ಮಕ್ಕಳ ತಟ್ಟೆಗೆ ಹಾಕಿದ ಮೊಟ್ಟೆ ವಾಪಸ್ ಪಡೆಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ!

ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಬೇಯಿಸಿದ ಮೊಟ್ಟೆ ಕೊಟ್ಟರೆ ಅದನ್ನು ಕೊಟ್ಟಂತೆ ಮಾಡಿ ವಾಪಸ್ ಪಡೆಯುತ್ತಿದ್ದ ಮೊಟ್ಟೆ ಕಳ್ಳಿ ಅಂಗನವಾಡಿ ಸಹಾಯಕಿ ಸಿಕ್ಕಿಬಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಮತ್ತು ಸಹಾಯಕಿ ಶೈನಜಾಬೇಗಂ ಅವರನ್ನು ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದು ರಾಜ್ಯ ಸರಕಾರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ವೇಳೆ ಬೇಯಿಸಿದ ಮೊಟ್ಟೆ ನೀಡುವ ಯೋಜನೆ ಜಾರಿಗೆ ಬಂದಿದೆ.

ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬಂತೆ ಸರ್ಕಾರ ಕೊಟ್ಟರೂ ಮಕ್ಕಳಿಗೆ ಅಂಗನವಾಡಿ ಸಹಾಯಕಿ ನೀಡದೇ ಮೊಟ್ಟೆಯನ್ನು ಕದಿಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸೇವೆಯಿಂದ ಅಮಾನತು ಮಾಡಲಾಗಿದೆ.

ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವೇಳೆ ತಟ್ಟೆಗೆ ಮೊಟ್ಟೆ ಹಾಕಿದ್ದನ್ನು ವೀಡಿಯೊ ಮಾಡಿಕೊಳ್ಳುತ್ತಿದ್ದ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ನಂತರ ತಟ್ಟೆಯಲ್ಲಿ ಹಾಕಿದ್ದ ಮೊಟ್ಟೆಯನ್ನು ವಾಪಸ್ ಪಡೆಯುತ್ತಿದ್ದರು. ಇದರಿಂದ ಮಕ್ಕಳಿಗೆ ಕೈಗೆ ಬಂದ ಮೊಟ್ಟೆ ಬಾಯಿಗೆ ಬಾರದಂತೆ ಮಾಡುತ್ತಿದ್ದರು.

ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ, ಮಕ್ಕಳು ಬಾಯಿಗಿಡುವ ಮುನ್ನವೇ ಮೊಟ್ಟೆ ಕಸಿದುಕೊಂಡಿದ್ದಾರೆ. ಈ ಅಮಾನವೀಯ ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *