ಕೇಂದ್ರ ಸಚಿವ ವಿ. ಸೋಮಣ್ಣಗೆ ನೀಡಿದ್ದ ಸಂಸದರ ಕಚೇರಿ ವಾಪಸ್ ಪಡೆದ ರಾಜ್ಯ ಸರ್ಕಾರ!

ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ ತುಮಕೂರಿನಲ್ಲಿ ನೀಡಿದ್ದ ಸಂಸದರ ಕಚೇರಿಯನ್ನು ಉದ್ಘಾಟನೆಗೆ ಮುನ್ನವೇ ರಾಜ್ಯ ಸರ್ಕಾರ ವಾಪಸ್ ಪಡೆದು ಆಘಾತ ನೀಡಿದೆ.

ತುಮಕೂರಿನಿಂದ ಸಂಸದರಾಗಿ ಆಯ್ಕೆಯಾಗಿದ್ದ ವಿ.ಸೋಮವಣ್ಣ ಕೇಂದ್ರದಲ್ಲಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಸದರ ಕಚೇರಿ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು.

ರೈಲ್ವೆ ನಿಲ್ದಾಣ ಬಳಿ ಇರುವ ಹಳೆಯ ಪರಿವೀಕ್ಷಣಾ ಮಂದಿರವನ್ನು ವಿ.ಸೋಮಣ್ಣ ಅವರಿಗೆ ಸರ್ಕಾರ ನೀಡಿತ್ತು. ಆಗಸ್ಟ್18 ಭಾನುವಾರ ನೂತನ ಕಚೇರಿ ಉದ್ಘಾಟನೆಗೆ ಸಿದ್ದವಾಗಿತ್ತು. ಆದರೆ ಉದ್ಘಾಟನೆಗೆ ಎರಡು ದಿನ ಮುಂಚೆಯೇ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡದೇ ವಾಪಸ್ ಪಡೆದಿದೆ.

ಉದ್ಘಾಟನೆ ಆಗಬೇಕಿದ್ದ ಕಚೇರಿಗೆ ಸೋಮಣ್ಣ ನೂತನ ಟೇಬಲ್ ಹಾಗೂ ಕುರ್ಚಿಗಳನ್ನು ಹಾಕಿಸಿದ್ದರು. ಅಲ್ಲದೇ  ವಿ.ಸೋಮಣ್ಣ, ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರ್ಕಾರ ಲೋಕಸಭಾ ಸದಸ್ಯರ ಕಚೇರಿ, ತುಮಕೂರು ಎಂದು ನಾಮಫಲಕ ಕೂಡ ಹಾಕಿಸಿದ್ದರು.

ಕಚೇರಿ ಉದ್ಘಾಟನೆಗೆ ಎರಡು ದಿನ ಬಾಕಿ ಇರುವಾಗ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡದೇ ನೂತನ ಸಂಸದರ ಕಚೇರಿ ವಾಪಸ್ ಪಡೆದಿದೆ.

ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆಯನ್ನು ಕೂಡಲೇ ಹಿಂಪಡೆಯಲಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ, ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಸೂಚಿಸಿದ್ದಾರೆ.

ಇಲ್ಲಿ ಇಷ್ಟು ವರ್ಷ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕ್ಷುಲ್ಲಕ ರಾಜಕಾರಣ ಮಾಡಬಾರದು. ಈ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ. ಯಾರು ಏನು ಮಾಡುತ್ತಾರೋ ನೋಡೋಣ ಎಂದು ರಾಜ್ಯ ಸರ್ಕಾರದ ನಡೆಗೆ ತುಮಕೂರು ನಗರ ಬಿಜೆಪಿ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಕಿಡಿಕಾರಿದ್ದಾರೆ.

ಈ ಭಾನುವಾರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಈಗ ಏಕಾಏಕಿ ರದ್ದು ಮಾಡಿ ಆದೇಶ ಮಾಡಿದ್ದಾರೆ. ಈ ರೀತಿಯ ನಡೆ ಸರಿಯಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *