ಹಾಸನ: ಕೃಷಿ, ಪರಿಸರ ಉಳಿಸಿ.., ಕೈಗಾರಿಕೆಗಳನ್ನು ಸ್ಥಾಪಿಸಿ.., ವಾಣಿಜ್ಯ ಮತ್ತು ಉದ್ಯೋಗ ಸೃಷ್ಟಿಸಿ… ಎಂಬ ಘೋಷಣೆಯ ಅಡಿಯಲ್ಲಿ “ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು” ಅಕ್ಟೋಬರ್ 20 ರಂದು ಹಾಸನ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೃಹತ್ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹೇಳಿದ್ದಾರೆ.
ಈ ಬೃಹತ್ ವಿಚಾರ ಸಂಕಿರಣದಲ್ಲಿ ಕೃಷಿ, ಪರಿಸರ, ಕೈಗಾರಿಕೆ ಮತ್ತು ವಾಣಿಜ್ಯದ ವಿಷಯಗಳ ತಜ್ಞರು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಚಿಂತಕರಿಂದ ಹಾಸನ ಜಿಲ್ಲೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಧ್ಯಯನದ ಆಧಾರದಲ್ಲಿ ಸಿದ್ಧಪಡಿಸಿದ ವಿಷಯಗಳ ಪ್ರಬಂಧ ಮಂಡನೆ, ಸಂವಾದ ಮತ್ತು ಚರ್ಚಾ ಗೋಷ್ಟಿಗಳನ್ನು ನಡೆಸಲಾಗುವುದು ಎಂದರು. ಸಮಗ್ರ
ಈ ಬೃಹತ್ ವಿಚಾರ ಸಂಕಿರಣಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು; ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು; ಜಿಲ್ಲೆಯ ಕೃಷಿ, ವಾಣಿಜ್ಯ, ಕೈಗಾರಿಕೆ ಹಾಗೂ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು; ಜಿಲ್ಲೆಯ ಪ್ರಮುಖ ದಲಿತ, ರೈತ, ಕಾರ್ಮಿಕ, ಪರಿಸರ ಮತ್ತು ಜನಪರ ಚಳುವಳಿಗಳ ಮುಖಂಡರುಗಳನ್ನು ಆಹ್ವಾನಿಸಲಾಗುವುದು.
ಇದನ್ನೂ ಓದಿ: ಕನ್ನಡದಲ್ಲೇ ಔಷಧ ಪ್ರಿಸ್ಕ್ರಿಪ್ಷನ್ ಬರೆಯಲು ಆರಂಭಿಸಿದ ವೈದ್ಯರು
ಇದರ ಜೊತೆಗೆ ಈ ಬೃಹತ್ ವಿಚಾರ ಸಂಕಿರಣದ ಪೂರ್ವಬಾವಿಯಾಗಿ ಮತ್ತು ಸಿದ್ಧತೆಗಾಗಿ ಜಿಲ್ಲೆಯ ವಿವಿದ ಪ್ರದೇಶ ಮತ್ತು ಸ್ಥಳಗಳಲ್ಲಿ ‘ಜಿಲ್ಲೆಯ ಕೃಷಿ ಕ್ಷೇತ್ರದ ಪರಿಸ್ಥಿತಿ ಮತ್ತು ಅಭಿವೃದ್ಧಿಗಿರುವ ಸಾಧ್ಯತೆಗಳು’, ‘ಜಿಲ್ಲೆಯಲ್ಲಿ ಕೈಗಾರಿಕೆ, ವಾಣಿಜ್ಯಾಭಿವೃದ್ದಿ ಮತ್ತು ಉದ್ಯೋಗ ಸೃಷ್ಟಿಗಿರುವ ಸಾಧ್ಯತೆಗಳು’, ‘ಲಿಂಗ ಅಸಮಾನತೆ ಮತ್ತು ಮಹಿಳೆಯರ ಘನತೆ ಮತ್ತು ಅಭಿವೃದ್ಧಿಗಿರುವ ಸಂಬಂಧ’, ‘ಪರಿಸರ ಸಂರಕ್ಷಣೆ, ಕಾಡು ಪ್ರಾಣಿ – ಮಾನವ ಸಂಘರ್ಷ ಮತ್ತು ಅಭಿವೃದ್ಧಿ’, ‘ಕಾಫಿ, ತೆಂಗು, ಕಬ್ಬು, ಆಲೂಗೆಡ್ಡೆ ಮತ್ತು ಕೃಷಿ ವಾಣಿಜ್ಯಾಭಿವೃದ್ಧಿ’ ಹಾಗೂ ‘ಹಾಸನ ಜಿಲ್ಲೆಯಲ್ಲಿನ ‘ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯದ ಪ್ರಶ್ನೆಗಳು’ ಕುರಿತಾದ ವಿಚಾರ ಗೋಷ್ಟಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಜೊತೆಗೆ “ಹಾಸನ ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ ವಾಣಿಜ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಿರುವ ಸಾಧ್ಯತೆಗಳು” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು ಅತ್ಯುತ್ತಮ ಪ್ರಬಂಧಗಳನ್ನು ಬರೆದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 20 ರ ಬೃಹತ್ ವಿಚಾರ ಸಂಕಿರಣದಲ್ಲಿ ಗಣ್ಯರಿಂದ ಸನ್ಮಾನಿಸಿ ಬಹುಮಾನ ನೀಡಲಾಗುವುದು. ಹಾಗೂ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಂದಲೂ ಕೂಡ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದ್ದು ಉಪಯುಕ್ತ ಅಭಿಪ್ರಾಯ ಮತ್ತು ಸಲಹೆಗಳನ್ನು ವಿಚಾರ ಸಂಕಿರಣದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
‘ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು’ ವಿಚಾರ ಸಂಕಿರಣದ ಹಿನ್ನೆಲೆ ಮತ್ತು ಉದ್ದೇಶ:
‘ಅಭಿವೃದ್ಧಿ’ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ದೊಡ್ಡ ದೊಡ್ಡ ಹೈವೇಗಳು, ಫ್ಲೈ ಓವರ್ಗಳು, ಬಹು ಅಂತಸ್ತಿನ ಕಟ್ಟಡಗಳು ಮತ್ತು ಕಣ್ಣು ಕೋರೈಸುವ ಬಣ್ಣಬಣ್ಣದ ದೀಪಾಲಂಕಾರಗಳು ಮಾತ್ರ. ಈ ಮಾದರಿಯನ್ನೇ ನಾವು ‘ಅಭಿವೃದ್ಧಿ’ ಎಂದು ನಂಬಿಕೊಂಡಿದ್ದೇವೆ. ಆದರೆ ‘ಅಭಿವೃದ್ಧಿ’ ಹೊಂದುತ್ತಿರುವ ನಮ್ಮ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಸತಿ, ಆಹಾರ, ಉದ್ಯೋಗ, ಮೂಲಭೂತ ಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಇವೆಲ್ಲವುಗಳೂ ಸಮರ್ಪಕವಾಗಿ ದೊರಕುತ್ತಿದೆಯೆ? ಎಂದು ನೋಡಿದರೆ, ಇಲ್ಲ! ಎಂದೇ ಹೇಳ ಬೇಕಾಗುತ್ತದೆ.
ನಮ್ಮ ಸಮಾಜದಲ್ಲಿನ ಬಹುಪಾಲು ಜನರು ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ, ಉದ್ಯೋಗವಿಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳ ಕೊರತೆಗಳಲ್ಲಿ ಬದುಕುತ್ತಿರುವುದನ್ನು ಕಾಣುತ್ತೇವೆ? ‘ಅಭಿವೃದ್ಧಿ’ ಹೆಸರಿನಲ್ಲಿ ಪರಿಸರವನ್ನು ನಿರಂತರವಾಗಿ ದುರ್ಬಳಕೆ ಮಾಡಿಕೊಂಡಿರುವ ಕಾರಣದಿಂದ ನಾವಿಂದು ಹಲವು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವಿಂದು ‘ಅಭಿವೃದ್ಧಿ’ ಎಂಬ ಪರಿಕಲ್ಪನೆಯನ್ನು ಬದಲಿ ದೃಷ್ಟಿಯಿಂದ ನೋಡಬೇಕಾದ ಅನಿವಾರ್ಯತೆ ಇದೆ. ಜನಸಮುದಾಯ ಮತ್ತು ಜೀವ ಜಗತ್ತಿನ ನಡುವಿನ ಕೊಡು-ಕೊಳ್ಳುವಿಕೆಯ ಹಾಗೂ ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳಿರುವ ಒಂದು ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯ ಮಾನದಂಡಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದರು.
ಈ ಮಾನದಂಡಗಳ ಆಧಾರದಲ್ಲಿಯೇ ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ನೋಡಬೇಕಿದೆ. ಹಾಸನ ಜಿಲ್ಲೆಯು ಭೌಗೋಳಿಕವಾಗಿ ಮತ್ತು ನೈಸರ್ಗಿಕವಾಗಿ ಹಲವು ಅನುಕೂಲಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಮಲೆನಾಡು, ಅರೆ ಮಲೆನಾಡು ಮತ್ತು ಬಯಲುಸೀಮೆ ಯನ್ನು ಒಳಗೊಂಡಿರುವ ಭೂಪ್ರದೇಶವಾಗಿದೆ. ಜಿಲ್ಲಾ ಕೇಂದ್ರವಾದ ಹಾಸನ ನಗರವು ಔದ್ಯೋಗಿಕ ಮಹಾ ನಗರಗಳಾದ ಬೆಂಗಳೂರು – ಮಂಗಳೂರು ಮತ್ತು ಮೈಸೂರು – ಚಿಕ್ಕಮಗಳೂರು ನಗರಗಳನ್ನು ಸಂಪರ್ಕಿಸುವ ಹೆದ್ದಾರಿಗಳ ಪ್ರಮುಖ ಕೇಂದ್ರಸ್ಥಾನವಾಗಿದೆ.
ವಾಣಿಜ್ಯ ಮತ್ತು ಉದ್ಯೋಗಗಳ ಸೃಷ್ಟಿಗೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅತ್ಯಂತ ಪೂರಕವಾಗಿರುವ ನಗರವಾಗಿದೆ. ಜಿಲ್ಲೆಯ ಕಾಫಿ಼, ತೆಂಗು, ಆಲೂಗೆಡ್ಡೆ, ಬತ್ತ, ಕಬ್ಬು, ಶುಂಠಿ, ಜೋಳ ಮತ್ತಿತರೆ ಪ್ರಮುಖ ಕೃಷಿ ಉತ್ಪನ್ನಗಳ ಆಧಾರದಲ್ಲಿ ವಾಣಿಜ್ಯ ಮತ್ತು ಉದ್ಯಮಗಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಕೃಷಿಯೇ ಪ್ರಧಾನ ಆರ್ಥಿಕತೆಯಾಗಿರುವ ಹಾಸನ ಜಿಲ್ಲೆಯಲ್ಲಿ ಕೃಷಿ ಮತ್ತು ಕೃಷಿ ಉತ್ಪನ್ನಗಳ ಆಧಾರದಲ್ಲಿ ವಾಣಿಜ್ಯೋದ್ಯಮಗಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಕೃಷಿ ಅಭಿವೃದ್ಧಿಗೆ ಒತ್ತು ನೀಡಲು ನೀರಾವರಿಯ ಪ್ರಶ್ನೆಯೂ ಇದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳೂ ಮತ್ತು ಜಿಲ್ಲಾ ಕೇಂದ್ರ ಹಾಸನವೂ ಸೇರಿದಂತೆ ಸುಮಾರು 3000 ಎಕರೆಗೂ ಹೆಚ್ಚು ಭೂಮಿಯನ್ನು ಕೈಗಾರಿಕಾಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಆದರೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಾಗಲಿಲ್ಲ. ಕೃಷಿ ಮತ್ತು ವಾಣಿಜ್ಯದ್ಯೋಮಗಳೂ ಬೆಳೆಯಲಿಲ್ಲ ಹಾಗೂ ಸಾಕಷ್ಟು ಪ್ರಮಾಣದ ಉದ್ಯೋಗಗಳೂ ಸೃಷ್ಟಿಯಾಗಲಿಲ್ಲ. ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗದ ಕಾರಣದಿಂದ ಉದ್ಯೋಗಕ್ಕಾಗಿ ಜಿಲ್ಲೆಯ ಯುವಜನರು ಬೇರೆಬೇರೆ ನಗರಗಳು ಮತ್ತು ಮಹಾನಗರಗಳ ಕಡೆಗೆ ವಲಸೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಸತಿ-ನಿವೇಶನ ರಹಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಮರ್ಪಕವಾಗಿ ಎಲ್ಲರಿಗೂ ದೊರೆಯುತ್ತಿಲ್ಲ. ಭೂಮಿ ಮತ್ತು ನೀರಾವರಿಯ ಪ್ರಶ್ನೆಗಳಿಗೆ ಇನ್ನೂ ಸಮರ್ಪಕ ಪರಿಹಾರ ದೊರಕಿಲ್ಲ. ಪರಿಸರ ಅಸಮತೋಲನದಿಂದಾಗಿ ತಂಪಾಗಿದ್ದ ಹಾಸನ ಬೆಂಕಿಯ ಗೂಡಾಗುತ್ತಿದೆ. ಕಾಡು ಪ್ರಾಣಿಗಳು, ಆನೆ – ಮಾನವ ಸಂಘರ್ಷ ವಿಕೋಪದ ಹಂತ ತಲುಪಿದೆ. ಜಿಲ್ಲೆಯ ಜನರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಂತರ ಹೆಚ್ಚಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಿರ್ದಿಷ್ಟ ಸಮಸ್ಯೆಗಳ ಕುರಿತು ಸೂಕ್ತ ಅಧ್ಯಯನ ಮತ್ತು ಸಂಶೋಧನೆಗಳ ಆಧಾರದಲ್ಲಿ ‘ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು’ ಎಂಬ ಬೃಹತ್ ವಿಚಾರ ಸಂಕಿರಣವನ್ನು ಸಂಘಟಿಸಲಾಗುತ್ತಿದೆ. ಅಂತಿಮವಾಗಿ ಈ ವಿಚಾರ ಸಂಕಿರಣದಲ್ಲಿ ಸಂಶೋಧನೆ ಮತ್ತು ಅಧ್ಯಯನದ ಆಧಾರದಲ್ಲಿ ಮಂಡಿಸಲಾಗುವ ವಿಷಯಗಳು ಮತ್ತು ಸಮಗ್ರ ಚರ್ಚೆಯಿಂದ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದಲ್ಲಿ ‘ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು’ ಒಂದು ಅಂತಿಮ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ವರದಿಯನ್ನು ಸಲ್ಲಿಸಲಾಗುವುದು ಹಾಗೂ ಆ ವರದಿಯನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್. ಆರ್. ನವೀನ್ ಕುಮಾರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂಜಿ, ಡಿಎಚ್ಎಸ್ ಜಿಲ್ಲಾ ಸಹ ಸಂಚಾಲಕ ರಾಜು ಸಿಗರನಹಳ್ಳಿ, ಸಿಐಟಿಯುನ ಸೌಮ್ಯ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇದ್ದರು.
ಇದನ್ನೂ ನೋಡಿ: ಒಕ್ಕೂಟ ವ್ಯವಸ್ಥೆ ನಾಶ ಪಡಿಸಲು ಬಿಜೆಪಿ ಸಂಚು – ಮೀನಾಕ್ಷಿ ಬಾಳಿJanashakthi Media