ಡಾ. ಮೀನಾಕ್ಷಿ ಬಾಳಿ
ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ಧಿ
ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರುಂಭ ಲಾಭ
ಗುಹೇಶ್ವರನೆಂಬುದು ಮೀರಿದ ಘನವು ವಚನ
ವೈದಿಕರು ನಿರೂಪಿಸಿದ ಹುಸಿ ಆಧ್ಯಾತ್ಮವನ್ನು ಅನಾವರಣಗೊಳಿಸಿ ನಿಜವಾದ ಆಧ್ಯಾತ್ಮವನ್ನು ತೆರೆದು ತೋರಿಸಿದ್ದ ಬಸವಾದಿ ಶರಣರನ್ನು ಮತ್ತದೇ ವೇದ ಪ್ರಣೀತ ಶಬ್ದಾಡಂಬರಗಳಿಗೆ ಸೇರಿಸುವ ಪ್ರಯತ್ನವನ್ನು ಈಗ ಆರ್ಎಸ್ಎಸ್ ಭರದಿಂದ ಮಾಡುತ್ತಿದೆ. 1925ರಿಂದ ವಚನ ಸಿದ್ಧಾಂತದತ್ತ ಹೊರಳಿ ನೋಡದ ಸಂಸ್ಕೃತೋಪ ಜೀವಿಗಳಿಗೆ ಇದ್ದಕ್ಕಿದ್ದಂತೆ ಈಗ ವಚನಗಳ ಮೇಲೆ ಭಕ್ತಿ ಹುಟ್ಟಲು ಕಾರಣ; ಲಿಂಗಾಯತರ ಮತಗಳನ್ನು ಸೆಳೆದು ಅವರ ವಿಶ್ವಮಾನ್ಯವಾಗುತ್ತಿರುವ ಸಿದ್ಧಾಂತಗಳನ್ನು ಮಣ್ಣು ಮುಕ್ಕಿಸುವ ಒಳ ಹುನ್ನಾರು ತಿಳಿಯದೇನಲ್ಲ. ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕು ಎಂಬ ಅವರ ಸನಾತನ ಚಾಳಿ ಮುಂದುವರೆದಿದೆ.
ಆದ್ದರಿಂದಲೆ ವೈದಿಕರು ಲಿಂಗಾಯತ ತತ್ವಗಳನ್ನು ನಾಶಮಾಡಲು ಲಿಂಗಾಯತರನ್ನೆ ಬಳಸಿಕೊಳ್ಳುತ್ತಿದ್ದಾರೆ. ಸಂಘಿ ಗ್ಯಾಂಗ್ನವರು ಧಾರ್ಮಿಕ ದಿಗ್ಬಂಧನಗಳ ವಿರುದ್ಧ ಸಾತ್ವಿಕ ಬಂಡೆದ್ದ ಶರಣರನ್ನು ವೈಭವೀಕರಿಸುತ್ತ, ಅವರ ಮೂಲ ಆಶಯವಾಗಿದ್ದ ದಾಸೋಹ, ಕಾಯಕ ತತ್ವಗಳನ್ನು ಮರೆ ಮಾಚಿ, ಕ್ರಮೇಣ ಭಾರತೀಯ ದಾರ್ಶನಿಕ ಪರಂಪರೆಯಿಂದ ಶರಣರನ್ನು ಶಾಶ್ವತವಾಗಿ ಇಲ್ಲದಂತೆ ಮಾಡುವ ದುಷ್ಟ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ. ಅದರ ಮೊದಲ ಡೋಸ್ “ವಚನ ದರ್ಶನ” ಎಂಬ ಕಳಪೆ ಪುಸ್ತಕವನ್ನು ಪ್ರಕಟಿಸಿ ರಾಜ್ಯವ್ಯಾಪಿ ಬಿಡುಗಡೆಗೊಳಿಸುತ್ತಿರುವುದು.
ಇದನ್ನೂ ಓದಿ: ನಕಲಿ ವೈದ್ಯ ಹಾಗೂ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಮೆಡಿಕಲ್ ಶಾಪ್ ಬಂದ್; 1 ಲಕ್ಷ ರೂ. ದಂಡ
20 ಲೇಖನಗಳನ್ನು ಒಳಗೊಂಡ ಕಿರುಪುಸ್ತಕವಿದು. ರಾಜಾರಾಮ್ ಹೆಗೆಡೆಯವರಂಥ ಸನಾತನಿ ವ್ಯಸನಿಯೊಬ್ಬನ ಕುತಂತ್ರಿ ಲೇಖನದೊಂದಿಗೆ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಶರಣರನ್ನು ಆದರ್ಶೀಕರಿಸಿದ ಹಾಗೂ ಮುಗ್ಧ ಭಾವದಲ್ಲಿ ಸ್ಮರಿಸಿದ ಹಸಿ ಬಿಸಿ ಲೇಖನಗಳಿವೆ. ಈ ಲೇಖನಗಳಲ್ಲಿ ಕಲ್ಯಾಣ ಶರಣರ ತಾತ್ವಿಕ ಆಳ-ಅಗಲಗಳನ್ನು ಅರಿಯದೇ ಬರೆದವುಗಳು ಕೆಲವು ಇದ್ದರೆ, ಇನ್ನು ಕೆಲವು ಬಸವಾದಿಗಳ ಪ್ರಾಯೋಗಿಕ ಆಧ್ಯಾತ್ಮದ ಗಂಭೀರತೆಯನ್ನು ಮನಗಂಡೇ ಅವುಗಳನ್ನು ತಿರುಚಿ ಬರೆದ ಲೇಖನಗಳಿವೆ.
ಪ್ರಾಯೋಗಿಕ ಆಧ್ಯಾತ್ಮವನ್ನು ನಿಗೂಢೀಕರಿಸಿ ಜನಸಾಮಾನ್ಯರನ್ನು, ಅದರಲ್ಲಿಯೂ ದುಡಿಯುವ ಜನರನ್ನು, ಪಾಪಿಷ್ಠರೆಂದು ಜರೆದು ಕೀಳಿಕರಿಸಿದ್ದನ್ನು ತಿರಸ್ಕರಿಸಿದವರು ಬಸವಾದಿ ಶರಣರು. ಜನವಿರೋಧಿ ತತ್ವ ಸಿದ್ಧಾಂತಗಳ ಸ್ವಾರ್ಥ ಮತ್ತು ನೀಚತನವನ್ನು ಬಂಡೆದ್ದು ಬಯಲಿಗೆಳೆದ ಬಸವಣ್ಣನವರು, ನವೀನ ಸರ್ವ ಸಮಾನತೆಯ ತತ್ವ ಪ್ರಣಾಲಿಯನ್ನು ಆವಿಷ್ಕರಿಸಿ, ಸಕಲ ಜೀವಾತ್ಮರ ಒಳಿತಿಗಾಗಿ ಶ್ರಮಿಸಿದರು. “ಭಕ್ತಿ” ಎಂಬ ಶುದ್ಧಾಂತಕರಣದ ಪ್ರಜ್ಞಾವಂತ ನಡೆಯನ್ನು ಕರ್ಮಠರ ಹುಸಿ ಆಚರಣೆಗಳಿಂದ ಬಿಡುಗಡೆಗೊಳಿಸಿ, ಚಾತುರ್ವರ್ಣ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಅಸಂಖ್ಯಾತ ಶರಣರು ತಮ್ಮನ್ನೆ ಬಲಿ ಕೊಟ್ಟುಕೊಂಡರು. ಇಂಥದ್ದೊಂದು ನಡೆ ಜಗತ್ತಿನಲ್ಲಿಯೇ ಅಪರೂಪ ಮತ್ತು ಅವಿಸ್ಮರಣೀಯ.
ಶಿಕ್ಷಣವು ವಿಸ್ತಾರಗೊಂಡಿರುವ ಈ ಕಾಲಘಟ್ಟದಲ್ಲಿ ವಚನ ಸಿದ್ಧಾಂತವು ಜಗತ್ತಿನೆಲ್ಲೆಡೆ ಪಸರಿಸಿ ಪುರಷ್ಕರಿಸಲ್ಪಡುತ್ತಿರುವುದು ವೈದಿಕಶಾಹಿಗಳಿಗೆ ಕಸಿವಿಸಿಯನ್ನುಂಟು ಮಾಡುತ್ತಿದೆ. ವಚನಗಳು ಸಾಂಸ್ಥಿಕ ಮತ ಧರ್ಮಕ್ಕಿಂತ ಹೆಚ್ಚಾಗಿ ಸಕಲ ಜೀವಾತ್ಮರ ಲೇಸು ಬಯಸುವ ಪ್ರಾಯೋಗಿಕ ಬದುಕಿನ ದರ್ಶನಗಳೆಂದೆ ಅಸ್ತಿತ್ವಗೊಂಡಿವೆ. ಈವರೆಗೆ ಅಸಂಖ್ಯಾತ ದುಡಿಯುವ ಜನರನ್ನು ಶೂದ್ರರೆಂದು ಜರೆದು ತುಚ್ಛೀಕರಿಸಿದ ಜನಸಮುದಾಯಗಳು ಕಟ್ಟಿಕೊಂಡಿರುವ ಈ ಆನುಭಾವಿಕ ಸ್ಫುರಣಗಳನ್ನು ನಗಣ್ಯವೆಂದು ಹೇಳಿದ್ದ ಅದೇ ಸನಾತನಿಗಳು ಇಂದು ಅವುಗಳ ಭಜನೆ ಮಾಡಲು ಕಾರಣ ಮುಟ್ಟಿ ಮೈಲಿಗೆ ಮಾಡುವುದೇ ಆಗಿದೆ.
ಮೂಲಭೂತವಾಗಿ, ವೇದಾಗಮ ಕರ್ಮಕಾಂಡವನ್ನು ವಿರೋಧಿಸುವ ತತ್ವವನ್ನು ವೇದದ ಬಾಲಂಗೋಚಿ ಎಂದು ವ್ಯಾಖ್ಯಾನ ಮಾಡುವುದು. ಲಿಂಗಾಯತವೂ ವೈದಿಕ ದರ್ಶನದ ಶಾಖೆಯೆಂದು ಸುಳ್ಳುಗಳನ್ನು ಕಟ್ಟಿ ಬೆಳೆಸುವುದು. ಅಚ್ಚ ಬಂಡಾಯದ ಉದ್ದೇಶದಿಂದಲೆ ಹುಟ್ಟಿಕೊಂಡ ವಚನಗಳನ್ನು ಬಂಡಾಯದ ಪ್ರಣಾಳಿಕೆಗಳಲ್ಲ ಎಂದು ಬಿಂಬಿಸುವುದೇ ಈ ಪುಸ್ತಕದ ಗುರಿಯಾಗಿದೆ. ರಾಜಾರಾಂ ಹೆಗೆಡೆ ಇದನ್ನು ತಮ್ಮ ಲೇಖನದಲ್ಲಿ ಬಟಾಬಯಲುಗೊಳಿಸಿದ್ದಾರೆ. ಅವರು ಹೇಳುವುದೇನೆಂದರೆ “ವಚನಗಳ ವಾರಸುದಾರರೆಂದು ಕರೆದುಕೊಳ್ಳುವವರಲ್ಲಿ ಅವನ್ನು ಅರ್ಥೈಸುವ ಹೊಸ ಅಸಂಪ್ರದಾಯಕ ಜಾಡೊಂದು ಇತ್ತೀಚೆಗೆ ತೆರೆಯಿತು.” (ವಚನ ದರ್ಶನ ಪುಟ 19) ಅಂದರೆ ವಚನಗಳನ್ನಾಗಲಿ ಅಥವಾ ಭಾರತದ ನೆಲದಲ್ಲಿ ಅರಳಿದ ಎಲ್ಲ ಅವೈದಿಕ ಚಿಂತನಾ ಪ್ರಸ್ಥಾನಗಳನ್ನು ವೇದಾಗಮಗಳ ಸಾಂಪ್ರದಾಯಿಕ ಜಾಡಿನಲ್ಲದೆ ನೋಡಬಾರದು.
ಹಾಗೇ ನೋಡುವುದೆ ಮಹಾ ಅಪರಾಧ ಎನ್ನುತ್ತಾರೆ ವೈದಿಕ ವಕ್ತಾರರು. ಮತ್ತೂ ಮುಂದುವರೆದು “ವಚನಗಳ ಕುರಿತಂತೆ ಇಂದು ಕಥಿತವಾಗುತ್ತಿರುವ ವಾದಗಳು 20 ನೇ ಶತಮಾನದಲ್ಲಿ ರೂಪುಗೊಂಡ ಲಿಬರಲ್ ವಾದ, ಮಾರ್ಕ್ಸವಾದ, ಸ್ತ್ರೀವಾದ ಮುಂತಾದ ಚಿಂತನೆಗಳನ್ನು ಬಳುವಳಿಯಾಗಿ ಪಡೆದಿವೆ.” ಎಂದು ಹೇಳಿದ್ದಾರೆ. (ಪುಟ- 24) ಮುನ್ನುಡಿ ಕರುಣಿದ ಮಲ್ಲೇಪುರಂ ಜಿ. ವೆಂಕಟೇಶ ಅವರು “ಇಲ್ಲಿ ಸಂಕಲಿಸಿರುವ ಲೇಖನಗಳು ಸಮಾಜವಾದಿ ಮತ್ತು ಮಾರ್ಕ್ಸ್ವಾದಿ ದೃಷ್ಟಿಕೋನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಸಾಗಿವೆ. ನಾವು ಈ ಸಂದರ್ಭದಲ್ಲಿ ಸಮಾಜವಾದಿ ಮತ್ತು ಮಾರ್ಕ್ಸ್ವಾದಿ ದೃಷ್ಟಿಕೋನಗಳ ತತ್ವಮೀಮಾಂಸೆ ಕಡೆ ತಂದಿರುವುದೇ ಹೊರತು, ಸಾಹಿತ್ಯ ಗರ್ಭದಿಂದ ಜನ್ಯಗೊಂಡದಲ್ಲವೆಂಬುದು ಸೂರ್ಯಸ್ಪಷ್ಟ” ಎಂದು ಫರಮಾನು ಹೊರಡಿಸುತ್ತಾರೆ.
ಇನ್ನೊಬ್ಬ ಲೇಖಕರಾದ ಸಂಗಮೇಶ ಸವದತ್ತಿಮಠ ಅವರು “ಭಾರತವನ್ನು ಆಕ್ರಮಿಸಿದ ಅನ್ಯ ಸಂಸ್ಕೃತಿಯ ಆಳರಸರು ನಮ್ಮ ಭವ್ಯ ಸಂಸ್ಕೃತಿಯನ್ನು ಹಾಳುಮಾಡಲು ನಿರಂತರ ಪ್ರಯತ್ನ ಪ್ರಯತ್ನ ನಡೆಸಿದರು. ಅದು ಈ ಹೊತ್ತಿಗೂ ಕೆಲ ಎಡ ಪಂಥೀಯ ವಿಚಾರವಾದಿಗಳಿಂದ ನಡೆಯುತ್ತಿದೆ” ಎಂದು ಉವಾಚಿಸಿದ್ದಾರೆ. (ಪುಟ-43) ಅದರ ಸಂಪಾದಕ ಮಹಾಶಯರು ಅಕ್ಕಮಹಾದೇವಿಯ “ಚೆನ್ನಮಲ್ಲಿಕಾರ್ಜುನಿಗೆ ಜಗವೆಲ್ಲಾ ಹೆಣ್ಣು ನೋಡಾ” ಎಂದು ಶಿವಶರಣರು ಹೇಳಿದ ಮೇಲೂ ಕೂಡಾ, ಶರಣ-ಶರಣೆಯರ ಸಂವೇದನೆಗಳನ್ನು ಪ್ರತ್ಯೇಕವಾಗಿಸಿ ಯುರೋಪಿನ ಫೆಮಿನಿಸಂ ದೃಷ್ಟಿಯಲ್ಲಿ ವಿಶ್ಲೇಷಿಸುತ್ತಿರುವುದು ಆತಂಕಕಾರಿಯಾದ ಸಂಗತಿ” ಎಂದು ದುಃಖಿತರಾಗಿದ್ದಾರೆ.
ಒಟ್ಟಾರೆ ಇಲ್ಲಿನ ವೈದಿಕ ಪ್ರಣೀತ ಚಿಂತನಾಧಾರೆಯ ವಿದ್ವಾಂಸರಿಗೆ ಸಮಾಜವಾದ, ಮಾರ್ಕ್ಸವಾದ, ಸ್ತ್ರೀವಾದಗಳೆಂದರೆ ಅಲರ್ಜಿ. ಅವು ಪಾಶ್ಚಾತ್ಯ ವಿಚಾರಧಾರೆಗಳು ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಅವು ಭಾವವಾದಿ ಅವೈಜ್ಞಾನಿಕ ಪೊಳ್ಳು ದರ್ಶನಗಳನ್ನು ಬೆತ್ತಲೆ ಮಾಡುತ್ತವೆ ಎಂಬುದೇ ಅವರ ನಿದ್ದೆ ಕೆಡಿಸಿದೆ.
ಒಂದೆಡೆ ಸಂಪಾದಕರು “ಆನೋ ಭದ್ರಾಃ ಕೃತವೋ ಯಂತು ವಿಶ್ವತಃ” ಎಂಬ ಉಪನಿಷ್ವಾಕ್ಯವನ್ನು ಉದ್ದರಿಸುತ್ತಲೆ, ಅಂದರೆ ಜ್ಞಾನವೂ ಯಾವ ಮೂಲೆಯಿಂದ ಬಂದರೂ ಸ್ವೀಕರಿಸಬೇಕು ಎಂದು ಹೇಳುತ್ತಲೆ, ಇನ್ನೊಂದೆಡೆ ಈ ಮೇಲೆ ಕಾಣಿಸಿದ ಎಲ್ಲ ವಾದಗಳು ವೈದೇಶಿಕ ಸಮಾಜ ವಿಜ್ಞಾನದ ನೆಲೆಯುಳ್ಳವು ಎನ್ನುವ ಸಂಕುಚಿತ ಬುದ್ಧಿ ತಾಳುತ್ತವೆ. ವಾದಗಳು ಸ್ವದೇಶವೋ, ವಿದೇಶವೋ ಅವು ಜೀವಪರ ಚಿಂತನೆಗೆ ಇಂಬಾಗಿ ನಿಲ್ಲುತ್ತವೆಯಾದರೆ ಅವುಗಳನ್ನು ದೂರವಿಡಬೇಕೆ? ಅವರ ಒಳಗುದಿ ಅದಲ್ಲ. ವಚನಗಳು ವೈದಿಕರ ಸನಾತನವಾದವನ್ನು ಬಯಲು ಮಾಡುತ್ತವೆ. ವರ್ಣಾಶ್ರಮ ವ್ಯವಸ್ಥೆಯನ್ನು ರ್ರಾಬರ್ರಿ ತರಾಟೆಗೆ ತೆಗೆದುಕೊಳ್ಳುತ್ತವೆ. ಸುಮಾರು 400ಕ್ಕಿಂತಲೂ ಹೆಚ್ಚು ವಚನಗಳಲ್ಲಿ ನೇರವಾಗಿ ಬ್ರಾಹ್ಮಣ್ಯ ಮತ್ತು ವೈದಿಕ ಕರ್ಮಠತೆಯನ್ನು ಹಳಿಯಲಾಗಿದೆ. ಉಳಿದಂತೆ ವೈದಿಕ ಭಾವವಾದಿ ಕಾಣ್ಕೆಯನ್ನು ನಿಸರ್ಗ ವಿವೇಕದ ಚಿಂತನಾ ಪ್ರಸ್ಥಾನಗಳ ನಿಕಷಕ್ಕೊಡ್ಡಿ ನಿರಾಕರಿಸಲಾಗಿದೆ.
ಈವರೆಗೂ ಭಾರತೀಯ ಚಿಂತನಾ ಪ್ರಸ್ತಾನವೆಂದು ಕೇವಲ ವೈದಿಕ ಪಠ್ಯಗಳನ್ನು ಮಾತ್ರ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೆ ತಂದು, ಅದುವೇ ಒಟ್ಟು ಭಾರತದ ಸಂಸ್ಕೃತಿ ಎಂದು ನಂಬಿಸಲಾಗಿತ್ತು. ಹೀಗೆಂದೇ ಆಧುನಿಕ ವೈದಿಕ ವಿದ್ವಾಂಸರು ಪ್ರಚುರ ಪಡಿಸಿದ್ದರು. “20ನೇ ಶತಮಾನದ ಭಾರತೀಯ ತತ್ವಶಾಸ್ತçವನ್ನು ಚಾರಿತ್ರಿಕ ಸಮೀಕ್ಷೆ ಎಂಬ ಕ್ರಮದಲ್ಲಿ ಬರೆಯುವಾಗ, ಕೆಲಸ ಮಾಡುತ್ತಿರುವ ಒಂದು ಪ್ರಧಾನ ಸೈದ್ಧಾಂತಿಕ ಒತ್ತಡ ಎಂದರೆ ಏಕೀಕೃತ ಭಾರತೀಯ ದರ್ಶನದ್ದು. ಹೀಗಾಗಿ ಎಲ್ಲ ಭಿನ್ನ ಸ್ವರಗಳನ್ನು, ಖಂಡಗಳನ್ನು, ಪ್ರತ್ಯೇಕ ಅಸ್ತಿತ್ವಗಳನ್ನು ಒಂದು ವಿಶಾಲ ಚೌಕಟ್ಟಿನೊಳಗೆ ಅಡಗಿಸುವ ಪ್ರಯತ್ನ ಈ ಇಡೀ ಶತಮಾನದ ಪ್ರಮುಖ ಚಾರಿತ್ರಿಕ ಸಮೀಕ್ಷೆ ಹಾಗೂ ಸಂಗ್ರಹಗಳಲ್ಲಿ ಕಾಣುತ್ತದೆ. ಭಾರತೀಯ ತತ್ವಜ್ಞಾನದ ಬಗ್ಗೆ ಚಾರಿತ್ರಿಕವಾಗಿ ವ್ಯಾಖ್ಯಾನಿಸುವ ಎಲ್ಲ ಮಹತ್ವದ ಚಿಂತಕರಿಗೂ ಈ ಏಕೀಕರಣದ ಸೈದ್ಧಾಂತಿಕ ಹಠ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಕಾಡಿದೆ.
ರಾಷ್ಟ್ರೀಯವಾದದ ರಾಜಕೀಯ ಅಗತ್ಯ ತತ್ವಜ್ಞಾನವನ್ನು ಸಂಗ್ರಹಿಸುವಾಗಲೂ ಕೆಲಸ ಮಾಡಿದೆ” ಎಂದು ಡಿ.ಆರ್.ನಾಗರಾಜ್ ತಮ್ಮ `ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕೃತಿಯಲ್ಲಿ ಢಾಳವಾಗಿ ಗುರುತಿಸಿದ್ದಾರೆ. (ಪುಟ 12) ನಾಗರಾಜ್ ರೇನೋ ತತ್ವಜ್ಞಾನವನ್ನು ಸಂಗ್ರಹಿಸುವಾಗ ಅಪ್ರಜ್ಞಾಪೂರ್ವಕವಾಗಿ ಇಂಥ ಅಪಸವ್ಯಗಳು ಘಟಿಸಿವೆ ಎಂದು ಅನುಮಾನ ಪಡುತ್ತಾರೆ. ಆದರೆ ಈ ಕ್ಷಣದಲ್ಲಿ ಅನುಮಾನಕ್ಕೆ ಆಸ್ಪದವಿಲ್ಲದಂತೆ ಕೋಮುವಾದಿ ರಾಜಕಾರಣದ ದುಷ್ಟ ಹುನ್ನಾರ ಇಂಥ ಪುಸ್ತಕಗಳಲ್ಲಿನ ಲೇಖನಗಳನ್ನು ಉತ್ಪಾದಿಸಿ ಪ್ರಚುರಪಡಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ವಚನಕಾರರಿಗೆ ಇಹದ ಬದುಕು ಆನುಭಾವಿಕ ಲೋಕಕ್ಕೆ ನಿಕಷವಾಗಿತ್ತು. “ಮತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ” ಎನ್ನುತ್ತ “ಸುಖ ಬಂದಡೆ ಪುಣ್ಯದ ಫಲವೆನ್ನೆನು, ದುಃಖ ಬಂದಡೆ ಪಾಪದ ಫಲವೆನ್ನೆನು” ಹೀಗೆ ಹೇಳಿದ ದಾರ್ಶನಿಕರನ್ನು ನಿಗೂಢೀಕರಿಸಿದ ಭಾವವಾದಿಗಳೆಂಬಂತೆ ಬಿಂಬಿಸುವ ಪ್ರಯತ್ನ ಇಲ್ಲಿನದು. ರಾಜಾರಾಂ ಹೆಗೆಡೆ ಮತ್ತು ಟೀಂ ಈಗಾಗಲೇ ಭಾರತದಲ್ಲಿ ಜಾತಿಗಳೆ ಇಲ್ಲ. ವರ್ಣ, ವರ್ಗ, ಲಿಂಗ ತಾರತಮ್ಯಗಳೆಲ್ಲವೂ ಮನಸ್ಸಿನ ಭ್ರಮೆ. ಇಲ್ಲದಿರುವ ಸಂಗತಿಯನ್ನು ಇರುವಂತೆ ಭಾವಿಸಲು ಹಚ್ಚಿದವರು ಪಾಶ್ಚಾತ್ಯರು. ಆದ್ದರಿಂದ ಶರಣರು ಹಂಗೆಲ್ಲ ಸಮಾಜ ಬದಲಾವಣೆಗೆ ಕ್ರಾಂತಿಕಾರಿ ಆಂದೋಲನ ಮಾಡಿಲ್ಲ. ಅವರು ಅಪ್ಪಟ ಆಧ್ಯಾತ್ಮ ಜೀವಿಗಳು.
ಅದು ಕೂಡ ವೈದಿಕ ಪ್ರಣೀತ ಆಧ್ಯಾತ್ಮ ಎಂದು ಬಿಂಬಿಸಲು ಹೊರಟಿದ್ದಾರೆ. ಆ ಆಧ್ಯಾತ್ಮವಾದರೂ ಎಂಥದ್ದು ಎಂದರೆ “ವ್ಯಕ್ತಿಯೊಬ್ಬನು ಎಷ್ಟೇ ಅಧಿಕಾರವನ್ನು, ಸಂಪತ್ತನ್ನು, ಭೋಗ ಭಾಗ್ಯಗಳನ್ನು ಹೊಂದಿರಲಿ, ಅಷ್ಟಾಗಿಯೂ ಅವನು ದುಃಖಿಯಾಗಿರಬಹುದು. ಇವುಗಳ ಕಾರಣದಿಂದಲೇ ದುಃಖವು ವೃದ್ಧಿಸುತ್ತದೆ ಎಂಬ ಸತ್ಯವು ನಮ್ಮ ಅನುಭವಕ್ಕೆ ಆಗಾಗ ಬರುತ್ತಿರುತ್ತದೆ. ಈ ಸಾಮಾನ್ಯ ಲೌಕಿಕ ಜ್ಞಾನವನ್ನು ಆಧ್ಯಾತ್ಮ ಸಂಪ್ರದಾಯಗಳು ಆಧರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಲೌಕಿಕವಾಗಿ ಬಡವ-ಶ್ರೀಮಂತ, ಸ್ತ್ರೀ-ಪುರುಷ, ಬಾಲ-ವೃದ್ಧ-ವಿಕಲ ಇತ್ಯಾದಿಯಾಗಿ ಯಾವುದೇ ಅವಸ್ಥೆಯಲ್ಲಿರುವ ಒಬ್ಬ ಮನುಷ್ಯನಿಗೂ ಈ ಆನಂದ ಸಮಾನವಾಗಿ ಸಾಧ್ಯವಿದೆ.
ಈ ಕಾರಣದಿಂದ ಮನುಷ್ಯನು ಈ ಲೌಕಿಕ ಸಂಗತಿಗಳಲ್ಲಿ ಸುಖ ದುಃಖಗಳಿವೆ ಎಂದು ನಿರ್ಣಯಿಸುವುದೇ ಒಂದು ತಪ್ಪು ಹೆಜ್ಜೆ” ಮತ್ತೂ ಮುಂದುವರೆದು “ಭಾರತೀಯ ಪರಂಪರೆಗಳ ಪ್ರಕಾರ ಮಾನವನ ಒಳಿತಿನ ಕುರಿತು ಚಿಂತಿಸುವಾಗ ಲೌಕಿಕ ಪ್ರಪಂಚವನ್ನು ಅಂತಿಮ ಆಧಾರವಾಗಿಟ್ಟುಕೊಳ್ಳುವುದು ಒಂದು ತಪ್ಪು ಹೆಜ್ಜೆ” (ಪುಟ-28,29) ಎಂದು ಬರೆಯುತ್ತಾರೆ. ಶತಮಾನಗಳುದ್ದಕ್ಕೂ ಇಂಥ ಮಾತುಗಳನ್ನೆ ಹೇಳಿ ಬಡತನ, ಸಿರಿತನ, ಸ್ತ್ರೀ, ಪುರುಷ, ಪಂಡಿತ, ಪಾಮರ ಇವೆಲ್ಲವೂ ನಿಮ್ಮ ಪೂರ್ವದ ಕರ್ಮ ಫಲ ಎಂದೇ ನಂಬಿಸಿಕೊಂಡು ಬರಲಾಗಿತಷ್ಟೇ. ಮತ್ತದೆ ಹಳಸಲು ಹೆಂಡವನ್ನು ಕುಡಿಸಲು ವೈದಿಕ ಪಟಾಲಂ ಮುಂದಾಗಿದೆ. ಇದಕ್ಕೆ ಆಲಂಬನವಾಗಿ ಅವರು ವಚನ ಸಿದ್ಧಾಂತವನ್ನು ಬಳಸಿ ಬಿಸಾಡಲು ಮುಂದಾಗಿದ್ದಾರೆ. ಆದರೆ ವಚನಕಾರರಲ್ಲಿ ವೈದಿಕರ ಈ ಕುತಂತ್ರಕ್ಕೆ ತಿಲಮಾತ್ರವೂ ಅವಕಾಶವಿಲ್ಲ ಎಂಬದನ್ನು ವಚನಗಳೆ ಸಾಕ್ಷಿಕರಿಸುತ್ತವೆ.
ಅಲ್ಲಮಪ್ರಭು ಬಹಳ ಸ್ಪಷ್ಟವಾಗಿ ಅಂದು
“ಅಜ್ಞಾನವೆಂಬ ತೊಟ್ಟಿಲೊಳಗೆ,
ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದ ಶಾಸ್ತçವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ,
ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು, ನೇಣು ಹರಿದು,
ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು ನೋಡಾ”
ಎಂದು ಹೇಳಿರುವಾಗಲೂ ವೈದಿಕರು ಮತ್ತೆ ಶರಣರನ್ನು ವೈದಿಕ ಕರ್ಮಠತೆಯಲ್ಲಿ ಹಿಡಿದಿಡುವ ವೃಥಾ ಕಸರತ್ತು ಮಾಡಿದ್ದಾರೆ. ಭೌತವಾದಿ ಚಿಂತನಾ ಪ್ರಸ್ಥಾನಗಳು ಭಾರತಕ್ಕೆ ತೀರ ಹೊಸದೇನೂ ಅಲ್ಲ. ಈಗಾಗಲೇ ಈ ನೆಲದಲ್ಲಿ ಲೋಕಾಯತ, ಚಾರ್ವಾಕ, ಸಾಂಖ್ಯ, ನ್ಯಾಯ, ವೈಶೇಷಿಕ, ಯೋಗ ಮುಂತಾದ ದರ್ಶನಗಳಲ್ಲಿ ಅದು ಕಾಣಿಸಿಕೊಂಡಿದೆ. ಇವೆಲ್ಲವೂ ವೈದಿಕ ವಿರೋಧಿ ನಿಲುವು-ನೆಲೆಗಳನ್ನು ಹೊಂದಿರುವಾಗಲೂ ಅವುಗಳನ್ನು ಕೂಡ ತನ್ನ ವಾತಾಪಿ ಗರ್ಭದಲ್ಲಿ ಜೀರ್ಣಿಸಿಕೊಳ್ಳುವ ಪ್ರಯತ್ನ ಮಾಡುತ್ತಲೆ ಬಂದಿದೆ. ಅವೆಲ್ಲವೂ ವೇದಗಳ ಮುಂದುವರೆದ ಭಾಗವೆಂದೇ ಆಕರ್ಷಕ ವಾಗ್ವಿಲಾಸವನ್ನು ಮೆರೆಯುತ್ತಲೆ ಇವೆ. ಈಗ ಅವರ ಕಾಕದೃಷ್ಟಿಗೆ ವಚನಗಳು ಬಿದ್ದಿವೆ. ಆದರೆ ಅರ್ವಾಚೀನ ಕಾಲಘಟ್ಟದ ವಚನ ದರ್ಶನವನ್ನು ಅರಗಿಸಿಕೊಳ್ಳಲು ಅಷ್ಟು ಸುಲಭವಲ್ಲ. ಇವರು ಮಹಾನ್ ದಾರ್ಶನಿಕ ಕೃತಿಗಳೆಂದು ಬಿಂಬಿಸುತ್ತಿರುವ ರಾಮಾಯಣ ಮಹಾಭಾರತಗಳನ್ನು ಕುರಿತು ಬಸವಣ್ಣ
ಆದಿ ಪುರಾಣ ಅಸುರರಿಗೆ ಮಾರಿ,
ವೇದ ಪುರಾಣ ಹೋತಿಂಗೆ ಮಾರಿ
ರಾಮಪುರಾಣ ರಕ್ಕಸರಿಗೆ ಮಾರಿ
ಭಾರತ ಪುರಾಣ ಗೋತ್ರಕ್ಕೆ ಮಾರಿ
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ” ಎಂದಿದ್ದಾರೆ.
ರಾಮ ಮಂದಿರವೆಂಬ ಸ್ಥಾವರವೊಂದನ್ನು ಕಟ್ಟಲೆಂದು ಧರ್ಮ ಪಾಲನೆ ಹೆಸರಲ್ಲಿ ಸಾವಿರಾರು ಹೆಣಗಳನ್ನು ಉರುಳಿಸಲಾಯಿತು. ಆರ್ಎಸ್ಎಸ್ ಧೂರ್ತರಿಗೂ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂಬ ಬಸವ ಚಳುವಳಿಗೂ ಎಂದಾದರೂ ಸಮೀಕರಣ ಸಾಧ್ಯವೆ? “ವಚನ ದರ್ಶನ” ಎಂಬ ಪುಸ್ತಕವನ್ನು ಸಂಘ ಪರಿವಾರದ ವಕ್ತಾರರು ಅಯೋಧ್ಯೆ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಮುಖಪುಟದಲ್ಲಿ ಹೆಸರಿಲ್ಲದ ಭಾವ ಚಿತ್ರವೊಂದನ್ನು ಪ್ರಕಟಿಸಿ ವೈದಿಕ ಸಾಧಕನೊಬ್ಬನ ಭಾಸವಾಗುವಂತೆ ಮಾಡಿದ್ದಾರೆ. ಮುಖಪುಟದ ತುದಿಯಲ್ಲಿ ಬಿಲ್ಲು ಬಾಣದ ಸಂಕೇತವಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಪರಮ ಅಹಿಂಸಾವಾದಿಗಳಾಗಿದ್ದ ಶರಣರನ್ನು ಹಿಂಸಾರಭಸ ಮತಿಗಳೆಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಶಿವಶರಣರ ಆತ್ಮ ಪ್ರತ್ಯಯಾತ್ಮಕ ಅನನ್ಯ ಭಕ್ತಿಯನ್ನು ಮಸಳಿಸಿ ದುರ್ಬಲ ಮನಸಿನ ಭಕ್ತಿ ಲೋಲುಪ್ತತೆಯನ್ನು ಆರೋಪಿಸಲಾಗುತ್ತಿದೆ. ಇದೊಂದು ಚಾರಿತ್ರಿಕ ದ್ರೋಹ ಮತ್ತು ದಾರ್ಶನಿಕ ಭ್ರಷ್ಟತೆ ಎನ್ನದೆ ಗತ್ಯಂತರವಿಲ್ಲ.
ಈ ಕ್ಷಣದಲ್ಲಿ ಅನುಮಾನಕ್ಕೆ ಆಸ್ಪದವಿಲ್ಲದಂತೆ ಕೋಮುವಾದಿ ರಾಜಕಾರಣದ ದುಷ್ಟ ಹುನ್ನಾರ ಇಂಥ ಪುಸ್ತಕಗಳಲ್ಲಿನ ಲೇಖನಗಳನ್ನು ಉತ್ಪಾದಿಸಿ ಪ್ರಚುರಪಡಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ಒಟ್ಟಾರೆ ಇಲ್ಲಿನ ವೈದಿಕ ಪ್ರಣೀತ ಚಿಂತನಾಧಾರೆಯ ವಿದ್ವಾಂಸರಿಗೆ ಸಮಾಜವಾದ, ಮಾರ್ಕ್ಸವಾದ, ಸ್ತ್ರೀವಾದಗಳೆಂದರೆ ಅಲರ್ಜಿ. ಅವು ಪಾಶ್ಚಾತ್ಯ ವಿಚಾರಧಾರೆಗಳು ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಅವು ಭಾವವಾದಿ ಅವೈಜ್ಞಾನಿಕ ಪೊಳ್ಳು ದರ್ಶನಗಳನ್ನು ಬೆತ್ತಲೆ ಮಾಡುತ್ತವೆ ಎಂಬುದೇ ಅವರ ನಿದ್ದೆ ಕೆಡಿಸಿದೆ.
ವಚನಕಾರರಿಗೆ ಇಹದ ಬದುಕು ಆನುಭಾವಿಕ ಲೋಕಕ್ಕೆ ನಿಕಷವಾಗಿತ್ತು. “ಮತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ” ಎನ್ನುತ್ತ “ಸುಖ ಬಂದಡೆ ಪುಣ್ಯದ ಫಲವೆನ್ನೆನು, ದುಃಖ ಬಂದಡೆ ಪಾಪದ ಫಲವೆನ್ನೆನು” ಹೀಗೆ ಹೇಳಿದ ದಾರ್ಶನಿಕರನ್ನು ನಿಗೂಢೀಕರಿಸಿದ ಭಾವವಾದಿಗಳೆಂಬಂತೆ ಬಿಂಬಿಸುವ ಪ್ರಯತ್ನ ಇಲ್ಲಿನದು.
“ವಚನ ದರ್ಶನ” ಎಂಬ ಪುಸ್ತಕವನ್ನು ಸಂಘ ಪರಿವಾರದ ವಕ್ತಾರರು ಅಯೋಧ್ಯೆ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಮುಖಪುಟದಲ್ಲಿ ಹೆಸರಿಲ್ಲದ ಭಾವ ಚಿತ್ರವೊಂದನ್ನು ಪ್ರಕಟಿಸಿ ವೈದಿಕ ಸಾಧಕನೊಬ್ಬನ ಭಾಸವಾಗುವಂತೆ ಮಾಡಿದ್ದಾರೆ. ಮುಖಪುಟದ ತುದಿಯಲ್ಲಿ ಬಿಲ್ಲು ಬಾಣದ ಸಂಕೇತವಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಪರಮ ಅಹಿಂಸಾವಾದಿಗಳಾಗಿದ್ದ ಶರಣರನ್ನು ಹಿಂಸಾರಭಸ ಮತಿಗಳೆಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನೂ ನೋಡಿ: ಕಾಂಪ್ಲೆಕ್ಸ್ ತೆಗೆದು ಮಾಲ್ ಮಾಡಿದ್ರೆ ಜನರ ಆರೋಗ್ಯ ಹಾಳಾಗುತ್ತೆ | ಬಿಡಿಎ ನಮ್ಮ ಸ್ವತ್ತು ಖಾಸಗೀಯವರಿಗೆ ಕೊಡೋದಿಲ್ಲ