ದಾಂಡೇಲಿ: ನಗರದಲ್ಲಿರುವ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ವಿಶ್ವನಾಥ ಹುಲಸ್ವಾರ ವಿದ್ಯಾರ್ಥಿಗಳ ಮೇಲೆ ದುರ್ವರ್ತನೆ ತೋರುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾದ ಪ್ರಾಂಶುಪಾಲ ವಿದ್ಯಾರ್ಥಿವಿರೋಧಿ ನಡೆಯನ್ನು ಅನುಸರಿಸುತ್ತಿರುವ ಪ್ರಾಂಶುಪಾಲರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಜಿಲ್ಲಾ ಸಮಿತಿಗಳು ಆಗ್ರಹಿಸಿವೆ.
ಪ್ರಾಂಶುಪಾಲರ ದುರಾಡಳಿತದಿಂದಾಗಿ ವಸತಿ ಶಾಲೆಯಲ್ಲಿ ಕೆಲಸ ಮಾಡುತಗತಿದ್ದ ಕೆಲವು ಸಿಬ್ಬಂದಿಗಳು ಕೂಡ ಕೆಲಸ ತೊರೆದಿದ್ದಾರೆ. ವಿದ್ಯಾರ್ಥಿ ವಿರೋಧಿ ನಡುವಳಿಕೆಯ ಈ ಪ್ರಾಂಶುಪಾಲರನ್ನು ಇಂತಹ ದುವರ್ತನೆಯ ಕಾರಣಕ್ಕಾಗಿ ಈ ಹಿಂದೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಮೇಲೆ ಬೇರೆ ಸಿಬ್ಬಂದಿಗೆ ಅಧಿಕೃತವಾಗಿ ಉಸ್ತುವಾರಿ ನೀಡಬೇಕಿತ್ತು ಹಾಗೇ ಮಾಡದೇ ವಿಶ್ವನಾಥ ಹುಲಸ್ವಾರ ಕರ್ತವ್ಯಲೋಪವೆಸಗಿದ್ದಾರೆ. ಇವರ ಕರ್ತವ್ಯ ಲೋಪದ ಪರಿಣಾಮವಾಗಿ ಹಾಸ್ಟೇಲ್ ನಲ್ಲಿರುವ ಬಡ ಹಿಂದುಳಿದ 400 ವಿದ್ಯಾರ್ಥಿಗಳಿಗೆ ನಿಯಮಿತವಾಗಿ ದೊರಕಬೇಕಿದ್ದ ಆಹಾರ ಸೇರಿದಂತೆ ಇನ್ನಿತರೇ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ದೊರೆಯದೆ ತೊಂದರೆಯನ್ನು ಅನುಭವಿಸಿರುವುದು ನೋವಿನ ಸಂಗತಿಯಾಗಿದೆ. ಇಲಾಖೆಯ ಮೇಲಾಧಿಕಾರಿಗಳ ನಿರ್ಲಕ್ಷ್ಯವು ಕೂಡ ಇದರಲ್ಲಿ ಎದ್ದು ಕಾಣುತ್ತಿದೆ.
ವಿಶ್ವನಾಥ ಹುಲಸ್ವಾರ ಅವರ ದುರ್ವರ್ತನೆ ಇತ್ತೀಚೆಗೆ ಬೆಳಕಿಗೆ ಬಂದ ನಂತರ ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ದಂಡಾಧಿಕಾರಿಗಳು ಹಾಗೂ ಜನಪರ ಸಂಘಟನೆಗಳ ಮುಖಂಡರು, ಶಾಲೆಯ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ಅಲ್ಲಿ ನಡೆಯುತ್ತಿರುವ ಘಟನೆ ಮತ್ತು ಬೆಳವಣಿಗೆಗಳ ಬಗ್ಗೆ ವಿಚಾರಿಸಲಾಗಿ, ಅಲ್ಲಿನ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಪ್ರಾಂಶುಪಾಲರ ವಿರುದ್ಧ ಸಾಕಷ್ಟು ಆರೋಪ ಕೇಳಿಬಂತು.ವಿ
ಪ್ರಾಂಶುಪಾಲರು ಅಲ್ಲಿನ ಕಟ್ಟಡ ಕಾಮಗಾರಿ ವಿಚಾರದಲ್ಲಿ ಹಲವು ಅಕ್ರಮ ಎಸಗಿದ್ದು ಮತ್ತು ತಿಂಗಳುಗಳ ಕಾಲ ಉಳಿದ ಸಿಬ್ಬಂದಿಗೆ ಇನ್ ಚಾರ್ಜ್ ಕೊಡದೆ ರಜೆಗೆ ತೆರಳಿದ ಸಂದರ್ಭದಲ್ಲಿ, ವಸತಿ ನಿಲಯದಲ್ಲಿರುವ ಮಕ್ಕಳಿಗೆ ಆಹಾರ ಮತ್ತು ಇನ್ನಿತರ ಸಮಸ್ಯೆಗಳು ಎದುರಾಗಿದ್ದು, ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ವಿದಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ದುರ್ವರ್ತನೆಯಿಂದ ನಡೆದುಕೊಂಡಿರುವುದು ಹಾಗೂ ಸಿಬ್ಬಂದಿಗಳಿಗೂ ಕಿರುಕುಳ ನೀಡಿರುವುದು ಸೇರಿದಂತೆ ಹಲವು ಆರೋಪ್ ಕೇಳಿಬಂದಿದ್ದು ಅಲ್ಲದೇ ಸ್ಥಳೀಯ ದಿನಪತ್ರಿಕೆಯಲ್ಲಿ ಕೂಡ ವರದಿಯಾಗಿದೆ.
ಇದನ್ನು ಓದಿ : ಶಾಲೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿತ ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
ನಿನ್ನೆ ದಿನ ಏಕಾಏಕಿಯಾಗಿ ಪ್ರಾಂಶುಪಾಲರು ವಸತಿ ನಿಲಯಕ್ಕೆ ಆಗಮಿಸಿ ಚಾರ್ಜ್ ತೆಗೆದುಕೊಂಡಿರುತ್ತಾರೆ. ಇದನ್ನು ಗಮನಿಸಿದ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಮಾದ್ಯಮಗಳು ಇಂತಹ ದುರ್ವರ್ತನೆ ತೋರಿರುವ ಪ್ರಾಂಶುಪಾಲರು ಈ ವಸತಿ ನಿಲಯಕ್ಕೆ ಬೇಡ ಎಂದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಅಲ್ಲಿ ಅಧ್ಯಯನ ಮಾಡುತ್ತಿರುವ 400 ವಿದ್ಯಾರ್ಥಿಗಳ ಹಾಗೂ ಪಾಲಕರ ನೋವು ಹಾಗೂ ಅವರ ಭಾವನೆಗಳನ್ನ ಅರಿಯದೇ ಕೇವಲ ಪ್ರಾಂಶುಪಾಲರ ರಕ್ಷಣೆಗೆ ಮುಂದಾಗಿ, ಪ್ರತಿಭಟಿಸಿದವರ ಮೇಲೆ ದಮನಕಾರಿ ನೀತಿ ಅನುರಿಸಿದ್ದು ಖೇದಕರ.
ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ಪ್ರತಿಭಟನಾಕಾರರ ಮೇಲೆ ಪುಂಡರ ರೀತಿಯಲ್ಲಿ ಸ್ವತಃ ಪೋಲಿಸರೇ ಅಮಾನವೀಯವಾಗಿ ತಳ್ಳಾಡಿದರಲ್ಲದೇ ಪ್ರತಿಭಟನಾಕಾರರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿ ದರ್ಪ ಮೆರೆದಿರುವುದು ಖಂಡನೀಯ. ಹಿರಿಯ ಪತ್ರಕರ್ತರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷರಾದ ಬಿ.ಎನ್ ವಾಸರೆ ಅವರ ಮೇಲೆಯೂ ಕೂಡ ಪೋಲಿಸ್ ಇಲಾಖೆ ಸಿಬ್ಬಂದಿಗಳು ದುರ್ವರ್ತನೆ ತೋರಿರುವುದು ಅಕ್ಷಮ್ಯವಾದುದು. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಜನರ ಸಂವಿಧಾನ ದತ್ತ ಹಕ್ಕನ್ನು ಕಿತ್ತುಕೊಳ್ಳಲು ಪೋಲಿಸ್ ಇಲಾಖೆಗೆ ಸಾಧ್ಯವಿಲ್ಲ. ಜನರಿಗೆ ರಕ್ಷಣೆ ನೀಡಬೇಕಾದ ಪೋಲಿಸ್ ಇಲಾಖೆಯ ಸಿಬ್ಬಂದಿ ತಾವೇ ಸ್ವತಃ ದರ್ಪ ದೌರ್ಜನ್ಯ ಮೆರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೂಡಲೇ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳು ಈ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲೇಬೇಕು.
ಜನರಿಗೆ ಉತ್ತರದಾಯಿಯಾಗಿರಬೇಕಾದ ಪೋಲಿಸ್ ಸಿಬ್ಬಂದಿ, ಸ್ವತಃ ತಾವೇ ಪ್ರಾಂಶುಪಾಲರನ್ನು ಪಲಾಯನ ಮಾಡಿಸಿರುವುದು ಇಲಾಖೆಯ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ಮಧ್ಯೆಪ್ರವೇಶಿಸಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ನೊಂದ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ವಿದ್ಯಾರ್ಥಿಗಳ ಮೇಲೆ ಪದೇ ಪದೇ ದುರ್ವರ್ತನೆ ತೋರಿ ಹಿಂಸಿಸುವ ಪ್ರಾಂಶುಪಾಲ ವಿಶ್ವನಾಥ ಹುಲಸ್ವಾರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಇವರನ್ನು ಯಾವುದೆ ಕಾರಣಕ್ಕೂ ದಾಂಡೇಲಿ ವಸತಿ ನಿಲಯದ ಕರ್ತವ್ಯಕ್ಕೆ ನಿಯೋಜಿಸಬಾರದು. ಕೂಡಲೇ ಬೇರೆ ಪ್ರಾಂಶುಪಾಲರನ್ನು ನೇಮಕ ಮಾಡಬೇಕು. ಪೋಲಿಸ್ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ನೀಡುವ ಬದಲು ನ್ಯಾಯಕ್ಕಾಗಿ ಧ್ವನಿ ಎತ್ತುವವರ ಮೇಲೆ ದರ್ಪ ಮೆರೆಯುತ್ತಿದ್ದಾರೆ. ಇಂತಹ ಸಿಬ್ಬಂದಿಗಳ ಮೆಲೆ ಪೋಲಿಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ತೀವ್ರವಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಡಿವೈಎಫ್ಐ ಮತ್ತು ಡಿಎಚ್ಎಸ್ ರಾಜ್ಯ ಮುಖಂಡರಾದ ಡಿ.ಸ್ಯಾಮ್ಸನ್ ಒತ್ತಾಯಿಸಿದ್ದಾರೆ.
ಇದನ್ನು ನೋಡಿ : ನೀಟ್ ಎಡವಟ್ಟು : ಕೆಇಎ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆJanashakthi Media