ಬೆಂಗಳೂರು: ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಅವರು, ಒಂದು ತಿಂಗಳಲ್ಲಿ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು, ಮತ್ತು ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು 1 ತಿಂಗಳೊಳಗೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ರಾಜ್ಯದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಅಮೂಲ್ಯ ಜೀವಗಳು ಬಲಿಯಾಗಿದ್ದರೆ, ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ 250 ಮುಗ್ಧ ಜನರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಕಣ್ಮರೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಈ ದುರಂತಗಳು ನಮಗೂ ಎಚ್ಚರಿಕೆಯ ಗಂಟೆಯಾಗಿದ್ದು, ಪಶ್ಚಿಮ ಘಟ್ಟದ ಉಳಿವು ಹಿಂದೆಂಗಿಂತಲೂ ಇಂದು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದೂ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದು, ಚಾರಣಕ್ಕೂ ಕಡಿವಾಣ ಬೀಳುವ ಸಾಧ್ಯತೆ ಇದೆ.