ಐಕ್ಯ ಚಳುವಳಿಯ ಮೂಲಕ ಎಲ್‌ಐಸಿ ಉಳಿಸಿಕೊಳ್ಳಬೇಕಿದೆ – ಎಲ್. ಮಂಜುನಾಥ

-ಸಿ.ಸಿದ್ದಯ್ಯ

ಅಖಿಲ ಭಾರತ ಜೀವ ವಿಮಾ ಪ್ರತಿನಿದಿಗಳ ಸಂಘಟನೆಯ- ಲಿಕಾಯಿ (LICAOI- LIC Agents Organisation of India) ದ ಕರ್ನಾಟಕ ರಾಜ್ಯ ಮಹಿಳಾ ಪ್ರತಿನಿಧಿಗಳ ಮೂರನೇ ರಾಜ್ಯ ಸಮಾವೇಶ ಸೆಪ್ಟೆಂಬರ್ ಒಂದರಂದು ಬೆಂಗಳೂರಿನ ಸೌಹಾರ್ದ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಲಿಕಾಯಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರು ಹಾಗೂ CITU ‌ರಾಜ್ಯ ಕಾರ್ಯದರ್ಶಿ ಎಲ್. ಮಂಜುನಾಥ ಮಾತನಾಡಿ, ಪ್ರತಿನಿಧಿಗಳ ಅಸ್ತಿತ್ವ ಮತ್ತು ಸಂಸ್ಥೆಯ ಉಳಿವು ಕೇಂದ್ರ ಸರ್ಕಾರದ ಧೋರಣೆ ಮತ್ತು ನೀತಿಗಳನ್ನು ಅವಲಂಭಿಸಿದೆ. ಸಂಸ್ಥೆಯನ್ನು ಉಳಿಸಿಕೊಳ್ಳಲು ಮುಂಬರುವ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ. ಎಲ್ ಐಸಿ ಪಾಲಿಸಿದಾರರು, ಪ್ರತಿನಿಧಿಗಳು, ಸಂಸ್ಥೆಯ ಉದ್ಯೋಗಿಗಳು ಹಾಗೂ ಜನರ ಐಕ್ಯ ಚಳುವಳಿಯ ಮೂಲಕ ಸಂಸ್ಥೆಯನ್ನು ಉಳಿಸಲು ಮತ್ತು ಮತ್ತಷ್ಟು ಬೆಳೆಸಲು ಪಣತೊಡಬೇಕಿದೆ ಎಂದರು.

ಲಿಕಾಯಿ ರಾಜ್ಯ ಗೌರವಾಧ್ಯಕ್ಷರು ಹಾಗೂ CITU ರಾಜ್ಯ ಉಪಾಧ್ಯಕ್ಷರಾದ ಕೆ. ಪ್ರಕಾಶ್ ಸಮಾರೋಪ ಭಾಷಣ ಮಾತನಾಡುತ್ತಾ, ಸಮಾಜದಲ್ಲಿ ಮಹಿಳೆಯರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾತೃ ಪ್ರಧಾನ ವ್ಯವಸ್ಥೆ ಹೋಗಿ, ಪಿತೃ ಪ್ರಧಾನ ವ್ಯವಸ್ಥೆ ಹೇರುವ ಮೂಲಕ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರ ಕಡೆಗಣನೆ ನಿರಂತರವಾಗಿ ನಡೆಯುತ್ತಿದೆ. ಉತ್ಪಾದನೆಯಲ್ಲಿ ತೊಡಗಿದ ಎಲ್ಲಾ ಶ್ರಮಜೀವಿಗಳು ಮಹಿಳಾ ಮತ್ತು ಪುರುಷ ಎನ್ನುವ ಲಿಂಗಭೇದವಿಲ್ಲದೆ, ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡುವ ಸಮಾಜವನ್ನು ಕಟ್ಟುವ ದಿಶೆಯಲ್ಲಿ ಈ ಮಹಿಳಾ ಸಮಾವೇಶ ಮುಂದಾಗಬೇಕು. ಆ ನಿಟ್ಟಿನಲ್ಲಿ ಎಲ್ಐಸಿಯತಂತಹ ಸೇವಾ ವಲಯದ ಸಂಸ್ಥೆಯನ್ನು ಉಳಿಸಲು, ಆ ಮೂಲಕ ದೇಶ ಕಟ್ಟಲು ಮುಂದಾಗಿ. ಅದಕ್ಕಾಗಿ ವಿಮಾ ಪ್ರತಿನಿಧಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಂಘಟಿಸುವ ಜವಾಬ್ದಾರಿ ನಿಮ್ಮದಾಗಿದೆ. ಇದಕ್ಕೆ ಸಿಐಟಿಯು ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಮಹಿಳಾ ಉಪ ಸಮಿತಿ ಸಂಚಾಲಕರಾದ ಎಚ್.ಎಸ್.ಸುನಂದ ಅವರು, ರಾಷ್ಟ್ರ ಮತ್ತು ರಾಜ್ಯದಲ್ಲಿನ ದುಡಿಯುವ ಮಹಿಳೆಯರ ಪರಿಸ್ಥಿತಿ, ಆಳುವ ಸರ್ಕಾರಗಳ ದ್ವಿಮುಖ ಧೋರಣೆಗಳು, ಮಹಿಳೆಯರ ಮೇಲೆ ಉಂಟಾಗುವ ಪರಿಣಾಮಗಳು, ಉದ್ಯೋಗದಲ್ಲಿ ತಾರತಮ್ಮ, ವೇತನದಲ್ಲಿ ಕಡಿತ ಹಾಗೂ ಭದ್ರತೆ ಮತ್ತು ಸೌಲಭ್ಯಗಳನ್ನು ಕೊಡುವಲ್ಲಿ ಸರ್ಕಾರದ ಹಿಂಜರಿತ, ಕನಿಷ್ಠ ಸೌಲಭ್ಯಗಳನ್ನು ನೀಡದೆ, ನಾಗರಿಕ ರಕ್ಷಣೆ ಇಲ್ಲದೆ ಮಹಿಳೆಯರು ಎಲ್ಲದರಿಂದಲೂ ಹಿಂದೆ ಉಳಿಯುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಮಹಿಳೆ ಮನೆಗೆ ಸೀಮಿತ ಎನ್ನುವ ಪರಿಸ್ಥಿತಿ
ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯನ್ನು ವಿರೋಧಿಸಿ ದುಡಿಯುವ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ. ತಾವುಗಳು ಈ ಎಲ್ಲಾ ಚಳುವಳಿಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಇತರೆ ಮಹಿಳಾ ಪ್ರತಿನಿಧಿಗಳನ್ನು ಸಂಘಟಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಉಪಸಮಿತಿ ಆಯ್ಕೆ

ಸಮಾವೇಶದಲ್ಲಿ 25 ಜನರ ರಾಜ್ಯ ಮಟ್ಟದ ಮಹಿಳಾ ಉಪಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಮಿತಿಗೆ ಸಂಚಾಲಕರಾಗಿ ಆರ್. ಶಿವರುದ್ರಮ್ಮ (ಮೈಸೂರು), ಸಹ ಸಂಚಾಲಕರುಗಳಾಗಿ ಜಿ.ಜಿ. ಸವಿತಾ, ಸಂಗೀತಾ ಶೆಟ್ಟಿ, ಸರಸ್ವತಿ, ಚಂದ್ರಿಕಾ, ನೇತ್ರಾವತಿ, ಬಸಮ್ಮ ಮತ್ತು ಭವಾನಿ ಅಮೀನ್ ಆಯ್ಕೆಯಾದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ 147 ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದು, 28 ಕ್ಕೂ ಹೆಚ್ಚು ಪ್ರತಿನಿಧಿಗಳು ಮಾತನಾಡುವ ಮೂಲಕ ವರದಿಯನ್ನು ಪೂರ್ಣಗೊಳಿಸಿದರು.

ವಿಮಾವಲಯದ ಖಾಸಗೀಕರಣದಿಂದ ಆಗುವ ಅಪಾಯಗಳ ಕುರಿತು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಿದೆ

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ವಿಶ್ವದ ಒಂದು ವಿಶಿಷ್ಟವಾದ ವಿಮಾ ಸಂಸ್ಥೆಯಾಗಿದೆ. ಎಲ್ಐಸಿಯನ್ನು ಸ್ಥಾಪಿಸುವಾಗ ನೀತಿ ನಿರೂಪಕರು “ಅಪಾಯದ ವಿರುದ್ಧ ಸುರಕ್ಷಿತ ವಿಮೆಯನ್ನು ಒದಗಿಸಿ ಮತ್ತು ಅದೇ ಸಮಯದಲ್ಲಿ, ಜನಸ್ನೇಹಿ ಉಳಿತಾಯ ಸಾಧನವನ್ನು ಒದಗಿಸಿ” ಎಂಬ ಎರಡು ಉದ್ದೇಶಗಳನ್ನು ಹೊಂದಿದ್ದರು. ಆದರೆ, ಇಂದಿನ ಪ್ರಭುತ್ವ ವಿಮಾ ವಲಯದಲ್ಲಿ ಸ್ವದೇಶಿ ಮತ್ತು ವಿದೇಶಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ನೀತಿ ನಿರೂಪಕರ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಉಳಿತಾಯ

ಸಾಲದೆಂಬಂತೆ ಎಲ್ ಐಸಿ ಯ ಷೇರು ಮತ್ತು ಅದರ ಆಸ್ತಿಗಳ ಮಾರಾಟದ ಮೂಲಕ ಸಾರ್ವಜನಿಕ ವಿಮಾ ಸಂಸ್ಥೆಯನ್ನೂ ಖಾಸಗಿಯವರ ತೆಕ್ಕೆಗೆ ಹಾಕಲು ಮುಂದಾಗಿದೆ. ಜೀವ ವಿಮೆಯು ದೀರ್ಘಾವಧಿಯ ಹೂಡಿಕೆಯಾಗಿರುವುದರಿಂದ, ವಿಮಾ ವ್ಯವಹಾರವು ಕೇವಲ ನಂಬಿಕೆಯನ್ನು ಆಧರಿಸಿದೆ. ಆದ್ದರಿಂದ ವಿಮಾ ಕ್ಷೇತ್ರ ಸರ್ಕಾರದ ಹಿಡಿತದಲ್ಲಿಯೇ ಉಳಿಯಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಪುಸ್ತಕದಲ್ಲಿ ತಿಳಿಸಿದ್ದಾರೆ.

ವಿಮೆಯ ರಾಷ್ಟ್ರೀಕರಣದ ಕಲ್ಪನೆಯು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹೊರಹೊಮ್ಮಿದ ರಾಷ್ಟ್ರೀಯ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿತ್ತು. ಜೊತೆಗೆ ಇದು ವಸಾಹತುಶಾಹಿ ಆಡಳಿತದಿಂದ ವಿಮೋಚನೆಯ ಗುರಿಯನ್ನು ಹೊಂದಿತ್ತು. ಶೋಷಣೆಯನ್ನು ಕೊನೆಗೊಳಿಸುವ ಸಲುವಾಗಿ , 1931 ರಲ್ಲಿ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನವು, ರಾಜಕೀಯ ಸ್ವಾತಂತ್ರ್ಯದ ಹೊರತಾಗಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ನಿಜವಾದ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬೇಕು ಎಂದು ಘೋಷಿಸಿತು. ಉಳಿತಾಯ

ಇದನ್ನೂ ಓದಿ: ಆರ್ಥಿಕ ವಿಷಯಗಳ ಕುರಿತು ಚರ್ಚೆ; ವಿರೋಧ ಪಕ್ಷಗಳು ಆಡಳಿತದಲ್ಲಿರುವ ಐದು ರಾಜ್ಯಗಳ ಪ್ರತಿನಿಧಿಗಳ ಜೊತೆ ಕೇರಳ ಸಮಾವೇಶ

1934 ರಲ್ಲಿ ಕಾಂಗ್ರೆಸ್ ಸೊಷಿಯಲಿಸ್ಟ್ ಗುಂಪಿನ ಸಭೆಯಲ್ಲಿ ಅಂಗೀಕರಿಸಿದ ಸ್ವಾತಂತ್ರ್ಯದ ಚಾರ್ಟರ್ ನಲ್ಲಿ, ʼಜನರ ಸಣ್ಣ ಉಳಿತಾಯವನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವನ್ನು ಕಾಂಗ್ರೆಸ್ ಬಲವಾಗಿ ನಂಬುತ್ತದೆ ಮತ್ತು ಸರ್ಕಾರವು ದೇಶದ ಆರ್ಥಿಕತೆಯಲ್ಲಿ ಕಾರ್ಯತಂತ್ರದ ಸ್ಥಾನವನ್ನು ಹೊಂದಿರಬೇಕು’ ಎಂದು ಬರೆಯಲಾಗಿದೆ.

ಆದ್ದರಿಂದ, ಸ್ವಾತಂತ್ರ್ಯ ಚಳವಳಿಯು ಜನರ ಉಳಿತಾಯದ ಮೇಲೆ ಸರ್ಕಾರವೇ ನಿಯಂತ್ರಣವನ್ನು ಹೊಂದಿರಬೇಕು ಮತ್ತು ಅವುಗಳನ್ನು ರಾಷ್ಟ್ರೀಯ ಅಭಿವೃದ್ಧಿಗೆ ಮಾತ್ರ ಬಳಸಬೇಕು ಮತ್ತು ಖಾಸಗಿ ಉದ್ಯಮಗಳಿಗೆ ಬಳಸಬಾರದು ಎಂಬುದೇ ಇದರ ಅರ್ಥ. ಉಳಿತಾಯ

ಜೀವ ವಿಮಾ ವ್ಯವಹಾರ ರಾಷ್ಟ್ರೀಕರಣ

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ವಿಮಾ ವಲಯದಲ್ಲಿ ವಿಷಮ ಪರಿಸ್ಥಿತಿಗಳಿದ್ದವು. ಜೀವವಿಮಾ ಕ್ಷೇತ್ರದಲ್ಲಿ ನಾಗರಿಕರ ಹಣದ ಭದ್ರತೆ ಖಾಸಗಿಯವರ ಕೈಯಲ್ಲಿತ್ತು. ವಿದೇಶಿ ಕಂಪನಿಗಳು ದೇಶೀಯ ಉಳಿತಾಯವನ್ನು ದೋಚುತ್ತಿದ್ದರು. ಖಾಸಗಿ ವಿಮಾ ಕಂಪನಿಗಳು ತಾವು ಸಾರ್ವಜನಿಕರಿಂದ ಸಂಗ್ರಹಿಸಿದ ಪ್ರೀಮಿಯಂಗಳನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡು ಪಾಲಿಸಿದಾರರನ್ನು ವಂಚಿಸುತ್ತಿದ್ದವು. ನಾಗರಿಕರ ಹಣ ಸಂಪೂರ್ಣ ರಕ್ಷಣೆಯಾಗಬೇಕಾದರೆ ರಾಷ್ಟ್ರೀಕರಣವೊಂದೇ ಪರಿಹಾರವಾಗಿತ್ತು. ಉಳಿತಾಯ

1956 ಜನವರಿ 19ರಂದು, ಎಲ್ಲಾ 245 ಖಾಸಗಿ ವಿಮಾ ಕಂಪನಿಗಳನ್ನು ಒಟ್ಟುಗೂಡಿಸಿ ಭಾರತೀಯ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಲಾಯಿತು. ಭಾರತೀಯ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸಿ ಜೀವ ವಿಮೆ ಎಂದು ರೂಪುಗೊಂಡ ಗುರಿಗಳನ್ನು ಸಾಧಿಸುವಲ್ಲಿ ಎಲ್ಐಸಿ ಯಶಸ್ವಿಯಾಗಿದೆ. ವಿಮೆಯ ರಾಷ್ಟ್ರೀಕರಣವು ನಮ್ಮ ಸಂವಿಧಾನದ 38 ಮತ್ತು 39 ನೇ ವಿಧಿಯಲ್ಲಿ ಪ್ರತಿಪಾದಿಸಲ್ಪಟ್ಟಿರುವ ಜನರ ಆಶೋತ್ತರಗಳನ್ನು ಪೂರೈಸುವ ಒಂದು ಸಾಧನವನ್ನಾಗಿ ನೋಡಬಹುದು. ಸ್ವಾತಂತ್ರ್ಯದ ಕ್ರಮಗಳಲ್ಲಿ ಒಂದಾದ ಜೀವ ವಿಮಾ ವಲಯದ ರಾಷ್ಟ್ರೀಕರಣವು
ಆಧುನಿಕ ಸಮಾಜವಾದಿ ರಾಷ್ಟ್ರವನ್ನು ನಿರ್ಮಿಸುವ ದೃಷ್ಟಿಯ ಪ್ರಮುಖ ಭಾಗವಾಗಿತ್ತು. ಉಳಿತಾಯ

ಭಾರತೀಯ ಜೀವ ವಿಮಾ ನಿಗಮವು ರಾಷ್ಟ್ರೀಕರಣದ ಉದ್ದೇಶಗಳ ಅನ್ವೇಷಣೆಯ ಮೂಲಕ ಕಳೆದ 68 ವರ್ಷಗಳಿಂದ ದೇಶೀಯ ಹಣಕಾಸು ವಲಯದ ಬೆನ್ನೆಲುಬಾಗಿದೆ. ಮಾರ್ಚ್ 31, 2023 ರೊಳಗೆ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ರೂ. 3,97,204 ಕೋಟಿ ನಿಧಿಗಳು ಹೂಡಿಕೆಯಾಗಿವೆ. 1956ರಲ್ಲಿ ಕೇವಲ 5 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಆರಂಭವಾಗಿ, ಇಂದು ದೇಶಾದ್ಯಂತ 40 ಕೋಟಿಗೂ ಹೆಚ್ಚು ವೈಯಕ್ತಿಕ ಮತ್ತು ಗುಂಪು ವಿಮಾ ಪಾಲಿಸಿದಾರರನ್ನು ಹೊಂದಿದೆ. ಉಳಿತಾಯ

95ರಷ್ಟು ಹೆಚ್ಚುವರಿ ಮೊತ್ತವನ್ನು ಪಾಲಿಸಿದಾರರಿಗೆ ಬೋನಸ್ ಎಂದು ಘೋಷಿಸಿ ಉಳಿದ ಶೇ. 5ನ್ನು ಸರಕಾರಕ್ಕೆ ಡಿವಿಡೆಂಡ್ ಆಗಿ ನೀಡಿ, ಪರಸ್ಪರ ಸಹಕಾರದ ಮನೋಭಾವನೆಯಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಜನತೆಗೆ ಭರವಸೆ ಮೂಡಿಸಿದೆ. ಎಲ್ ಐ ಸಿ 45,50,571.73 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ ಮತ್ತು
40,81,326.41 ಕೋಟಿ ರೂಪಾಯಿಗಳ ಜೀವ ನಿಧಿಯನ್ನು ಹೊಂದಿದೆ. ಇದು ಹಲವು ದೇಶಗಳ ಆರ್ಥಿಕತೆಗಳ ಜಿಡಿಪಿಗಿಂತ ಹೆಚ್ಚು. ಭಾರತೀಯ ವಿಮಾ ವಲಯದಲ್ಲಿ ಖಾಸಗಿ ಮತ್ತು ವಿದೇಶಿ ಕಂಪನಿಗಳಿಗೆ ಅವಕಾಶ ನೀಡಿ 2 ದಶಕಗಳ ನಂತರವೂ, ಸಾರ್ವಜನಿಕ ವಲಯದ ಎಲ್ಐಸಿಯು 24 ಖಾಸಗಿ ವಿಮಾ ಕಂಪನಿಗಳೊಂದಿಗೆ ಪೈಪೋಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 24ರ ಆರ್ಥಿಕ ವರ್ಷದಲ್ಲಿ ಮೊದಲ ಪ್ರೀಮಿಯಂ ಆದಾಯದಲ್ಲಿ 58.8 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಎಲ್ ಐ ಸಿ ಭಾರತೀಯ ವಿಮಾ ವಲಯದಲ್ಲಿ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಉಳಿತಾಯ

2023-24 ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ 2.5 ರಷ್ಟು ಏರಿಕೆಯಾಗಿ 13,762 ಕೋಟಿ ರೂಪಾಯಿಗಳಾಗಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ರೂ. 13,421 ಕೋಟಿ. ಎಲ್ ಐ ಸಿಯ ನಿಜವಾದ ಆಸ್ತಿ ಮೌಲ್ಯವು ಪ್ರಸ್ತುತ ಮೌಲ್ಯಮಾಪನಕ್ಕಿಂತ ಐದು ಪಟ್ಟು ಹೆಚ್ಚಿರಬಹುದು ಎಂದು ಎಲ್‌ಐಸಿ ಕಾರ್ಯನಿರ್ವಾಹಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ‘ಮನಿಕಂಟ್ರೋಲ್’ ವರದಿ ಮಾಡಿದೆ.

ಆಸ್ತಿಗಳ ಮಾರಾಟಕ್ಕೆ ಯೋಜನೆ?

ಎಲ್‌ಐಸಿ ತನ್ನ ಪ್ಲಾಟ್‌ಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ಮಾರಾಟ ಮಾಡುವ ಮೂಲಕ $ 6-7 ಬಿಲಿಯನ್ ಸಂಗ್ರಹಿಸಲು ಯೋಜಿಸುತ್ತಿದೆ ಎಂದು ಲೈವ್‌ಮಿಂಟ್ ವರದಿ ಮಾಡಿದೆ. ಮುಂಬೈನಿಂದ ಪ್ರಾರಂಭವಾಗುವ ದೇಶಾದ್ಯಂತ ತನ್ನ ರಿಯಲ್ ಎಸ್ಟೇಟ್ ಆಸ್ತಿಗಳ ಮಾರಾಟ ಯೋಜನೆಯನ್ನು ರೂಪಿಸಲು ವಿಮಾ ಬೆಹೆಮೊಥ್ ಆಂತರಿಕ ತಂಡವನ್ನು ಒಟ್ಟುಗೂಡಿಸಿದೆ ಎಂದು ವರದಿಯು ಮೂಲಗಳನ್ನು ಉಲ್ಲೇಖಿಸಿದೆ. ಆದರೆ, ಎಲ್ ಐ ಸಿ ಈ ವರದಿಯನ್ನು ನಿರಾಕರಿಸಿದೆ ಮತ್ತು ಅಂತಹ ಯಾವುದೇ ಯೋಜನೆ ಇಲ್ಲ ಎಂದು ಹೇಳಿದೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯು ತಪ್ಪಾಗಿದೆ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಅದು ಹೇಳಿದೆ. ಲೈವ್ ಮಿಂಟ್ ಮಾಡಿದ ವರದಿಯನ್ನು ಸಂಸ್ಥೆಯು ನಿರಾಕರಿಸಿದೆಯಾದರೂ, ಇದನ್ನು ಅಲ್ಲಗಳೆಯಲಾಗದು.

ಎಲ್ ಐ ಸಿ ಮೇಲೆ ಅಚಲವಾದ ನಂಬಿಕೆ

ಖಾಸಗಿ ವಿಮಾ ಸಂಸ್ಥೆಗಳಿಗೆ ಹೋಲಿಸಿದರೆ, ಪಾಲಿಸಿದಾರರಿಗೆ ಎಲ್ ಐ ಸಿ ಮೇಲಿನ ನಂಬಿಕೆ ಅಚಲವಾದದ್ದು. ‘ಅಚಲವಾದ ನಂಬಿಕೆ’ ಎಂದರೇನು ಎಂಬುದಕ್ಕೆ ಖ್ಯಾತ ಲೇಖಕ ರಾಬಿನ್ ಶರ್ಮಾ ಅವರು ಹೀಗೆ ಉದಾಹರಿಸುತ್ತಾರೆ. ಒಂದು ವಿಮಾನವು ಗಾಳಿಯಲ್ಲಿ ಹಾರುತ್ತಿತ್ತು ಮತ್ತು ತೀವ್ರ ನಡುಕವನ್ನು ಅನುಭವಿಸಿತು. ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ನಡುಗುತ್ತಿರುವಾಗ, ಒಬ್ಬ ಹುಡುಗಿ ತುಂಬಾ ಧೈರ್ಯದಿಂದ ಕುಳಿತಿದ್ದಾಳೆ. ಅವಳು ಹೇಗೆ ಧೈರ್ಯಶಾಲಿಯಾಗಿದ್ದಾಳೆ ಎಂದು ಅಲ್ಲಿದ್ದವರಿಗೆ ಆಶ್ಚರ್ಯ. ಉಳಿತಾಯ

ನಿನಗೆ ಇಷ್ಟೊಂದು ಧೈರ್ಯ ಯಾಕೆ ಎಂದು ಆಕೆಯನ್ನು ಕೇಳುತ್ತಾರೆ. ಆ ಹುಡುಗಿ ಹೇಳುತ್ತಾಳೆ ‘ಈ ವಿಮಾನದ ಪೈಲಟ್ ನನ್ನ ತಂದೆ. ಎಂತಹ ಪರಿಸ್ಥಿತಿಯಲ್ಲೂ ನನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ ನನಗಿದೆ '. ವಿಮಾನದಲ್ಲಿದ್ದವರೆಲ್ಲರೂ ಚಪ್ಪಾಳೆ ತಟ್ಟಿತ್ತಾರೆ. ಈ ಕಥೆಯಲ್ಲಿ ಬರುವ ಹುಡುಗಿನಂತೆಯೇ ಕೋಟಿಗಟ್ಟಲೆ ಜನರಿಗೆ ಎಲ್ಐಸಿ ಮೇಲೆ ಅಚಲವಾದ ನಂಬಿಕೆ ಇದೆ. ಏನೇ ಏರಿಳಿತಗಳು ಸಂಭವಿಸಿದರೂ ಎಲ್ ಐಸಿ ತನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ಭರವಸೆ ಇರುವುದರಿಂದ ಎಲ್ ಐಸಿ ವಿಮಾ ವಲಯದಲ್ಲಿ ಬಹಳಷ್ಟು ಪ್ರಾಬಲ್ಯ ಸಾಧಿಸುತ್ತಿದೆ. ಎಲ್ಐಸಿಯ ಖಾಸಗೀಕರಣವು ನಿಸ್ಸಂದೇಹವಾಗಿ ನೀತಿಗಳಿಗೆ ಸಾರ್ವಭೌಮ ಖಾತರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಸಾಮಾನ್ಯ ಜನರ ಸಾಮಾನ್ಯ ಅಪಾಯದ ನಿವಾರಣೆಯನ್ನು ಗಮನಿಸಿದರೆ, LIC ಯಲ್ಲಿನ ಜನಪ್ರಿಯ ನಂಬಿಕೆಯ ಹಿಂದೆ ಖಾತರಿಯು ಒಂದು ಪ್ರಮುಖ ಅಂಶವಾಗಿದೆ. ಖಾಸಗೀಕರಣಗೊಂಡ ಎಲ್ ಐ ಸಿ ಆಡಳಿತದಲ್ಲಿ, ಲಾಭವನ್ನು ಹೆಚ್ಚಿಸಲು ಮುಂದಾಗುತ್ತವೆ. ಅದಕ್ಕಾಗಿ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತವೆ. ಹೂಡಿಕೆಗಳು ಹೆಚ್ಚಿನ ಲಾಭಕ್ಕಾಗಿಯಾದರೂ, ಅಪಾಯಕಾರಿ ಷೇರು ಮತ್ತು ಬಾಂಡ್ ಮಾರುಕಟ್ಟೆಗಳಿಗೆ ಇದು ಬದಲಾಗುತ್ತವೆ. ಇದು ಅಪಾಯಕಾರಿ ವ್ಯವಹಾರವಾಗಬಹುದು. 1990 ಮತ್ತು 2020 ರ ನಡುವೆ, US ನಲ್ಲಿ 82 ವಿಮಾ ಕಂಪನಿಗಳು ಮುಚ್ಚಿಹೋಗಿವೆ ಎಂಬುದನ್ನು ನೆನಪಿಸಿಕೊಳ್ಳಬೇಕು.

ಕ್ಲೈಮ್ ಇತ್ಯರ್ಥದೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನ

ಎಲ್ ಐಸಿ ಶೇ. 99ರಷ್ಟು ಕ್ಲೈಮ್ ಇತ್ಯರ್ಥದೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 2023-24 ರ ಹಣಕಾಸು ವರ್ಷದಲ್ಲಿ, LIC ಎರಡು ಕೋಟಿಗೂ ಹೆಚ್ಚು ಕ್ಲೈಮ್ ಗಳನ್ನು ಪಾವತಿಸಿದೆ ಮತ್ತು ಕ್ಲೈಮ್ ಗಳ ಸೆಟಲ್ಮೆಂಟ್ ನಲ್ಲಿ ವಿಶ್ವದ ಅತ್ಯುತ್ತಮ ವಿಮಾದಾರ ಎಂದು ಹೆಸರಾಗಿದೆ. ಕಳೆದ ಆರ್ಥಿಕ ವರ್ಷವೊಂದರಲ್ಲೇ 2,09,938.63 ಕೋಟಿ ಇತ್ಯರ್ಥವಾಗಿದ್ದು, 225.51 ಲಕ್ಷ ಕ್ಲೇಮ್ ಗಳನ್ನು ಇತ್ಯರ್ಥಪಡಿಸಲಾಗಿದೆ. ಸಾವಿನ ಹಕ್ಕುಗಳ 98.6 ಪ್ರತಿಶತ ಪರಿಹಾರ ಮತ್ತು ಪಾಲಿಸಿದಾರರ ನಂಬಿಕೆಯನ್ನು ಉಳಿಸಿಕೊಂಡಿದೆ. 27.74 ಕೋಟಿ ಪಾಲಿಸಿಗಳನ್ನು ಪೂರೈಸುತ್ತಿರುವ ಎಲ್ಐಸಿ ವಿಶ್ವದಲ್ಲೇ ಅತಿ ಹೆಚ್ಚು ಪಾಲಿಸಿದಾರರನ್ನು ಹೊಂದಿರುವ ಅತಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.

2019–20 ರಲ್ಲಿ, ವಿಮಾ ವಲಯದಲ್ಲಿ ಭಾರತದಲ್ಲಿನ ಅನ್ಯಾಯದ ವ್ಯವಹಾರ ಅಭ್ಯಾಸದ ದೂರುಗಳ ಒಟ್ಟು ಸಂಖ್ಯೆ 43,444 ಆಗಿತ್ತು, ಅದರಲ್ಲಿ ಶೇ. 90 ಖಾಸಗಿ ವಿಮಾದಾರರಿಗೆ ಸಂಬಂಧಿಸಿದೆ. ಒಟ್ಟು ವ್ಯವಹಾರದಲ್ಲಿ ಅವರ ಪಾಲು ಕೇವಲ ಶೇ. 34 ಎಂದು ನೆನಪಿಸಿಕೊಳ್ಳಬಹುದು. 2021 ರಲ್ಲಿ, ಎಲ್ಐಸಿಯ ನಿರ್ವಹಣಾ ವೆಚ್ಚವು ಪ್ರೀಮಿಯಂನ ಕೇವಲ ಶೇ. 8.68 ರಷ್ಟಿತ್ತು ಮತ್ತು ಖಾಸಗಿ ವಿಮಾ ಕಂಪನಿಗಳದು ಶೇ. 11.72 ಆಗಿತ್ತು.

ಶೇ. 48 ಕ್ಕಿಂತ ಹೆಚ್ಚು ಪ್ರತಿನಿಧಿಗಳು ಗ್ರಾಮೀಣ ಪದೇಶದವರು

ಎಲ್ ಐಸಿ ಯಲ್ಲಿ ಕೆಲಸ ಮಾಡುವ 14 ಲಕ್ಷ ಏಜೆಂಟರಲ್ಲಿ ಶೇ. 48 ಕ್ಕಿಂತ ಹೆಚ್ಚು ಜನರು ಇಂದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಿಗಳಾಗಿದ್ದಾರೆ. ದೇಶದ ವಿಮಾ ವಲಯದ 26 ಖಾಸಗಿ ವಿಮಾ ಕಂಪನಿಗಳು ಒಟ್ಟಾಗಿ ದೇಶದ ಶೇ. 79 ರಷ್ಟು ಜಿಲ್ಲೆಗಳಲ್ಲಿ ವಿಮಾ ಕಚೇರಿಗಳನ್ನು ಹೊಂದಿದ್ದರೆ, ಎಲ್ಐಸಿ ಮಾತ್ರವೇ ಶೇ. 92 ಜಿಲ್ಲೆಗಳಲ್ಲಿ ಕಚೇರಿಗಳನ್ನು ಹೊಂದಿದೆ. ಖಾಸಗಿ ವಿಮಾ ಕಂಪನಿಗಳಿಗೆ ವ್ಯತಿರಿಕ್ತವಾಗಿ, LIC ಯ ಶೇ. 60ಕ್ಕಿಂತ ಹೆಚ್ಚು ಶಾಖೆಗಳು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಪಟ್ಟಣಗಳಲ್ಲಿವೆ.

ಭಾರತದ ಹೆಚ್ಚಿನ ಭಾಗಗಳಲ್ಲಿ, ಬಡವರಿಗೆ ಯಾವುದೇ ಸಾಮಾಜಿಕ ಭದ್ರತೆಯ ರಕ್ಷಣೆ ಇಲ್ಲ. ಕಡಿಮೆ ಪ್ರೀಮಿಯಂಗಳಲ್ಲಿ ಹಲವಾರು ಸಾಮಾಜಿಕ ಭದ್ರತಾ ವಿಮಾ ಕಾರ್ಯಕ್ರಮಗಳು, ಆಕರ್ಷಕ ಸ್ಥಿರ ಠೇವಣಿ ಯೋಜನೆಗಳು ಮತ್ತು ಸ್ವ-ಸಹಾಯ ಗುಂಪುಗಳಿಗೆ ವಿಶೇಷ ಉದ್ಯಮಗಳ ಮೂಲಕ ಎಲ್ಐಸಿ ಅವರಿಗೆ ಪೂರೈಸುತ್ತದೆ. ಆದರೆ, ಇಂದಿನ ಪ್ರಭುತ್ವ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸ್ವಾತಂತ್ರ ಚಳುವಳಿಗಾರರ ಆಶಯಗಳಿಗೆ ವಿರುದ್ದವಾಗಿ ವಿಮಾ ವಲಯವನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಆ ಮೂಲಕ ಪ್ರಭುತ್ವ ಜನರ ಉಳಿತಾಯದ ಮೇಲಿನ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕಿ ಅದನ್ನು ಖಾಸಗಿಯವರಿಗೆ ಒಪ್ಪಿಸಲು ಮುಂದಾಗಿದೆ. ಇದನ್ನು ತಡೆಯಲು ನಾವೆಲ್ಲರೂ ಮುಂದಾಗಬೇಕಿದೆ.

ಇದನ್ನೂ ನೋಡಿ: ಪಿಚ್ಚರ್ ಪಯಣ | ಹಸಿವಿನ ಪಾಠ ಹೇಳುವ ವಾಳೈJanashakthi Media

Donate Janashakthi Media

Leave a Reply

Your email address will not be published. Required fields are marked *