ರಾಯಚೂರು : ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಬಳಿಯಲ್ಲಿ ನಡೆದ ದುರಂತದ ರಸ್ತೆ ಅಪಘಾತದಲ್ಲಿ ಲೊಯೋಲಾ ಶಾಲಾ ಬಸ್ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಶಾಲಾ ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಪಾಲುದಾರರಾಗಿದ್ದೇವೆ. ಗಾಯಗೊಂಡ ಮಕ್ಕಳು ಶೀಘ್ರ ಚೇತರಿಕೆಯಾಗಲಿ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ. ರಾಯಚೂರು
ಈ ದುರ್ಘಟನೆ ರಾಜ್ಯದಲ್ಲಿ ನಡೆಯುತ್ತಿರುವ ಅಪಘಾತಗಳ ಏರಿಕೆಗೆ ಜ್ವಲಂತ ಉದಾಹರಣೆಯಾಗಿದೆ. ಇನ್ನಷ್ಟು ಅನಾಹುತಗಳು ಆಗದಂತೆ ತಡೆಯಲು ಹಾಗೂ ರಾಜ್ಯದ ವಿದ್ಯಾರ್ಥಿಗಳ ಸುರಕ್ಷತೆಗಾಗಿ ರಾಜ್ಯ ಸರ್ಕಾರ ತಜ್ಞರ ಸಭೆ ನಡೆಸಿ ಅಭಿಪ್ರಾಯ ಪಡೆದು ವಿಶೇಷವಾದ ನಿಯಮಾವಳಿಗಳನ್ನು ರೂಪಿಸಿ ತುರ್ತಾಗಿ ರಾಜ್ಯದಲ್ಲಿ ಜಾರಿ ಮಾಡಲು ಮುಂದಾಗಬೇಕೆಂದು ಎಸ್‌ಎಫ್‌ಐ ಆಗ್ರಹಿಸಿದೆ. SFI ರಾಜ್ಯ ಅಧ್ಯಕ್ಷ ಅಮರೇಶ ಕಡಗದ , ರಾಜ್ಯ ಕಾರ್ಯದರ್ಶಿ ಭೀಮನಗೌಡ ಸಲ್ಲಿಸಿದ ಮನವಿಯ ವಿವರ ಈ ಕೆಳಗಿನಂತಿದೆ.
1. ಆರ್ಥಿಕ ಪರಿಹಾರ ಮತ್ತು ವೈದ್ಯಕೀಯ ನೆರವು:
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಕ್ಷಣ ಆರ್ಥಿಕ ಪರಿಹಾರ ಘೋಷಿಸಬೇಕು. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 50 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ 25 ಲಕ್ಷ ಆರ್ಥಿಕ ನೆರವು ಅತ್ಯಾವಶ್ಯಕವಾಗಿದೆ. ಹಾಗೆಯೇ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಕ್ಕಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಪುನರ್ವಸತಿ ಮತ್ತು ಕೃತಕ ಅಂಗಗಳ ನೆರವು ನೀಡಬೇಕು.
2. ರಸ್ತೆ ಸುರಕ್ಷತಾ ಕ್ರಮಗಳು: ಈ ಘಟನೆ ರಾಜ್ಯದಲ್ಲಿ ರಸ್ತೆ ಸುರಕ್ಷತೆ ಮತ್ತು ಮೂಲಸೌಕರ್ಯದಲ್ಲಿ ಇರುವ ಅಸಮರ್ಪಕತೆಯನ್ನು ಬಹಿರಂಗಪಡಿಸುತ್ತದೆ. ಮುಂದಿನ ಅನಾಹುತಗಳನ್ನು ತಡೆಯಲು ಸರ್ಕಾರ ಈ ಕೆಳಕಂಡ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತಿದೆ.
ಇದನ್ನು ಓದಿ : ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಓಲಾ ಆಟೋ ಚಾಲಕ ಯುವತಿಯ ಮೇಲೆ ಹಲ್ಲೆ; ವಶಕ್ಕೆ ಪಡೆದ ಮಾಗಡಿ ಪೊಲೀಸರು
- ಈ ಅಪಘಾತಕ್ಕೆ ಮುಖ್ಯ ಕಾರಣವಾಗಿ, ರಸ್ತೆಯಲ್ಲಿ ಗುಂಡಿಗಳಿದ್ದ ಕಾರಣ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದೆ. ಹಾಗಾಗಿ, ರಾಜ್ಯದ ಎಲ್ಲಾ ಅಪಘಾತ ಸಂಭವಿಸಬಹುದಾದ ಪ್ರದೇಶಗಳಲ್ಲಿರುವ ರಸ್ತೆಗಳ ತಕ್ಷಣದ ದುರಸ್ತಿ ಮತ್ತು ನಿರ್ವಹಣೆ ಅವಶ್ಯಕವಾಗಿ ಮಾಡಬೇಕು.
- ಶಾಲಾ ಬಸ್ ಗಳ ಸುರಕ್ಷತಾ ಉದ್ದೇಶದಿಂದ ಸ್ಪೀಡ್ ಕಂಟ್ರೋಲರ್ ಗಳು, ಜಿಪಿಎಸ್ ಮತ್ತು ಸಿಸಿಟಿವಿ ಹಾಕಿಸುವುದನ್ನು ಕಡ್ಡಾಯಗೊಳಿಸಬೇಕು.
- ಶಾಲಾ ಬಸ್ ಚಾಲಕರಿಗೆ ಸುರಕ್ಷಿತ ಚಾಲನಾ ಕ್ರಮಗಳ ಬಗ್ಗೆ ನಿರಂತರವಾಗಿ ತರಬೇತಿಗಳನ್ನು ಕಡ್ಡಾಯವಾಗಿ ಮಾಡಬೇಕು.
- ಶಾಲಾ ಬಸ್ ಗಳು ಸಂಚಾರಿ ನಿಯಮಗಳನ್ನು ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಶಾಲೆಗಳು, ಸಂಚಾರಿ ಅಧಿಕಾರಿಗಳು ಮತ್ತು ಸ್ಥಳೀಯ ಪೋಲೀಸ್ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳಬೇಕು.
- ಬಸ್ಸಿನಲ್ಲಿ ನಿಗಧಿ ಪಡಿಸಿದ ಆಸನಗಳಿಗೆ ಮೀರಿದ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿರುವ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಮುಂದೆ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು.
- ಸರಕು ಸಾಗಾಣಿಕೆ ವಾಹನದಲ್ಲಿ ಮಕ್ಕಳನ್ನು ಪ್ರಯಾಣಿಸುವುದರ ವಿರುದ್ದ ದಾಖಲಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
- ಪ್ರತೀ ಶಾಲೆಗಳಲ್ಲಿರುವ ಶಾಲಾ ಬಸ್ ಡ್ರೈವರ್ ಗಳಿಗೆ ಪ್ರತೀ ಮೂರು ತಿಂಗಳಿಗೊಮ್ಮೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ತಪಾಸಣೆಯನ್ನು ನಡೆಸಲು ಸರ್ಕಾರವೇ ಮುತುವರ್ಜಿ ವಹಿಸಬೇಕು.
3. ರಸ್ತೆ ಸುರಕ್ಷತಾ ಜಾಗೃತಿ ವಿದ್ಯಾರ್ಥಿಗಳಿಗೆ ಸುರಕ್ಷತೆಯನ್ನು ಒದಗಿಸಲು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಬೇಕು. ಹಾಗೆಯೇ ಪ್ರತಿಯೊಂದು ಶಾಲೆಗಳು ಈ ರೀತಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಆದೇಶಿಸಬೇಕು. ರಾಯಚೂರು
ಇದನ್ನು ನೋಡಿ : ಬುಕಿಂಗ್ ರದ್ದು ಮಾಡಿದ ಮಹಿಳೆ ಮೇಲೆ ಅಟೋ ಚಾಲಕನಿಂದ ಹಲ್ಲೆ Janashakthi Media