ರೈತರಿಗೆ ದ್ರೋಹ ಬಗೆದ ಕೇಂದ್ರ ಬಜೆಟ್ – ಪ್ರಾಂತ ರೈತ ಸಂಘ ತೀವ್ರ ಖಂಡನೆ

ಬೆಂಗಳೂರು : ರೈತಾಪಿ ಕೃಷಿ ಯನ್ನು ನಾಶ ಮಾಡಿ, ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳ ಮರ್ಜಿಗೆ ಕೃಷಿ ರಂಗವನ್ನು ಒಳಪಡಿಸುವ ಸ್ಪಷ್ಟ ಉದ್ದೇಶದ ರೈತ ವಿರೋಧಿ ಬಜೆಟ್ ಮಂಡಿಸುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿ ಎ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ( KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರ ಖಂಡಿಸಿದೆ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದೆ.

ಕೇಂದ್ರ ಬಜೆಟ್ ಕುರಿತು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಜಂಟಿ ಹೇಳಿಕೆ ನೀಡಿದ್ದು, ಕೃಷಿ ಉತ್ಪಾದಕತೆ ಹಾಗೂ ರೈತರ ಕಲ್ಯಾಣವನ್ನು ಕಡೆಗಣಿಸಿರುವ ಈ ಬಜೆಟ್ ,ಮತ್ತಷ್ಟು ಕೇಂದ್ರೀಕರಣ ಹಾಗೂ ರಾಜ್ಯಗಳ ಒಕ್ಕೂಟ ಹಕ್ಕುಗಳ ಮೇಲೆ ಮತ್ತಷ್ಟು ಆಕ್ರಮಣ ಮಾಡಿದೆ ಮತ್ತು ಕೃಷಿ ಕಾರ್ಪೋರೇಟೀಕರಣದ ಕಡೆಗೆ ಕೃಷಿ ರಂಗವನ್ನು ಒಯ್ಯುವ ಸ್ಪಷ್ಟ ಲಕ್ಷಣಗಳನ್ನು ತೋರ್ಪಡಿಸಿದೆ. ಕೃಷಿ ಸಂಬಂದಿತ ವಲಯಗಳಿಗೆ ತೀವ್ರ ವಾಗಿ ಅನುದಾನ ಕಡಿತದ ಮೂಲಕ ಕೃಷಿ ರಂಗವನ್ನು ಮತ್ತಷ್ಟು ದಿವಾಳಿ ಕಡೆಗೆ ನೂಕುವ ನಿರುದ್ಯೋಗ, ವಲಸೆ ,ಹಸಿವನ್ನು ಹೆಚ್ಚಿಸುವ ಬಜೆಟ್ ನಿಂದ ರೈತಾಪಿ ಹಾಗೂ ಗ್ರಾಮೀಣ ಸಮುದಾಯಕ್ಕೆ ತೀವ್ರ ನಿರಾಶೆಯನ್ನು ಉಂಟು ಮಾಡಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

2019 ರಲ್ಲಿ ಶೇಕಡಾ 5.44 ರಷ್ಟು ಇದ್ದ ಕೃಷಿ ಮತ್ತು ಸಂಬಂದಿತ ಕ್ಷೇತ್ರಗಳ ಅನುದಾನವನ್ನು ಶೇಕಡಾ 3.15 ರಷ್ಟಕ್ಕೆ ಕಡಿತಗೊಳಿಸಿದೆ. 2022-23 ಕ್ಕೆ ಹೋಲಿಸಿದರೆ ಶೇ 21.3 ರಷ್ಟು ಕಡಿತಗೊಂಡಿದೆ. ರೈತಾಪಿ ಸಮುದಾಯದ ಬಹು ಮುಖ್ಯ ಹಕ್ಕೋತ್ತಾಯವಾದ ಸಮಗ್ರ ಕೃಷಿ ವೆಚ್ಚಕ್ಕೆ ಶೇಕಡಾ 50 ರಷ್ಟು ಲಾಭಾಂಶ ಒಳಗೊಂಡ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಯಾವುದೇ ಕ್ರಮವನ್ನು ಒಳಗೊಂಡಿಲ್ಲ. ಗ್ರಾಮೀಣ ಉದ್ಯೋಗದ ಬೇಡಿಕೆ ತೀವ್ರ ವಾಗಿ ಹೆಚ್ಚುತ್ತಿದ್ದರೂ, ಹಳೇ ಕೂಲಿ ಪಾವತಿ ಬೆಟ್ಟದಷ್ಟು ಉಳಿದಿದ್ದರೂ ನರೇಗಾ ಯೋಜನೆಗೆ ಅನುದಾನ ಹೆಚ್ಚಳ ಮಾಡಿಲ್ಲ. ಅದೇ ರೀತಿ ಪಿಎಂ ಕಿಸಾನ್, ಪಿಎಂ ಫಸಲ್ ಭೀಮಾ ಯೋಜನೆಗಳ ಅನುದಾನದಲ್ಲೂ ಹೆಚ್ಚಳ ಮಾಡಿಲ್ಲ. ಕೃಷಿಗೆ ಪ್ರಥಮ ಅಧ್ಯತೆ ನೀಡಲಾಗಿದೆ ಎಂಬ ಹಣಕಾಸು ಸಚಿವರ ಹೇಳಿಕೆ ಮೋಸಗೊಳಿಸುವಂತಹದ್ದು . ವಾಸ್ತವವಾಗಿ ರೈತರ, ಕಾರ್ಮಿಕರ, ಬಡವರ ಕಲ್ಯಾಣಕ್ಕೆ ಯಾವುದೇ ಅಧ್ಯತೆಯನ್ನು ಈ ಬಜೆಟ್ ಒದಗಿಸಿಲ್ಲ ಎಂದು ಪ್ರಾಂತ ರೈತ ಸಂಘ ಆರೋಪಿಸಿದೆ.

ಈಗ ಒದಗಿಸಿರುವ ನರೇಗಾ ಅನುದಾನದಲ್ಲಿ ಈಗಾಗಲೇ ಈ ಹಣಕಾಸು ವರ್ಷದಲ್ಲಿ 42000 ಕೋಟಿಯಷ್ಟು ವ್ಯಯವಾಗಿದ್ದು ,ಇನ್ನು ಉಳಿದ ಎಂಟು ತಿಂಗಳಿಗೆ ಕೇವಲ 44 ಸಾವಿರ ಕೋಟಿ ಮಾತ್ರ ಉಳಿದಿದೆ. ನರೇಗಾಕ್ಕೆ ಹಣ ಹೆಚ್ಚಳ ಮಾಡದೇ ಇರುವುದು ಗ್ರಾಮೀಣ ಬಡವರ ಸಂಕಟಗಳನ್ನು ಹೆಚ್ಚಿಸಲಿದೆ. ಗ್ರಾಮಾಂತರ ಪ್ರದೇಶಗಳ ಸಂಕಟ,ನಿರುದ್ಯೋಗ, ವಲಸೆಯಂತಹ ವಿಷಯಗಳಿಗೆ ಬಿಜೆಪಿ ನೇತೃತ್ವದ ಸರ್ಕಾರ ಎಷ್ಟು ಅಸೂಕ್ಷ್ಮವಾಗಿದೆ ಟೀಕಿಸಿದೆ.

ಬೇಸಾಯ ವಲಯಕ್ಕೆ ಶೇಕಡಾ 24.7 ರಷ್ಟು ಹಾಗೂ ರಸಗೊಬ್ಬರದ ಅನುದಾನದಲ್ಲಿ ಶೇಕಡಾ 34.7 ರಷ್ಟು ದೊಡ್ಡ ಪ್ರಮಾಣದಲ್ಲಿ ಅನುದಾನ ಕಡಿತ ಮಾಡಲಾಗಿದೆ. 2022-23 ಕ್ಕೆ ಹೋಲಿಸಿದರೆ 87238 ಕೋಟಿ ರೂ ನಷ್ಟು ಇಳಿಕೆಯಾಗಿದೆ. ಇದು ಅತ್ಯಂತ ಅಪಾಯಕಾರಿ ಹಾಗೂ ಕೃಷಿ ಉತ್ಪಾದಕತೆಯ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡಲಿದೆ. ತೀವ್ರವಾಗಿ ಹೆಚ್ಚಳವಾಗಿರುವ ಬೇಸಾಯದ ವೆಚ್ಚವನ್ನು ಕಡಿಮೆ ಮಾಡಬೇಕು ಎಂಬ ರೈತರ ಆಗ್ರಹಗಳನ್ನು ಈ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹಣಕಾಸು ಸಚಿವರು ಪ್ರಕಟಿಸಿರುವ ರಾಷ್ಟ್ರೀಯ ಸಹಕಾರ ನೀತಿಯು ರಾಜ್ಯಗಳ ಹಕ್ಕುಗಳ ಮೇಲಿನ ತೀವ್ರ ಆಕ್ರಮಣವಾಗಿದೆ. ಎಲ್ಲಾ ಸಹಕಾರಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಈ ನೀತಿಯು ,ಸಂವಿಧಾನದ ಮೂಲಭೂತ ಆಧಾರ ಸ್ಥಂಭವಾದ ಒಕ್ಕೂಟ ತತ್ವದ ಗಂಭೀರ ಉಲ್ಲಂಘನೆಯಾಗಿದೆ. 2022-23 ಕ್ಕೆ ಹೋಲಿಸಿದರೆ ಸಹಕಾರ ವಲಯಕ್ಕೆ ಶೇಕಡಾ 30.5 ರಷ್ಟು ಅನುದಾನವನ್ನು ಕಡಿತ ಮಾಡಿದೆ. ಸಹಕಾರಿ ಸಂಸ್ಥೆಗಳ ಮೂಲಕ ದಾಸ್ತಾನು ಸಾಮಾರ್ಥ್ಯವನ್ನು ಹೆಚ್ಚಿಸಲು ಗೋಡೌನ್ ಗಳನ್ನು ನಿರ್ಮಿಸುವ ಬಗ್ಗೆ ಉದ್ದದ್ದು ಮಾತಾನಾಡುತ್ತಲೇ, ಈ ಬಗೆಗಿನ ಅನುದಾನದಲ್ಲಿ ಶೇಕಡಾ 24.2 ರಷ್ಟು ಕಡಿತಗೊಳಿಸಲಾಗಿದೆ. ಸಹಕಾರಿ ವಲಯವನ್ನು ನಿಯಂತ್ರಣ ಕ್ಕೆ ಒಳಪಡಿಸಿ ಷೇರುದಾರರ ಹಕ್ಕುಗಳಿಗೆ ಯಾವುದೇ ಮನ್ನಣೆ ನೀಡದಂತೆ ಸಹಕಾರಿ ವಲಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಅನಾಹುತಕಾರಿಯಾಗಿದ್ದು, ಈ ಕೂಡಲೇ ಕೇಂದ್ರ ಸಹಕಾರಿ ಮಂತ್ರಾಲಯವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ.

ಬೇಯರ್, ಅಮೇಜಾನ್ ಮುಂತಾದ ಅತಿದೊಡ್ಡ ದೈತ್ಯ ಕೃಷಿ ಕಾರ್ಪೊರೇಟ್ ಸಂಸ್ಥೆಗಳು ,ಕೃಷಿ ರಂಗವನ್ನು ಕೈ ವಶ ಮಾಡಿಕೊಳ್ಳುವ ಅವಕಾಶ ನೀಡುವಂತಹ ಹಲವು ಅಂಶಗಳನ್ನು ಈ ಬಜೆಟ್ ನಲ್ಲಿ ಹೇಳಲಾಗಿದೆ. ಖಾಸಗಿ ವಲಯಕ್ಕೂ ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಅನುದಾನ ಒದಗಿಸುವುದಾಗಿ ಹೇಳಿರುವುದು ,ಕ್ರಮೇಣ ಇಂತಹ ಖಾಸಗಿ ಕಂಪನಿಗಳೇ, ಕೃಷಿ ಸಂಶೋಧನೆಯ ದಿಕ್ಕನ್ನು ನಿರ್ಧರಿಸುವಂತಾಗುತ್ತದೆ. ಅಲ್ಲದೇ 6 ಕೋಟಿ ರೈತರ ಮತ್ತು ಅವರ ಭೂಮಿಗಳ ಎಲ್ಲಾ ವಿವರಗಳನ್ನು ಡಿಜಿಟಲ್ ನಲ್ಲಿ ದಾಖಲೀಕರಣ ಮಾಡುವುದು ತುಂಬಾ ತೊಂದರೆಗಳನ್ನು ಉಂಟು ಮಾಡಲಿದೆ. ಆಧಾರ್ ಮುಂತಾದ ಡಿಜಿಟಲ್ ವ್ಯವಸ್ಥೆಯಲ್ಲಿ ಈಗಾಗಲೇ ಇಂತಹ ಕೇಂದ್ರೀಕೃತ ಡಿಜಿಟಲ್ ದಾಖಲೀಕರಣಗಳು ಹೇಗೆ ಖಾಸಗಿತನವನ್ನು ಉಲ್ಲಂಘಿಸುತ್ತಿವೆ ಮತ್ತು ಹಲವು ರೀತಿಯ ಆರ್ಥಿಕ ವಂಚನೆ ಅಪರಾಧಗಳಿಗೆ ಅವಕಾಶ ಸೃಷ್ಟಿಸಿವೆ ಎಂಬುದು ಪದೇ ಪದೇ ಸಾಬೀತಾಗುತ್ತಿರುವಾಗ ,ಕಾರ್ಪೊರೇಟ್ ಗಳಿಗೆ ಹಾಗೂ ಇನ್ನಿತರ ಭೂ ಗಳ್ಳ ದಲ್ಲಾಳಿಗಳಿಗೆ ಭೂ ಕಬಳಿಕೆಗೆ ಅವಕಾಶದ ಬಾಗಿಲನ್ನು ತೆರೆದಿಟ್ಟಂತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

400 ಜಿಲ್ಲೆಗಳಲ್ಲಿ ಇದೇ ಡಿಜಿಟಲ್ ದಾಖಲೀಕರಣ ವ್ಯವಸ್ಥೆ ಯನ್ನು ಬಳಸಿ ಖಾರೀಪ್ ಬೆಳೆಯ ಡಿಜಿಟಲ್ ಸಮೀಕ್ಷೆ ನಡೆಸುವ ಪ್ರಸ್ತಾಪವು ಕೂಡ ಗಂಭೀರವಾದ ಕಳವಳವನ್ನು ಉಂಟು ಮಾಡಿದೆ. ಡಿಜಿಟಲ್ ಹಾಗೂ ರಿಮೋಟ್ ಆಧಾರಿತ ತಂತ್ರಜ್ಞಾನದ ಮೂಲಕ ಬೆಳೆ ಸಮೀಕ್ಷೆ ನಡೆಸುವುದು ರೈತರಿಗೆ ಅನಾನುಕೂಲಗಳನ್ನು ಉಂಟು ಮಾಡುತ್ತದೆ. ಬೆಳೆ ವಿಮಾ ಕಂಪನಿಗಳ ಹಿತಾಸಕ್ತಿಗಾಗಿ ಇಂತಹ ದಾಖಲಾತಿಗಳನ್ನು ಆಗಾಗ್ಗೆ ತಿರುಚುವ ಅಪಾಯವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಈ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳುವ ಮೊದಲು, ಬೆಳೆ ಪ್ರದೇಶ ಹಾಗೂ ಇಳುವರಿಯು ನಿಖರವಾಗಿ ದಾಖಲಾಗುವುದೇ ಎಂಬುದರ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಒತ್ತಾಯಿಸುತ್ತದೆ.

ಈ ಬಜೆಟ್ ನಲ್ಲಿ ದ್ವಿದಳ ಧಾನ್ಯ ಹಾಗೂ ಎಣ್ಣೆ ಬೀಜಗಳಲ್ಲಿ ಆತ್ಮನಿರ್ಭರತೆಯ ಮಾತುಗಳನ್ನು ಹೇಳಲಾಗಿದೆ. ಬೆಳೆಗಳಿಗೆ ಪರಿಣಾಮಕಾರಿ ಲಾಭದಾಯಕ ಬೆಂಬಲ ಬೆಲೆ ಖರೀದಿ ವ್ಯವಸ್ಥೆ ಮಾತ್ರವೇ ರೈತರಲ್ಲಿ ಆತ್ಮ ಸ್ಥೈರ್ಯ ವನ್ನು ಉಂಟು ಮಾಡುತ್ತದೆ. ಇಂತಹ ಪ್ರಯತ್ನಗಳಿಲ್ಲದೇ ಅಷಾಡುಭೂತಿತನದ ಮಾತುಗಳು, ಉದ್ದುದ್ದದ ಭರವಸೆಗಳು ಕೇವಲ ಟೊಳ್ಳು ಮತ್ತು ಬೂಟಾಟಿಕೆಯಾಗುತ್ತದೆ. ತರಕಾರಿ ಉತ್ಪಾದನೆ ಹಾಗೂ ಪೂರೈಕೆ ಸರಪಳಿಯಲ್ಲಿ ದೊಡ್ಡ ಪ್ರಮಾಣದ ಕ್ಷೇತ್ರಗಳನ್ನು ಉತ್ತೇಜಿಸುವ ಪ್ರಸ್ತಾಪವು, ಹಿಂಬಾಗಿಲಿನಿಂದ ಕಾರ್ಪೊರೇಟ್ ಒಪ್ಪಂದ ಕೃಷಿಯನ್ನು ತರುವ ಪ್ರಯತ್ನವಾಗಿದೆ. ಕಾರ್ಪೊರೇಟ್ ಕಂಪನಿಗಳ ಪ್ರವೇಶಕ್ಕೆ ಅವಕಾಶವಾಗದಂತಹ ಸ್ಪಷ್ಟ ಹಾಗೂ ವಿವರವಾದ ಧೋರಣೆಗಳನ್ನು ,ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದ ಹೊರತು ರೈತರಿಗೆ ತೊಂದರೆಯೇ ಆಗಲಿದೆ. ಜೊತೆಗೆ ಮತ್ತೆ ಒಂದು ಕೋಟಿ ರೈತರನ್ನು ಶೂನ್ಯ ಖರ್ಚಿನ ನೈಸರ್ಗಿಕ ಕೃಷಿಗೆ ಒಳಪಡಿಸುವ ಮಾತುಗಳನ್ನು ಮತ್ತೊಮ್ಮೆ ಹೇಳಲಾಗಿದೆ. ಈ ಹಿಂದಿನ ಇಂತಹದ್ದೇ ಮಾತುಗಳು ಮತ್ತು ಕ್ರಮಗಳು ಯಾವ ಪರಿಣಾಮವನ್ನು ಉಂಟು ಮಾಡಿವೆ ಎಂಬ ಯಾವ ನಿರ್ದಿಷ್ಟ ಅಧ್ಯಯನದ ಒತ್ತಾಸೆ ಇಲ್ಲದ ಇಂತಹ ಕ್ರಮಗಳು ದೇಶವನ್ನು ಬಹಳ ದೊಡ್ಡ ಆಹಾರದ ಬಿಕ್ಕಟ್ಟಿಗೆ ನೂಕಬಹುದು. ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಬಜೆಟ್ ಒಳಗೊಂಡಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

2022-23 ರಲ್ಲಿ ಕೃಷಿ ರಂಗದ ಬೆಳವಣಿಗೆ ದರ ಶೇಕಡಾ 4.7 ರಷ್ಟು ಇತ್ತು. 2023-24 ರಲ್ಲಿ ಶೇಕಡಾ 1.4 ರಷ್ಟು ಮಾತ್ರ ಇದೆ ಎಂಬುದು ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗಗೊಂಡಿರುವ ವಾಸ್ತವ.ಬರಗಾಲದ ಕಾರಣ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆಯಾಗಿ ಕೃಷಿ ಬೆಳವಣಿಗೆ ದರ ಕುಸಿದಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಕೃಷಿ ಉತ್ಪಾದನಾ ವೆಚ್ಚ ಇಳಿಕೆ ಮಾಡದೇ ಇರುವುದು, ಕಡಿಮೆ ಬಡ್ಡಿದರದ ಸುಲಭ ಸಾಲ ಒದಗಿಸದೇ ಇರುವುದು, ಪರಿಣಾಮಕಾರಿ ಬೆಳೆ ವಿಮೆ ಒದಗಿಸದೇ ಇರುವುದು, ನೀರಾವರಿ ವಿಸ್ತರಣೆ ಮಾಡದೇ ಇರುವುದು, ಸಮರ್ಪಕ ವಿದ್ಯುತ್ ಚ್ಛಕ್ತಿ ಪೂರೈಸದೇ ಇರುವುದು, ರಸಗೊಬ್ಬರ, ಬೀಜಗಳನ್ನು ಸಕಾಲಕ್ಕೆ ಒದಗಿಸದೇ ಇರುವುದು ಇವೆಲ್ಲಕ್ಕೂ ಮಿಗಿಲಾಗಿ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಶೇಕಡಾ ಐವತ್ತು ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನೀಡದೇ ಇರುವುದು ಕೃಷಿ ರಂಗದ ಬೆಳವಣಿಗೆ ದರ ಕುಸಿತಕ್ಕೆ ಕಾರಣವಾಗಿರುವುದನ್ನು ಮರೆ ಮಾಚಿ ತನ್ನ ವೈಪಲ್ಯಗಳನ್ನು ಮುಚ್ಚಿಕೊಂಡು ಎಲ್ ನಿನೋ ನೈಸರ್ಗಿಕ ವಿಕೋಪ ಒಂದನ್ನೇ ಹೊಣೆ ಮಾಡಿದೆ. ಸ್ಪಷ್ಟವಾಗಿ ಈ ಬಜೆಟ್ ಈ ಎಲ್ಲಾ ಅಂಶಗಳ ಕುರಿತು ದಿವ್ಯ ನಿರ್ಲಕ್ಷ್ಯ ತೋರಿದೆ. ಈ ಬಜೆಟ್ ನ ಒಟ್ಟು ಗುರಿಯು ರಪ್ತು ಕೇಂದ್ರೀತವಾಗಿದ್ದು ,ಕೃಷಿಯನ್ನು ಇಡಿಯಾಗಿ ಕಾರ್ಪೊರೇಟ್ ಗಳಿಗೆ ಹಸ್ತಾಂತರಿಸುವ ದುರುದ್ದೇಶವನ್ನು ಹೊಂದಿದೆ. ಇಂತಹ ರೈತ ದ್ರೊಹದ ಬಜೆಟ್ ವಿರೋಧಿಸಿ ಆಕ್ರೋಶವನ್ನು ವ್ಯಕ್ತಪಡಿಸಲು ರೈತಾಪಿ ಸಮುದಾಯಕ್ಕೆ ಹಾಗೂ ತನ್ನ ಎಲ್ಲಾ ಗ್ರಾಮ ಘಟಕಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರೆ ನೀಡಿದೆ.

 

Donate Janashakthi Media

Leave a Reply

Your email address will not be published. Required fields are marked *