ಅಕ್ಟೋಬರ್ ಅಂತ್ಯದೊಳಗೆ ಚನ್ನರಾಯಪಟ್ಟಣ ರೈತರ ಸಮಸ್ಯೆ ಬಗೆಹರಿಸುತ್ತೇವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗದೊಂದಿಗೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಚರ್ಚೆಯನ್ನು ನಡೆಸಿದರು. ಅಕ್ಟೋಬರ್‌ ಅಂತ್ಯದೊಳಗೆ ರೈತರ ಸಮಸ್ಯೆಯನ್ನು ಬಗೆಹರಿಸುವ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸೇರಿದ್ದ ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ ಮಾತನಾಡಿ, ಚನ್ನರಾಯಪಟ್ಟಣ ಹೋಬಳಿಯಲ್ಲಿ 4 ಬಾರಿ ಭೂಸ್ವಾಧೀನ ಮಾಡಿಕೊಂಡಿದ್ದು ಇದಾಗಲೇ ಬಹುಪಾಲು ಭೂಮಿ ಕಳೆದುಕೊಂಡಿದ್ದಾರೆ. ಉಳಿದಿರುವುದು ಅಲ್ಪಸ್ವಲ್ಪ ಭೂಮಿ ಮಾತ್ರ. ಈ ಭೂಮಿಯನ್ನು ಸ್ವಾದೀನ ಪ್ರಕ್ರಿಯೆಯಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿದರು.

ವಿರೋಧ ಪಕ್ಷದಲ್ಲಿ ಇದ್ದಾಗ ಧರಣಿ ಸ್ಥಳಕ್ಕೆ ಬಂದು ರೈತರ ಪರ ನಿಲ್ಲುವುದಾಗಿ ಬರವಸೆ ನೀಡಿದ್ದೀರಿ ಎಂದು ನೆನಪು ಮಾಡಿದರು. ಜೊತೆಗೆ ಕರ್ನಾಟಕ ರಾಜ್ಯ ರೈತಸಂಘದ ಬಡಗಲಪುರ ನಾಗೇಂದ್ರ, ಹೋರಾಟ ಸಮಿತಿಯ ಕಾರಳ್ಳಿ ಶ್ರೀನಿವಾಸ್, ಮಾರೇಗೌಡ ಕೂಡ ದ್ವನಿಗೂಡಿಸಿ, ಅದೇ ಭೂಮಿಯಲ್ಲಿ ಬೆಂಗಳೂರಿಗೆ ಬೇಕಾದ ಹಣ್ಣು ತರಕಾರಿ, ಹೂವು ಎಲ್ಲವನ್ನೂ ಬೆಳೆಯುತ್ತಿದ್ದೇವೆ ಮತ್ತು ವಾಸದ ಮನೆಗಳು, ಕೋಳಿಪಾರಂ ಸೇರಿದಂತೆ ಸುಮಾರು ಆರ್ಥಿಕ ಚಟುವಟಿಕೆಗಳು ಕೂಡ ಇದೇ ಭೂಮಿಯಲ್ಲಿ ನಡೆಯುತ್ತಿವೆ ಆದ್ದರಿಂದ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟು ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಅಧಿಕಾರಕ್ಕೆ ಬಂದಾಗ ರೈತರ ಪರವಾರ ನಿರ್ಧಾರ ಮಾಡೋಣ ಎಂದು ಹೇಳಿದ್ದೇನೆ. ಈ ಸಭೆಯಲ್ಲಿ ತೀರ್ಮಾನಕ್ಕೆ ಬರಲು ಬೇಕಾದ ತಯಾರಿ ಇಲ್ಲವಾದ್ದರಿಂದ, ಈ ಕುರಿತು ಮಾಹಿತಿ ತರೆಸಿಕೊಂಡು ಪರಿಶೀಲಿಸಿ ಅಕ್ಟೋಬರ್‌ ತಿಂಗಳಲ್ಲಿ ಸಭೆ ನಡೆಸಿ ಅಂತಿಮ ನಿರ್ದಾರಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದರು.

ಮುಂದಿನ ದಿನಾಂಕವನ್ನು ಇಂದೇ ನಿಗದಿಪಡಿಸಿ ಎಂದು ರೈತರು ಪಟ್ಟು ಹಿಡಿದಾಗ,” ದಸರಾ ಹಬ್ಬದ ನಂತರ ತಿಂಗಳ ಕೊನೆಯೊಳಗೆ ಒಂದು ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ, ಕರ್ನಾಟಕ ಪ್ರಾಂತ್ಯ ರೈತಸಂಘದ ಪ್ರಭಾ ಬೆಳವಂಗಲ, ಚಂದ್ರ ತೇಜಸ್ವಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಂಜಪ್ಪ, ಅಶ್ವತ್ಥಪ್ಪ. ರಾಮಚಂದ್ರಪ್ಪ, ಗೋಪಿನಾಥ್, ರಮೇಶ್ ಚೀಮಾಚನಹಳ್ಳಿ, ಮುಕುಂದ, ಪ್ರಮೋದ್, ವೆಂಕಟೇಶಪ್ಪ,ಪ್ರಕಾಶ್ ಸೇರಿದಂತೆ ಹಲವು ರೈತ ಮುಖಂಡರು ಭಾಗಿಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *