ಮುಂಬೈ: ಭಾರಿ ಮಳೆಯ ಪರಿಣಾಮ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ಆಲಮಟ್ಟಿ ಅಣೆಕಟ್ಟಿನಿಂದ ನೀರು ಹರಿಸುವುದನ್ನು ಪ್ರಸ್ತುತ 2.5 ಲಕ್ಷ ಕ್ಯೂಸೆಕ್ನಿಂದ ಮೂರು ಲಕ್ಷ ಕ್ಯೂಸೆಕ್ಗೆ ಹೆಚ್ಚಿಸುವಂತೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕವನ್ನು ಕೇಳಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನ ನೀರಿನ ಸಂಗ್ರಹವು ಅತಿ ಕಡಿಮೆ ಅವಧಿಯಲ್ಲಿ ಆರು ಸಾವಿರ ಮಿಲಿಯನ್ ಘನ ಅಡಿಗಳಷ್ಟು (ಟಿಎಂಸಿ) ಹೆಚ್ಚಾಗಿದೆ ಮತ್ತು ಈಗಾಗಲೇ ಅದು ಶೇ 75 ರಷ್ಟು ತುಂಬಿದೆ. ಇದರರ್ಥ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡಬೇಕು, ಇದರಿಂದ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಕೊಯ್ನಾ ಅಣೆಕಟ್ಟನ್ನು ಕೊಯ್ನಾ ನದಿಗೆ ನಿರ್ಮಿಸಲಾಗಿದೆ ಮತ್ತು ಅದರ ಸಂಗ್ರಹ ಸಾಮರ್ಥ್ಯ 105 ಟಿಎಂಸಿ ಯಷ್ಟಿದೆ. ಕೊಯ್ನಾ ನದಿಯು ಕೃಷ್ಣಾ ನದಿಯ ಅತಿದೊಡ್ಡ ಉಪನದಿಯಾಗಿದೆ, ಇದು ದಕ್ಷಿಣಕ್ಕೆ ಹರಿಯುತ್ತದೆ ಮತ್ತು ಸಾಂಗ್ಲಿ ನಗರ ಮತ್ತು ಕೊಲ್ಹಾಪುರ ಜಿಲ್ಲೆಯನ್ನು ದಾಟಿ ಕರ್ನಾಟಕವನ್ನು ಪ್ರವೇಶಿಸುತ್ತದೆ.
ಇದನ್ನು ಓದಿ : ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಕೇರಳ ಶಾಸಕರ ಭೇಟಿ
ಸತಾರಾದ ಪಶ್ಚಿಮ ಘಟ್ಟಗಳ ಎತ್ತರದ ಸ್ಥಳಗಳಲ್ಲಿ ಒಂದಾದ ಮಹಾಬಲೇಶ್ವರವು ಕಳೆದ ಕೆಲವು ದಿನಗಳಿಂದ ಭಾರಿ ಮಳೆಗೆ ಸಾಕ್ಷಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ 400 ಮಿ.ಮೀ ಗಿಂತಲೂ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾಬಲೇಶ್ವರದಲ್ಲಿ ಬೀಳುವ ಮಳೆಯು ಕೊಯ್ನಾ ಅಣೆಕಟ್ಟಿನ ಸಂಗ್ರಹಕ್ಕೆ ಕೊಡುಗೆ ನೀಡುತ್ತದೆ.
ಆಲಮಟ್ಟಿ ಅಣೆಕಟ್ಟಿನಿಂದ ನೀರು ಬಿಡುವುದನ್ನು ಹೆಚ್ಚಿಸದಿದ್ದಲ್ಲಿ ಸಾಂಗಲಿ ಮತ್ತು ಕೊಲ್ಲಾಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ ನಾಗರಿಕರಿಗೆ ತೊಂದರೆಯಾಗಲಿದ್ದು, ಭಾರೀ ಕೃಷಿ ನಷ್ಟ ಉಂಟಾಗಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
“ಜಲಸಂಪನ್ಮೂಲ ಇಲಾಖೆಯು ಕೊಲ್ಲಾಪುರದ ವಾರ್ನಾ ಅಣೆಕಟ್ಟಿನಿಂದ ಸುಮಾರು 11,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಬೇಕಾಗಿದೆ, ಅದು ಕೃಷ್ಣಾ ನದಿಗೆ ಮತ್ತಷ್ಟು ತಲುಪುತ್ತದೆ, ಇದರಿಂದಾಗಿ ಪ್ರವಾಹದ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ, ನಾವು ಅವುಗಳ ಬಿಡುಗಡೆಯನ್ನು ಹೆಚ್ಚಿಸಲು ಆಲಮಟ್ಟಿ ಅಣೆಕಟ್ಟಿನ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ” ಎಂದು ಪವಾರ್ ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನರ ಸಾವಿಗೆ ಕಾರಣವಾಗಿತ್ತು.
ಪ್ರವಾಹದಿಂದ ಉಂಟಾದ ಕೃಷಿ ನಷ್ಟವು ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಕೋಟಿಗಳಷ್ಟು ಹೆಚ್ಚಾಗಿದೆ ಎಂದು ರಾಜ್ಯ ಪರಿಹಾರ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ಇದನ್ನು ನೋಡಿ : ಜಲಾವೃತಗೊಂಡ ರಸ್ತೆಗಳು : ಇದು “ಗುಜರಾತ್ ಮಾಡಲ್” ಎಂದು ಕಾಲೆಳೆದ ನೆಟ್ಟಿಗರು!Janashakthi Media