ವಯ್ನಾಡ್ ಭೂಕುಸಿತ: ಕೇರಳ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ದೋಷಾರೋಪಣೆ ಪ್ರಯತ್ನ!

ವೇದರಾಜ ಎನ್‌ ಕೆ
‘ವಯ್ನಾಡ್ ಭೂಕುಸಿತಗಳಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಲು  ಕೇರಳದ ಎಲ್‍ಡಿಎಫ್‍ ಸರಕಾರದ ನಡೆಗಳೇ ಕಾರಣ ಎಂದು ಪ್ರಚಾರ ಮಾಡುವ ಒಕ್ಕೂಟ ಗೃಹಮಂತ್ರಿ ಮತ್ತು ಪರಿಸರ ಮಂತ್ರಿಗಳ ವಿಫಲ ಪ್ರಯತ್ನಗಳ ನಂತರ, ಈಗ ಇಂತಹ ಇನ್ನೊಂದು ಪ್ರಯತ್ನದ ಸುದ್ದಿ ಬಂದಿದೆ. ಪರಿಸರ ಮಂತ್ರಾಲಯ ಭೂಕುಸಿತಗಳಿಗೆ ಕಲ್ಲು ಗಣಿಗಾರಿಕೆ ಮತ್ತು ಅಕ್ರಮ ವಾಸಕ್ಕೆ ಕೇರಳ ಸರಕಾರ ಅವಕಾಶ ಕಲ್ಪಿಸಿಕೊಟ್ಟಿದ್ದೇ ಕಾರಣ ಎಂದು ದೂಷಿಸುವ ಲೇಖನಗಳನ್ನು ಬರೆಯುವಂತೆ ಒಕ್ಕೂಟ ಸರಕಾರ ವಿಜ್ಞಾನಿಗಳು ಮತ್ತು ಪರಿಣಿತರನ್ನು ಕೇಲೂತ್ತಿರುವಂತೆ ಕಾಣುತ್ತಿದೆ, ಇದಕ್ಕೆ ಬೇಕಾದ ಮಾಹಿತಿಗಳನ್ನುಒಕ್ಕೂಟ ಸರಕಾರವೇ ಒದಗಿಸುತ್ತದೆ  ಎಂದು ಸುದ್ದಿ ವೆಬ್‍ ಪತ್ರಿಕೆಗಳಾದ ನ್ಯೂಸ್‍ ಮಿನಿಟ್‍ ಮತ್ತು ನ್ಯೂಸ್‍ಲಾಂಡ್ರಿನ ಸುದ್ದಿಪತ್ರ ವರದಿಮಾಡಿದೆ.

ಈ ಪ್ರಯತ್ನ ಒಕ್ಕೂಟ ಸರಕಾರದ ಅಡಿಯಲ್ಲಿರುವ  ‘ಪತ್ರಿಕಾ ಮಾಹಿತಿ ಕಚೇರಿ’ (ಪ್ರೆಸ್‍ ಇನ್‍ಫಾರ್ಮೇಷನ್ ಬ್ಯೂರೊ-ಪಿಐಬಿ) ಮೂಲಕ ನಡೆಯುತ್ತಿದೆ ಎಂದು ಅದು ಹೇಳಿದೆ.

ಒಕ್ಕೂಟ ಪರಿಸರ ಮಂತ್ರಿ ಭೂಪೇಂದರ್ ಯಾದವ್, ಮೂರು ದಿನಗಳ ಹಿಂದೆ ಆಗಸ್ಟ್ 5 ರಂದು ಎಎನ್‌ಐಗೆ ವಯ್ನಾಡ್ ಭೂಕುಸಿತಗಳು ರಾಜ್ಯ ಸರ್ಕಾರದ ತಪ್ಪಿನಿಂದ ಆಗಿವೆ, ಸ್ಥಳೀಯ ರಾಜಕಾರಣಿಗಳು ಅಕ್ರಮ ವಾಸ ಮತ್ತು ಗಣಿಗಾರಿಕೆಯನ್ನು ಈ ಪ್ರದೇಶದಲ್ಲಿ ಮುಂದುವರಿಸಲು ಅನುಮತಿ ನೀಡಿದ್ದರಿಂದ ಮತ್ತು ಒತ್ತುವರಿಗಳಿಗೆ ಅವಕಾಶ ನೀಡಿದ್ದರಿಂದಾಗಿ ಸಂಭವಿಸುವಂತಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ! ಹೋಂ ಸ್ಟೇ ದಾಳಿಯ ಸಂತ್ರಸ್ತ ವಿದ್ಯಾರ್ಥಿನಿ ನ್ಯಾಯಾಲಯದಲ್ಲಿ ಹೇಳಿದ್ದೇನು ?

ಆದರೆ, 2014 ರಲ್ಲಿ ನಿಷೇಧದ ನಂತರ ವಯನಾಡಿನ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಸ್ಥಳೀಯ ಕಲ್ಲುಗಣಿಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ಪರಿಸರ ಕಾರ್ಯಕರ್ತ ಎನ್. ಬಾದುಷಾ ಆಗಸ್ಟ್ 4 ರಂದು ‘ದಿ ವೈರ್‌’ಗೆ ತಿಳಿಸಿದ್ದರು. ಈ ಜಿಲ್ಲೆಯಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲದಿಂದ ಪರಿಸರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಿರುವ  ವಯ್ನಾಡ್ ಪರಿಸ್ಥಿತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರು , ವಯ್ನಾಡಿನ ಮೇಲೆ ಪರಿಣಾಮ ಬೀರಿದ 2018 ರ ಪ್ರವಾಹದ ನಂತರ ಈ ಪ್ರದೇಶದಲ್ಲಿ ಉಳಿದ ಕಲ್ಲುಗುಣಿಗಳನ್ನು  ಮುಚ್ಚಲಾಗಿದೆ ‘ದಿ ವೈರ್‌ʼ ಗೆ ತಿಳಿಸಿದ್ದಾರೆ. (Waynad landslides, Union Govt. Reaching Out to Scientists to Criticise Kerala’s Governance: Report, ಆಗಸ್ಟ್ 6)

ಈಗ ಆಗಸ್ಟ್ 6 ರಂದು ದಿ ನ್ಯೂಸ್‍ ಮಿನಿಟ್ ಮತ್ತು ನ್ಯೂಸ್‌ಲಾಂಡ್ರಿಯ ಸುದ್ದಿಪತ್ರದಲ್ಲಿನ ವರದಿಯ  ಪ್ರಕಾರ, ಒಕ್ಕೂಟ ಪರಿಸರ  ಸಚಿವಾಲಯವು “ಕಲ್ಲುಗಣಿಗಳಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಕಳಪೆ ನೀತಿಗಳು ಭೂಕುಸಿತಕ್ಕೆ ಹೇಗೆ ಕಾರಣವಾಗಿವೆ ಎಂಬುದರ ಕುರಿತು ಲೇಖನಗಳನ್ನು ಬರೆಯಲು ವ್ಯಕ್ತಿಗಳಿಗಾಗಿ  ತುರ್ತಾಗಿ ಹುಡುಕುತ್ತಿದೆ “.

ಒಕ್ಕೂಟ ಸರಕಾರದ ಅಡಿಯಲ್ಲಿರುವ  ಪಿಐಬಿಯು ಅಂತಹ ಲೇಖನಗಳನ್ನು ಬರೆಯಬಲ್ಲ ವಿಜ್ಞಾನಿಗಳು, ಸಂಶೋಧಕರು ಅಥವಾ ಪತ್ರಕರ್ತರ ಸಂಪರ್ಕಕ್ಕಾಗಿ ತಮ್ಮನ್ನು ಸಂಪರ್ಕಿಸಿದೆ ಎಂದು ಮೂವರು ವ್ಯಕ್ತಿಗಳು ದೃಢಪಡಿಸಿದ್ದಾರೆ ಎಂದು ಸುದ್ದಿಪತ್ರವು ತಿಳಿಸಿದೆ.

ಕೇರಳದಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯ ಕುರಿತು ಸುದ್ದಿಕತೆಗಳಿಗೆ  ಲಿಂಕ್‌ಗಳು ಸೇರಿದಂತೆ ಮಾಹಿತಿಯನ್ನು ಒಳಗೊಂಡಿರುವ ಒಂದು ದಸ್ತಾವೇಜನ್ನು  ಹಂಚಲಾಗಿದೆ; ಕಲ್ಲುಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವು “ವೈನಾಡ್ ದುರಂತಕ್ಕೆ ಮುಖ್ಯ ಕಾರಣ ಎಂದು ಹೇಳುವ ಒಂದು ಟಿಪ್ಪಣಿಯನ್ನೂ ಅದರೊಂದಿಗೆ ಇಡಲಾಗಿದೆಯಂತೆ.

ಅಂತಹ ಲೇಖನಗಳನ್ನು ಬರೆಯಬಹುದಾದ ವ್ಯಕ್ತಿಗಳ ಸಂಪರ್ಕಗಳನ್ನು ಹಂಚಿಕೊಳ್ಳುವಂತೆ ಕರೆಗಳು ಬಂದಿರುವುದಾಗಿ ದೃಢ ಪಡಿಸಿದವರೊಬ್ಬರೊಡನೆ ಮಾತನಾಡಿದ ನ್ಯೂಸ್‍ ಮಿನಿಟ್‍ನ ಮೂಲಗಳ ಪ್ರಕಾರ “ಕೇಂದ್ರ ಸರ್ಕಾರವು “ನಿರಾಕರಿಸಲಾಗದ ದತ್ತಾಂಶವನ್ನು ಹೊಂದಿದ್ದರೆ, ಅವರು ಮುಸುಕಿನ ಗುದ್ದಾಟವನ್ನು ನಡೆಸುವ ಬದಲು, ಮಾಹಿತಿಯನ್ನು ಬೇರೆಯವರ ಮೂಲಕ ಹೇಳಿಸುವ ಬದಲು, ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬಾರದೇಕೆ” ಎಂದು ಕೇಳಿರುವುದಾಗಿ ತಿಳಿಸಿದ್ದಾರೆ.

ಭೂಕುಸಿತಕ್ಕೆ ಕಲ್ಲುಗಣಿಗಾರಿಕೆಯೇ ಪ್ರಮುಖ ಕಾರಣ ಎನ್ನುವುದು  ಅವೈಜ್ಞಾನಿಕವಾಗಿದೆ, “ಹೆಚ್ಚಿನ ವಿಜ್ಞಾನಿಗಳು ಈ ವಿಷಯದ ಬಗ್ಗೆ ಬರೆಯಲು ನಿರಾಕರಿಸುವ ಸಂಭವ ಜಾಸ್ತಿ” ಎಂದು ಇನ್ನೊಬ್ಬರು ಹೇಳಿದ್ದಾರೆ.

ಒಕ್ಕೂಟ  ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿಕೆಯ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ತಮ್ಮ ಸರ್ಕಾರವು ಜುಲೈ 23 ರ ಹೊತ್ತಿಗೆ ರಾಜ್ಯಕ್ಕೆ ಮುನ್ನೆಚ್ಚರಿಕೆ ನೀಡಿತ್ತು, 9 ಎನ್‍ಡಿಆರ್‍ಎಫ್‍ ತುಕಡಿಗಳನ್ನು ಕಳಿಸಲಾಯಿತು ಎಂದು ಹೇಳಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಅವರು ನೀಡಿದ ಆ ಮುನ್ನೆಚ್ಚರಿಕೆಗಳಾದರೂ ಏನು ಎಂಬುದು ಬೇಗನೇ ಬಯಲಿಗೆ ಬಂತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ನಿರಾಕರಿಸುತ್ತ ಇದು ಸತ್ಯಸಂಗತಿಗಳಿಗೆ ಹೊಂದಿಕೆಯಾಗದ ಸಂಗತಿ, ವಾಸ್ತವ ಸಂಗತಿಯೆಂದರೆ ಜುಲೈ 23ರಿಂದ ಜುಲೈ 28ರ ನಡುವೆ ಕೇಂದ್ರೀಯ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಯಾವುದೇ ಕಿತ್ತಳೆ ಅಲರ್ಟನ್ನೂ ನೀಡಲಿಲ್ಲ, ಎನ್‍ಡಿಆರ್‍ಎಫ್‍ನ ತಂಡಗಳನ್ನು ಕಳಿಸಲು ಕೇರಳ ಸರಕಾರವೇ ಮನವಿ ಮಾಡಿತ್ತು ಎಂದರು.

ಜುಲೈ 29ರಂದು ವಯ್ನಾಡ್ ಜಿಲ್ಲೆಗೆ ಮಾತ್ರ ಕಿತ್ತಳೆ ಅಲರ್ಟನ್ನು ನೀಡಿತು. ವಯ್ನಾಡಿಗೆ ಕೆಂಪು ಅಲರ್ಟನ್ನು ಮತ್ತು ಭಾರೀ ಮಳೆಯ ಸಾಧ್ಯತೆಯನ್ನು ಜುಲೈ 30ರಂದು ಭೂಕುಸಿತದ ನಂತರವೇ ನೀಡಲಾಯಿತು ಎಂದು ನಂತರ ನಿಜಸಂಗತಿಗಳನ್ನು ಪರಿಶೀಲಿಸಿದ ‘ದಿ ಹಿಂದು’ (ಆಗಸ್ಟ್ 2) ವರದಿ ಮಾಡಿತು. ( ನೋಡಿ ಆಗಸ್ಟ್ 6ರಂದು ಪ್ರಕಟವಾಗಿರುವ ವಯನಾಡ್ ‘ಅಲರ್ಟ್’ಗಳ ಬಗ್ಗೆ ದಿಕ್ಕುತಪ್ಪಿಸುವ ಹೇಳಿಕೆ -ಕೇಂದ್ರ ಗೃಹಮಂತ್ರಿಗಳ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ)

ಇದನ್ನೂ ನೋಡಿ: ಶ್ರಮಿಕರ ಧ್ವನಿ ಕಾಮ್ರೇಡ್ ಸೂರಿ – ಕೆ. ಮಹಾಂತೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *