ಒಕ್ಕೂಟ ವ್ಯವಸ್ಥೆ ಉಳಿಯಬೇಕಾದರೆ ರಾಜ್ಯಪಾಲರ ಹುದ್ದೆ ರದ್ದಾಗಬೇಕು – ಪ್ರೊ. ರವಿವರ್ಮ ಕುಮಾರ್

ಮೈಸೂರು:’ರಾಜ್ಯಪಾಲರ ನೇಮಕ ಹಾಗೂ ಜಿಎಸ್‌ಟಿ ದೇಶದ ಒಕ್ಕೂಟ ವ್ಯವಸ್ಥೆಗೆ ಕಂಟಕವಾಗುತ್ತಿವೆ’ ಎಂದು  ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ದೂರಿದರು.

ದಸರಾ ರಾಷ್ಟ್ರೀಯ ಸಮ್ಮೇಳನ ಉಪಸಮಿತಿಯು ಆಯೋಜಿಸಿದ್ದ ‘ ಪ್ರಭುತ್ವ ಮತ್ತು ಸಂವಿಧಾನ ಆಶಯ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ‘ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಕಾರ್ಯನಿರ್ವಹಣೆ’ ಕುರಿತು ಮಾತನಾಡಿದರು.

‘ಈಚಿನ ದಿನಗಳಲ್ಲಿ ರಾಜ್ಯಪಾಲರ ಹುದ್ದೆ‌ ಎಂಬುದು ರಾಜಕೀಯ ಪಕ್ಷಗಳಿಗೆ ಪುನರ್ವಸತಿ ಕೇಂದ್ರದಂತೆ ಆಗಿದೆ. ಸಚಿವ ಸ್ಥಾನದಿಂದ ಕೈಬಿಟ್ಟವರನ್ನು ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತಿದೆ. ಹೀಗೆ ನೇಮಕಗೊಂಡವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಣತಿಯಂತೆ ವರ್ತಿಸುತ್ತಿದ್ದು, ಯಾವ ರಾಜ್ಯಗಳಲ್ಲಿ ಆ ಪಕ್ಷ ಅಧಿಕಾರದಲ್ಲಿ ಇಲ್ಲವೋ ಅಂತಹ ರಾಜ್ಯಗಳಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಇದನ್ನೂ ಓದಿ: ಪೂರ್ವ ಪ್ರಾಥಮಿಕ ಶಿಕ್ಷಣ ಬಲಗೊಂಡರೆ ಭಾರತದ ಭವಿಷ್ಯ ಉತ್ತಮಗೊಳ್ಳಲಿದೆ – ಜಸ್ಟೀಸ್‌ ಮುರಳಿಧರ

‘ತಮಿಳುನಾಡಿನಲ್ಲಿ ಟಿ.ಎನ್. ರವಿ ಎಂಬ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ರಾಜ್ಯಪಾಲರಾಗಿದ್ದು, ತಮಿಳುನಾಡು ಸರ್ಕಾರವನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಹೊಸ ಸಚಿವರಿಗೆ ಪ್ರಮಾಣವಚನವನ್ನು ಬೋಧಿಸುತ್ತಿಲ್ಲ. ಸರ್ಕಾರದ ಮಸೂದೆಗಳಿಗೆ ಒಪ್ಪಿಗೆ ನೀಡದೇ ಸತಾಯಿಸುತ್ತಿದ್ದಾರೆ. ಕೇರಳದಲ್ಲಿ ಆರಿಫ್ ಮೊಹಮ್ಮದ್ ಖಾನ್ ಎಂಬುವರನ್ನು ರಾಜ್ಯಪಾಲರಾಗಿ ಕೇಂದ್ರ ನಿಯೋಜಿಸಿದ್ದು, ಅವರ ಉಪಟಳವೂ ಕಡಿಮೆ ಏನಿಲ್ಲ. ಕರ್ನಾಟಕದಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ವಿವರಿಸಿದರು.

‘ಕುಲಪತಿಗಳ ನೇಮಕದಲ್ಲಿ ಎಲ್ಲ ರಾಜ್ಯಪಾಲರೂ ಕಿರಿಕಿರಿ‌ ಮಾಡುತ್ತಿದ್ದಾರೆ‌. ಇದರಿಂದ ಒಕ್ಕೂಟ ವ್ಯವಸ್ಥೆ ಬಲಹೀನ ಆಗುತ್ತಿದೆ’ ಎಂದು ಆಕ್ಷೇಪಿಸಿದರು.

ಒಂದು ದೇಶ ಒಂದು ತೆರಿಗೆ ಹೆಸರಿನಲ್ಲಿ ಜಾರಿಗೊಳಿಸಲಾದ ಜಿಎಸ್‌ಟಿಯಿಂದಾಗಿ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಆಗಿದೆ. ತನ್ನ ಪಾಲಿನ ಹಣಕ್ಕಾಗಿ ಕೇಂದ್ರದ ಮುಂದೆ ಕೈ ಒಡ್ಡಿ ನಿಲ್ಲುವ ಸ್ಥಿತಿ ಬಂದಿದೆ. ಕರ್ನಾಟಕದಂತಹ ರಾಜ್ಯಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಅನುದಾನ ಪಡೆಯುತ್ತಿವೆ ಎಂದು ವಿವರಿಸಿದರು.

‘ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರಲ್ಲಿ ಹೆಚ್ಚಿನವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಕೆಳವರ್ಗದ, ಬುಡಕಟ್ಟು ಸಮುದಾಯದ ಜನರನ್ನು ನ್ಯಾಯಾಂಗ ವ್ಯವಸ್ಥೆ ಇಂದಿಗೂ ಅಪರಾಧಿಗಳಂತೆ ನೋಡುತ್ತದೆ. ದೇಶದಲ್ಲಿ ಚುನಾವಣೆಗಳು, ಅಧಿಕಾರಿ-ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿ ಇದ್ದರೂ ನ್ಯಾಯಾಧೀಶರಾಗಲು ಮೀಸಲಾತಿ ಇಲ್ಲ. ಎಲ್ಲ ವರ್ಗದವರಿಗೂ ಅವಕಾಶ ಸಿಗಬೇಕಿದೆ’ ಎಂದು ಆಗ್ರಹಿಸಿದರು.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ನೋಡಿ: ಸಾಲಕ್ಕಾಗಿ ನೀಡಿದ ಚೆಕ್ ನಿಂದ ಆಗುವ ತೊಂದರೆಗಳು

Donate Janashakthi Media

Leave a Reply

Your email address will not be published. Required fields are marked *