ಎಸ್.ಸಿ. ವರ್ಗೀಕರಣ ಸಮಸ್ಯೆ – ಒಂದು ಅವಲೋಕನ

– ಬಿ.ವಿ. ರಾಘವುಲು

ನಿಜವಾದ ಪರಿಹಾರವು ಹಿಂದುಳಿದಿರುವಿಕೆಗೆ ಕಾರಣವಾದ ಮೂಲ ಅಂಶಗಳನ್ನು ಪರಿಹರಿಸುವುದರಲ್ಲಿ ಇದೆ. ಇಂದಿಗೂ ದಲಿತರನ್ನು ತಳಮಟ್ಟದಲ್ಲಿ ಇರಿಸುವ ಭೂ ಸಂಬಂಧಗಳನ್ನು ಮುರಿಯಬೇಕು. ಭೂಮಿ ವಿತರಣೆ ನಡೆಯಬೇಕು. ಗುಣಮಟ್ಟದ ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ ಮತ್ತು ವಸತಿ ಇವುಗಳು ಹಕ್ಕುಗಳಾಗಿ ಬದಲಾಗಬೇಕು. ಖಾಸಗಿ ವಲಯದಲ್ಲಿ ಮೀಸಲಾತಿ ಬರಬೇಕು. ಇವುಗಳನ್ನು ಸಾಧಿಸಿದರೆ ಮಾತ್ರ ದಲಿತರು ಮತ್ತು ಇತರ ದುರ್ಬಲ ವರ್ಗಗಳು ಮೀಸಲಾತಿಯ ಮಿತಿಗಳನ್ನು ದಾಟಿ ತಮ್ಮ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಶಕ್ತಿ ಬರುತ್ತದೆ.

ಸುಪ್ರೀಂ ಕೋರ್ಟ್‌ ತೀರ್ಪು ವರ್ಗೀಕರಣ ಸಮಸ್ಯೆಯ ಮೇಲೆ ಮತ್ತೊಮ್ಮೆ ವಾದವಿವಾದಗಳಿಗೆ ದಾರಿ ಮಾಡಿಕೊಟ್ಟಿದೆ. ವರ್ಗೀಕರಣವು ಸಂವಿಧಾನಬದ್ಧವಾಗಿದೆ ಎಂದೂ, ರಾಜ್ಯಗಳು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಂವಿಧಾನವು ಅಡ್ಡಿಯಾಗುವುದಿಲ್ಲ ಎಂದೂ ನ್ಯಾಯಾಲಯವು ಬಹುಮತದ ತೀರ್ಪು ನೀಡಿದೆ. ಏಳು ಸದಸ್ಯರ ಪೀಠದಲ್ಲಿ ಒಬ್ಬರು ಮಾತ್ರವೇ ಈ ಅಭಿಪ್ರಾಯವನ್ನು ಒಪ್ಪಲಿಲ್ಲ. ಈ ಸಂದರ್ಭದಲ್ಲಿಯೇ ಪೀಠದಲ್ಲಿನ ನಾಲ್ವರು ನ್ಯಾಯಮೂರ್ತಿಗಳು ‘ಕ್ರೀಮಿ ಲೇಯರ್’ಅನ್ನು ಕೂಡ ಅಳವಡಿಸುವುದು ಉತ್ತಮವೆಂದು ಪ್ರತ್ಯೇಕ ತೀರ್ಪುಗಳಲ್ಲಿ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಹಾಗೂ ಮತ್ತೊಬ್ಬರು ಮಾತ್ರ ಈ ವಿಷಯದಲ್ಲಿ ಮೌನ ವಹಿಸಿದ್ದರು. ಒಟ್ಟಾರೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ವರ್ಗೀಕರಣಕ್ಕೆ ವಿರುದ್ಧವಾಗಿ ಬೆಳೆಸಲಾದ ಸಾಂವಿಧಾನಿಕವಾದ ಆಕ್ಷೇಪಗಳ ಬಗ್ಗೆ ಸ್ಪಷ್ಟ ತೀರ್ಪು ನೀಡಿದೆ. ವರ್ಗೀಕರಣ ಮಾಡಬೇಕೇ, ಬೇಡವೇ ಎನ್ನುವ ನಿರ್ಧಾರವನ್ನು ರಾಜ್ಯಗಳಿಗೆ ಬಿಡಲಾಗಿದೆ. ನ್ಯಾಯಾಲಯಕ್ಕೆ ಬಂದಿರುವ ವ್ಯಾಜ್ಯವು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದರೂ, ತೀರ್ಪು ಕೇಂದ್ರಕ್ಕೂ ಅನ್ವಯಿಸುತ್ತದೆ.

ಈ ಹಿಂದೆ ಕೆಲವು ರಾಜ್ಯಗಳಲ್ಲಿ ವರ್ಗೀಕರಣ ಸಮಸ್ಯೆ ಮುಂದೆ ಬಂದ ಸಮಯದಲ್ಲಿ ಸಿಪಿಐ(ಎಂ) ವರ್ಗೀಕರಣವನ್ನು ಬೆಂಬಲಿಸಿತ್ತು. ಪರಿಶಿಷ್ಟ ಜಾತಿಗಳ (ಎಸ್‌.ಸಿ.) ಒಳಗೇ ವಿವಿಧ ಉಪಜಾತಿಗಳ ನಡುವೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ ಎಂದು ಸ್ಪಷ್ಟವಾದ ವಿವರಗಳು/ ದತ್ತಾಂಶಗಳ ಆಧಾರದ ಮೇಲೆ ಅಧ್ಯಯನ ಸಮಿತಿಗಳು ಸಲ್ಲಿಸಿದ ವರದಿಗಳ ಆಧಾರದ ಮೇಲೆ ನಿರ್ಧರಿಸಿದಾಗ ಸಿಪಿಐ(ಎಂ) ವರ್ಗೀಕರಣ ಸಕಾರಾತ್ಮಕವೆಂದು ಘೋಷಿಸಿತು.

ತೀರ್ಪಿನ ಹಿನ್ನೆಲೆ- ಕೆಲವು ಅಂಶಗಳು

ಪಂಜಾಬ್, ಆಂಧ್ರಪ್ರದೇಶ ಮತ್ತು ತಮಿಳುನಾಡು ತಮ್ಮ ತಮ್ಮ ರಾಜ್ಯಗಳ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಎಸ್‌.ಸಿ. ವರ್ಗದಲ್ಲಿ ವರ್ಗೀಕರಣ ಮಾಡಲು ನಿರ್ಧಾರಗಳನ್ನು ತೆಗೆದುಕೊಂಡಿವೆ. ತಮಿಳುನಾಡು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ನ್ಯಾಯಾಲಯದ ತೀರ್ಪಿನಿಂದಾಗಿ ಈ ನಿರ್ಧಾರಗಳನ್ನು ಜಾರಿಗೆ ತರಲಾಗಲಿಲ್ಲ. ಆಂಧ್ರಪ್ರದೇಶ ರಾಜ್ಯದ ವರ್ಗೀಕರಣದ ಮೇಲೆ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಬಂದ ದಾವೆಯಲ್ಲಿ ವರ್ಗೀಕರಣವು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2005 ರಲ್ಲಿ ತೀರ್ಪು ನೀಡಿತು. ಈ ತೀರ್ಪನ್ನು ಪ್ರಶ್ನಿಸಿ ಬಂದ ಅನೇಕ ಅರ್ಜಿಗಳನ್ನು ಸೇರಿಸಿ ವಿಚಾರಣೆ ನಡೆಸಿದ ಏಳು ನ್ಯಾಯಾಧೀಶರ ಪೀಠವು ಆಗಸ್ಟ್ 1, 2024 ರಂದು ತನ್ನ ತೀರ್ಪನ್ನು ನೀಡಿದೆ. ತೀರ್ಪಿನಲ್ಲಿ ವಿವಾದಾತ್ಮಕವಾದ ಕೆಲವು ಪ್ರಮುಖ ಅಂಶಗಳನ್ನು ನೋಡೋಣ.

ಸಂವಿಧಾನದಲ್ಲಿನ 341 ನೇ ವಿಧಿಯು ರಾಜ್ಯಗಳು ಎಸ್‌.ಸಿ. ವರ್ಗೀಕರಣ ಮಾಡುವುದಕ್ಕೆ ಅನುಮತಿ ಕೊಟ್ಟಿದೆ ಎನ್ನುವ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ಎಸ್‌.ಸಿ., ಎಸ್‌.ಟಿ. ಪಟ್ಟಿಗಳನ್ನು ನಿರ್ಣಯಿಸುವ ಹಕ್ಕು ಸಂಸತ್ತಿಗೆ ಇರುವುದರಿಂದ ವರ್ಗೀಕರಣ ವಿಷಯ ಕೂಡಾ ಸಂಸತ್ತಿನ ವ್ಯಾಪ್ತಿಯಲ್ಲಿದೆಯೆಂದು, ಇದರಲ್ಲಿ ರಾಜ್ಯಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂಬ ವಾದವನ್ನು ತಿರಸ್ಕರಿಸುತ್ತಾ, ತಮ್ಮ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ವರ್ಗೀಕರಣ ಮಾಡುವ ಹಕ್ಕು ಸಂಸತ್ತಿನದೋ ಅಥವಾ ರಾಜ್ಯಗಳದೊ ಎಂಬುದಕ್ಕಿಂತ, ನಿಜವಾದ ವರ್ಗೀಕರಣದ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗಿದೆ. ಈ ಅಂಶಗಳ ಮೇಲೆ ಸ್ಪಷ್ಟತೆ ಬಂದರೆ ಎಲ್ಲಿಂದ ಪ್ರಾರಂಭಿಸಿದರೆ ಉತ್ತಮವಾಗಿರುತ್ತದೆ ಎಂಬ ಅಂಶ ಕೇವಲ ಸಾಂಕೇತಿಕ ಮತ್ತು ಪ್ರಾಯೋಗಿಕ ಸಮಸ್ಯೆಯಾಗುತ್ತದೆ.

ವರ್ಗೀಕರಣ ಕಾನೂನುಬದ್ಧವೇ ಅಲ್ಲವೇ ಎಂಬ ಅಂಶವನ್ನೇ ಮಾತ್ರವಲ್ಲದೆ, ಸಮಾನತೆಯನ್ನು ಸಾಧಿಸುವ ದೃಷ್ಟಿಯಿಂದಲೂ ಸಮಂಜಸವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಎಸ್ ಸಿ ವರ್ಗದ ಅಸ್ಪೃಶ್ಯತೆಯು ‘Untouchability’ ದುರ್ಬಲ ಜಾತಿಗಳ ಗುಂಪಾಗಿ ರೂಪುಗೊಂಡಿರುವುದರಿಂದ ಅದು ಒಂದು ‘ಏಕರೂಪದ’ (Homogeneous) ಗುಂಪು, ಆದ್ದರಿಂದ ಅದನ್ನು ಕಡಿದುಹಾಕುವುದು ಸಮಂಜಸವಲ್ಲ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ಅಸ್ಪೃಶ್ಯತೆಗೆ ಎಸ್ಸಿ ವರ್ಗದಲ್ಲಿರುವ ಉಪಜಾತಿಗಳು ಬಳಲುತ್ತಿದ್ದರೂ ಅವರ ಮಧ್ಯೆ ಎಲ್ಲ ವಿಷಯದಲ್ಲೂ ಏಕರೂಪತೆ ಇಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ವ್ಯತ್ಯಾಸವಿದೆ ಎಂದು, ವೈವಿಧ್ಯಮಯ (ಹೆಟಿರೋಜೆನಿಯಸ್) ಗುಂಪು ಎಂದು ನ್ಯಾಯಾಲಯವು ಭಾವಿಸಿದೆ. ಈ ವ್ಯತ್ಯಾಸಗಳನ್ನು ಹೋಗಲಾಡಿಸಲು ವರ್ಗೀಕರಣವು ಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಟೀಕೆಗಳು- ಆಕ್ಷೇಪಣೆಗಳು

ಈ ವಿಚಾರದಲ್ಲಿ ನ್ಯಾಯಾಲಯ ಸರಿಯಾದ ಮಾಹಿತಿ/ಡೇಟಾ ಇಲ್ಲದೇ ನಿರ್ಧಾರ ಕೈಗೊಂಡಿದೆ ಎಂದು ಆಕ್ಷೇಪಣೆಗಳು ಬಂದಿವೆ. ಈ ವಾದಕ್ಕೆ ಅರ್ಥವಿಲ್ಲ. ಈಗಾಗಲೇ ಕೆಲವು ರಾಜ್ಯಗಳು ನೇಮಿಸಿರುವ ಅಧ್ಯಯನ ಆಯೋಗಗಳ ವರದಿಗಳು ಆಂತರಿಕವಾಗಿ ಎಸ್‌.ಸಿ. ಉಪಜಾತಿಗಳ ನಡುವೆ ಇರುವ ಆಂತರಿಕ ವ್ಯತ್ಯಾಸಗಳನ್ನು ಬಹಿರಂಗಪಡಿಸಿವೆ. 2011 ರ ಸಾಮಾನ್ಯ ಜನಗಣತಿಯಲ್ಲಿ ಎಸ್.ಸಿ. ಉಪಜಾತಿಗಳಲ್ಲಿ ಇರುವ ಮಾಹಿತಿಯ ಪರಿಶೀಲನೆಯು ವ್ಯತ್ಯಾಸಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುತ್ತದೆ. ಕೆಲವರು ವ್ಯತ್ಯಾಸಗಳಿವೆ ಎಂದು ಒಪ್ಪಿಕೊಳ್ಳುತ್ತಲೇ, ಎಸ್ಸಿಗಳಲ್ಲಿಯೂ ಹಿಂದುಳಿದ ಉಪಜಾತಿಗಳು, ಮುಂದುವರಿದ ಉಪಜಾತಿಗಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ಬರಲು ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯಗಳು ಒದಗಿಸಿದರೆ ಸರಿಹೋಗುತ್ತದೆ ಎನ್ನುವ ಮೂಲಕ ವರ್ಗೀಕರಣ ಅಗತ್ಯ ಇಲ್ಲ ಎನ್ನುತ್ತಿದ್ದಾರೆ. ಈ ಸಲಹೆಯಲ್ಲಿ ಆಕ್ಷೇಪಾರ್ಹ ಏನೂ ಇಲ್ಲವಾದರೂ, ಇದು ವರ್ಗೀಕರಣಕ್ಕೆ ಪರ್ಯಾಯವಲ್ಲ. ಅದರ ಜೊತೆಯಲ್ಲಿಯೇ ಇದನ್ನೂ ಮಾಡಬೇಕಷ್ಟೆ. ವರ್ಗೀಕರಣ ಎನ್ನುವುದು ಮೀಸಲಾತಿ ಹಕ್ಕಿನ ಭಾಗವಾಗಿದೆ. ವರ್ಗೀಕರಣದ ಕನಿಷ್ಠ ಪ್ರಯೋಜನ ಏನೇ ಇರಲಿ, ತಕ್ಷಣ ಲಭ್ಯವಿರುತ್ತದೆ. ಸೌಲಭ್ಯಗಳು ಸರಕಾರಗಳ ಕೃಪಾಕಟಾಕ್ಷದ ಮೇಲೆ ಅವಲಂಬಿತವಾಗಿರುತ್ತವೆ.

‘ವರ್ಗೀಕರಣ’ವು ಮೀಸಲಾತಿ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದ ಮೂಲಭೂತ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತದೆ ಎಂಬ ಟೀಕೆ ಹಿಂದಿನಿಂದಲೂ ಇದೆ. ಇದೀಗ ನ್ಯಾಯಾಲಯ ನೀಡಿರುವ ತೀರ್ಪಿನ ಮೇಲೂ ಇಂತಹ ಟೀಕೆಗಳು ಬರುತ್ತಿದೆ. ದಬ್ಬಾಳಿಕೆ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅಂಶಗಳೇ ಮೀಸಲಾತಿ ವ್ಯವಸ್ಥೆಯ ಅಸ್ತಿತ್ವಕ್ಕೆ ಆಧಾರವಾಗಿದ್ದು, ಇದೀಗ ನ್ಯಾಯಾಲಯ ಹಿಂದುಳಿದಿರುವಿಕೆ, ಪ್ರಾತಿನಿಧ್ಯ ಕಡಿತದಂತಹ ಅಂಶಗಳನ್ನು ಪರಿಚಯಿಸಿ ಮೀಸಲಾತಿಯ ಆಧಾರವನ್ನು ದುರ್ಬಲಗೊಳಿಸುತ್ತಿದೆ ಎಂಬುದು ಈ ಟೀಕೆಯ ಸಾರ.

ಇದನ್ನು ಓದಿ : ಮನುಸ್ಮೃತಿಯಲ್ಲಿ ನಿಜವಾಗಿಯೂ ಹಿರಿದಾದ ತತ್ವಗಳಿವೆಯೆ?

ಈ ಟೀಕೆಗೆ ಸಾಕಷ್ಟು ಆಧಾರವಿದೆ ಎಂದು ಯೋಚಿಸಲು ಸಾಧ್ಯವಿಲ್ಲ. ಎಸ್‌.ಸಿ.ಗಳಲ್ಲಿನ ಆಂತರಿಕ ವ್ಯತ್ಯಾಸಗಳನ್ನು ಹೋಗಲಾಡಿಸಲು ಮುಂದಿಟ್ಟಿರುವ ಅಂಶವನ್ನು ಮೀಸಲಾತಿಯ ಮೂಲ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಭಾವಿಸಲು ಅವಕಾಶವಿಲ್ಲ. ನಮ್ಮ ದೇಶದ ಮೀಸಲಾತಿಯ ಐತಿಹಾಸಿಕ ಹಿನ್ನೆಲೆ ಮತ್ತು ಅಸ್ಪೃಶ್ಯ ವರ್ಗದವರಿಗೂ ಸಂವಿಧಾನವು ಮೀಸಲಾತಿ ಕಲ್ಪಿಸಿರುವ ರೀತಿಯನ್ನು ನೋಡಿದರೆ, ಮೀಸಲಾತಿ ಮತ್ತು ಪ್ರಾತಿನಿಧ್ಯಕ್ಕೆ ಯಾವುದೋ ಒಂದು ಅಂಶ ಆಧಾರವಾಗಿದೆ ಎಂದು ಭಾವಿಸಲು ಸಾಧ್ಯವಿಲ್ಲ. ಸಾಮಾಜಿಕ ದಬ್ಬಾಳಿಕೆ, ಅಸ್ಪೃಶ್ಯತೆಗಳನ್ನು ಅಪರಾಧ ಎಂದು ಸಂವಿಧಾನವು ಘೋಷಿಸಿದೆ. ಅವುಗಳನ್ನು ಎದುರಿಸಲು ಸರ್ಕಾರಗಳು ಕಾನೂನುಗಳನ್ನು ಕೂಡಾ ತಂದಿವೆ. ಅವುಗಳನ್ನು ಕಳಪೆಯಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದು ಬೇರೆ ವಿಷಯ. ಆದರೆ, ಸಾಮಾಜಿಕ ದೌರ್ಬಲ್ಯವನ್ನು ಹೋಗಲಾಡಿಸಲು ಕಾನೂನುಗಳೇ ಸಾಕಾಗುವುದಿಲ್ಲ, ಶಿಕ್ಷಣ, ಆರ್ಥಿಕ, ರಾಜಕೀಯ ಸಬಲೀಕರಣವನ್ನು ಕೂಡಾ ನೀಡುವುದು ಅಗತ್ಯವೆಂದು ಭಾವಿಸಿ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.

ಸಾಮಾನ್ಯ ಕೋಟಾಕ್ಕೆ ತಿರುಗುವಿಕೆ -ಬ್ಯಾಕ್‌ಲಾಗ್ ವ್ಯವಸ್ಥೆ

ವರ್ಗೀಕರಣದಿಂದ ಭರ್ತಿಯಾಗದ ಹುದ್ದೆಗಳ ಸಂಖ್ಯೆ ಹೆಚ್ಚಾಗಲಿದ್ದು, ಅವುಗಳನ್ನು ಸಾಮಾನ್ಯ ಕೋಟಾಕ್ಕೆ ಪರಿವರ್ತಿಸುವುದರಿಂದ ಎಸ್‌ಸಿಗಳಿಗೆ ಅನ್ಯಾಯವಾಗಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ಭರ್ತಿಯಾಗದ ಖಾಲಿ ಹುದ್ದೆಗಳನ್ನು ಸಾಮಾನ್ಯ ಕೋಟಾಕ್ಕೆ ಪರಿವರ್ತಿಸುವ ಪ್ರಯತ್ನವು ವರ್ಗೀಕರಣದ ಸಮಸ್ಯೆಯೊಂದಿಗೆ ಲಿಂಕ್ ಮಾಡುವುದು ಸರಿಯಲ್ಲ. ಸಾಮಾನ್ಯ ಕೋಟಾವಾಗಿ ಪರಿವರ್ತಿಸುವ ಪ್ರಯತ್ನಗಳು ವರ್ಗೀಕರಣದ ವಿಚಾರ ಚರ್ಚೆಗೆ ಬರುವ ಮೊದಲಿನಿಂದಲೂ ನಡೆಯುತ್ತಿವೆ. ಇವುಗಳ ವಿರುದ್ಧ ನಡೆದ ಚಳುವಳಿಗಳಿಂದಲೇ ‘ಬ್ಯಾಕ್ ಲಾಗ್’ ಎಂಬ ವ್ಯವಸ್ಥೆ ಜಾರಿಗೆ ಬಂದಿತು. ಆದಾಗ್ಯೂ, ಇಂದಿಗೂ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಏತನ್ಮಧ್ಯೆ, ಯುಜಿಸಿ ಮೀಸಲು ಖಾಲಿ ಹುದ್ದೆಗಳನ್ನು ಸಾಮಾನ್ಯ ಕೋಟಾದೊಳಗೆ ಪರಿವರ್ತಿಸುವ ಸಂದರ್ಭಗಳಲ್ಲಿ ಮಾರ್ಪಡಿಸುವುದನ್ನು ವಿವರಿಸುತ್ತ ಮಾರ್ಗದರ್ಶಕ ಸೂತ್ರಗಳನ್ನು ಪ್ರಸ್ತಾಪಿಸಿದೆ. ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ತರಾತುರಿಯಲ್ಲಿ ಹಿಂಪಡೆಯಲಾಗಿದೆ. ಅಂತಹ ಪ್ರಯತ್ನಗಳನ್ನು ತಡೆಯುವುದನ್ನು ಬಿಟ್ಟು ಈ ಅಂಶವನ್ನು ವರ್ಗೀಕರಣಕ್ಕೆ ಜೋಡಿಸುವುದು ತಪ್ಪು. ಅದೇ ರೀತಿ ವರ್ಗೀಕರಣ ಎನ್ನುವುದು ಎಸ್ ಸಿ ವರ್ಗದ ಆಂತರಿಕ ಅಂಶವಾಗಿದೆ: ಇರುವ ಕೋಟಾದೊಳಗೆ ಉಪ-ವಿಭಜನೆ. ಆದ್ದರಿಂದ, ಒಂದು ಗುಂಪಾಗಿ ನೋಡಿದಾಗ, ಎಸ್ ಸಿ ವರ್ಗದವರಿಗೆ ನಷ್ಟವೇನೂ ಆಗುವುದಿಲ್ಲ. ಒಂದು ಉಪ-ವರ್ಗದಲ್ಲಿ ಖಾಲಿ ಹುದ್ದೆ ಉಳಿದರೆ ಇನ್ನೊಂದು ವರ್ಗದ ಅರ್ಹ ಅಭ್ಯರ್ಥಿಗಳಿಂದ ಆ ಹುದ್ದೆ ಭರ್ತಿ ಮಾಡಬಹುದು. ಎಲ್ಲಾ ಉಪವರ್ಗಗಳಿಂದ ಭರ್ತಿ ಆಗದಿದ್ದರೆ ಬ್ಯಾಕ್‌ಲಾಗ್‌ ನಲ್ಲಿ ಹಾಕಬಹುದು. ಈ ವಿಧಾನದಿಂದಾಗಿ ಕೋಟಾವು ಎಸ್ ಸಿ ವರ್ಗವನ್ನು ದಾಟಿ ಹೊರಗೆ ಹೋಗುವುದಿಲ್ಲ. ರಾಜ್ಯಗಳು ಅಥವಾ ಕೇಂದ್ರವಾಗಲೀ ವರ್ಗೀಕರಣವನ್ನು ತಂದರೆ, ಎಸ್‌ಸಿ ಕೋಟಾ ಹೊರಗೆ ಹೋಗದಂತೆ ಸಂವಿಧಾನಾತ್ಮಕ ಮತ್ತು ಕಾನೂನು ಬದ್ದವಾದ ವ್ಯವಸ್ಥೆ ಮಾಡುವಂತೆ ನೋಡಬೇಕು.

ಅಭಿವೃದ್ಧಿಯಲ್ಲಿನ ವ್ಯತ್ಯಾಸಗಳು-ಪರಿಹಾರ ಮಾರ್ಗಗಳು

ವರ್ಗೀಕರಣಕ್ಕೆ ಇನ್ನೂ ಕೆಲವು ಆಕ್ಷೇಪಗಳು ಕೂಡಾ ಬರುತ್ತಿವೆ. ವರ್ಗೀಕರಣ ದಲಿತರ ಒಗ್ಗಟ್ಟನ್ನು ಒಡೆಯುತ್ತದೆ ಎಂಬುದು ಇದರಲ್ಲಿ ಒಂದು ವಾದ. ವಾಸ್ತವ ಏನೆಂದರೆ, ಎಸ್‌ ಸಿಗಳೊಳಗೆ ವಿವಿಧ ಉಪಜಾತಿಗಳ ನಡುವೆ ಬೆಳೆಯುತ್ತಿರುವ ವ್ಯತ್ಯಾಸಗಳೇ ವರ್ಗೀಕರಣದ ಬೇಡಿಕೆಗೆ ಕಾರಣವಾಯಿತು. ವ್ಯತ್ಯಾಸಗಳನ್ನು ನಿವಾರಿಸುವ ಕ್ರಮಗಳನ್ನು ಸಮರ್ಥಿಸಿಕೊಳ್ಳುವುದೇ ಐಕ್ಯತೆಗೆ ಏಕೈಕ ಮಾರ್ಗ ವಿನಹ, ಅವುಗಳನ್ನು ವಿರೋಧಿಸುವುದಲ್ಲ. ಈ ಮೂಲಕ ವ್ಯತ್ಯಾಸಗಳ ಹೆಸರಿನಲ್ಲಿ ಅನೈಕ್ಯತೆ ಸೃಷ್ಟಿಸುವವರ ಆಟಗಳನ್ನು ತಡೆಯಲು ಸುಲಭವಾಗುತ್ತದೆ. ಅದೇರೀತಿ ಬೂರ್ಜ್ವಾ ರಾಜಕೀಯ ಪಕ್ಷಗಳು ವರ್ಗೀಕರಣದ ವಿಷಯವನ್ನು ತಮ್ಮ ಸ್ವಾರ್ಥ ಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಿವೆ ಎಂಬುದು ಇನ್ನೊಂದು ಟೀಕೆ. ಮತಕ್ಕಾಗಿ ಒಂದು ಸಾಮಾಜಿಕ ವರ್ಗವನ್ನು ಮತ್ತೊಂದು ಸಾಮಾಜಿಕ ವರ್ಗದ ವಿರುದ್ದ ಎತ್ತಿಕಟ್ಟುವುದನ್ನು ಮತ್ತು ಸಮೀಕರಿಸುವುದನ್ನು ಬೂರ್ಜ್ವಾ ಪಕ್ಷಗಳು ಒಂದು ತಂತ್ರವನ್ನಾಗಿ ಮಾಡಿಕೊಂಡಿವೆ ಎಂಬುದು ನಿಜ. ಈ ಕುಟಿಲ ಪ್ರಕ್ರಿಯೆಯ ಪ್ರಯೋಗದಲ್ಲಿ ಬಿಜೆಪಿ ಎಲ್ಲರಿಗಿಂತ ಮುಂದಿದೆ. ಎಸ್‌ಸಿಗಳ ನಡುವೆ ಇರುವ ಅಭಿವೃದ್ಧಿಯ ವ್ಯತ್ಯಾಸಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕೆ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಮಾತ್ರ ಬೂರ್ಜ್ವಾ ಪಕ್ಷಗಳ ಅನೈಕ್ಯತೆ ಸೃಷ್ಟಿಸುವ ನಡೆಗಳನ್ನು ಹಿಮ್ಮೆಟ್ಟಿಸಬಹುದು.

ವರ್ಗೀಕರಣವು ಸರ್ವರೋಗ ನಿವಾರಣೆ ಅಲ್ಲ

ಸರ್ವೋಚ್ಚ ನ್ಯಾಯಾಲಯವು ವರ್ಗೀಕರಣಕ್ಕೆ ಅನುಕೂಲವಾಗಿ ತೀರ್ಪು ನೀಡಿರುವುದರಿಂದ, ಇನ್ನು ಎಸ್ಸಿಗಳಲ್ಲಿನ ಹಿಂದುಳಿದ ಉಪಜಾತಿಗಳ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕಿದೆ ಎಂದು ಯಾರಾದರೂ ಭಾವಿಸಿದರೆ ಅವರಿಗೆ ನಿರಾಶೆ ಎದುರಾಗುತ್ತದೆ. ಹಾಗೆ ನೋಡಿದರೆ ಮೀಸಲಾತಿಯಿಂದ ಮಾತ್ರ ಸಾಮಾಜಿಕ ದಬ್ಬಾಳಿಕೆಯನ್ನು, ದಲಿತರ ಹಿಂದುಳಿದಿರುವಿಕೆಯ ಪರಿಸ್ಥಿತಿಯನ್ನು ಪರಿಹರಿಸಲಾಗದು. ಉದಾರೀಕರಣ ನೀತಿಗಳ ನಂತರ (ಬೂರ್ಜ್ವಾ ಪಕ್ಷಗಳೆಲ್ಲವೂ ಇವುಗಳನ್ನು ಅನುಷ್ಠಾನಗೊಳಿಸುತ್ತಿವೆ) ಮೀಸಲಾತಿಗಳು ಇನ್ನಷ್ಟು ನಾಮಮಾತ್ರ ಆಗುತ್ತಿವೆ. ಈ ಪರಿಸ್ಥಿತಿಯಲ್ಲಿ ವರ್ಗಿ ಕರಣ ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂದು ನಿರೀಕ್ಷಿಸಬಾರದು. ಎಸ್ಸಿಗಳೊಳಗೆ ಕೆಲವು ವರ್ಗಗಳಲ್ಲಿ ಅಸಂತೃಪ್ತಿಗೆ ಕಾರಣವಾಗುತ್ತಿರುವ ಒಂದು ಅಂಶಕ್ಕೆ ತಕ್ಷಣದ ಪರಿಹಾರ ನೋಡುವ ಮೂಲಕ ಐಕ್ಯತೆಯ ಬಲವರ್ಧನೆ ಬೆಳೆಸಿದರೆ, ಅದೇ ನಾವು ನಿರೀಕ್ಷಿಸಬಹುದಾದ ದೊಡ್ಡ ಲಾಭವಾಗಿದೆ.

ನಿಜವಾದ ಪರಿಹಾರವು ಹಿಂದುಳಿದಿರುವಿಕೆಗೆ ಕಾರಣವಾದ ಮೂಲ ಅಂಶಗಳನ್ನು ಪರಿಹರಿಸುವುದರಲ್ಲಿ ಇದೆ. ಇಂದಿಗೂ ದಲಿತರನ್ನು ತಳಮಟ್ಟದಲ್ಲಿ ಇರಿಸುವ ಭೂ ಸಂಬಂಧಗಳನ್ನು ಮುರಿಯಬೇಕು. ಭೂಮಿ ವಿತರಣೆ ನಡೆಯಬೇಕು. ಗುಣಮಟ್ಟದ ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ ಮತ್ತು ವಸತಿ ಇವುಗಳು ಹಕ್ಕುಗಳಾಗಿ ಬದಲಾಗಬೇಕು. ಖಾಸಗಿ ವಲಯದಲ್ಲಿ ಮೀಸಲಾತಿ ಬರಬೇಕು. ಇವುಗಳನ್ನು ಸಾಧಿಸಿದರೆ ಮಾತ್ರ ದಲಿತರು ಮತ್ತು ಇತರ ದುರ್ಬಲ ವರ್ಗಗಳು ಮೀಸಲಾತಿಯ ಮಿತಿಗಳನ್ನು ದಾಟಿ ತಮ್ಮ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಶಕ್ತಿ ಬರುತ್ತದೆ.

‘ಕೆನೆಪದರ’ ಅಗತ್ಯವಿಲ್ಲ

ಸುಪ್ರೀಂ ಕೋರ್ಟ್ ತಾನು ಪರಿಹರಿಸಬೇಕಾದ ‘ವರ್ಗೀಕರಣ’ ವಿವಾದದ ಮೇಲೆ ತೀರ್ಪು ನೀಡುವಾಗ, ‘ಕೆನೆ ಪದರ’ (ಕ್ರೀಮ್ ಲೇಯರ್) ಕುರಿತೂ ವ್ಯಾಖ್ಯಾನಗಳನ್ನು ಮಾಡಿದೆ. ನಾಲ್ವರು ನ್ಯಾಯಮೂರ್ತಿಗಳು ‘ಕೆನೆ ಪದರ’ವನ್ನು ಎಸ್‌ಸಿ ಮತ್ತು ಎಸ್‌ಟಿಗಳಿಗೂ ಅನ್ವಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಕಾರ್ಯಗತಗೊಳಿಸಬೇಕಾದ ತೀರ್ಪಿನ ಭಾಗವಾಗಿರದೇ ಇದ್ದರೂ ಸಹ, ವಿವಾದಾತ್ಮಕ ಅಂಶವಾಗಿದೆ. ಎಸ್‌ಸಿ ಮತ್ತು ಎಸ್‌ಟಿಗಳಿಗೆ ಕೆನೆಪದರ ಇರಬಾರದು ಎಂಬುದು ಸಿಪಿಐ(ಎಂ)ನ ಅಭಿಪ್ರಾಯವಾಗಿದೆ. ಐತಿಹಾಸಿಕವಾಗಿ ಯಾವುದೇ ಆಸ್ತಿಪಾಸ್ತಿಗಳನ್ನು ಹೊಂದಿರದ ಎಸ್‌ಸಿಗಳಲ್ಲಿ, ಇದುವರೆಗೂ ಸ್ಥಿರವಾದ ಆಸ್ತಿಪಾಸ್ತಿಗಳನ್ನು ಹೊಂದಿರುವ ಸ್ಪಷ್ಟವಾದ ಒಂದು ವರ್ಗ ರೂಪಿಗೊಂಡಿಲ್ಲ. ಕೆಲವು ಮಂದಿ ರಾಜಕೀಯ ನಾಯಕರು, ಐಎಎಸ್, ಐಪಿಎಸ್ ಅಧಿಕಾರಿಗಳು, ಕೆಲವು ಕೈಗಾರಿಕಾ ಮಾಲೀಕರ ಹೆಸರನ್ನು ತೋರಿಸಿ ಕೆನೆಪದರವನ್ನು ಪ್ರತಿಪಾದಿಸುವುದು ಸರಿಯಲ್ಲ. ಈ ಕುಟುಂಬಗಳ ಕೈಯಲ್ಲಿ ಸಾಕಷ್ಟು ಸಂಪತ್ತು ಸಂಗ್ರಹವಾಗಿದೆ, ಅವರ ಸಾಮಾಜಿಕ ಸ್ಥಾನಮಾನ ಹೆಚ್ಚಾಗಿದೆ, ಇಂತಹ ಕುಟುಂಬಗಳ ಸಂಖ್ಯೆ ಸಾಕಷ್ಟಿದೆ ಎಂದು ಒಪ್ಪಿಕೊಂಡರೂ ಸಹಾ ಅವರ ಸಂಪತ್ತು, ಸಾಮಾಜಿಕ ಸ್ಥಾನಮಾನಗಳು ಮುಂದಿನ ಪೀಳಿಗೆಗೆ ದಕ್ಕುವ ಪರಿಸ್ಥಿತಿ ಇಲ್ಲ. ಹೀಗಿರುವಾಗ ಎಸ್‌ಸಿ ವರ್ಗದಲ್ಲಿರುವ ಕೆನೆಪದರದ ಬಗ್ಗೆ ಈಗ ಚರ್ಚೆ ಮಾಡುವುದು ಅಪ್ರಸ್ತುತ.

( ಕನ್ನಡಕ್ಕೆ: ಸಿ.ಸಿದ್ದಯ್ಯ)

ಇದನ್ನು ನೋಡಿ : ಆರ್ಥಿಕವಾಗಿ ಸುಧಾರಿಸುತ್ತಿದ್ದ ಬಾಂಗ್ಲಾದೇಶದಲ್ಲಿ ದಂಗೆ ಉಂಟಾಗಿದ್ದು ಯಾಕೆ? ಇದರ ಹಿಂದೆ ಯಾರ ಕೈವಾಡ ಇದೆ

Donate Janashakthi Media

Leave a Reply

Your email address will not be published. Required fields are marked *