ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ರಿಗೆ ಬೆಳ್ಳಿ ಪದಕ ನೀಡಬೇಕು ಎಂಬ ಮನವಿಯ ಕುರಿತ ನಿರ್ಧಾರವನ್ನು ಪ್ರಸಕ್ತ ಒಲಿಂಪಿಕ್ಸ್ ಮುಕ್ತಾಯಗೊಳ್ಳುವ ಮುನ್ನ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್) ಶುಕ್ರವಾರ ಘೋಷಿಸಿದೆ. ಬೆಳ್ಳಿ
ಮಿತಿಗಿಂತ ಫೋಗಟ್ ರ ತೂಕವು 100 ಗ್ರಾಮ್ ಹೆಚ್ಚಾದ ಕಾರಣಕ್ಕಾಗಿ ಫೈನಲ್‌ನಲ್ಲಿ ಸ್ಪರ್ಧಿಸುವುದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಫೋಗಟ್ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೊಪೆಝ್‌ರನ್ನು 5-0 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಅವರು ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಅಮೆರಿಕದ ಸಾರಾ ಆ್ಯನ್ ಹಿಲ್ಡಬ್ರಾಂಟ್‌ರನ್ನು ಎದುರಿಸಬೇಕಾಗಿತ್ತು.
ಆದರೆ, ಬುಧವಾರ ಬೆಳಗ್ಗೆ ಅವರ ದೇಹ ತೂಕ ಮಿತಿಗಿಂತ 100 ಗ್ರಾಮ್ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಅನರ್ಹತೆಯ ಬೆನ್ನಿಗೇ ಗುರುವಾರ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದರು.
ಇದನ್ನೂ ಓದಿ: ನೂರು ಗ್ರಾಮ್ ಎಂದರೆ ಎಷ್ಟು ಪಪ್ಪಾ?
ಫೋಗಟ್ ರ ಪ್ರಕರಣದ ವಿಚಾರಣೆಯನ್ನು ಆಸ್ಟ್ರೇಲಿಯದ ನ್ಯಾಯಾಧೀಶೆ ಡಾ. ಅನಾಬೆಲ್ ಬೆನೆಟ್ ಎಸಿ ಎಸ್‌ಸಿ ನಡೆಸುವರು ಹಾಗೂ ಅವರು ಈ ಪ್ರಕರಣದ ಏಕೈಕ ನ್ಯಾಯ ನಿರ್ಣಾಯಕರಾಗಿರುತ್ತಾರೆ ಎಂದು ಕ್ರೀಡಾ ಪಂಚಾಯಿತಿ ನ್ಯಾಯಾಲಯ ಮಾಧ್ಯಮ ಪ್ರಕಟನೆಯೊಂದರಲ್ಲಿ ತಿಳಿಸಿದೆ.