ಪ್ರಜಾಪ್ರಭುತ್ವ ದಿನಾಚರಣೆ | 2,500 ಕಿ.ಮೀ ಉದ್ದದ ಮಾನವ ಸರಪಳಿಯ – ಜಿ. ಪರಮೇಶ್ವರ

ತುಮಕೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ. 15ರಂದು ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ 2,500 ಕಿ.ಮೀ ಉದ್ದದ ಮಾನವ ಸರಪಳಿಯು ವಿಶ್ವ ದಾಖಲೆ ಬರೆಯಲಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಪ್ರಪಂಚದಲ್ಲಿ ಎಲ್ಲೂ ಇಂತಹ ಮಾನವ ಸರಪಳಿ ಮಾಡಿದ ಉದಾಹರಣೆಗಳಿಲ್ಲ. ಸುಮಾರು 25 ಲಕ್ಷ ಜನರಿಂದ ನಿರ್ಮಾಣವಾಗುವ ಮಾನವ ಸರಪಳಿಯು ವಿಶ್ವದಾಖಲೆ ನಿರ್ಮಿಸಲಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಶಿರಾ ತಾಲ್ಲೂಕು ತಾವರೆಕೆರೆ ಗ್ರಾ.ಪಂನ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲ್ಲೂಕು ನಂದಿಹಳ್ಳಿ ಗ್ರಾಮದವರೆಗೆ 90 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಉಜ್ಜಯಿನಿ ಜನನಿಬಿಡ ರಸ್ತೆ ಸಮೀಪವೇ ಮಹಿಳೆ ಮೇಲೆ ಅತ್ಯಾಚಾರ

ಭಾನುವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ 10ರ ವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿ, ನೌಕರರು, ಶಾಲೆ– ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿವೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಯಶಸ್ವಿಗಾಗಿ ಪ್ರತಿ 100 ಮೀಟರ್‌ಗೆ ಒಬ್ಬ ಸೆಕ್ಷನ್ ಅಧಿಕಾರಿಯಂತೆ ಒಟ್ಟು 900 ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಅಲ್ಲದೆ ಪ್ರತಿ ಕಿ.ಮೀಗೆ ಒಬ್ಬ ನೋಡೆಲ್ ಅಧಿಕಾರಿಯಂತೆ ತಾಲ್ಲೂಕು ಮಟ್ಟದ 90 ಅಧಿಕಾರಿ, ಪ್ರತಿ 5 ಕಿ.ಮೀಗೆ ಒಬ್ಬರಂತೆ 18 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ 30 ಕಿ.ಮೀಗೆ ಒಬ್ಬರಂತೆ ಮೂವರು ಉಪ ವಿಭಾಗಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ಸಪ್ತಶ್ರೀ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಸಕ್ಕರೆ, ಮೈದಾ ಎಷ್ಟು ಡೇಂಜರ್ ಗೊತ್ತಾ?

Donate Janashakthi Media

Leave a Reply

Your email address will not be published. Required fields are marked *