಕ್ರೂಢೀಕರಿಸಲು ಸಾಧನವಾಗಿ ಬಳಕೆಯಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಇದು ಅಪರಾಧ ಹೆಚ್ಚಳಕ್ಕೂ ಕಾರಣವಾಗುತ್ತಿದೆ ಎಂದು ಪ್ರತಿಪಾದಿಸಿದರು.
ಸಂಸದ ಶ್ರೇಯಸ್ ಪಟೇಲ್, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ಹಾಸನ ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ಅಸಮನತೆಯ ಸ್ವರೂಪ ಕುರಿತು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ತಿಪ್ಪೇಸ್ವಾಮಿ, ಹಾಸನ ಜಿಲ್ಲೆಯ ಕೃಷಿ ಸಮಾಜದಲ್ಲಿನ ಸ್ಥಿತ್ಯಂತರಗಳು, ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ ಕುರಿತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಚ್.ಡಿ.ಪ್ರಶಾಂತ್, ಹಾಸನ ಜಿಲ್ಲೆಯ ಭೂಮಿ-ಕೈಗಾರಿಕೆ-ವಾಣಿಜ್ಯೋದ್ಯಮ ಹಾಗೂ ಉದ್ಯೋಗ ಸೃಷ್ಟಿಯ ಪ್ರಶ್ನೆಗಳು ಕುರಿತು ಬೆಂಗಳೂರಿನ ರಾಷ್ಟ್ರೀಯ ಕಾನೂನುಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಆರ್.ವಿ.ಚಂದ್ರಶೇಖರ್ ಮತ್ತು ಹಾಸನ ಜಿಲ್ಲೆಯ ಪರಿಸರಾತ್ಮಕ ಬಿಕ್ಕಟ್ಟುಗಳು ಮತ್ತು ಅಭಿವೃದ್ಧಿ ಕುರಿತು ಸಕಲೇಶಪುರದ ಪರಿಸರವಾದಿ ಪ್ರಸಾದ್ ರಕ್ಷಿದಿ ವಿಷಯ ಮಂಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನು ನೋಡಿ : ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ : ಬಹುದೊಡ್ಡ ಅಪಾಯಕಾರಿ ನಡೆ – ಕವಿತಾ ಲಂಕೇಶ್ Janashakthi Media