ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬುಧವಾರ ಈ ವಿಷಯ ಪ್ರಕಟಿಸಿದ್ದು, ಆರ್.ಶ್ರೀಧರ್ ದೀರ್ಘಕಾಲದವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದೆ.
ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಆರ್.ಶ್ರೀಧರ್ ಅವರನ್ನು ಮುಂಬರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ಎ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಭಾರತ ತಂಡದ ಸಹಾಯಕ ಕೋಚ್ ಆಗಿ 300ಕ್ಕೂ ಹೆಚ್ಚು ಪಂದ್ಯಗಳಲ್ಲಿ ಸಹಾಯಕ ಕೋಚ್ ಕಾರ್ಯ ನಿರ್ವಹಿಸಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್ ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.