ಬಿಲ್ಡರ್ ಲಾಭಿಯ ವಿವಾದಿತ ಜಮೀನಿಗೆ ಟಿಡಿಆರ್ ಅನುಮೋದನೆ: ರಾಜ್ಯ ಸರಕಾರದ ಮಧ್ಯ ಪ್ರವೇಶಕ್ಕೆ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಆಗ್ರಹ

ಮಂಗಳೂರು: ನಗರದ ಹೊರವಲಯದ ಮರಕಡದಲ್ಲಿರುವ ಜನ ವಿರೋಧದಿಂದ ತಡೆ ಹಿಡಿಯಲ್ಪಟ್ಟಿದ್ದ ಹತ್ತು ಎಕರೆ ವಿವಾದಿತ ಜಮೀನಿನ ಟಿಡಿಆರ್ ಕಡತಕ್ಕೆ ಬಿಜೆಪಿ ಅಡಳಿತದ ಮಂಗಳೂರು ನಗರ ಪಾಲಿಕೆಯು ಇಂದಿನ ಮಾಸಿಕ ಸಭೆಯಲ್ಲಿ ಏಕಾಏಕಿ ಅನುಮೋದನೆ ನೀಡಿರುವದಕ್ಕೆ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ರಾಜ್ಯ ಸರಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ಈ ವಿವಾದಿತ ಕಡತವನ್ನು ತಡೆಹಿಡಿಯಬೇಕು, ಪ್ರಕರಣದ ತನಿಖೆಗೆ ಆದೇಶಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ. ಬಿಲ್ಡರ್

ಮರಕಡದ 10 ಎಕರೆ ಜಮೀನು ನಾಲ್ಕು ಭಾಗಗಳಲ್ಲಿಯೂ ಇಳಿಜಾರಾಗಿದ್ದು, ರಿಯಲ್ ಎಸ್ಟೇಟ್, ಬಿಲ್ಡರ್ ಲಾಭಿಯ ಪಾಲಿಗೆ ನಿರುಪಯೋಗಿಯಾಗಿ ಪರಿಣಮಿಸಿದೆ. ಈ ಜಮೀನನ್ನು ವರ್ಷಗಳ ಹಿಂದೆ ಐಟಿ ಪಾರ್ಕ್ ನೆಪದಲ್ಲಿ ಟಿಡಿಆರ್ ಅಡಿ ಖರೀದಿಸಲು ಶಾಸಕ ಭರತ್ ಶೆಟ್ಟಿ ಪ್ರಸ್ಥಾಪ ಸಲ್ಲಿಸಿದ್ದರು. ಆಗ ದೊಡ್ಡ ರೀತಿಯ ವಿರೋಧದಿಂದ ರಾಜ್ಯ ಸರಕಾರ ಅನುಮೋದನೆ ನೀಡಿರಲಿಲ್ಲ. ಈಗ ಮತ್ತೆ, ವಸತಿ ರಹಿತ ಬಡವರಿಗೆ ಮನೆಗಳನ್ನು ಒದಗಿಸುವ ಯೋಜನೆಯ ನೆಪದಲ್ಲಿ ಟಿಡಿಆರ್ ಅಡಿ ಖರೀದಿಸಲು ಪ್ರಬಲ ರಿಯಲ್ ಎಸ್ಟೇಟ್ ಲಾಭಿ ಹಾಗೂ ಬಿಜೆಪಿ ಆಡಳಿತದ ನಗರ ಪಾಲಿಕೆ ಸಂಚು ಹೂಡಿತ್ತು ಎಂದು ಹೇಳಿದ್ದಾರೆ. ಬಿಲ್ಡರ್

ಈ ನಿರುಪಯೋಗಿ ಟಿಡಿಆರ್ ಪ್ರಕ್ರಿಯೆಯಿಂದ ನಗರ ಪಾಲಿಕೆಯ ಬೊಕ್ಕಸಕ್ಕೆ ಸುಮಾರು ಎಂಬತ್ತು ಕೋಟಿ ರೂಪಾಯಿ ನಷ್ಟ ಸಂಭವಿಸುವ ಅಂದಾಜು ಇರುವುದೇ ಇದು ಕೋಟ್ಯಾಂತರ ರೂಪಾಯಿಗಳು ಕೈ ಬದಲಾಗುವ ಡೀಲ್ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಈ ಟಿಡಿಆರ್ ಕಡತಕ್ಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತೀರಾ ತುರ್ತಿನ ಕಡತ ಎಂಬಂತೆ ಪೂರ್ವಾನ್ವಯ ಅನುಮತಿ ಒದಗಿಸಿರುವುದು ಭ್ರಷ್ಟಾಚಾರದ ಅನುಮಾನವನ್ನು ಹೆಚ್ಚಿಸಿದೆ. ನಗರ ಪಾಲಿಕೆ ಕಳೆದ ಮಾಸಿಕ ಸಭೆಯಲ್ಲಿ ಜನರ ಪ್ರಬಲ ವಿರೋಧದ ಕಾರಣದಿಂದ ಅಜೆಂಡಾದಲ್ಲಿ ಇದ್ದ ಈ ಕಡತವನ್ನು ಮಂಡಿಸದೆ ತಡೆಹಿಡಿಯಲಾಗಿತ್ತು ಎಂದರು.

ಇದನ್ನೂ ಓದಿ: ನೀಟ್ ಕೋಚಿಂಗ್ ನೀಡುವ ಹೆಸರಿನಲ್ಲಿ ಹಣ ವಂಚನೆ; ಎಸ್‌ಎಫ್‌ಐ ಆಕ್ರೋಶ

ಆದರೆ, ಟಿಡಿಆರ್ ದಂಧೆಯಿಂದ ಕೊಬ್ಬಿರುವ ಬಿಲ್ಡರ್, ರಿಯಲ್ ಎಸ್ಟೇಟ್ ಲಾಭಿ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಪಾಲಿಕೆಯ ಬಿಜೆಪಿ ಆಡಳಿತ ಇಂದಿನ ಸಭೆಯಲ್ಲಿ ಯಾವ ಮುನ್ಸೂಚನೆಯನ್ನೂ ನೀಡದೆ ಮರಕಡ ವಿವಾದಿತ ಜಮೀನಿಗೆ ಟಿಡಿಆರ್ ಅನುಮತಿ ನೀಡಿದೆ‌. ಇದು ಅತ್ಯಂತ ಆಕ್ಷೇಪಾರ್ಹ, ಹಾಗೂ ಅನುಮಾನಾಸ್ಪದ ನಡವಳಿಕೆಯಾಗಿದೆ.

ಇಂದು ಬಿಜೆಪಿ ಆಡಳಿತದ ನಗರ ಪಾಲಿಕೆ ಮರಕಡ ಟಿಡಿಆರ್ ಕಡತ ಮಂಡಿಸುವಾಗ ಕಾಂಗ್ರೆಸ್ ನ ಇಬ್ಬರು ಸದಸ್ಯರನ್ನು ಹೊರತು ಪಡಿಸಿ ಬಿಜೆಪಿ ಸಹಿತ ವಿರೋಧ ಪಕ್ಷದ ಎಲ್ಲಾ ಸದಸ್ಯರು ಮೌನವಹಿಸಿ ಕಡತ ಅನುಮೋದನೆಗೆ ಕೈ ಜೋಡಿಸಿದ್ದು ಮಂಗಳೂರು ನಗರದ ಮಟ್ಟಿಗೆ ಆಘಾತಕಾರಿ ವಿದ್ಯಾಮಾನ. ಆ ಮೂಲಕ ಈ ಇಬ್ಬರನ್ನು ಹೊರತು ಪಡಿಸಿ ಉಳಿದ ನಗರ ಪಾಲಿಕೆ ಸದಸ್ಯರು ಮಂಗಳೂರು ನಗರದ ಜನತೆಗೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತ ಪಡಿಸಿದೆ. ಬಡ ನಿವೇಶನ, ವಸತಿ ರಹಿತರನ್ನು ನೆಪವಾಗಿಸಿ ಬಿಜೆಪಿ ಆಡಳಿತದ ನಗರ ಪಾಲಿಕೆ ಹಾಗೂ ನಗರ ಪಾಲಿಕೆ ಸದಸ್ಯರು ಮಾಡಿರುವ ಈ ಭ್ರಷ್ಟಾಚಾರ, ಜನದ್ರೋಹ, ಟಿಡಿಆರ್ ಮಾಫಿಯಾದ ವಿರುದ್ದ ಶೀಘ್ರವೇ ಹೋರಾಟವನ್ನು ರೂಪಿಸುವುದಾಗಿ ಜನಪರ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.

ಇದನ್ನೂ ನೋಡಿ: ಕೇಂದ್ರ ಬಜೆಟ್‌ 2024-25 | ಬಂಡವಾಳಕ್ಕೆ ಒತ್ತು ! ಜನರ ಅನುಭೋಗಕ್ಕೆ ಕುತ್ತು!! Janashakthi Media

Donate Janashakthi Media

Leave a Reply

Your email address will not be published. Required fields are marked *