ಬೆಂಗಳೂರು: ಕೆಲವು ದಿನಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆ ಬೆಂಗಳೂರಿನಲ್ಲಿ ಮತ್ತೆ ಅಬ್ಬರಿಸತೊಡಗಿದೆ. ಮಧ್ಯರಾತ್ರಿಯಿಂದಲೇ ಧಾರಾಕಾರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಮಧ್ಯರಾತ್ರಿ
ಮೆಜೆಸ್ಟಿಕ್, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್ಹಾಲ್, ಕೆ.ಆರ್.ಮಾರ್ಕೆಟ್, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ. ಜತೆಗೆ ಅಲ್ಲಲ್ಲಿ ಅವಾಂತರವೂ ಸೃಷ್ಟಿಯಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ.
ಮ್ಯಾನ್ ಹೋಲ್ಗೆ ಬಿದ್ದ ಕಾರುಗಳು
ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿ ಭಾರಿ ಮಳೆಯಿಂದ ತೆರೆದುಕೊಂಡಿದ್ದ ಮ್ಯಾನ್ಹೋಲ್ಗೆ ಎರಡು ಕಾರುಗಳು ಬಿದ್ದಿದ್ದು, ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ. ಕಾರಿನಲ್ಲಿ ಇರಬ್ಬರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಎಸ್ಇಬಿಐ ಮುಖ್ಯಸ್ಥರು ಕೆಳಗಿಳಿಯಬೇಕು-ಸಿಪಿಐ(ಎಂ) ಪೊಲಿಟ್ ಬ್ಯುರೊ
ಓಕಳಿಪುರಂ ಅಂಡರ್ಪಾಸ್ನಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ವಾಹನ ಸವಾರರ ಪರದಾಡಿದರು. ನೀರಿನಲ್ಲಿ ಆ್ಯಂಬುಲೆನ್ಸ್, ವ್ಯಾನ್, ಆಟೋ ಸಿಲುಕಿ ಹಾಕಿಕೊಂಡಿತ್ತು. ದಿಢೀರ್ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆರೆಯಾಗಿ ಪರಿವರ್ತನೆಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ. ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಲ ದಿಗ್ಬಂಧನ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ನೀರು ತುಂಬಿ ದಿಗ್ಬಂಧನ ಪರಿಸ್ಥಿತಿ ಏರ್ಪಟ್ಟಿದೆ. ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇ ಪೇಟೆ, ಕಾಟನ್ ಪೇಟೆ ರಸ್ತೆ ಸಂಪೂರ್ಣ ಜಾಲವೃತವಾಗಿದೆ. ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದ್ದು, ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ. ಪುಲಕೇಶಿ ನಗರದ ಎನ್.ಸಿ. ಕಾಲೋನಿಯಲ್ಲಿ ಮನೆಗಳು ಜಲಾವೃತಗೊಂಡಿವೆ. ಮೂವತ್ತು ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.
ಮಾರತಹಳ್ಳಿ ಬಳಿ ಅಪಾರ್ಟ್ಮೆಂಟ್ನ ಬೇಸ್ಮೆಂಟ್ನ ಗೋಡೆ ಒಡೆದಿದ್ದು, ಕೂದಲೆಳೆಯ ಅಂತರದಲ್ಲಿ ಮನೆ ಮಂದಿ ಪಾರಾಗಿದ್ದಾರೆ. ಇತ್ತ ಕೆ.ಆರ್.ಮಾರ್ಕೆಟ್ನ ರಸ್ತೆಗಳೂ ಕೆಸರಿನಿಂದ ಕೂಡಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಎದುರಾಗಿದೆ.
ಭಾರಿ ಮಳೆಯ ಮುನ್ಸೂಚನೆ
ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಯಚೂರು, ಚಿಕ್ಕಬಳ್ಳಾಪುರ, ಮೈಸೂರು ರಾಮನಗರ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ. ಬೆಂಗಳೂರು ವ್ಯಾಪ್ತಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ನೋಡಿ: ವಚನಾನುಭವ – 07| ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ|ಬಾಲಸಂಗಯ್ಯ Janashakthi Media