-ನಾ ದಿವಾಕರ
ಬದ್ಧತೆ ಮತ್ತು ಪ್ರಾಮಾಣಿಕ ಅನುಷ್ಠಾನ ಇಲ್ಲದೆ ಕಠಿಣ ಕಾನೂನುಗಳೂ ವ್ಯರ್ಥವಾಗುತ್ತವೆ
2012ರ ನಿರ್ಭಯ ಪ್ರಕರಣ ಭಾರತದ ಆಳ್ವಿಕೆಯಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮಹಿಳಾ ಪರ ದನಿಗೆ ಒಂದು ಮಹತ್ತರ ತಿರುವು ನೀಡಿದ ದುರಂತ ಘಟನೆ. ರಾಜಕೀಯ ನೆಲೆಯಲ್ಲಿ ಮಹಿಳೆಯರ ಸಮಾನತೆ ಮತ್ತು ಸಮಾನ ಪ್ರಾತಿನಿಧ್ಯದ ಕೊರತೆಯ ನಡುವೆಯೇ ಭಾರತದ ಉದ್ದಗಲಕ್ಕೂ ನಡೆಯುತ್ತಿದ್ದ ಮಹಿಳೆಯರ ಮೇಲಿನ ಹಿಂಸೆ ಮತ್ತು ದೌರ್ಜನ್ಯಗಳಿಗೆ ಒಂದು ನಿರ್ದಿಷ್ಟ ಕಾನೂನಾತ್ಮಕವಾದ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲು ಈ ಘಟನೆ ಪ್ರಚೋದಿಸಿತ್ತು. ಒಂದು ರೀತಿಯಲ್ಲಿ ಸ್ವತಂತ್ರ ಭಾರತದ ಪಿತೃಪ್ರಧಾನ ರಾಜಕಾರಣದಲ್ಲಿ ಕೊಂಚ ಮಟ್ಟಿಗಾದರೂ ಲಿಂಗತ್ವ ಸೂಕ್ಷ್ಮತೆಯನ್ನು ಉಂಟುಮಾಡಿದ್ದು ಈ ಘಟನೆಯೇ ಎನ್ನುವುದು ನಿಸ್ಸಂಶಯ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶಾದ್ಯಂತ ಭುಗಿಲೆದ್ದ ಮಹಿಳೆಯರ ಮತ್ತು ನಾಗರಿಕ ಸಮಾಜದ ಆಕ್ರೋಶಕ್ಕೆ ಮಣಿದು ವರ್ಮಾ ಆಯೋಗವನ್ನು ರಚಿಸಿ, ತದನಂತರ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದು ಈಗ ಇತಿಹಾಸ.ಸಾಂಸ್ಥಿಕ
ಈ ಸುಧಾರಣೆಗಳ ಹೊರತಾಗಿಯೂ ಸಾಮಾಜಿಕ ನೆಲೆಯಲ್ಲಿ ಮಹಿಳಾ ದೌರ್ಜನ್ಯಗಳು ಕಡಿಮೆಯಾಗಿಲ್ಲ ಎನ್ನುವುದು ಇತ್ತೀಚಿನ ಅಂಕಿ ಅಂಶಗಳು ನಿರೂಪಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಅನುಸಾರ 2012ರಲ್ಲಿ 25 ಸಾವಿರ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಹತ್ತು ವರ್ಷಗಳು ಕಳೆದು, ಅಂದರೆ 2022ರಲ್ಲಿ 31 ಸಾವಿರ ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದಾಗಿ NCRB ವರದಿ ಹೇಳುತ್ತದೆ. ಅಂದರೆ ಲೈಂಗಿಕ ದೌರ್ಜನ್ಯ ಎಸಗುವ ವ್ಯಕ್ತಿಯ ಶಿಕ್ಷಾರ್ಹ ವಯೋಮಾನವನ್ನು 16 ವರ್ಷಕ್ಕೆ ಇಳಿಸಿದ್ದರೂ, ದೇಶಾದ್ಯಂತ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದರೂ, ಅತ್ಯಾಚಾರದ ಮೂಲ ವ್ಯಾಖ್ಯಾನವನ್ನು ವಿಸ್ತರಿಸಿದ್ದರೂ ಸಹ ದೇಶದಲ್ಲಿ ಅತ್ಯಾಚಾರಗಳು ಕಡಿಮೆಯಾಗುತ್ತಿಲ್ಲ. ಪ್ರತಿ ವರ್ಷ ಕನಿಷ್ಠ 30 ಸಾವಿರ ಪ್ರಕರಣಗಳು ಸತತವಾಗಿ ವರದಿಯಾಗುತ್ತಲೇ ಇವೆ.
ತನಿಖೆ ವಿಚಾರಣೆ ಮತ್ತು ತ್ವರಿತ ನ್ಯಾಯ
( ಆಧಾರ : A proper probe alone can ensure timely justice – Rakesh Goswami – The Hindu 27-8-2024)
ಈ ಅಂಕಿ ಸಂಖ್ಯೆಗಳಿಗಿಂತಲೂ ನಮ್ಮ ನಾಗರಿಕ ಪ್ರಜ್ಞೆಯನ್ನು ಕಾಡಬೇಕಾದ ವಿಷಯ ಎಂದರೆ ನಮ್ಮ ಅಪರಾಧಿಕ ನ್ಯಾಯ ವ್ಯವಸ್ಥೆಯನ್ನು ನಿರ್ವಹಿಸುವ ನಾಲ್ಕು ಸಾಂವಿಧಾನಿಕ ಅಂಗಗಳ ಕಾರ್ಯವೈಖರಿ. ಪೊಲೀಸ್ ವ್ಯವಸ್ಥೆ, ಪ್ರಾಸಿಕ್ಯೂಷನ್ , ನ್ಯಾಯಾಲಯಗಳು ಮತ್ತು ಜೈಲುಗಳು ಇಂದು ಇನ್ನೂ ಕ್ರಿಯಾಶೀಲವಾಗುವುದು ಅತ್ಯವಶ್ಯವಾಗಿದೆ. ಈ ನಾಲ್ಕೂ ಅಂಗಗಳ ನಡುವೆ ಕಾಣಬಹುದಾದ ಸಮಾನ ಆಶಯ ಎಂದರೆ ಅನ್ಯಾಯಕ್ಕೊಳಗಾದವರಿಗೆ ತ್ವರಿತಗತಿಯ ನ್ಯಾಯ ಒದಗಿಸುವುದು, ಅಂದರೆ ಸಮಾಜದಲ್ಲಿ ದೌರ್ಜನ್ಯಗಳನ್ನೆಸಗುವವರಿಗೆ ಶೀಘ್ರಗತಿಯಲ್ಲಿ ಶಿಕ್ಷೆ ನೀಡುವುದು. ಈ ನಾಲ್ಕರಲ್ಲಿ ನ್ಯಾಯಾಂಗವನ್ನು ಹೊರತುಪಡಿಸಿ ಇತರ ಮೂರೂ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿರುವುದು ಮಹಿಳಾ ದೌರ್ಜನ್ಯಗಳ ಹೆಚ್ಚಳಕ್ಕೂ ಕಾರಣವಾಗಿವೆ. ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳಿಗೆ ನ್ಯಾಯಾಂಗವೊಂದೇ ಅಂತಿಮ ಆಸರೆಯಾಗಿರುವುದು ಈ ವೈಫಲ್ಯವನ್ನು ಎತ್ತಿತೋರಿಸುತ್ತದೆ.
ಬಹುಮಟ್ಟಿಗೆ ಆಡಳಿತಾರೂಢ ಪಕ್ಷಗಳ ರಾಜಕೀಯ ಒತ್ತಾಸೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಮತ್ತಷ್ಟು ಸಂವೇದನಾಶೀಲವಾಗುವುದು ಇಂದಿನ ತುರ್ತು. ಅಪರಾಧಗಳನ್ನು ಪ್ರಾಥಮಿಕ ತನಿಖೆಗೊಳಪಡಿಸುವ ಅಧಿಕಾರವನ್ನೂ ಹೊಂದಿರುವ ಪೊಲೀಸ್ ಇಲಾಖೆ ಈ ಹಂತದಲ್ಲೇ ಎಸಗುವ ಲೋಪಗಳ ಪರಿಣಾಮ ಅನೇಕ ಅಪರಾಧಿಗಳೂ ಅಂತಿಮವಾಗಿ ನಿರಪರಾಧಿಗಳಾಗಿಬಿಡುತ್ತಾರೆ. ಪೊಲೀಸ್ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯಿಂದಲೇ ಅತ್ಯಾಚಾರ ಎಸಗುವ ವ್ಯಕ್ತಿ ಮತ್ತಷ್ಟು ಧೈರ್ಯ ಗಳಿಸುತ್ತಾನೆ. ಕೊಲ್ಕತ್ತಾ ಪ್ರಕರಣದಲ್ಲೇ ಎಫ್ಐಆರ್ ದಾಖಲಿಸಲು 14 ದಿನಗಳಷ್ಟು ವಿಳಂಬ ಮಾಡಲಾಗಿದೆ. ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸುವುದನ್ನೂ ಗಮನಿಸಿದ್ದೇವೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳಲ್ಲೂ ಸಹ ತೀವ್ರವಾದ ಅಸಮಾಧಾನವನ್ನು ವ್ಯಕ್ತಪಡಿಸಲಾಗಿದೆ.
ಇದರ ಪರಿಣಾಮವನ್ನು ಅಪರಾಧ ಮತ್ತು ಶಿಕ್ಷೆಯ ಅನುಪಾತದಲ್ಲಿ ಗುರುತಿಸಬಹುದು. ಪ್ರಾರಂಭಿಕ ತನಿಖೆಯೇ ದೋಷಪೂರಿತವಾಗಿದ್ದರೆ ಪ್ರಾಸಿಕ್ಯೂಷನ್ ಹಂತದಲ್ಲೂ ಸಹ ಹಿನ್ನಡೆಯಾಗುತ್ತದೆ. ಇದು ಸರಳ ವಾಸ್ತವ. ಇದು ವಿಚಾರಣೆಗಳ ಮೇಲೆ ಪ್ರಭಾವ ಬೀರುತ್ತದೆ. ಅಂತಿಮವಾಗಿ ಅತ್ಯಾಚಾರಿ ನಿರ್ದೋಷಿಯಾಗಿಬಿಡುತ್ತಾನೆ. NCRB ದತ್ತಾಂಶಗಳ ಅನುಸಾರ 2018 ರಿಂದ 2022ರ ಅವಧಿಯಲ್ಲಿ ಶೇಕಡಾ 27-28ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. ಅಂದರೆ ಭಾರತದಲ್ಲಿ ನಡೆಯುವ ಶೇಕಡಾ 70ರಷ್ಟು ಅತ್ಯಾಚಾರಗಳಿಗೆ ಯಾರೂ ಹೊಣೆಯಾಗುವುದಿಲ್ಲ. ಒಂದು ವೇಳೆ ಪ್ರಾಸಿಕ್ಯೂಷನ್ನ ಕ್ರಿಯಾಶೀಲತೆಯಿಂದ ಶಿಕ್ಷೆ ವಿಧಿಸಿದಾಗಲೂ ನ್ಯಾಯಾಂಗ ವಿಳಂಬದ ಕಾರಣ ಅಂತಿಮ ನ್ಯಾಯ ಮರೀಚಿಕೆಯಾಗಿಬಿಡುತ್ತದೆ. 2012ರ ನಿರ್ಭಯ ಪ್ರಕರಣದಲ್ಲೂ ಅಪರಾಧಿಗಳಿಗೆ ಅಂತಿಮ ಶಿಕ್ಷೆಯಾಗಿದ್ದು ಏಳು ವರ್ಷಗಳ ನಂತರ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ತೀರ್ಪುಗಳು ದೇಶಕ್ಕೆ ಅಗತ್ಯವಿದೆ ಎಂದು ಪುನರುಚ್ಛರಿಸಿರುವುದನ್ನು ಗಮನಿಸಬಹುದು.
ಆರೋಗ್ಯ ಸೇವಾ ವಲಯದ ಸವಾಲುಗಳು
( ಆಧಾರ : Rethinking violence in healthcare – Atmika Nair & others – The Hindu 27-8-2024)
ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಮಹಿಳಾ ಹಿಂಸೆ ಮತ್ತು ದೌರ್ಜನ್ಯಗಳಿಂದಾಚೆಗೆ ಭಾರತದ ಸಾರ್ವಜನಿಕ ವಲಯದಲ್ಲಿ, ಸಾಂಸ್ಥಿಕ ನೆಲೆಗಳಲ್ಲಿ ನಡೆಯುತ್ತಿರುವ ಅಗೋಚರ ದೌರ್ಜನ್ಯಗಳತ್ತಲೂ ಈಗ ಗಮನಹರಿಸಬೇಕಿದೆ. ಮಹಿಳಾ ದೌರ್ಜನ್ಯಗಳ ನೆಲೆಯಲ್ಲಿ ಹಿಂಸೆ ಅಥವಾ ಹಿಂಸಾತ್ಮಕ ಕ್ರಿಯೆಯ ವ್ಯಾಖ್ಯಾನವನ್ನು ನಮ್ಮ ಸಮಾಜ ಪುನರ್ ಮನನ ಮಾಡಿಕೊಳ್ಳಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಿದ್ಧಪಡಿಸಿದ ಹಿಂಸೆ ಮತ್ತು ಆರೋಗ್ಯ ಕುರಿತಾದ ವರದಿಯಲ್ಲಿ ಹಿಂಸೆಯನ್ನು ಹೀಗೆ ವ್ಯಾಖ್ಯಾನಿಸಲಾಗಿದೆ : “ ತನ್ನ ವಿರುದ್ಧ, ಇನ್ನೊಬ್ಬ ವ್ಯಕ್ತಿಯ ವಿರುದ್ಧ ಅಥವಾ ಒಂದು ಗುಂಪು ಅಥವಾ ಸಮುದಾಯದ ವಿರುದ್ಧ ದೈಹಿಕ ಬಲವನ್ನು ಉದ್ದೇಶಪೂರ್ವಕವಾಗಿ ಬಳಸುವುದು, ಬೆದರಿಕೆ ಹಾಕುವುದು ಅಥವಾ ಆ ರೀತಿ ವರ್ತಿಸುವುದು, ಇದರಿಂದ ಸಂಭವಿಸುವ ಗಾಯ, ಸಾವು, ಮಾನಸಿಕ ಹಾನಿ, ಅಸಮರ್ಪಕ ಬೆಳವಣಿಗೆ ಅಥವಾ ಬೆಳವಣಿಗೆಯ ಕೊರತೆ ”. ಇವುಗಳನ್ನು ಹಿಂಸೆ ಎಂದು ಪರಿಗಣಿಸಲಾಗುತ್ತದೆ.
ಈ ದೃಷ್ಟಿಯಿಂದ ನೋಡಿದಾಗ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಮಹಿಳಾ ಕಾರ್ಯಕರ್ತೆಯರ ಕಡೆ ಗಮನಹರಿಸುವುದು ಅತ್ಯವಶ್ಯ. ಸಾಮಾಜಿಕ ಅನ್ವಯಿತ ಸಂಶೋಧನಾ ಸಂಸ್ಥೆ (Association for Socially Applicable Research) ಕಳೆದ ನಾಲ್ಕು ವರ್ಷಗಳ ಅಧ್ಯಯನದಲ್ಲಿ ಈ ಸಮಸ್ಯೆಯ ಸುತ್ತ ಬೆಳಕು ಚೆಲ್ಲಿದೆ. ತಳಮಟ್ಟದ ಆರೋಗ್ಯ ಕಾರ್ಯಕರ್ತೆಯರನ್ನು ಸಂಪರ್ಕಿಸುವ ಮೂಲಕ ಸಂಗ್ರಹಿಸಿದ ಮಾಹಿತಿ ದತ್ತಾಂಶಗಳು ಈ ಕ್ಷೇತ್ರದಲ್ಲಿನ ದೌರ್ಜನ್ಯ ಮತ್ತು ಹಿಂಸೆಯನ್ನು ಪ್ರಮಾಣೀಕರಿಸುತ್ತವೆ. ವ್ಯವಸ್ಥೆಯೊಳಗೇ ಅಂತರ್ಗತವಾಗಿರುವ ಈ ಹಿಂಸೆಯ ವಿವಿಧ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷ ಈ ಸಂಸ್ಥೆಯು ಸೂಕ್ತ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿದೆ. ಇ ನಿಟ್ಟಿನಲ್ಲಿ 2019ರಲ್ಲಿ ಮಂಡಿಸಲಾಗಿದ್ದ “ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಕ್ಲಿನಿಕಲ್ ಸಂಸ್ಥೆಗಳು (ಹಿಂಸಾಚಾರ ಮತ್ತು ಆಸ್ತಿಗ ಹಾನಿಯ ನಿಷೇಧ) ಕಾಯ್ದೆ 2019 ” ಯನ್ನು ಜಾರಿಗೊಳಿಸಲು ಆಗ್ರಹಿಸಿದೆ.
ಆರೋಗ್ಯ ಸೇವಾ ವಲಯದಲ್ಲಿ ನಿರತರಾಗಿರುವ ಸಿಬ್ಬಂದಿ ಎದುರಿಸುವ ಸಮಸ್ಯೆಗಳಿಗೂ ಆಸ್ಪತ್ರೆಗಳಲ್ಲಿ ಕಾಣಬಹುದಾದ ಸಮಸ್ಯೆಗಳಿಗೂ ಇರುವ ವ್ಯತ್ಯಾಸವನ್ನು ಈ ಅಧ್ಯಯನದಲ್ಲಿ ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಸೇವೆಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಮಹಿಳಾ ಕಾರ್ಯಕರ್ತೆಯರು ಚಿಕಿತ್ಸೆಗಿಂತಲೂ ಹೆಚ್ಚಾಗಿ ಇತರ ಭೌತಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಉದಾಹರಣೆಗೆ ಆಶಾ ಕಾರ್ಯಕರ್ತೆಯರು ಕೋವಿದ್ 19ರ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾಗ ಅಲ್ಲಿ ದೈಹಿಕ, ಮಾನಸಿಕ, ಲೈಂಗಿಕ ಹಾಗೂ ಭಾವನಾತ್ಮಕ ಹಿಂಸೆ ಅನುಭವಿಸಿರುವುದನ್ನು ಈ ಅಧ್ಯಯನ ದಾಖಲಿಸುತ್ತದೆ. ಆರೋಗ್ಯ ಸೇವೆಯನ್ನು ಒದಗಿಸುವವರಾಗಲೀ ಅದರ ಫಲಾನುಭವಿಗಳಾಗಲೀ ಎದುರಿಸುವ ಸಮಸ್ಯೆಗಳು ಅವರ ಸಾಮಾಜಿಕ ಸ್ಥಾನಮಾನಗಳನ್ನು ಆಧರಿಸಿರುತ್ತವೆ. ಯೌವ್ವನಾವಸ್ಥೆಯ ಹೆಣ್ಣುಮಕ್ಕಳು, ಅಂಚಿಗೆ ತಳ್ಳಲ್ಪಟ್ಟ ಸಾಮಾಜಕ್ಕೆ ಸೇರಿದವರಾಗಿದ್ದಲ್ಲಿ ಅವರು ಎದುರಿಸುವ ಸವಾಲುಗಳು ಕ್ಲಿಷ್ಟವೂ, ಅಪಾಯಕಾರಿಯೂ ಆಗಿರುತ್ತವೆ.
ಇದನ್ನು ಓದಿ : ಕೆಎಎಸ್ ಪರೀಕ್ಷೆಯಲ್ಲಿ ಕನ್ನಡಕ್ಕೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯ ಮರುಪರೀಕ್ಷೆಗೆ ಕರವೇ ಆಗ್ರಹ
ಅನೇಕ ಸಂದರ್ಭಗಳಲ್ಲಿ ಆರ್ಥಿಕವಾಗಿ ಬಡತನದ ಹಿನ್ನೆಲೆಯಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯುವ ಆಯ್ಕೆಗಳು ಹೆಚ್ಚಾಗಿರುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಆರೋಗ್ಯ ಸೇವಾ ವಲಯದಲ್ಲೂ ಸಹ ಅಂಥವರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಹಿಂಸೆಯನ್ನೂ ಎದುರಿಸಬೇಕಾಗುತ್ತದೆ. ಮನೋರೋಗದಿಂದ ಬಳಲುವ ರೋಗಿಗಳ ಘನತೆಗೆ ಚ್ಯುತಿ ಉಂಟಾಗುವ ರೀತಿ ಅವರ ಹಕ್ಕುಗಳಿಂದ ವಂಚಿಸಲಾಗುತ್ತದೆ. ಜನನಿಬಿಡ ಆಸ್ಪತ್ರೆಗಳಲ್ಲಿ ವಯಸ್ಸಾದವರು ಅತಿಯಾದ ಹಿಂಸೆ ಅನುಭವಿಸುವುದನ್ನು ಸಾಮಾನ್ಯವಾಗಿ ಗುರುತಿಸಬಹುದು. ಶ್ರೀಮಂತ ವರ್ಗಗಳು ಹಾಗೂ ಮೇಲ್ಜಾತಿಗೆ ಸೇರಿದವರು ತಮಗೆ ಅಗತ್ಯವಾದ ಆರೋಗ್ಯ ಸೇವೆಗಳನ್ನು ನಗರಗಳಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಂದಲೇ ಪಡೆದುಕೊಳ್ಳುತ್ತಾರೆ. ಅಲ್ಲಿ ಯಾವುದೇ ಹಿಂಸೆ ಅಥವಾ ಕಿರುಕುಳವನ್ನು ಎದುರಿಸುವ ಸಾಧ್ಯತೆಗಳಿರುವುದಿಲ್ಲ. ವೈದ್ಯಕೀಯ ಸೇವೆ ಒದಗಿಸುವವರಲ್ಲೂ ಈ ವರ್ಗಗಳೇ ಹೆಚ್ಚಿನ ಪ್ರಮಾಣದಲ್ಲಿರುವುದು ಗಮನಾರ್ಹ ಅಂಶ.
ಈ ದೃಷ್ಟಿಯಿಂದ ನೋಡಿದಾಗ ಆರೋಗ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿ/ಕಾರ್ಯಕರ್ತೆಯರ ಸವಾಲುಗಳು ಸಹಜವಾಗಿಯೇ ಆತಂಕ ಮೂಡಿಸುವಂತಿವೆ. ಈ ಕಾರ್ಯಕರ್ತೆಯರು ರೋಗಿಗಳಿಂದ, ಅವರ ಸಹವರ್ತಿಗಳಿಂದ ಹಾಗೂ ಇದೇ ವಲಯದ ಇತರ ಸಿಬ್ಬಂದಿಗಳಿಂದಲೂ ಹಿಂಸೆ/ಕಿರುಕುಳವನ್ನು ಎದುರಿಸಬೇಕಾಗುತ್ತದೆ. ಆರೋಗ್ಯ ಸೇವಾ ವಲಯದಲ್ಲಿ ಪುರುಷರ ಪಾತ್ರ ಎಂತಹುದೇ ಇದ್ದರೂ ಅವರಿಂದ ಕಾರ್ಯಕರ್ತೆಯರು ಮತ್ತು ರೋಗಿಗಳು ಲೈಂಗಿಕ ಹಿಂಸೆ ಅನುಭವಿಸುವುದನ್ನು ಗಮನಿಸಬಹುದು. ಆಶಾ ಸಿಬ್ಬಂದಿ, ಸೂಲಗಿತ್ತಿಯರು, ಆಂಬುಲೆನ್ಸ್ ಸಿಬ್ಬಂದಿಗಳು ಮೊದಲಾದ ಕೆಳಹಂತದ ಕಾರ್ಯಕರ್ತೆಯರು, ಸೂಕ್ತ ರಕ್ಷಣೆ ಇಲ್ಲದೆ ಹೆಚ್ಚಿನ ಹಿಂಸೆ/ಕಿರುಕುಳವನ್ನು ಎದುರಿಸಬೇಕಾಗುತ್ತದೆ. ತರಬೇತಿಯಲ್ಲಿರುವ ಹಾಗೂ ರೆಸಿಡೆಂಟ್ ವೈದ್ಯರಾಗಿರುವ ಯುವತಿಯರು ಕೆಲಸದ ಒತ್ತಡ, ದೀರ್ಘಕಾಲದ ದುಡಿಮೆ, ಸೀಮಿತವಾದ ಅಧಿಕಾರದಿಂದ ಜರ್ಜರಿತರಾಗಿದ್ದು, ಹಿರಿಯ ಸಿಬ್ಬಂದಿಯಿಂದಲೇ ಲೈಂಗಿಕ ಹಿಂಸೆಯನ್ನು ಎದುರಿಸುತ್ತಿರುತ್ತಾರೆ.
ಲೈಂಗಿಕ ಹಿಂಸೆ ಮತ್ತು ದೌರ್ಜನ್ಯಗಳು ಹೊರಗಿನ ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿಯೇ ಸಂಭವಿಸುವುದರಿಂದ ಆರೋಗ್ಯ ಸೇವೆಯಲ್ಲೂ ಇದೇ ಪ್ರವೃತ್ತಿ ಢಾಳಾಗಿ ಕಾಣುವಂತಿರುತ್ತದೆ. ಹಾಗಾಗಿ ಇಲ್ಲಿಯೂ ಕೆಳಸ್ತರದ ಜಾತಿಯ ಹೆಣ್ಣುಮಕ್ಕಳು ಹೆಚ್ಚು ಅಪಾಯಗಳನ್ನು ಎದುರಿಸುತ್ತಿರುತ್ತಾರೆ. ಇಲ್ಲಿ ಕೇವಲ ವೈದ್ಯರ ಅಥವಾ ವೈದ್ಯಕೀಯ ಸಿಬ್ಬಂದಿಯ ಅಥವಾ ಆರೋಗ್ಯಸೇವಾ ಕಾರ್ಯಕರ್ತೆಯರ ಮೇಲಿನ ಹಿಂಸೆಯನ್ನು ಪ್ರತ್ಯೇಕವಾಗಿ ಪರಿಗಣಿಸದೆ ಆರೋಗ್ಯ ಸೇವಾ ವಲಯವನ್ನೇ ಸಮಗ್ರವಾಗಿ ಗಮನಿಸಬೇಕಾಗುತ್ತದೆ. ಯಾವುದೇ ಗಲಭೆ ಅಥವಾ ಪ್ರಕ್ಷುಬ್ಧತೆಯ ಸಂದರ್ಭಗಳಲ್ಲಿ ಆರೋಗ್ಯ ಸಂಸ್ಥೆಗಳಿಗೆ, ಸೇವಾ ಸಿಬ್ಬಂದಿಗಳಿಗೆ, ಗಾಯಗೊಂಡವರಿಗೆ, ರೋಗಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಅಂತಾರಾಷ್ಟ್ರೀಯ ಮಾನವೀಯ ಕಾನೂನು (International Humanitarian Law) ಆದೇಶಿಸುತ್ತದೆ. ಈ ಸೌಲಭ್ಯವನ್ನು ಇತರ ಸನ್ನಿವೇಶಗಳಿಗೂ ವಿಸ್ತರಿಸುವುದು ಇಂದು ಅತ್ಯವಶ್ಯ ಎನಿಸುತ್ತದೆ.
ಮಹಿಳಾ ಸ್ನೇಹಿ ನಗರ ವಿನ್ಯಾಸ
( ಆಧಾರ : Reclaiming streets is not enough : Deeksha & Aravind Unni – The Hindu 27-8-2024)
2012ರ ನಿರ್ಭಯಾ ಪ್ರಕರಣದ ನಂತರ ಕೈಗೊಂಡ ಕ್ರಮಗಳು, ಅನುಷ್ಠಾನಗೊಳಿಸಿದ ಕಠಿಣ ಕಾನೂನುಗಳ ಹೊರತಾಗಿಯೂ ಕಾಣಬಹುದಾದ ವಾಸ್ತವ ಎಂದರೆ ಈ ಸುರಕ್ಷತಾ ಕ್ರಮಗಳಿಂದ ಮಹಿಳಾ ದೌರ್ಜನ್ಯಗಳು ಯಾವ ರೀತಿಯಲ್ಲೂ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ನಗರ ವಲಯಗಳು ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ ಯಾವ ರೀತಿ ಸಮರ್ಪಕವಾಗಿವೆ ಎಂದು ಯೋಚಿಸಬೇಕಿದೆ. ಕಾನೂನುಗಳ ಮೇಲೆ ಅತಿಯಾದ ಅವಲಂಬನೆ ಹಾಗೂ ಪ್ರತಿಯೊಂದು ಘಟನೆಯ ನಂತರ ಕೇಳಿಬರುವ ಪ್ರತಿಭಟನೆಯ ದಿಟ್ಟ ದನಿಗಳು ಸಾಮಾನ್ಯ ಮಹಿಳೆಯರ ಪಾಲಿಗೆ ನಿರರ್ಥಕವಾಗಿಯೇ ಕಾಣುತ್ತಿರುವುದನ್ನೂ ಸೂಕ್ಷ್ಮವಾಗಿ ಗುರುತಿಸಬೇಕಿದೆ. ಭಾರತೀಯ ಸಮಾಜದಲ್ಲಿ ನಗರ/ಪಟ್ಟಣ ನಿರ್ಮಾಣದ ವಿನ್ಯಾಸ ಮತ್ತು ಮಾದರಿಯನ್ನು ನಿರ್ಧರಿಸುವುದು ಮೂಲತಃ ಪುರುಷ ಸಮಾಜವೇ ಆಗಿರುವುದು ಇದಕ್ಕೆ ಮೂಲ ಕಾರಣ ಎನ್ನಬಹುದು.
ಉದಾಹರಣೆಗೆ ನಗರ ವಲಯಗಳ ಯಾವುದೇ ಸೌಕರ್ಯ, ಸ್ಥಳಾವಕಾಶಗಳಲ್ಲೂ ಕಾರ್ ಪಾರ್ಕಿಂಗ್ ಸೌಲಭ್ಯಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಮಹಿಳೆಯರ ಶೌಚಾಲಯ ಅಥವಾ ಮಕ್ಕಳಿಗೆ ಹಾಲುಣಿಸುವ ಕೋಣೆಗಳಿಗೆ ನೀಡುವುದಿಲ್ಲ. ಹಾಗಾಗಿಯೇ ಅತ್ಯುತ್ತಮ ಕೌಶಲ, ಉನ್ನತ ಶಿಕ್ಷಣ ಹೊಂದಿದ್ದಾಗಲೂ ಸಹ ಮಹಿಳೆಯರು ಔಪಚಾರಿಕ ಉದ್ಯೋಗ ವಲಯವನ್ನು ಪ್ರವೇಶಿಸಲು ಹಿಂಜರಿಯುತ್ತಾರೆ. ನಗರಗಳಲ್ಲಿನ ಮಹಿಳಾ ಕಾರ್ಮಿಕ ಪಡೆಯ ಭಾಗವಹಿಸುವಿಕೆಯ (Female Labour force participation) ಪ್ರಮಾಣ ಕೇವಲ ಶೇಕಡಾ 25.2ರಷ್ಟಿರುವುದು ಇದನ್ನೇ ಸೂಚಿಸುತ್ತದೆ. ಮಹಿಳಾ ಕಾರ್ಮಿಕರಿಗೆ ವಿವಿಧ ರೂಪಗಳಲ್ಲಿ ಪ್ರೋತ್ಸಾಹದಾಯಕ-ಅನುಕೂಲಕರ ಸವಲತ್ತುಗಳನ್ನೊಳಗೊಂಡ ಮೂಲ ಸೌಕರ್ಯಗಳನ್ನು ನಿರ್ಮಿಸುವುದು ಇಂದು ಅತ್ಯವಶ್ಯವಾಗಿರುತ್ತದೆ. ಸಂಪನ್ಮೂಲಗಳ ಕೊರತೆಯಿಂದಲೇ ಬಹುಪಾಲು ಮಹಿಳೆಯರು ಕೆಲಸಕ್ಕೆ ಹೋಗಲು ಕಾಲ್ನಡಿಗೆ ಅಥವಾ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸುತ್ತಾರೆ.
ತಮ್ಮ ಕೌಟುಂಬಿಕ ಜವಾಬ್ದಾರಿಯ ಹೊರತಾಗಿಯೂ ಮಹಿಳಾ ಕಾರ್ಮಿಕರು ಕೆಲಸದ ಸ್ಥಳಗಳಿಗೆ ದಿನದಲ್ಲಿ ಎರಡು ಮೂರು ಸಲ ಭೇಟಿ ನೀಡುವುದು ಸಾಮಾನ್ಯ ದೃಶ್ಯ. ಆಧುನಿಕ ನಗರೀಕರಣ ಪ್ರಕ್ರಿಯೆಯಲ್ಲಿ ಅಗಲವಾದ ರಸ್ತೆಗಳು ಮತ್ತು ಮೇಲ್ಸೇತುವೆಗಳಿಗೆ ಆದ್ಯತೆ ನೀಡಲಾಗುತ್ತದೆ ಆದರೆ ಮಹಿಳೆಯರಿಗೆ ಅತ್ಯವಶ್ಯವಾದ ಸುರಕ್ಷಿತ ಮಾರ್ಗಗಳು, ಫುಟ್ಪಾತ್ಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ನಿರ್ಲಕ್ಷಿಸಲಾಗುತ್ತದೆ. ನಗರದ ಸಂಚಾರ ಸಮಸ್ಯೆಗಳಿಗೆ ಮೆಟ್ರೋ ವ್ಯವಸ್ಥೆ ಪರಿಹಾರ ಒದಗಿಸಿದರೂ ಅಲ್ಲಿಯೂ ಸಹ ದುಡಿಯುವ ಮಹಿಳೆಯರ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಸ್ವತಂತ್ರವಾಗಿ ಬದುಕುವ ಮಹಿಳೆಯರಿಗೆ ನಗರಗಳಲ್ಲಿ ಸುರಕ್ಷಿತ ಸೂರು ದೊರೆಯುವುದೂ ದುಸ್ತರವಾಗಿರುತ್ತದೆ. ಮಕ್ಕಳ ಪೋಷಣೆ, ಹಿರಿಯರ ಸೇವೆ ಮತ್ತು ರೋಗಪೀಡಿತ ಕುಟುಂಬ ಸದಸ್ಯರ ಪೋಷಣೆಯ ಜವಾಬ್ದಾರಿ ಹೊತ್ತಿರುವ ಬಹುಪಾಲು ಮಹಿಳೆಯರು ನಗರ ಜೀವನದಿಂದ ವಂಚಿತರಾಗಿಯೇ ಇರುತ್ತಾರೆ.
ಈ ದೃಷ್ಟಿಯಿಂದ ನೋಡಿದಾಗ ನಗರಾಭಿವೃದ್ಧಿಯ ಯೋಜನೆಗಳಲ್ಲಿ ಮಹಿಳಾ ಸೂಕ್ಷ್ಮತೆ ಇರಬೇಕಾದ್ದು ಅವಶ್ಯ ಎನಿಸುತ್ತದೆ. ಮಹಿಳೆಯರ ದೃಷ್ಟಿಯಿಂದ ನಗರಗಳು ಅನುಕೂಲಕರವಾಗಿದ್ದರಷ್ಟೇ ಸಾಲದು, ಅದು ಸಮರ್ಪಕವಾಗಿಯೂ, ಸುರಕ್ಷಿತವಾಗಿಯೂ, ಅವರ ಬಳಕೆಗೆ ಸೂಕ್ತವಾಗಿಯೂ ಇರಬೇಕಾಗುತ್ತದೆ. ನಗರ ಯೋಜನೆಗಳನ್ನು ರೂಪಿಸುವಾಗ ಆಡಳಿತ ವ್ಯವಸ್ಥೆಯು ಅನೌಪಚಾರಿಕ ವಲಯದಲ್ಲಿ ದುಡಿಯುವ ಅಸಂಖ್ಯಾತ ಮಹಿಳೆಯರಿಗೆ ಅನುಕೂಲಕರವಾದ ವಸತಿ, ಸಾರಿಗೆ ಮತ್ತು ಇತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ. ಇದು ಸಾಧ್ಯವಾಗಬೇಕಾದರೆ ಆಡಳಿತ ವ್ಯವಸ್ಥೆಯಲ್ಲಿ, ನೀತಿ ನಿರೂಪಣೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಅನಿವಾರ್ಯವಾಗಿರುತ್ತದೆ. ಮಹಿಳಾ ಕಾರ್ಮಿಕರ, ಸಾಮಾನ್ಯ ಮಹಿಳೆಯರ ಜೀವನೋಪಾಯ, ಜೀವನ ನಿರ್ವಹಣೆ, ವಸತಿ ಮತ್ತು ಬಿಡುವಿನ ವೇಳೆಯ ಚಟುವಟಿಕೆಗಳಿಗೆ ಪೂರಕವಾದ ಅವಕಾಶಗಳನ್ನು ನಗರಗಳಲ್ಲಿ ಕಲ್ಪಿಸಬೇಕಾಗುತ್ತದೆ.
ಮಹಿಳೆಯರು ನಿರ್ಭೀತಿಯಿಂದ ದುಡಿಯುವ, ಜೀವನ ನಿರ್ವಹಣೆ ಮಾಡುವ ಹಾಗೂ ಬದುಕುವ ನಿಟ್ಟಿನಲ್ಲಿ ಅವರಿಗೆ ಇರುವ ಹಕ್ಕು ಮತ್ತು ಪಾಲು ಎರಡನ್ನೂ ನ್ಯಾಯಯುತ ಪ್ರಮಾಣದಲ್ಲಿ ಒದಗಿಸುವುದು ನಗರಗಳ ಆದ್ಯತೆಯಾಗಬೇಕಿದೆ. ಸುರಕ್ಷತಾ ನಿಯಮಗಳು ಅಥವಾ ಭದ್ರತೆಯ ಚೌಕಟ್ಟುಗಳು ಅಥವಾ ಮನುಜ ಸಂಬಂಧಗಳ ಭಾವನಾತ್ಮಕ ನೆಲೆಗಳು ಮಹಿಳಾ ಸಬಲೀಕರಣಕ್ಕೆ ಸಂಪೂರ್ಣವಾಗಿ ಸಹಾಯಕವಾಗುವುದಿಲ್ಲ. ಬದಲಾಗಿ ದುಡಿಯುವ ಮತ್ತು ಮನೆಯೊಳಗೇ ಇರುವ ಮಹಿಳೆಯರಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ನಗರ ಜೀವನದಲ್ಲಿ ಮಹಿಳಾ ಸಂಕುಲದ ಅಸ್ತಿತ್ವವನ್ನು ಗೌರವಿಸಬೇಕಿದೆ. ನಗರ ಅಥವಾ ಬಡಾವಣೆಗಳ ನಿರ್ಮಾಣ ಹಂತದಲ್ಲೇ ಈ ಲಿಂಗತ್ವ ಸೂಕ್ಷ್ಮತೆಯನ್ನು ಅನುಸರಿಸಿದರೆ ಬಹುಶಃ ಭಾರತದ ನಗರಗಳು ಮಹಿಳಾ ಕಾರ್ಮಿಕರಿಗೆ, ಸಮಸ್ತ ಮಹಿಳೆಯರಿಗೆ ಸುರಕ್ಷಿತ ವಾಸಸ್ಥಳಗಳಾಗಿ ರೂಪುಗೊಳ್ಳುವುದು ಸಾಧ್ಯವಾದೀತು.
ಈ ದೃಷ್ಟಿಯಿಂದ ಲೈಂಗಿಕ ಹಿಂಸೆ, ದೌರ್ಜನ್ಯ, ಅತ್ಯಾಚಾರ ಮತ್ತಿತರ ದಾಳಿಗಳ ವಿರುದ್ಧ ಪ್ರತಿಭಟಿಸಲು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸುವುದರೊಂದಿಗೇ ನಗರ ವ್ಯವಸ್ಥೆಯಲ್ಲೇ ಮಹಿಳಾ ಸಮೂಹಕ್ಕೆ ಅನುಕೂಲಕರವಾದ, ಪೂರಕವಾದ ವಾತಾವರಣವನ್ನು ನಿರ್ಮಿಸಲು ಆಗ್ರಹಿಸಬೇಕಿದೆ . ಇದು ಆಳ್ವಿಕೆಯ ಜವಾಬ್ದಾರಿಯಷ್ಟೇ ಅಲ್ಲ, ಲಿಂಗತ್ವ ಸೂಕ್ಷ್ಮತೆ, ಮಹಿಳಾ ಸಂವೇದನೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹೋರಾಡುತ್ತಲೇ ಮಹಿಳಾ ಸ್ನೇಹಿ ನಗರ/ಬಡಾವಣೆಗಳ ನಿರ್ಮಾಣಕ್ಕಾಗಿ ಆಗ್ರಹಿಸುವುದು ವರ್ತಮಾನದ ತುರ್ತು. ಇದಕ್ಕೆ ಬಹುಮುಖ್ಯವಾಗಿ ಬೇಕಿರುವುದು ಆಳ್ವಿಕೆಯ/ಆಡಳಿತದ ಕೇಂದ್ರಗಳಲ್ಲಿ ಸೂಕ್ತ ಮಹಿಳಾ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ. ಭಾರತದ ಪಿತೃಪ್ರಧಾನ ಸಮಾಜದಲ್ಲಿ ಇದನ್ನು ಸಾಧ್ಯವಾಗಿಸುವುದು ಮಹಿಳಾ ಹೋರಾಟಗಳ ಆಯ್ಕೆ ಮತ್ತು ಆದ್ಯತೆಯಾಗಬೇಕಿದೆ.
(ವಿ ಸೂ : ದ ಹಿಂದೂ ಪತ್ರಿಕೆಯ ಮೂರು ಸಂವೇದನಾಶೀಲ ಲೇಖನಗಳ ಹೂರಣವನ್ನು ಈ ಲೇಖನದಲ್ಲಿ ಒದಗಿಸಲಾಗಿದೆ.)
ಇದನ್ನು ನೋಡಿ : 18ನೇ ವಯಸ್ಸಿಗೆ ಸರ್ಕಾರವನ್ನು ಆರಿಸುವವಳಿಗೆ ಬಾಳ ಸಂಗಾತಿಯನ್ನು ಆರಿಸಲು ಅರ್ಹತೆ ಇರುವುದಿಲ್ಲವೆ? – ಕೆ.ಎಸ್ ವಿಮಲಾ