-ನಾ ದಿವಾಕರ
2020ರ ಮೇ 7, ನಡುರಾತ್ರಿ 3 ಗಂಟೆಯ ಸಮಯ ಆಂಧ್ರ ಪ್ರದೇಶದ ವಿಶಾಖಪಟ್ನಂ ಜಿಲ್ಲೆಯ ಪೆಂಡೂರ್ತಿ ಮಂಡಲ್ ವ್ಯಾಪ್ತಿಗೆ ಸೇರಿದ ವೆಂಕಟಾಪುರ ಗ್ರಾಮದ ಜನತೆಗೆ ನರಕಸದೃಶವಾಗಿತ್ತು. ಈ ಗ್ರಾಮದ ಸಮೀಪದಲ್ಲಿರುವ ಎಲ್ಜಿ ಪಾಲಿಮರ್ಸ್ ಘಟಕದಲ್ಲಿ ಉಂಟಾದ ಅನಿಲ ಸೋರಿಕೆ 12 ಜನರ ಸಾವಿಗೆ ಕಾರಣವಾಗಿತ್ತು. 580ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ಗಂಟೆಗಳ ಅವಧಿಯಲ್ಲಿ ಸುತ್ತಲಿನ ಗ್ರಾಮಗಳ 2000 ಜನರನ್ನು ಸ್ಥಳಾಂತರಗೊಳಿಸಲಾಗಿತ್ತು. ದಕ್ಷಿಣ ಕೊರಿಯಾದ ಎಲ್ಜಿ ಕೆಮ್. ಕಂಪನಿ ಒಡೆತನದಲ್ಲಿರುವ ಈ ಘಟಕ 1961ರಲ್ಲಿ ಸ್ಥಾಪನೆಯಾಗಿದ್ದು ಉದ್ಯಮಿಗಳಿಂದ ನಿರ್ವಹಿಸಲ್ಪಟ್ಟು ಈಗ ಎಲ್ಜಿ ಕೆಮ್. ಒಡೆತನದಲ್ಲಿದೆ. ಕಾರ್ಖಾನೆಯಲ್ಲಿ ಸ್ಟಿರೀನ್ ಮೋನೋಮರ್ನ್ (Sterene Monomern) ಕಚ್ಛಾವಸ್ತುವಿನಿಂದ ಉಂಟಾದ ಅನಿಲ ಸೋರಿಕೆ ಈ ಅನಾಹುತಕ್ಕೆ ಕಾರಣವಾಗಿತ್ತು. ಈ ವಸ್ತುವನ್ನು ಸಾಮಾನ್ಯವಾಗಿ ವಿವಿಧ ಪ್ಲಾಸ್ಟಿಕ್ ಮತ್ತು ಸಂಶ್ಲೇಷಿತ ರಬ್ಬರ್ ಉತ್ಪನ್ನಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಪ್ರಪಂಚ
ಈ ಘಟನೆಯನ್ನು ಸ್ವಪ್ರೇರಣೆಯಿಂತ ತನಿಖೆಗೆ ಕೈಗೆತ್ತಿಕೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಲಿ ಐವರು ಸದಸ್ಯರ ಜಂಟಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿತ್ತು. ಸ್ಥಾವರದಲ್ಲಿ ಹಲವು ಲೋಪಗಳನ್ನು ಗುರುತಿಸಿದ ಈ ಸಮಿತಿಯು ಕಂಪನಿಗೆ 50 ಕೋಟಿ ರೂಗಳ ದಂಡ ವಿಧಿಸಿತ್ತು. ಸ್ಟೀರೀನ್ ಮೊನೋಮರ್ನ್ ದ್ರವದ Self Polymerisation ಪರಿಣಾಮವಾಗಿ ಆವಿ ಸೋರಿಕೆಯಾದದ್ದು ಇದನ್ನ ಸೇವಿಸಿದ ಜನರು ಕೂಡಲೇ ಅಸ್ವಸ್ಥರಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು. ಸ್ಟಿರೀನ್ ಮೋನೋಮರ್ ಹೆಚ್ಚು ದಿನಗಳ ಕಾಲ ದಾಸ್ತಾನು ಮಾಡಿದರೆ ಉಷ್ಣಾಂಶ ತಡೆಯಲಾರದೆ ಸ್ವಯಂ ಪಾಲಿಮರೈಸೇಷನ್ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರಿಂದ ದುರಂತ ಸಂಭವಿಸಿದೆ ಎಂದು ತಜ್ಞರು ಹೇಳಿದ್ದರು. ಸೂಕ್ತವಾದ ಪರಿಸರ ಅನುಮತಿ ಪ್ರಮಾಣಪತ್ರವನ್ನು ಪಡೆದಿರಲಿಲ್ಲ ಎಂದೂ ಆರೋಪಿಸಲಾಗಿತ್ತು. ಈ
ದುರ್ಘಟನೆಯಲ್ಲಿ ಮಡಿದ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ, ಪ್ರಾಥಮಿಕ ಚಿಕಿತ್ಸೆ ಪಡೆದವರಿಗೆ 25 ಸಾವಿರ ರೂ, ದೀರ್ಘ ಚಿಕಿತ್ಸೆ ಪಡೆಯುವವರಿಗೆ ಹತ್ತು ಲಕ್ಷಗಳ ಪರಿಹಾರವನ್ನು ನೀಡಲಾಗಿತ್ತು. ಅಲ್ಲಿಗೆ ಜವಾಬ್ದಾರಿ ಮುಗಿದಿತ್ತು. ಪ್ರಪಂಚ
ಕೈಗಾರಿಕಾ ಅವಘಡಗಳ ಚರಿತ್ರೆ
ನಾಲ್ಕು ವರ್ಷಗಳ ನಂತರ ಇದೇ ರಾಜ್ಯದ ಅಂಕಪಲ್ಲಿಯಲ್ಲಿರುವ Escientia Advanced Sciences Private limited ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಮೃತಪಟ್ಟು 36 ಜನರು ಅಸ್ವಸ್ಥರಾಗಿದ್ದಾರೆ. ಈ ಸ್ಥಾವರದಲ್ಲಿ ಔಷಧೀಯ ಪದಾರ್ಥಗಳು ಮತ್ತು ರಾಸಾಯನಿಕಗಳನ್ನು ತಯಾರಿಸಲಾಗುತ್ತದೆ. 6000 ಎಕರೆ ವ್ಯಾಪ್ತಿಯ ಅಚ್ಚುತಾಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ (SEZ)ಈ ಸ್ಥಾವರ ಈ ಪ್ರದೇಶದ ಔಷಧ ತಯಾರಿಕಾ ಪ್ರಪಂಚದ ಒಂದು ಭಾಗವಾಗಿದೆ. ಪಕ್ಕದಲ್ಲೇ ಇರುವ ಪರವಾಡಾ SEZ 2000 ಎಕರೆ ವ್ಯಾಪಿಸಿದ್ದು ಈ ಎರಡೂ ವಲಯಗಳಲ್ಲಿ 200ಕ್ಕೂ ಹೆಚ್ಚು ಔಷಧ ತಯಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ
ಘಟನೆಯಲ್ಲೂ ಮಡಿದ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ, ಗಾಯಗೊಂಡವರಿಗೆ 25 ರಿಂದ 50 ಲಕ್ಷ ರೂ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಇನ್ನು ಏನಿದ್ದರೂ ಒಂದು ತನಿಖೆ, ವಿಚಾರಣಾ ಸಮಿತಿ, ಹಲವು ವರ್ಷಗಳ ನಂತರ ಅದರ ವರದಿ-ಶಿಫಾರಸುಗಳ ಮಂಡನೆ, ತದನಂತರ ಕಂಪನಿಗೆ ಇಂತಿಷ್ಟು ದಂಡ. ಅಲ್ಲಿಗೆ ಈ ಸರ್ಕಾರದ ಜವಾಬ್ದಾರಿಯೂ ಮುಗಿದಂತೆ. ಪ್ರಪಂಚ
ಇದನ್ನೂ ಓದಿ: ಬೀದಿ ವ್ಯಾಪಾರ ವಲಯ ಗುರುತಿಸುವಿಕೆ ಅವೈಜ್ಞಾನಿಕ , ಬೀದಿ ವ್ಯಾಪಾರಿಗಳನ್ನು ಅತಂತ್ರಗೊಳಿಸುವ ಹುನ್ನಾರ- ಸಿಐಟಿಯು ಆರೋಪ
1983ರ ಡಿಸೆಂಬರ್ನಲ್ಲಿ ಸಂಭವಿಸಿದ ಸ್ವತಂತ್ರ ಭಾರತದ ಅತ್ಯಂತ ಘೋರ ಕೈಗಾರಿಕಾ ದುರಂತ, ಭೂಪಾಲ್ ಅನಿಲ ದುರಂತವನ್ನು ಮತ್ತೆ ಮತ್ತೆ ನೆನಪಿಸಲೇನೋ ಎಂಬಂತೆ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ. 2019 ರಿಂದ ಇಲ್ಲಿಯವರೆಗೆ ಈ SEZಗಳಲ್ಲಿರುವ ಕೈಗಾರಿಕೆಗಳಲ್ಲಿ ಸಂಭವಿಸಿರುವ 119 ಅವಘಡಗಳಿಗೆ ಈಗಾಗಲೇ 120ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಶ್ರಮಿಕರ ಈ ಸಾವು ನೋವುಗಳಿಗೆ ಮೂಲ ಕಾರಣ ಯಾವುದೋ ಒಂದು ವಿಷಾನಿಲ ಸೋರಿಕೆ ಅಥವಾ ಸ್ಫೋಟವೇ ಆಗಿರುತ್ತದೆ. ಸೂಕ್ಷ್ಮ ದ್ರಾವಕಗಳನ್ನು, ಅನಿಲ ಸಂಪನ್ಮೂಲಗಳನ್ನು ಬಳಸುವ, ಸಂಗ್ರಹಿಸುವ ಈ ಸ್ಥಾವರಗಳು ಒಂದು ರೀತಿಯಲ್ಲಿ ಸುತ್ತಲಿನ ಜನತೆಗೆ ಉದ್ಯೋಗ ಒದಗಿಸುವುದು ವಾಸ್ತವವೇ ಆದರೂ, ಈ ಶ್ರಮಿಕ ವರ್ಗ ಯಾವ ಪರಿಸ್ಥಿತಿಗಳಲ್ಲಿ ತಮ್ಮ ದುಡಿಮೆ ಮಾಡುತ್ತಾರೆ, ಬದುಕು ಸವೆಸುತ್ತಾರೆ ಎನ್ನುವುದು ಸೂಕ್ಷ್ಮ
ಮನಸ್ಸುಗಳನ್ನು ಕಾಡಬೇಕಾದ ಪ್ರಶ್ನೆ. ಪ್ರಪಂಚ
ಈ ಕೈಗಾರಿಕಾ ವಲಯದ ಸುತ್ತಮುತ್ತ ವಾಸಿಸುವ ಶ್ರಮಜೀವಿಗಳಿಗೆ ಇಂತಹ ದುರಂತಗಳು ‘ಅಪಘಾತ ಅಥವಾ ಅವಘಡ’ ಎನಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಇಲ್ಲಿ ಸಣ್ಣಪುಟ್ಟ ಅನಾಹುತಗಳು ನಡೆಯುತ್ತಲೇ ಇರುತ್ತವೆ. ಆಗಸ್ಟ್ 21ರಂದು ನಡೆದ ಸ್ಫೋಟಕ್ಕೆ ಕಾರಣವಾದದ್ದು ಸ್ಥಾವರದ ಎರಡನೆ ಮಹಡಿಯಲ್ಲಿ MTBE (Methy Tertiary̲Butyl Ether) ಎಂಬ ದ್ರಾವಕದ ಸೋರಿಕೆ. ಪೈಪುಗಳ ಮೂಲಕ ಮೊದಲನೆ ಅಂತಸ್ತಿಗೆ ಹರಿದ ಈ ದ್ರಾವಕವು ವಿದ್ಯುತ್ ಪ್ಯಾನೆಲ್ಗಳಿಗೆ ತಗುಲಿದಾಗ ಆವಿಯ ಮೋಡಗಳು ಹರಡಿದ್ದು ಸ್ಫೋಟಿಸಿದೆ ಎಂದು ಅಲ್ಲಿನ ತಜ್ಞರು ಹೇಳಿದ್ದಾರೆ. ಛಿದ್ರವಾದ ಮೃತ ದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆಯಲಾಗಿದೆ. ಈ
ದುರಂತಕ್ಕೆ ಘಟಕದ ಬೇಜವಾಬ್ದಾರಿ ನಿರ್ವಹಣೆಯೇ ಕಾರಣ ಎಂದು ಕಾರ್ಖಾನೆಯ ಇನ್ಸ್ಪೆಕ್ಟರ್ ನಾರಾಯಣ್ ರಾವ್ ಹೇಳಿದ್ದಾರೆ. ಕೆಲವು ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಲೋವಮ್ಮ ಎಂಬ ಕಾರ್ಮಿಕರ ಪತಿಯೂ ಈ ಘಟನೆಯಲ್ಲಿ ಮೃತಪಟ್ಟು ಶವವನ್ನು ಗುರುತಿಸಲು ಸಾಧ್ಯವಾಗಿಲ್ಲ. ತನ್ನ ಪತಿ ಸತ್ತಿಲ್ಲ ಆತ ಮರಳಿ ಬರುತ್ತಾನೆ ಎಂಬ ಭರವಸೆಯೊಂದಿಗೆ ಕಾರ್ಖಾನೆಯ ಹೊರಗೆ ತನ್ನ ಎಳೆಯ ಮಗುವನ್ನು ಎದೆಗವುಚಿಕೊಂಡು ಕುಳಿತಿರುತ್ತಾಳೆ, ಲೋವಮ್ಮ. ಪ್ರಪಂಚ
ಈ ಘಟನೆಯ ಕೆಲವೇ ದಿನಗಳ ನಂತರ ಸಮೀಪದ ಪರವಾಡಾ ಗ್ರಾಮದ JNPC ( Jawaharlal Nehru Pharma City) ಬಳಿ ಇರುವ Synergene Active Ingredients ಔಷಧಿ ತಯಾರಿಕಾ ಘಟಕದಲ್ಲೂ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಈ ಸೂಕ್ಷ್ಮ ಘಟಕಗಳಲ್ಲಿ ದುಡಿಯುವ ಕಾರ್ಮಿಕರನ್ನು ಇಂತಹ ಅವಘಡಗಳಿಂದ ಪಾರುಮಾಡಲೆಂದೇ ಹಲವು ಸುರಕ್ಷತಾ ಕಾರ್ಯವಿಧಾನಗಳನ್ನು ರೂಪಿಸಲಾಗಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಅಗತ್ಯವಾದ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿರುವುದಿಲ್ಲ ಅಥವಾ ಕೆಲವು ಕಾರ್ಮಿಕರು ಇಂತಹ ಕವಚಗಳನ್ನು ಧರಿಸದೆಯೇ ಕೆಲಸ ಮಾಡುವುದೂ ಉಂಟು. ಇದರ
ಮೇಲ್ವಿಚಾರಣೆ ನಡೆಸುವವರು ಜಾಗ್ರತೆ ವಹಿಸಿದ್ದಲ್ಲಿ ಸಾವುಗಳ ಸಂಖ್ಯೆಯನ್ನಾದರೂ ಕಡಿಮೆ ಮಾಡುವ ಸಾಧ್ಯತೆಗಳಿದ್ದವು. ಪ್ರಪಂಚ
ಮಾರುಕಟ್ಟೆ ಬಂಡವಾಳ-ಅಗ್ಗದ ಶ್ರಮ
ಸ್ವತಂತ್ರ ಭಾರತದ ಎಲ್ಲ ಸರ್ಕಾರಗಳೂ ತಳಮಟ್ಟದ ಕಾರ್ಮಿಕರ ಸಾವು ನೋವುಗಳಿಗೆ ಕಾರಣವಾಗುವ ಕೈಗಾರಿಕಾ ದುರಂತಗಳನ್ನು , ಗಣಿ ದುರಂತಗಳನ್ನು ಆಡಳಿತಾತ್ಮಕ ನೆಲೆಯಲ್ಲಿ ಮಾತ್ರವೇ ನೋಡುವುದನ್ನು ಭೂಪಾಲ್ ದುರಂತದ ದಿನದಿಂದಲೂ ಗಮನಿಸಬಹುದು. ಘಟಕದ ಮಾಲೀಕರಿಗೆ ದಂಡ ವಿಧಿಸುವುದು, ಸತ್ತವರ ಕುಟುಂಬದವರಿಗೆ-ಬದುಕುಳಿದವರಿಗೆ ಪರಿಹಾರ ಘೋಷಿಸುವುದು, ಅಪಾಯ ಸ್ಥಳದಿಂದ ಕಾರ್ಮಿಕರ ವಸತಿಗಳನ್ನು ಸ್ಥಳಾಂತರಿಸುವುದು ಇಂತಹ ಅನಿವಾರ್ಯ ಕ್ರಮಗಳಿಂದಾಚೆಗೆ, ಕೈಗಾರಿಕಾ ದುರಂತಗಳಿಗೆ ಸಿಲುಕಿ ತಮ್ಮ ಭವಿಷ್ಯದ ಜೀವನ-ಜೀವನೋಪಾಯವನ್ನೇ ಕಳೆದುಕೊಳ್ಳುವ ಕಾರ್ಮಿಕರಿಗೆ, ಅವರ ಭವಿಷ್ಯದ ತಲೆಮಾರಿಗೆ ಸುಭದ್ರ ಬದುಕು ರೂಪಿಸುವ ಯಾವುದೇ ಯೋಜನೆಗಳನ್ನು ಕೈಗೊಳ್ಳಲಾಗುವುದಿಲ್ಲ. ಇದರ ಮೂಲವನ್ನು ನವ ಉದಾರವಾದಿ ಆರ್ಥಿಕತೆ ಮತ್ತು ಕಾರ್ಪೊರೇಟ್ ಮಾರುಕಟ್ಟೆ ನೀತಿಗಳಲ್ಲಿ ಗುರುತಿಸಬಹುದು. ಪ್ರಪಂಚ
2006ರಲ್ಲಿ ಕಾನೂನಾತ್ಮಕವಾಗಿ ಸ್ಥಾಪಿಸಲ್ಪಟ್ಟ ವಿಶೇಷ ಆರ್ಥಿಕ ವಲಯಗಳಿಗೆ (SEZ) ಯಾವುದೇ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಕರ್ನಾಟಕ ಸರ್ಕಾರವೂ 2019ರ ಅಧಿಸೂಚನೆಯ ಅನ್ವಯ ಎಲ್ಲ SEZ ಗಳನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಮುಕ್ತಗೊಳಿಸಿತ್ತು. ಐದು ವರ್ಷಗಳ ಅವಧಿಯ ಈ ನಿಯಮವನ್ನು ಈ ವರ್ಷ, 2024ರಲ್ಲಿ ನವೀಕರಿಸಬೇಕಿದೆ. ಇದೇ ವರ್ಷದಲ್ಲಿ ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ವೈಎಸ್ಆರ್ ಕಾಂಗ್ರೆಸ್ ಸರ್ಕಾರವೂ ಇದೇ ರೀತಿಯ ಅಧಿಸೂಚನೆಯನ್ನು ಹೊರಡಿಸಿತ್ತು. ಇದರನ್ವಯ SEZ ಗಳಲ್ಲಿರುವ ರಫ್ತು ಸಂಸ್ಕರಣಾ ಘಟಕಗಳು (Export Processing Units) ಕಾಲಕಾಲಕ್ಕೆ
ನಡೆಸಬೇಕಾದ ಪರಿವೀಕ್ಷಣೆ/ತಪಾಸಣೆಯಿಂದ ವಿನಾಯಿತಿ ಪಡೆದಿರುತ್ತವೆ. ಬಹುಶಃ ಕಾಂಗ್ರೆಸ್ ಸರ್ಕಾರವೂ ಇದನ್ನೇ ಮುಂದುವರೆಸುತ್ತದೆ. ಅಂಕಲಪಲ್ಲಿ ಸ್ಥಾವರದ ದುರಂತದ ನಂತರ ಈ ನಿಯಮವನ್ನು ರದ್ದುಪಡಿಸುವಂತೆ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲೋಕಾನಂದಂ ಒತ್ತಾಯಿಸಿದ್ದಾರೆ. ಪ್ರಪಂಚ
ಕೈಗಾರಿಕಾ ಉತ್ಪಾದನೆಯ ಹೆಚ್ಚಳಕ್ಕೂ ತಳಮಟ್ಟದ ಆರ್ಥಿಕತೆಯ ( Micro Economy) ಬೆಳವಣಿಗೆಗೂ ನೇರ ಸಂಬಂಧ ಇರುತ್ತದೆ. ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕೈಗಾರಿಕೋದ್ಯಮದಲ್ಲಿ ತಯಾರಿಕಾ ಉದ್ಯಮಗಳು ಕುಸಿದಿರುವುದರಿಂದಲೇ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರಗಳು ಅಪಾರ ಪ್ರಮಾಣದ ವಿದೇಶಿ ಬಂಡವಾಳವನ್ನು ಆಹ್ವಾನಿಸಿ ಸ್ಥಾಪಿಸುವ ಕೈಗಾರಿಕಾ ಪಾರ್ಕ್ಗಳನ್ನು ಬಹುಮಟ್ಟಿಗೆ ಐಟಿ-ಬಿಟಿ-ತಂತ್ರಜ್ಞಾನದ ಉದ್ಯಮಗಳೇ ಆಕ್ರಮಿಸುತ್ತವೆ. 2006ರಲ್ಲಿ ಈ ಸಮಸ್ಯೆಯನ್ನು ಸರಿದೂಗಿಸುವ ಸಲುವಾಗಿಯೇ ದೇಶದೆಲ್ಲೆಡೆ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು ಯೋಜಿಸಲಾಗಿತ್ತು. ಆದರೆ ಮನಮೋಹನ್ ಸಿಂಗ್ ಸರ್ಕಾರದ ನವ ಉದಾರವಾದಿ ಆರ್ಥಿಕತೆಯಲ್ಲಿ SEZ ಎಂಬ ಹೊಸ ಜಗತ್ತು ಈ ಅವಕಾಶವನ್ನು ಆಕ್ರಮಿಸಿಕೊಂಡಿತ್ತು. ಕಳೆದ ಎರಡು ದಶಕಗಳಲ್ಲಿ ದೇಶದ ಬಹುತೇಕ ನಗರಗಳಲ್ಲಿ, ಕಡಲ ತೀರದ ಪ್ರದೇಶಗಳಲ್ಲಿ SEZಗಳನ್ನು ಸ್ಥಾಪಿಸಲಾಗಿದೆ. 2006ರ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನೂ ಮಾಡಲಾಗುತ್ತಿದೆ. ಆದರೆ ಈ ವಲಯಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅನುಕೂಲವಾಗುವಂತಹ ಯಾವುದೇ ಕಾನೂನು-ನಿಯಮಗಳನ್ನು ರೂಪಿಸಲಾಗಿಲ್ಲ. ಪ್ರಪಂಚ
ಕಾರಣ ಇಲ್ಲಿ ಕೋಟ್ಯಂತರ ರೂಗಳ ಬಂಡವಾಳ ಹೂಡುವ ಸ್ಥಳೀಯ-ವಿದೇಶಿ ಉದ್ಯಮಿಗಳಿಗೆ ಉತ್ಪಾದನೆ-ವಿತರಣೆ-ವಿನಿಮಯ ಮತ್ತು ರಫ್ತು ವ್ಯವಹಾರದಲ್ಲಿ ಅನಿರ್ಬಂಧಿತ ಮಾರ್ಗಗಳನ್ನು ಕಲ್ಪಿಸುವುದು ನವ ಉದಾರವಾದಿ ಆರ್ಥಿಕತೆಯ ಮೂಲ ಮಂತ್ರ. ಇಲ್ಲಿ ಬಂಡವಾಳಶಾಹಿಗಳ ವಿಸ್ತರಣೆ ಮತ್ತು ಬಂಡವಾಳ ಕ್ರೋಢೀಕರಣಕ್ಕೆ ಅಡ್ಡಿಯಾಗಬಹುದಾದ ಕಾರ್ಮಿಕ ಕಾನೂನುಗಳು ಉದ್ಯಮಿಗಳಿಗೆ ಅಪಥ್ಯವಾಗಿಯೇ ಕಾಣುತ್ತವೆ. ಸರ್ಕಾರಗಳೂ ಬಹಳ ಜಾಣ್ಮೆಯಿಂದ SEZ
ಸ್ಥಾಪಿಸುವ ವೇಳೆ, ಕಾರ್ಮಿಕರ ಸಂಘಟನೆ ಪ್ರಬಲವಾಗಿರುವ ದಕ್ಷಿಣ ರಾಜ್ಯಗಳಲ್ಲಿ ತಯಾರಿಕಾ ಘಟಕಗಳಿಗೆ ಹೆಚ್ಚಿನ ಅವಕಾಶ ನೀಡದೆ ಸೇವಾ ವಲಯದ-ತಂತ್ರಜ್ಞಾನ ಉದ್ದಿಮೆಗಳಿಗೆ ಅಥವಾ ಅಸೆಂಬ್ಲಿಂಗ್ ಘಟಕಗಳಿಗೆ ಪ್ರಾಶಸ್ತ್ಯ ನೀಡಿವೆ. ಬಹುಪಾಲು ತಯಾರಿಕಾ ಘಟಕಗಳು ಉತ್ತರ ಭಾರತದ ಪಾಲಾಗಿವೆ.
ವಲಸೆ ಕಾರ್ಮಿಕರ ಅನಿಶ್ಚಿತ ಬದುಕು
SEZ ಕೈಗಾರಿಕಾ ಘಟಕಗಳಲ್ಲಿ ಕಾರ್ಮಿಕ ಕಾನೂನುಗಳು ಅನ್ವಯವಾಗದ ಕಾರಣ ಅಲ್ಲಿ ದುಡಿಯುವ ಕಾರ್ಮಿಕರಿಗೆ ಸಂಘಟನೆಯ ಹಕ್ಕು ಅಥವಾ ವೇತನ-ಸೌಲಭ್ಯಗಳಿಗಾಗಿ ಚೌಕಾಸಿ ಮಾಡುವ ಹಕ್ಕು ಬಹುಮಟ್ಟಿಗೆ ಇಲ್ಲವಾಗುತ್ತದೆ. ಮಾರುಕಟ್ಟೆ ಆರ್ಥಿಕತೆಯ ಈ ನೀತಿಗೆ ಅನುಗುಣವಾಗಿಯೇ ಭಾರತದ ದುಡಿಮೆಯ ವಲಯದಲ್ಲಿ ಆರಂಭವಾದ ಗುತ್ತಿಗೆ ಕಾರ್ಮಿಕ ಪದ್ಧತಿ ಈ SEZ ಗಳಿಗೆ ವರದಾನವಾಗಿ ಪರಿಣಮಿಸಿತ್ತು. ಸಂಘಟನೆ-ಚೌಕಾಸಿ ಹಕ್ಕುಗಳಿಲ್ಲದೆ, ಕಾನೂನು ರಕ್ಷಣೆ ಇಲ್ಲದೆ ದುಡಿಯುವ ಗುತ್ತಿಗೆ ಕಾರ್ಮಿಕರನ್ನು ಬಹುತೇಕ ಕೈಗಾರಿಕೆಗಳು ವಲಸೆಗಾರರಿಂದಲೇ ಆಯ್ಕೆ ಮಾಡುತ್ತವೆ. ಇದಕ್ಕೆ ಅಗ್ಗದ ಶ್ರಮವೂ ಒಂದು ಕಾರಣವಾಗಿರುತ್ತದೆ. ಈ ವಲಸೆ ಕಾರ್ಮಿಕರ ಹಿತಾಸಕ್ತಿಗಳಿಗೆ ವೇತನ ನೌಕರಿ ಇತರ ಯಾವುದೇ ಸಮಸ್ಯೆಗಳಿಗೆ ಗುತ್ತಿಗೆದಾರರು ಉತ್ತರದಾಯಿಯಾಗಿರುತ್ತಾರೆ. ಏಕೆಂದರೆ ಕಾರ್ಖಾನೆಯ ಮಾಲೀಕರು ಅದೃಶ್ಯರಾಗಿಯೇ ಉಳಿದಿರುತ್ತಾರೆ. ಪ್ರಪಂಚ
ಅಂಕಲಪಲ್ಲಿ ಕೈಗಾರಿಕಾ ವಲಯದ ಕಾರ್ಖಾನೆಗಳಲ್ಲೂ ಸಹ ಒಡಿಷಾ, ಪಶ್ಚಿಮ ಬಂಗಾಲ, ಜಾರ್ಖಂಡ್, ಬಿಹಾರ್ ಮತ್ತಿತರ ಉತ್ತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಸಾವಿರಾರು ಕಿಲೋಮೀಟರ್ ದೂರದಿಂದ ವಲಸೆ ಬರುವ ಈ ಕಾರ್ಮಿಕರ ಕುಟುಂಬಗಳು ಅವರ ಸ್ವಂತ ಊರುಗಳಲ್ಲೇ ಇರುತ್ತದೆ, ಇವರ ಇಲ್ಲಿನ ದುಡಿಮೆ ಅವರ ಅಲ್ಲಿನ ಬದುಕಿಗೆ ಆಸರೆಯಾಗುತ್ತದೆ. ಹಾಗಾಗಿ ದುಡಿಮೆ ಎನ್ನುವುದು ಈ ವಲಸಿಗರಿಗೆ ವ್ಯಕ್ತಿಗತ/ಕೌಟುಂಬಿಕ ಅಳಿವು-ಉಳಿವಿನ ಪ್ರಶ್ನೆಯಾಗಿಬಿಡುತ್ತದೆ. ಕರ್ನಾಟಕದಲ್ಲೂ ಇದೇ ಸನ್ನಿವೇಶವನ್ನು SEZ ಮತ್ತಿತರ ಕೈಗಾರಿಕಾ ಪ್ರದೇಶಗಳಲ್ಲಿ ಗುರುತಿಸಬಹುದು. JNPC ದುರಂತ ನಡೆದ ಘಟಕದಲ್ಲಿ ಸಹಾಯಕನಾಗಿ ಕೆಲಸ ಮಾಡುವ ತೆಲ್ಲಿ ಸಂತೋಷ್ ದಿನಕ್ಕೆ ಎಂಟು ಗಂಟೆಗಳಿಗೂ ಹೆಚ್ಚು ಕಾಲದ ದುಡಿದರೂ, ಆತನಿಗೆ ದೊರೆಯುವ ಮಾಸಿಕ ವೇತನ ಕೇವಲ 11,000/- ರೂ. ವಲಸಿಗರಿಗೆ ದೇಶ ಭಾಷೆಗಳ ಗಡಿ ಇರುವುದಿಲ್ಲ. ತಮ್ಮ ಕುಟುಂಬಗಳ ನಿರ್ವಹಣೆಗೆ ಅಗತ್ಯವಾದ ಕೂಲಿ ದೊರೆಯುವ ಸ್ಥಳಗಳಿಗೆ ಹೋಗಲು ಹಿಂಜರಿಯುವುದೂ ಇಲ್ಲ. ವಲಸೆಗಾರರನ್ನು ವಕ್ರದೃಷ್ಟಿಯಿಂದಲೇ ನೋಡುವ, ಭಾಷಿಕ-ಪ್ರಾದೇಶಿಕ-ಧಾರ್ಮಿಕ ಅಸ್ಮಿತೆಗಳಿಂದಲೇ ಅವರನ್ನು ಗುರುತಿಸುವ ಭಾರತದ ಮೇಲ್ವರ್ಗದ ಸಮಾಜಕ್ಕೆ ಈ ಸೂಕ್ಷ್ಮಗಳು ಏಕೆ ಅರ್ಥವಾಗುವುದಿಲ್ಲ ಎನ್ನುವುದೇ ಸೋಜಿಗ.
ಅಂಕಲಪಲ್ಲಿಯಾಗಲೀ ಇತರ ಯಾವುದೇ SEZ ಗಳಲ್ಲಾಗಲೀ ಕೆಲಸ ಮಾಡುವ ಬಹುಪಾಲು ಕಾರ್ಮಿಕರು ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿ ಪಡೆಯಲು ಹರಸಾಹಸ ಮಾಡುತ್ತಿರುತ್ತಾರೆ. ಏಕೆಂದರೆ ಅಲ್ಲಿ ಸಂಪಾದಿಸುವ ಹಣದಿಂದ ಇಲ್ಲಿರುವ ಕುಟುಂಬಗಳಿಗೆ ಉತ್ತಮ ಜೀವನ ಕಲ್ಪಿಸಲು ಸಾಧ್ಯವಾಗುತ್ತದೆ. “ ಇಲ್ಲಿರುವ ಬಹುಪಾಲು ಕಾರ್ಮಿಕರು ವೀಸಾ ದೊರೆಯದ ಕಾರಣವೇ ಇಲ್ಲಿಯೇ ದುಡಿಯುತ್ತಿದ್ದಾರೆ, ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಮಿಕ ರಕ್ಷಣೆಯ ಮಾನದಂಡಗಳು ಉತ್ತಮವಾಗಿರುತ್ತವೆ ” ಎನ್ನುತ್ತಾರೆ ಮತ್ತೋರ್ವ ಕಾರ್ಮಿಕ ಸುರೇಶ್ ಕುಮಾರ್. “ಒಂದು ಅವಘಡ ಸಂಭವಿಸಿದ ಕೂಡಲೇ ಆಡಳಿತಾಧಿಕಾರಿಗಳು ತನಿಖೆ ನಡೆಸಲು ಸಮಿತಿಯೊಂದನ್ನು ನೇಮಿಸುತ್ತಾರೆ. ಅವಘಡ/ಅಪಘಾತದ ಕಾರಣಗಳನ್ನು ಪರಿಶೋಧಿಸಿ ಈ ಸಮಿತಿ ಸಲ್ಲಿಸುವ ಅಂತಿಮ ವರದಿ ಬಹುಪಾಲು ಸಂದರ್ಭಗಳಲ್ಲಿ ಬಹಿರಂಗವಾಗುವುದೇ
ಇಲ್ಲ. ದುರಂತಕ್ಕೀಡಾದ ಮತ್ತಿತರ ಕಾರ್ಖಾನೆಗಳಲ್ಲಿ ಸುರಕ್ಷತಾ ಪರಿಶೋಧನೆ (Safety Audit) ಸಹ ನಡೆಯುವುದಿಲ್ಲ ” ಎನ್ನುತ್ತಾರೆ ಸಿಐಟಿಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗಾಣಿಶೆಟ್ಟಿ ಸತ್ಯನಾರಾಯಣ. ಪ್ರಪಂಚ
ಇಂತಹ ಅಪಘಾತ/ಅವಘಡಗಳು ಪದೇಪದೇ ನಡೆಯುತ್ತಲೇ ಇದ್ದರೂ ಕಾರ್ಖಾನೆಗಳ ಮಾಲೀಕರು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಈ ಘಟನೆಯ ಒಂದು ತಿಂಗಳ ಹಿಂದೆ ವಸಂತ್ ಕೆಮಿಕಲ್ಸ್ ಘಟಕದಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದ. ಕೈಗಾರಿಕಾ ಅಪಘಾತಗಳಲ್ಲಿ ಕಾರ್ಮಿಕರ ಸಾವು ಸಂಭವಿಸುತ್ತಲೇ ಇದ್ದರೂ ಮಾಲೀಕರು ಜಾಗ್ರತೆ ವಹಿಸುವುದಿಲ್ಲ ಎಂದು ಇಲ್ಲಿನ ಮಹಿಳಾ ಕಾರ್ಮಿಕರು ಆರೋಪಿಸುತ್ತಾರೆ.
ಬಂಡವಾಳಶಾಹಿ ಅಭಿವೃದ್ಧಿ ಮಾದರಿ ಮತ್ತು ಮಾರುಕಟ್ಟೆ ಆರ್ಥಿಕತೆಯ ತಣ್ಣನೆಯ ಕ್ರೌರ್ಯವನ್ನು ಇಂತಹ ಕೈಗಾರಿಕಾ ದುರಂತಗಳಲ್ಲಿ ಗುರುತಿಸಬಹುದು. ಮಡಿದ/ಬದುಕುಳಿದ ಕಾರ್ಮಿಕರಿಗೆ ಸರ್ಕಾರಗಳು ನೀಡುವ ಪರಿಹಾರದ ಮೊತ್ತ ಅವರ ಭವಿಷ್ಯದ ತಲೆಮಾರಿನ ನಿರ್ವಹಣೆಗೆ ಎಷ್ಟರ ಮಟ್ಟಿಗೆ ನೆರವಾಗುತ್ತದೆ ? ಈ ಪ್ರಶ್ನೆ ಆಳ್ವಿಕೆಯನ್ನು ಕಾಡದಿದ್ದರೂ, ಸಾಮಾಜಿಕ ಕಾಳಜಿ ಮತ್ತು ಮಾನವೀಯ ಪ್ರಜ್ಞೆ ಇರುವ ಸಮಾಜವನ್ನಾದರೂ ಕಾಡಲೇಬೇಕಲ್ಲವೇ ? ನೈಸರ್ಗಿಕ ವಿಕೋಪಗಳ ಹಾಗೆಯೇ ಕೈಗಾರಿಕಾ ದುರಂತಗಳನ್ನೂ ಅಭಿವೃದ್ಧಿ ಪಥದ ಸಹಜ ಪ್ರಕ್ರಿಯೆಗಳೆಂದೇ ಪರಿಗಣಿಸುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಈ ಪ್ರಜ್ಞೆ ಅಣುಮಾತ್ರವೂ ಇರಲು ಸಾಧ್ಯವಿಲ್ಲ. ಆದರೆ ಈ ಶ್ರಮಜೀವಿಗಳ ಶ್ರಮ ಶಕ್ತಿಯನ್ನೇ ಅವಲಂಬಿಸಿ ಸುಂದರ ಹೊರ ಸಮಾಜವನ್ನು ಕಟ್ಟಿಕೊಳ್ಳುವ ಸಮಾಜದ ಗಣ್ಯ ವರ್ಗಗಳಿಗೆ, ಕಲಿತ ಸಮುದಾಯಗಳಿಗೆ, ಹಿತವಲಯದ ನಾಗರಿಕರಿಗೆ ಈ ಪ್ರಜ್ಞೆ ಇರಬೇಕಲ್ಲವೇ ? ಇಲ್ಲದೆ ಹೋದರೆ ರೂಢಿಸಿಕೊಳ್ಳೋಣ. ಇತಿಹಾಸ ನಮ್ಮನ್ನು ಸ್ಮರಿಸುತ್ತದೆ.
(ಆಂಧ್ರಪ್ರದೇಶದ ಅಂಕಲಪಲ್ಲಿ ಕೈಗಾರಿಕಾ ದುರಂತದ ವಿವರ ಮತ್ತು ಅಲ್ಲಿನ ಕಾರ್ಮಿಕರ ವಸ್ತುಸ್ಥಿತಿಯ ವಿವರಗಳನ್ನು ದ ಹಿಂದೂ ಪತ್ರಿಕೆಯಲ್ಲಿ ಆಗಸ್ಟ್ 31ರಂದು ಪ್ರಕಟವಾಗಿರುವ The Human Cost of factory explosions – Harish Gilai, ಲೇಖನದಿಂದ ಪಡೆದುಕೊಳ್ಳಲಾಗಿದೆ) ಪ್ರಪಂಚ
ಇದನ್ನೂ ನೋಡಿ: ಎನ್ ಆರ್ ಕಾಲೋನಿ | ಚರಂಡಿ ಕಾಮಗಾರಿ | ಎರಡೂ ಕಡೆ ರಸ್ತೆ ಅಗೆದರೆ ಓಡಾಡೋದು ಹೇಗೆ?- ಜನಾಕ್ರೋಶ Janashakthi Media